ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಮನೆಗಳ ನಿರ್ಮಾಣಕ್ಕೆ ಆದ್ಯತೆ

ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ನೀಲನಕ್ಷೆ ಬಿಚ್ಚಿಟ್ಟ ಶಾಸಕ ಅರವಿಂದ ಬೆಲ್ಲದ
Last Updated 10 ಜೂನ್ 2018, 9:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಚೇತ್ರದಿಂದ ಸತತ ಎರಡನೇ ಬಾರಿಗೆ ಅರವಿಂದ ಬೆಲ್ಲದ ಆಯ್ಕೆಯಾಗಿದ್ದಾರೆ. ಧಾರವಾಡ ನಗರ, ನವನಗರ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹುಬ್ಬಳ್ಳಿಯ ಗೋಕುಲ ರಸ್ತೆಯ ಭಾಗ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದಲ್ಲಿ ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಹೆಸರು ಮಾಡಿದ ಧಾರವಾಡದ ಹಿರಿಮೆ ಹೆಚ್ಚಿಸಲು ನಿಮ್ಮ ಯೋಜನೆಗಳೇನು?

ಈಗಾಗಲೇ ಮೂರು ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಮೆಡಿಕಲ್‌ ಕಾಲೇಜುಗಳು ಇವೆ. ಜೊತೆಗೆ ಧಾರವಾಡದ ಬೇಲೂರು ಬಳಿ ಐಐಟಿ ಕಾರ್ಯಾರಂಭ ಮಾಡಿದೆ. ಇಷ್ಟು ಸಾಲದು. ಕೈಗಾರಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಇಂಡಸ್ಟ್ರಿಯಲ್‌ ಎಸ್ಟೇಟ್‌ ಹೇಗೆ ಇರುತ್ತದೆಯೋ ಅದೇ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಬರುವವರಿಗೆ 5ರಿಂದ 50 ಎಕರೆವರೆಗೆ ಕ್ಯಾಂಪಸ್‌ ನಿರ್ಮಿಸಲು ಅಗತ್ಯವಾದ ಭೂಮಿ, ನೀರು, ರಸ್ತೆಯಂತಹ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಎಜುಕೇಶನ್‌ ಎಸ್ಟೇಟ್‌ ರೂಪಿಸುವ ಯೋಜನೆ ಇದೆ.

ಬಿಆರ್‌ಟಿಎಸ್‌ ಯೋಜನೆಯಿಂದಾಗಿ ಜನರು ಅನುಭವಿಸುತ್ತಿರುವ ಸಂಕಟ ಯಾವಾಗ ಕೊನೆಗೊಳ್ಳುತ್ತದೆ?

ಹಿಂದಿನ ಸಂದರ್ಶನದಲ್ಲಿಯೂ ಹೇಳಿದಂತೆ ಇದು ಅತ್ಯುತ್ತಮ ಯೋಜನೆ ಎಂಬುದು ನಿಜ. ಆದರೆ, ಅನುಷ್ಠಾನದ ರೀತಿ ಅತ್ಯಂತ ಕೆಟ್ಟದಾಗಿದೆ. ಧಾರವಾಡ ಸುತ್ತಲೂ ಏಳು ಗುಡ್ಡಗಳಿವೆ. ಅಲ್ಲಿ ಬಿದ್ದ ನೀರು ನೇರವಾಗಿ ಎನ್‌ಟಿಟಿಎಫ್‌, ಟೋಲ್‌ ನಾಕಾ ಹತ್ತಿರ ಬಂದು ಮುಂದೆ ಕೋಳಿಕೆರೆ ಸೇರುತ್ತದೆ. ಆದರೆ, ಯೋಜನೆಯ ನೀಲನಕ್ಷೆ ತಯಾರಿಸಿದ ಸಂಸ್ಥಯವರು, ದೈವಜ್ಞ ಮಂಗಲ ಕಾರ್ಯಾಲಯದತ್ತ ನೀರನ್ನು ತಿರುಗಿಸುವ ಅವೈಜ್ಞಾನಿಕ ಯೋಜನೆ ರೂಪಿಸಿದ್ದಾರೆ. ಸಾಮಾನ್ಯ ಎಂಜಿನಿಯರಿಂಗ್‌ನ ಜ್ಞಾನ ಇದ್ದವರೂ ಹೀಗೆ ಮಾಡುತ್ತಿರಲಿಲ್ಲ. ಕೆಲ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಬಿಆರ್‌ಟಿಎಸ್‌ ಯೋಜನೆಯ ಸ್ಥಿತಿಗತಿ ಅರಿಯಲು ನಾವು ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗಲೇ ಏನಾದರೂ ಮಾಡಬಹುದಿತ್ತು.

ಬಡವರಿಗೆ ಮನೆ ನಿರ್ಮಾಣ ವಿಚಾರ ಎಲ್ಲಿಗೆ ಬಂತು?

ಈ ಬಾರಿ ಅಂದಾಜು 10,000 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇನೆ. 6,000 ಮನೆಗಳ ನಿರ್ಮಾಣಕ್ಕೆ ಗಾಮನಗಟ್ಟಿ, ನವನಗರ, ನವಲೂರು ಬಳಿ ಜಾಗ ಹುಡುಕಿದ್ದೇನೆ. ಉಳಿದ 4,000 ಮನೆಗಳ ನಿರ್ಮಾಣಕ್ಕೆ ಖಾಲಿ ಜಾಗ ನೋಡಿದ್ದೇನೆ. ಅಂತಿಮವಾಗಬೇಕಿದೆ.

ಎಲ್ಲಿ ಬೇಕೆಂದರಲ್ಲಿ ಜಲಮಂಡಳಿ, ಹೆಸ್ಕಾಂ, ಬಿಎಸ್ಸೆನ್ನೆಲ್‌, ಗ್ಯಾಸ್‌ ಪೈಪ್‌ಲೈನ್‌, ಒಳಚರಂಡಿ ನಿರ್ಮಿಸುವವರು ರಸ್ತೆ ಅಗೆಯುತ್ತಾರೆ. ವ್ಯವಸ್ಥಿತ ಯೋಜನೆ ಜಾರಿ ಏನು ಮಾಡುವಿರಿ?

ಬ್ರಿಟಿಷರ ಕಾಲದಲ್ಲಿ ಎಲ್ಲ ಬಗೆಯ ರಸ್ತೆ ನಿರ್ವಹಣೆ ಮಾಡಲು ಲೋಕೋಪಯೋಗಿ ಇಲಾಖೆಯೊಂದೇ ಇತ್ತು. ಆದರೆ, ಇಂದು ಪಾಲಿಕೆ, ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗ್ರಾಮ ಪಂಚಾಯ್ತಿ ಅವರು ವಿವಿಧ ರಸ್ತೆಗಳನ್ನು ನಿರ್ವಹಣೆ ಮಾಡುತ್ತಾರೆ. ಅವರಿಗೆ ಯಾವಾಗ ಬೇಕೋ, ಆಗ ರಸ್ತೆ ಅಗೆಯುತ್ತಾರೆ. ಇಲಾಖೆಗಳ ಮಧ್ಯೆ ಸಮನ್ವಯ ಕೊರತೆಯಿಂದ ಹೀಗಾಗಿದೆ. ಸರ್ಕಾರದ ಮಟ್ಟದಲ್ಲಿಯೇ ಪರಿಹಾರವಾಗಬೇಕಿದೆ.

ಪ್ರತಿ ವರ್ಷ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕದಾದ ಸರ್ಕಾರಿ ಹಾಸ್ಟೆಲ್‌ಗಳ ವ್ಯವಸ್ಥೆ ಇಲ್ಲ. ಇದಕ್ಕೆ ನಿಮ್ಮ ಯೋಜನೆ ಏನು?

ಧಾರವಾಡದ ಉದಯ ಹಾಸ್ಟೆಲ್‌ ಬಳಿ ಸಾಕಷ್ಟು ಸರ್ಕಾರಿ ಜಾಗ ಖಾಲಿ ಇದೆ. ಅಲ್ಲಿಯೇ ಅಂದಾಜು 10,000 ವಿದ್ಯಾರ್ಥಿಗಳು ಉಳಿದುಕೊಳ್ಳಲು ಹೊಸ ಹಾಸ್ಟೆಲ್‌ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇನೆ.

ರಾಜ್ಯದಲ್ಲಿ ನಿಮ್ಮ ಸರ್ಕಾರವಿಲ್ಲ. ನಿಮ್ಮ ಯೋಜನೆಗಳು ರಾಜ್ಯದ ಸಮ್ಮಿಶ್ರ ಸರ್ಕಾರ ಸಹಾಯ ಮಾಡುವ ಭರವಸೆ ಇದೆಯೇ?

ಕಳೆದ ಅವಧಿಯಲ್ಲಿಯೂ ನಮ್ಮ ಸರ್ಕಾರವಿರಲಿಲ್ಲ. ಆದರೆ, ಎಷ್ಟೋ ಕೆಲಸಗಳನ್ನು ಮಾಡಿದ್ದೇನೆ. ಸಂಸದ ಪ್ರಹ್ಲಾದ ಜೋಶಿ ಅವರ ನೆರವಿನಿಂದ ಕೇಂದ್ರದಿಂದ, ಜಗದೀಶ ಶೆಟ್ಟರ್‌ ಅವರ ನೆರವಿನಿಂದ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ದೊರೆತಿತ್ತು. ಅಭಿವೃದ್ಧಿಗಾಗಿ ರಾಜ್ಯದ ಪ್ರಸ್ತುತ ಸರ್ಕಾರ ಅನುದಾನ ನೀಡುವ ಭರವಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT