ಬಸ್‌ನಲ್ಲೇ ಹತ್ಯೆ: ತಂದೆ–ಮಕ್ಕಳ ಸೆರೆ

2

ಬಸ್‌ನಲ್ಲೇ ಹತ್ಯೆ: ತಂದೆ–ಮಕ್ಕಳ ಸೆರೆ

Published:
Updated:
ಬಸ್‌ನಲ್ಲೇ ಹತ್ಯೆ: ತಂದೆ–ಮಕ್ಕಳ ಸೆರೆ

ಬೆಂಗಳೂರು: ಕೊಲೆ ಮಾಡಿ ತಲೆಮರೆಸಿಕೊಂಡಿರುವ ತಮ್ಮ ಬಗ್ಗೆ ಪೊಲೀಸರಿಗೆ ಸುಳಿವು ನೀಡಲು ಹೊರಟಿದ್ದ ಸಂಬಂಧಿಯನ್ನು ಬಿಎಂಟಿಸಿ ಬಸ್‌ನಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಆಂಧ್ರಪ್ರದೇಶದ ಕುಖ್ಯಾತ ಡಕಾಯಿತರ ಕುಟುಂಬ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರ ಅತಿಥಿಯಾಗಿದೆ.

ಗುಂಟೂರು ಜಿಲ್ಲೆ ಯರ್ರಾಬಾಲಂ ಗ್ರಾಮದ ಪಾಲಬ್ರಹ್ಮಯ್ಯ (60), ಅವರ ಮಕ್ಕಳಾದ ಅಭಿಷೇಕ್ ಅಲಿಯಾಸ್ ಭಾನು (32) ಹಾಗೂ ಧನರಾಜ್ ಅಲಿಯಾಸ್ ರಾಮ್ (24) ಬಂಧಿತರು. ಫೆ.21ರ ಬೆಳಿಗ್ಗೆ 9.15ರ ಸುಮಾರಿಗೆ ಕೋನಪ್ಪನ ಅಗ್ರಹಾರ ಬಳಿ ಸಾಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲೇ ಆರೋಪಿಗಳು ಸಂಬಂಧಿ ಸುರೇಶ್‌ನನ್ನು (46) ಹತ್ಯೆಗೈದಿದ್ದರು.

ಎರಡೂವರೆ ದಶಕಗಳ ದ್ವೇಷ..!

ಗುಂಟೂರಿನ ಮಂಗಳಗಿರಿಯವನಾದ ಸುರೇಶ್, ಪಾಲಬ್ರಹ್ಮಯ್ಯನ ನಾದಿನಿಯ ಗಂಡ. 1991ರಿಂದಲೂ ಇಬ್ಬರು ಒಟ್ಟಾಗಿಯೇ ಡಕಾಯಿತಿಮಾಡುತ್ತಿದ್ದರು. ಇವರ ವಿರುದ್ಧ ಆಂಧ್ರದಲ್ಲೇ 54 ಪ್ರಕರಣಗಳು ದಾಖಲಾಗಿದ್ದವು. ಕೆಲವು ದಿನಗಳ ನಂತರ ಡಕಾಯಿತಿಯ ಹಣ ಹಂಚಿಕೊಳ್ಳುವ ವಿಚಾರಕ್ಕೆ ಮನಸ್ತಾಪ ಉಂಟಾಗಿ, ಇಬ್ಬರೂ ಪ್ರತ್ಯೇಕವಾಗಿದ್ದರು.

ತಮ್ಮನ್ನು ತೊರೆದು ಹೊಸ ಗ್ಯಾಂಗ್ ಕಟ್ಟಿಕೊಂಡ ಸುರೇಶ್ ವಿರುದ್ಧ ಕುಪಿತಗೊಂಡ ಪಾಲಬ್ರಹ್ಮಯ್ಯ, ಪ್ರಕರಣವೊಂದರಲ್ಲಿ ಆತನನ್ನು ಆಂಧ್ರದ ಗುಡಿಯಾತ್ತಮ್ ಪೊಲೀಸರಿಗೆ ಹಿಡಿದುಕೊಟ್ಟಿದ್ದ. ಆ ಪ್ರಕರಣದಲ್ಲಿ ನ್ಯಾಯಾಲಯ ಸುರೇಶ್‌ಗೆ 14 ವರ್ಷ (1992–2006) ಜೈಲು ಶಿಕ್ಷೆ ವಿಧಿಸಿತ್ತು.

ಅಣ್ಣನನ್ನು ಜೈಲಿಗೆ ಕಳುಹಿಸಿದ್ದಕ್ಕೆ ಸಿಟ್ಟಾದ ಸುರೇಶ್‌ ತಮ್ಮ ಸಾಯಿಕುಮಾರ್, 1996ರಲ್ಲಿ ಡಕಾಯಿತಿ ಪ್ರಕರಣವೊಂದರಲ್ಲಿ ಕಡಪ ಪೊಲೀಸರಿಗೆ ಸಾಕ್ಷ್ಯ ಸಮೇತ ಮಾಹಿತಿ ಒದಗಿಸಿ ಪಾಲಬ್ರಹ್ಮಯ್ಯ ಒಂಬತ್ತು ವರ್ಷ ಜೈಲು ಸೇರುವಂತೆ ಮಾಡಿದ್ದ.

ಶಿಕ್ಷೆ ಪೂರ್ಣಗೊಳಿಸಿ ಪಾಲಬ್ರಹ್ಮಯ್ಯ 2005ರಲ್ಲಿ ಬಿಡುಗಡೆಯಾದರೆ, ಸುರೇಶ್ 2006ರಲ್ಲಿ ಜೈಲಿನಿಂದ ಹೊರಬಂದ. ಡಕಾಯಿತಿ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ, ನಂತರದ ದಿನಗಳಲ್ಲಿ ಅವರು ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಜೇಬುಕಳ್ಳತನ ಮಾಡಲು ಪ್ರಾರಂಭಿಸಿದ್ದರು.

2013ರಲ್ಲಿ ಪಾಲಬ್ರಹ್ಮಯ್ಯನನ್ನು ಆಂಧ್ರದ ಯರಗುಂಟಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಂಧಿಸಿದರು. ‘ಸುರೇಶ್ ಸೋದರರೇ ಮತ್ತೆ ನನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ’ ಎಂದು ಭಾವಿಸಿದ ಆತ, ಮರುವರ್ಷವೇ ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ಸಾಯಿಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತಿಯಾಗಿ ಸುರೇಶ್ ಸಹ ಕಬ್ಬನ್‌ಪಾರ್ಕ್‌ ಬಳಿ ವಾಹನ ಅಡ್ಡಗಟ್ಟಿ ಪಾಲಬ್ರಹ್ಮಯ್ಯ ಹಾಗೂ ಆತನ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದ. ಈ ದಾಳಿ–ಪ‍್ರತಿದಾಳಿಗಳ ಬಳಿಕ ಹಗೆತನ ಮತ್ತಷ್ಟು ತೀವ್ರಗೊಂಡಿತ್ತು.

ಕುಲಪಂಚಾಯಿತಿ ತೀರ್ಪು: ಗಲಾಟೆಗಳು ಹೆಚ್ಚಾದ ಬೆನ್ನಲ್ಲೇ ಎರಡೂ ಕುಟುಂಬಗಳು ಆಂಧ್ರದ ಡೋನ್‌ನಲ್ಲಿ ಕುಲಪಂಚಾಯಿತಿ ಮಾಡಿದ್ದರು. ಎದುರಾಳಿ

ಗಳ ಮೇಲೆ ಮೂರು ಬಾರಿ ದಾಳಿ ನಡೆಸಿದ್ದ ಕಾರಣಕ್ಕೆ ಸುರೇಶ್‌ ವಿರುದ್ಧವಾಗಿತೀರ್ಪು ಕೊಟ್ಟಿದ್ದ ಪಂಚಾಯಿತಿ ಮುಖಂಡರು, ಪಾಲಬ್ರಹ್ಮಯ್ಯನಿಗೆ ₹ 30 ಲಕ್ಷ ಪರಿಹಾರ ಕೊಡುವಂತೆ ಆತನಿಗೆ ಸೂಚಿಸಿದ್ದರು.

ಇದರ ಬೆನ್ನಲ್ಲೇ, ಪಾಲಬ್ರಹ್ಮಯ್ಯನ ಮಗಳು ಮನೆ ಸಮೀಪದ ಕನಕರಾವ್ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಗತಿ ಹೊರಬಿದ್ದಿತ್ತು. ಪಂಚಾಯಿತಿ ತೀರ್ಪಿನಿಂದ ಬೇಸರಗೊಂಡಿದ್ದ ಸುರೇಶ್, ಆ ವಿಷಯವನ್ನೇ ಇಟ್ಟುಕೊಂಡು ಗ್ರಾಮದಲ್ಲಿ ಎದುರಾಳಿ ಕುಟುಂಬದ ಮರ್ಯಾದೆ ತೆಗೆಯುವ ಕೆಲಸ ಪ್ರಾರಂಭಿಸಿದ್ದ. ಆತನ ಈ ನಡೆ ಆರೋಪಿ ಕುಟುಂಬವನ್ನು ಮತ್ತಷ್ಟು ಕೆರಳಿಸಿತ್ತು.

ಕನಕರಾವ್‌ನನ್ನು ತೊರೆಯಲು ಮಗಳು ಒಪ್ಪದಿದ್ದಾಗ, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸೇರಿ ಆತನನ್ನೇ ಮುಗಿಸಲು ಪಾಲಬ್ರಹ್ಮಯ್ಯ ಸಂಚು ರೂಪಿಸಿದ್ದ.  2017ರ ಮೇ ತಿಂಗಳಲ್ಲಿ ಅವನನ್ನು ಅಪಹರಿಸಿದ ಆರೋಪಿಗಳು, ಮಂಗಳಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಹತ್ಯೆಗೈದಿದ್ದರು. ನಂತರ ಪೆಟ್ರೋಲ್ ಸುರಿದು ದೇಹವನ್ನು ಸುಟ್ಟು ಹಾಕಿದ್ದರು.

ಕನಕರಾವ್ ಹತ್ಯೆ ಬಳಿಕ ಒಡಿಶಾಗೆ ಹೋಗಿ ತಲೆಮರೆಸಿಕೊಂಡಿದ್ದತಂದೆ–ಮಕ್ಕಳು, ಇದೇ ಜನವರಿಯಲ್ಲಿ ರಾಜ್ಯಕ್ಕೆ ವಾಪಸ್ ಆಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಈ ವಿಚಾರ ತಿಳಿದ ಸುರೇಶ್, ‘ಪಾಲಬ್ರಹ್ಮಯ್ಯ ಹುಬ್ಬಳ್ಳಿಯಲ್ಲಿದ್ದಾನಂತೆ. ಮಂಗಳಗಿರಿ ಪೊಲೀಸರಿಗೆ ವಿಷಯ ತಿಳಿಸಿ ಮತ್ತೆ ಜೈಲಿಗೆ ಕಳುಹಿಸುತ್ತೇನೆ’ ಎಂದು ಸಂಬಂಧಿಯೊಬ್ಬನ ಬಳಿ ಹೇಳಿದ್ದ. ಆವಿಚಾರವನ್ನು ಆತ ಪಾಲಬ್ರಹ್ಮಯ್ಯನಿಗೆ ತಿಳಿಸಿದ್ದ.

ಕೊಲೆಗೆ ಸಂಚು: ‘₹ 30 ಲಕ್ಷ ಪರಿಹಾರವನ್ನೂ ಕೊಡದ ಸುರೇಶ್, ಮತ್ತೆ ನಮ್ಮ ವಿರುದ್ಧವೇ ಸಂಚು ರೂಪಿಸಿದ್ದಾನೆ. ಆತನನ್ನು ಸುಮ್ಮನೇ ಬಿಟ್ಟರೆ ನಮಗೆ ಉಳಿಗಾಲವಿಲ್ಲ’ ಎಂಬ ನಿರ್ಧಾರಕ್ಕೆ ಬಂದ ಪಾಲಬ್ರಹ್ಮಯ್ಯ, ಫೆ.20ರ ರಾತ್ರಿ ಮಕ್ಕಳೊಂದಿಗೆ ನಗರಕ್ಕೆ ಬಂದಿದ್ದ.

ಮರುದಿನ ಬೆಳಿಗ್ಗೆ ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸುರೇಶ್‌ ಮೇಲೆ ಆರೋಪಿಗಳು ದಾಳಿ ನಡೆಸಿದ್ದರು. ತಪ್ಪಿಸಿಕೊಂಡು ಓಡಿ ಆತ ಚಲಿಸುತ್ತಿದ್ದ ಬಿಎಂಟಿಸಿ ಬಸ್ಹತ್ತಿದ್ದ. ಬೆನ್ನಟ್ಟಿ ಹೋಗಿ ಬಸ್ ಏರಿದ್ದ ಹಂತಕರು, ಪ್ರಯಾಣಿಕರ ಎದುರೇ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ನಂತರದ ದಿನಗಳಲ್ಲಿಪುಣೆ, ಸತಾರ, ಸಾಂಗ್ಲಿ ಹಾಗೂ ಕೊಲ್ಲಾಪುರದಲ್ಲಿ ಓಡಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದರು

‘ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಮೂರು ತಿಂಗಳಿನಿಂದ ಶೋಧ ನಡೆಸುತ್ತಿದ್ದರೂ ಪತ್ತೆಯಾಗದ ಹಂತಕರು, ಇತ್ತೀಚೆಗೆ ಮೊಬೈಲ್ ಕಳವು ಮಾಡುವ ಯತ್ನದಲ್ಲಿ ಗಸ್ತು ಸಿಬ್ಬಂದಿಗೆ ಸಿಕ್ಕಿಬಿದ್ದರು. ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸುರೇಶ್‌ನ ಕೊಲೆ ರಹಸ್ಯ ಬಾಯ್ಬಿಟ್ಟರು. ಆರೋಪಿಗಳ ಬಳಿ ₹ 12 ಲಕ್ಷ ಮೌಲ್ಯದ 50 ಮೊಬೈಲ್‌ಗಳು ಸಿಕ್ಕವು’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಪಪ್ರಚಾರ: ಹಂತಕರ ಕೋಪಕ್ಕೆ ಕಾರಣ

ಪಾಲಬ್ರಹ್ಮಯ್ಯ ಹಾಗೂ ಸುರೇಶ್‌, ತಮ್ಮ ಊರುಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಇವರ ಕೃತ್ಯಗಳ ಬಗ್ಗೆ ಗೊತ್ತಿಲ್ಲದ ಜನ, ಇಬ್ಬರನ್ನೂ ತುಂಬ ಗೌರವದಿಂದಲೇ ಕಾಣುತ್ತಿದ್ದರು.

ಇಂಥ ಪರಿಸ್ಥಿತಿಯಲ್ಲಿ ಪಾಲಬ್ರಹ್ಮಯ್ಯನನ್ನು ಎಚ್‌ಎಎಲ್ ‍ಪೊಲೀಸರು ಬಂಧಿಸಿದಾಗ, ‘ಬೆಂಗಳೂರು ಪೊಲೀಸರು ನಿಮ್ಮ ಪಾಲಬ್ರಹ್ಮಯ್ಯನಿಗೆ ಬೆತ್ತಲೆ ಮೆರವಣಿಗೆ ಮಾಡಿದರು. ತಲೆಬೋಳಿಸಿ ಕತ್ತೆ ಮೇಲೆ ಕೂರಿಸಿದರು’ ಎಂದು ಸುರೇಶ್ ಊರಿನಲ್ಲಿ ಅಪಪ್ರಚಾರ ಮಾಡಿದ್ದ. ಅದು ಸಹ ಹಂತಕರ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry