ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

7
ಶಾಸಕರಾದ ಎಚ್‌.ಕೆ.ಪಾಟೀಲ, ಸಿ.ಎಸ್‌. ಶಿವಳ್ಳಿಗೆ ಸಚಿವ ಸ್ಥಾನ ನೀಡಲು ಆಗ್ರಹ

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

Published:
Updated:

ನವಲಗುಂದ: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಾದ ಎಚ್.ಕೆ.ಪಾಟೀಲ ಹಾಗೂ ಸಿ.ಎಸ್.ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶನಿವಾರ ಪಕ್ಷದ ಮುಖಂಡರು ಹತ್ತು ನಿಮಿಷ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕದ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಬೇಸರ ಉಂಟು ಮಾಡಿದೆ. ಅಜಾತ ಶತ್ರುವಾಗಿರುವ ಪಾಟೀಲ ಅವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವರನ್ನಾಗಿ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದರು.

ಕುಂದಗೋಳ ಮತಕ್ಷೇತ್ರದ ಕುರುಬ ಸಮಾಜದವರಾದ ಸಿ.ಎಸ್.ಶಿವಳ್ಳಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರಿಗೂ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಎಸ್.ಸಿ.ರೇಣುಕಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಚ್.ಕೋನರಡ್ಡಿ, ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷೆ ಶಶಿರೇಖಾ ಶಿಡಗಂಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ಜಾಧವ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಭಗವತಿ, ಮುಖಂಡರಾದ ಎ.ಎ.ಜಹಗೀರದಾರ, ಉಸ್ಮಾನ ಬಬರ್ಚಿ, ಆರ್.ಡಿ.ಧಾರವಾಡ, ಶಿವಾನಂದ ಪಾಚಂಗಿ, ಗಿರಿಯಪ್ಪ ಗಾಣಿಗೇರ, ವಿಜಯಗೌಡ ಪಾಟೀಲ, ಹನಮಂತಪ್ಪ ಇಬ್ರಾಹಿಂಪೂರ, ಮಲ್ಲಿಕಾರ್ಜುನ ಮಾಕಣ್ಣವರ, ಬಿ.ಎಂ.ಹನಸಿ, ಬಸವರಾಜ ಗುಡೆಣ್ಣವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.

ಆಲೂರು ವೆಂಕಟರಾವ್ ವೃತ್ತದಲ್ಲಿ ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪಕ್ಷದಿಂದ ಸಚಿವ ಸಂಪುಟದಲ್ಲಿ ಕುರುಬ ಸಮಾಜದ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ. ಹೀಗಾಗಿ, ಕೂಡಲೇ ಶಿವಳ್ಳಿ ಅವರ ಕೆಲಸ ಹಾಗೂ ಹಿರಿತನ ಗಮನಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಮೊದಲ ಬಾರಿಗೆ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿರುವ ಹೈಕಮಾಂಡ್, ಹಿರಿಯರಿಗೆ ಸ್ಥಾನ ನೀಡದಿರುವುದನ್ನು ಖಂಡಿಸಿದರು.

ಕಾಂಗ್ರೆಸ್ ಮುಖಂಡರಾದ ಶಾಂತವ್ವ ಗುಜ್ಜಳ, ಸ್ವಾತಿ ಮಾಳಗಿ ಇದ್ದರು.

ಮೌನ ಪ್ರತಿಭಟನೆ ಇಂದು

ಧಾರವಾಡ: ಸಮರ್ಥ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಸಮಸ್ತ ರಡ್ಡಿ ಸಮಾಜ ಹಾಗೂ ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ ಹಾಗೂ ಎಸ್‌.ಆರ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಬೆಳಿಗ್ಗೆ 11.30ಕ್ಕೆ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪಾಲಿಕೆ ಸದಸ್ಯ ರಘು ಲಕ್ಕಣ್ಣವರ ಹೇಳಿದರು.

‘ಕಲಾಭವನದ ಆವರಣದಿಂದ ಆರಂಭವಾಗಿ ಆಲೂರು ವೆಂಕಟರಾವ್‌ ವೃತ್ತದಲ್ಲಿ ಸಮಾವೇಶಗೊಂಡು ರೆಡ್ಡಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡವಂತೆ ಆಗ್ರಹಿಸಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೈತ್ರಿ ಸರ್ಕಾರದ ಸಂಪುಟದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದರೂ ಅಚ್ಚರಿ ಪಡಬೇಕಾಗಿಲ್ಲ’ ಎಂದು ಎಚ್ಚರಿಸಿದರು.

ಡಾ. ಎಚ್.ಸಿ. ಮಕಣಿ, ಎಸ್.ಎಸ್. ಕಣವಿ, ಸಂದೀಪ ಅಣವಿ, ಕಿರಣ ಹೊಂಬಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry