‘ಕಾಲ’ವಾಗಿ ಬದಲಾದ ‘ಜುರಾಸಿಕ್‌’ ಸಿನಿಮಾ!

7

‘ಕಾಲ’ವಾಗಿ ಬದಲಾದ ‘ಜುರಾಸಿಕ್‌’ ಸಿನಿಮಾ!

Published:
Updated:
‘ಕಾಲ’ವಾಗಿ ಬದಲಾದ ‘ಜುರಾಸಿಕ್‌’ ಸಿನಿಮಾ!

ಬೆಂಗಳೂರು: ಊರ್ವಶಿ ಚಿತ್ರಮಂದಿರದಲ್ಲಿ ಹಾಲಿವುಡ್‌ನ ಜುರಾಸಿಕ್ ವರ್ಲ್ಡ್ ಸಿನಿಮಾ ವೀಕ್ಷಿಸಲು ಟಿಕೆಟ್‌ ಬುಕ್‌ ಮಾಡಿದ್ದ ನೂರಾರು ಜನ ಶನಿವಾರ ನೋಡಿದ್ದು ಕಾಲ ಸಿನಿಮಾವನ್ನು!

ಚಿತ್ರಮಂದಿರದಲ್ಲಿ ಜುರಾಸಿಕ್‌ ಸಿನಿಮಾಕ್ಕೆ ಟಿಕೆಟ್‌ ಪಡೆಯಲು ಕೌಂಟರ್‌ಗೆ ಹೋದಾಗಲೇ, ಪ್ರೇಕ್ಷಕರಿಗೆ ಅಲ್ಲಿ ಪ್ರದರ್ಶನಗೊಳ್ಳುವುದು ಕಾಲ ಸಿನಿಮಾ ಎಂದು ತಿಳಿದಿದ್ದು. ಇದರಲ್ಲಿಯೂ ಟಿಕೆಟ್‌ ಪಡೆದ ಕೆಲವರಿಗೆ ಮಾತ್ರ ಕಾಲ ಸಿನಿಮಾ ನೋಡುವ ಅವಕಾಶ ಸಿಕ್ಕಿತು. ಇನ್ನುಳಿದವರಿಗೆ ಹಣ ಮರು ಪಾವತಿಸುವುದಾಗಿ ಚಿತ್ರಮಂದಿರದ ಸಿಬ್ಬಂದಿ ತಿಳಿಸಿದರು.

ವಾರಾಂತ್ಯದಲ್ಲಿ ಸಿನಿಮಾ ನೋಡಿ ಕಾಲ ಕಳೆಯುವ ಖುಷಿಯಲ್ಲಿ ಚಿತ್ರಮಂದಿರಕ್ಕೆ ಬಂದಿದ್ದ ಅನೇಕರು ಇತ್ತಾ ಜುರಾಸಿಕ್‌ ವರ್ಲ್ಡ್‌ ಸಿನಿಮಾವನ್ನು ನೋಡಲಾಗದೆ, ಕಾಲ ಸಿನಿಮಾಕ್ಕೂ ಟಿಕೆಟ್‌ ಸಿಗದೆ ಬೇಸರದಲ್ಲಿ ವಾಪಾಸ್‌ ಹೋಗುವಂತಾಯಿತು. ಅಚ್ಚರಿಯ ವಿಷಯವೆಂದರೆ ಕಾಲ ಸಿನಿಮಾದ ಒಂದೇ ಒಂದು ಪೋಸ್ಟರ್‌ ಚಿತ್ರಮಂದಿರದ ಗೋಡೆಗಳ ಮೇಲೆ ಕಾಣಲಿಲ್ಲ. ಅಲ್ಲೆಲ್ಲ ರಾರಾಜಿಸುತ್ತಿದ್ದದ್ದು ಜುರಾಸಿಕ್ ವರ್ಲ್ಡ್‌ ಪೋಸ್ಟರ್‌ಗಳು.

‘ಬೆಳಿಗ್ಗೆ, ಮಧ್ಯಾಹ್ನ ಜುರಾಸಿಕ್‌ ಸಿನಿಮಾ ಹಾಗೂ ಸಂಜೆ, ರಾತ್ರಿ ಕಾಲ ಸಿನಿಮಾ ಪ್ರದರ್ಶಿಸುವುದೆಂದು ನಿಗದಿ ಮಾಡಿಕೊಂಡಿದ್ದೆವು. ಈ ಬದಲಾವಣೆ ಬಗ್ಗೆ ಆನ್‌ಲೈನ್‌ ಬುಕ್ಕಿಂಗ್‌ ವೇದಿಕೆಗಳಲ್ಲಿಯೂ ಮಾಹಿತಿ ನೀಡಿದ್ದೆವು. ಸರ್ವರ್‌ ತೊಂದರೆಯಿಂದಾಗಿ ಸಕಾಲಕ್ಕೆ ಈ ವಿಷಯ ಬುಕ್ಕಿಂಗ್‌ ತಾಣಗಳಿಗೆ ತಲುಪದಿದ್ದರಿಂದ ಈ ರೀತಿಯ ಗೊಂದಲ ಉಂಟಾಗಿದೆ. ಪ್ರೇಕ್ಷಕರಿಗೆ ಆದ ಅನನುಕೂಲತೆಗೆ ಕ್ಷಮೆ ಕೋರುತ್ತೇವೆ’ ಎಂದು ಚಿತ್ರಮಂದಿರದ ವ್ಯವಸ್ಥಾಪಕ ಮಂಜುನಾಥ್‌ ತಿಳಿಸಿದರು.

‘ಕೊನೆಯ ಕ್ಷಣದಲ್ಲಿ ಬದಲಾವಣೆ ಆಗಿದೆ ಹಾಗೂ ಬ್ಯಾನರ್‌ಗಳು ಇನ್ನೂ ಸಿದ್ಧವಾಗಿಲ್ಲ. ಹೀಗಾಗಿ ಚಿತ್ರಮಂದಿರದಲ್ಲಿ ಕಾಲ ಸಿನಿಮಾದ ಬ್ಯಾನರ್‌ಗಳು ಕಾಣಿಸುತ್ತಿಲ್ಲ’ ಎಂದು ಹೇಳಿದರು.

‘ಬದಲಾವಣೆ ಕುರಿತು ನಮಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಟಿಕೆಟ್‌ ಸಂಗ್ರಹಿಸಲು ಕೌಂಟರ್‌ಗೆ ಹೋದಾಗ ಜುರಾಸಿಕ್‌ ಸಿನಿಮಾ ರದ್ದಾಗಿರುವ ಬಗ್ಗೆ ತಿಳಿಸಿ, ಹಣ ವಾಪಸ್‌ ಮಾಡುವುದಾಗಿ ಹೇಳಿದರು. ಅದರ ಬದಲು ಕಾಲ ಸಿನಿಮಾಗೆ ಟಿಕೆಟ್‌ ನೀಡುವಂತೆ ಕೋರಿದಾಗ, ಎಲ್ಲವೂ ಮಾರಾಟವಾಗಿವೆ’ ಎಂದು ಪ್ರೇಕ್ಷಕರಾದ ರಮೇಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry