ಶತಮಾನ ಕಂಡ ಶಾಲೆಗೆ ಕೊಠಡಿ ಸಮಸ್ಯೆ

7
ಮಳೆ ಸುರಿದರೆ ತರಗತಿಗಳಿಗೆ ತೊಡಕು

ಶತಮಾನ ಕಂಡ ಶಾಲೆಗೆ ಕೊಠಡಿ ಸಮಸ್ಯೆ

Published:
Updated:

ಹರಪನಹಳ್ಳಿ: ಶತಮಾನ ಕಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲ್ಲೂಕಿನ ದುಗ್ಗಾವತಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವ್ಯವಸ್ಥೆ ತಲುಪಿದ್ದು, ತರಗತಿಗಳಿಗೆ ಸಾಕಷ್ಟು ತೊಂದರೆ ಆಗಿದೆ.

ಶಾಲೆಯಲ್ಲಿ ತಗಡಿನ ಸೀಟು ಹೊಂದಿರುವ ಐದು ಕೊಠಡಿಗಳು, ಒಂದು ಕಚೇರಿ ಹಾಗೂ ಒಂದು ಬಿಸಿಯೂಟ ಕೊಠಡಿ ಸೇರಿ ಏಳು ಸಿಮೆಂಟ್ ಕಟ್ಟಡಗಳು ಒಟ್ಟು 12 ಕೊಠಡಿಗಳು ಈ ಶಾಲೆಯಲ್ಲಿವೆ. ಆದರೆ, ತಗಡಿನ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಕೊಠಡಿಗಳಲ್ಲಿ ನೀರು ತುಂಬಿ ಮಕ್ಕಳ ವಿದ್ಯಾಭಾಸ್ಯಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಶನಿವಾರ ಶೇಖರಣೆಗೊಂಡ ಮಳೆ ನೀರನ್ನು ಶಿಕ್ಷಕರು, ಮಕ್ಕಳು ಹೊರ ಹಾಕುತ್ತಿರುವ ದೃಶ್ಯ ಕಂಡುಬಂತು. ಮಳೆಗೆ ಕೊಠಡಿಗಳು ಸೋರಿದ್ದರಿಂದ ಕುಳಿತುಕೊಳ್ಳಲು ಜಾಗವಿಲ್ಲದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಕಷ್ಟು ತೊಂದರೆ ಅನುಭವಿಸಿದರು. ಹಳೆಯ ಕೊಠಡಿಗಳ ತಗಡುಗಳು ಒಡೆದು ಹೋಗಿವೆ.

ತಗಡುಗಳು ಮಳೆ-ಗಾಳಿಗೆ ಬೀಳುವ ಹಂತಕ್ಕೆ ತಲುಪಿವೆ. ಈ ಬಗ್ಗೆ ಡಿಡಿಪಿಐ, ಬಿಇಒ ಸೇರಿದಂತೆ ಸಂಬಂಧಿಸಿದ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಚ್.ಪರುಶುರಾಮಪ್ಪ ಆಗ್ರಹಿಸಿದರು.

ತಾಲ್ಲೂಕಿನ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಗಳಲ್ಲಿ ಒಂದು ಎನಿಸಿರುವ ದುಗ್ಗಾವತಿ ಶಾಲೆಗೆ ಕೊಠಡಿಗಳ ಕೊರತೆಯಿದೆ. ಹಳೆ ಕಾಲದ ಕೆಲವು ಕೊಠಡಿಗಳು ತಗಡಿನಿಂದ ನಿರ್ಮಾಣಗೊಂಡಿದ್ದು, ಮಳೆ ಬಂದಾಗ ಸೋರುತ್ತಿವೆ. ಈ ಸಮಸ್ಯೆ ಬಗ್ಗೆ ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಕೊಠಡಿ ದುರಸ್ತಿ ಕಾರ್ಯಕ್ಕಾಗಿ ಪತ್ರವನ್ನೂ ಬರೆಯಲಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ಮಾಡಿಸಲಾಗುವುದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ರವಿ ತಿಳಿಸಿದ್ದಾರೆ.

ಪ್ರಸ್ತಾವ ಸಲ್ಲಿಕೆ

ಶಾಸಕರ ಅನುದಾನದಲ್ಲಿ ₹40 ಲಕ್ಷ ವೆಚ್ಚದಲ್ಲಿ 210 ಕೊಠಡಿ ದುರಸ್ತಿ ಮಾಡಿಸಲಾಗಿದೆ. ಶಿಥಿಲಾವ್ಯವಸ್ಥೆಗೆ ತಲುಪಿರುವ ತಾಲ್ಲೂಕಿನ 196 ಸರ್ಕಾರಿ ಶಾಲೆಗಳ 175 ಕೊಠಡಿಗಳ ನೆಲಸಮಗೊಳಿಸಿ ಪುನರ್ ನಿರ್ಮಾಣಕ್ಕೆ ಅವುಗಳಲ್ಲಿಯೇ ಅದರಲ್ಲಿ 59 ಕೊಠಡಿಗಳ ತುರ್ತು ನಿರ್ಮಾಣಕ್ಕೆ ಎಂದು ಪ್ರಸ್ತಾವ ಸಲ್ಲಿಸಲಾಗಿದೆ. 2016-17ನೇ ಸಾಲಿನಲ್ಲಿ ಯಡಿಹಳ್ಳಿ ಶಾಲೆಯ ಮೂರು ಕೊಠಡಿ ದುರಸ್ತಿ ಕಾರ್ಯಕ್ಕೆ ₹ 6 ಲಕ್ಷ, ಜಿಟ್ಟಿನಕಟ್ಟೆ ಹಾಗೂ ಕಂಚೀಕೆರೆ ಶಾಲೆಗೆ ತಲಾ ₹ 4 ಲಕ್ಷ ನೀಡಲಾಗಿದೆ. 16 ಶಾಲೆಗಳ 18 ಕೊಠಡಿ ದುರಸ್ತಿಗೆ ₹ 1.56 ಕೋಟಿ  ಮಂಜೂರು ಆಗಿದೆ ಏಜೆನ್ಸಿಗಳಿಗೆ ನೀಡುವ ಪ್ರಕ್ರಿಯೆ ಬಾಕಿಯಿದೆ ಎಂದು ಬಿಇಒ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

–ಪ್ರಹ್ಲಾದ್‌ ಗೊಲ್ಲಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry