7
ಕ್ಷೇತ್ರದ ಅಭಿವೃದ್ಧಿ ಕುರಿತು ತಮ್ಮ ಕನಸುಗಳನ್ನು ಹಂಚಿಕೊಂಡ ರಾಮದುರ್ಗ ಶಾಸಕ

ನೀರಾವರಿ, ಕುಡಿಯುವ ನೀರಿಗೆ ಆದ್ಯತೆ

Published:
Updated:

ಬೆಳಗಾವಿ: ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ಮಹಾದೇವಪ್ಪ ಯಾದವಾಡ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಇವರು ಮೂಲತಃ ತಾಲ್ಲೂಕಿನ ಬಟಕುರ್ಕಿ ಗ್ರಾಮದವರು. ಹಲವು ವರ್ಷಗಳ ಹಿಂದೆ ರಾಮದುರ್ಗ ಪಟ್ಟಣಕ್ಕೆ ಬಂದು ನೆಲೆಸಿದರು. ಕೃಷಿ ಹಾಗೂ ದವಸಧಾನ್ಯಗಳ ವ್ಯಾಪಾರ ಮಾಡುತ್ತಾರೆ.

ಜನತಾದಳ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿದ್ದರು. 1999ರಲ್ಲಿ ಜೆಡಿಯುದಿಂದ ಕಣಕ್ಕಿಳಿದು, ಪರಾಭವಗೊಂಡಿದ್ದರು. 2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಅವರು, ಕಾಂಗ್ರೆಸ್‌ನ ಅಶೋಕ ಪಟ್ಟಣ ಅವರನ್ನು ಸೋಲಿಸಿದ್ದರು. 2008 ಹಾಗೂ 2013ರ ಚುನಾವಣೆಯಲ್ಲಿ ಅಶೋಕ ಪಟ್ಟಣ ಎದುರು ಸೋಲುಂಡರು. ಕಳೆದ ಚುನಾವಣೆಯಲ್ಲಿ ಅಶೋಕ ಪಟ್ಟಣ ಅವರನ್ನು ಸೋಲಿಸಿ ವಿಧಾನಸಭೆಗೆ ಪ್ರವೇಶಿಸಿದರು.

ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಅವರು ಪತ್ರಿಕೆಯ ಜೊತೆ ಅನಿಸಿಕೆಗಳನ್ನು ಹಂಚಿಕೊಂಡರು. ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.

ನಿಮ್ಮ ಕ್ಷೇತ್ರದಲ್ಲಿ ಈಗಲೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಯಾವ ಯೋಜನೆ ಹಾಕಿಕೊಂಡಿದ್ದೀರಿ?

ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ರಾಮದುರ್ಗ ಪಟ್ಟಣದಲ್ಲಿ 24x7 ಯೋಜನೆಯನ್ನು ಅನುಷ್ಠಾನಗೊಳಿಸುತ್ತೇನೆ. ಮಲಪ್ರಭಾ ನದಿಯ ಶುದ್ಧೀಕರಣಕ್ಕೆ ಒತ್ತು ನೀಡುತ್ತೇನೆ. ಗ್ರಾಮೀಣ ಮಟ್ಟದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ.

ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲವೆನ್ನುವ ಮಾತುಗಳು ಕೇಳಿಬಂದಿವೆ. ಇವುಗಳನ್ನು ಪೂರ್ಣಗೊಳಿಸಲು ಏನು ಮಾಡುತ್ತೀರಿ?

2004ರಲ್ಲಿ ನಾನು ಶಾಸಕನಾಗಿದ್ದಾಗ ಮಲಪ್ರಭಾ ಎಡದಂಡೆ ಕಾಲುವೆ ಯೋಜನೆ ಅನುಷ್ಠಾನಗೊಳಿಸಲು ₹ 1,700 ಕೋಟಿಯಿಂದ ₹ 1,800 ಕೋಟಿ ರೂಪಾಯಿ ಅನುದಾನ ತಂದಿದ್ದೆ. ಆ ಕೆಲಸವನ್ನು ಮುಂದುವರಿಸುತ್ತೇನೆ. ಕಾಲುವೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ. ಈ ಯೋಜನೆಯಿಂದ 35,000 ಎಕರೆ ಜಮೀನಿಗೆ ನೀರುಣಿಸಬಹುದು. ಇದರ ಜೊತೆಗೆ ಸಾಲಾಪುರ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಕ್ಷೇತ್ರದಲ್ಲಿ ನೇಕಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವುಗಳ ಪರಿಹಾರಕ್ಕೆ ಏನು ಯೋಚನೆ ಮಾಡಿದ್ದೀರಿ?

ಹೌದು, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಜನ ನೇಕಾರರು ಇದ್ದಾರೆ. ಹಿಂದೆ ನಾನು ಶಾಸಕನಾಗಿದ್ದಾಗ ನೇಕಾರರ ಕೈ ಮಗ್ಗಗಳಿಗೆ 20 ವ್ಯಾಟ್‌ ವರೆಗೆ ಉಚಿತ ವಿದ್ಯುತ್‌ ಕೊಡಿಸಿದ್ದೆ. ಈಗ ಅವರು ಸಾಲ ಮನ್ನಾ, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಬಯಸುತ್ತಿದ್ದಾರೆ. ಇವುಗಳನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ.

ಯುವಕರಿಗಾಗಿ ಏನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೀರಿ?

ನಮ್ಮಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಇದೆ. ಇದರ ಅಧ್ಯಕ್ಷ ನಾನಾಗಿದ್ದೇನೆ. ಇಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಸ್ಥಳೀಯ ಯುವಕರನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ವರ್ಷ ಉದ್ಯೋಗ ಮೇಳ ಆಯೋಜಿಸುತ್ತೇನೆ.

ನಿಮ್ಮಲ್ಲಿರುವ ಐತಿಹಾಸಿಕ ಕೋಟೆಗಳು, ದೇವಾಲಯಗಳು ನಶಿಸಿ ಹೋಗುತ್ತಿವೆ. ಇವುಗಳ ಸಂರಕ್ಷಣೆಗೆ ಏನಾದರೂ ಯೋಚಿಸಿದ್ದೀರಾ?

ನಮ್ಮಲ್ಲಿ ಹಲವು ಕೋಟೆ– ದೇವಾಲಯಗಳಿವೆ. ಇತ್ತೀಚಿನ ದಿನಗಳಲ್ಲಿ ಇವು ಶಿಥಿಲಾವಸ್ಥೆಗೆ ತಲುಪಿವೆ. ಇವುಗಳನ್ನು ಹೇಗೆ ಸಂರಕ್ಷಿಸಬಹುದು ಎನ್ನುವುದರ ಬಗ್ಗೆ ಚರ್ಚಿಸಲು ಸದ್ಯದಲ್ಲಿಯೇ ಅಧಿಕಾರಿಗಳ ಸಭೆ ನಡೆಸುತ್ತೇನೆ. ಸಲಹೆ– ಅಭಿಪ್ರಾಯಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇನೆ.

 ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆಯಲ್ಲ, ಇದಕ್ಕೇನು ಪರಿಹಾರ ಮಾಡುತ್ತೀರಿ?

ಸರ್ಕಾರಿ ಆಸ್ಪತ್ರೆಯಲ್ಲಿ 14 ಜನ ವೈದ್ಯರು ಇರಬೇಕಿತ್ತು. ಕೇವಲ 3 ಜನರಿದ್ದಾರೆ. ಪುರಸಭೆಯಲ್ಲಿ 58 ಹುದ್ದೆಗಳಿದ್ದು, ಕೇವಲ 12 ಜನ ಸಿಬ್ಬಂದಿಗಳಿದ್ದಾರೆ. ಇದೇ ರೀತಿ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಸಾಕಷ್ಟಿದೆ. ಇವುಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತೇನೆ. ಕೆಲವು ಕಡೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಪುನರ್‌ ನಿರ್ಮಿಸಲಾಗುವುದು. ಒಟ್ಟಿನಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry