‘ಸಮಸ್ಯೆಗೆ ಸ್ಪಂದಿಸುವ ಸಾಹಿತ್ಯ ರಚಿಸಿ’

7
ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ‘ನುಡಿ ಜಾತ್ರೆ’ ಇಂದು

‘ಸಮಸ್ಯೆಗೆ ಸ್ಪಂದಿಸುವ ಸಾಹಿತ್ಯ ರಚಿಸಿ’

Published:
Updated:

ಹುಬ್ಬಳ್ಳಿ: ಮತ್ತೊಂದು ನುಡಿ ಹಬ್ಬಕ್ಕೆ ಹುಬ್ಬಳ್ಳಿ ಸಜ್ಜುಗೊಂಡಿದೆ. ಕನ್ನಡ ನಾಡು, ನುಡಿ, ಜಲ, ನೆಲದ ಹಿರಿಮೆಯನ್ನು ಎತ್ತಿ ಹಿಡಿಯಲು ವೇದಿಕೆ ಸಿದ್ಧವಾಗಿದೆ. ರಂಬಾಪುರಿ ಕಲ್ಯಾಣ ಮಂಟಪದ ಮೋಹನ ಏಕಬೋಟೆ ವೇದಿಕೆಯಲ್ಲಿ ಭಾನುವಾರ ನಡೆಯಲಿರುವ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಂ.ಎಂ. (ಮರಿಬಸಪ್ಪ ಮಲಕಪ್ಪ) ಕನಕೇರಿ ಅಧ್ಯಕ್ಷರಾಗಿದ್ದಾರೆ.

ಹಾವೇರಿ ತಾಲ್ಲೂಕಿನ ಹಂದಿಗನೂರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಎಂ.ಎಂ. ಕನಕೇರಿ ಅವರು, ಪ್ರಾಥಮಿಕ ಶಾಲಾ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬರುತ್ತಾರೆ. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ವಿದ್ಯಾರ್ಥಿದೆಸೆಯಲ್ಲಿಯೇ ಅವರಿಗೆ ಸಾಹಿತ್ಯದತ್ತ ಒಲುವು ಬೆಳೆಯುತ್ತದೆ. ನಾಲ್ಕು ದಶಕಗಳಿಂದ ಸಾಹಿತ್ಯ ಸೇವೆಯ ಪಯಣ ಇಂದಿಗೂ ಮುಂದುವರಿಸಿದೆ.

ತುರ್ತು ಪರಿಸ್ಥಿತಿ (ನಾಟಕ), ಸುಶೀಲ ಕಿರಣ (ಕವನ ಸಂಕಲನ), ಮಹಾಂತ ಕಿರಣ (ಜೀವನ ಚರಿತ್ರೆ), ಗುಪ್ತ ಗುಹೇಶ್ವರ ವಚನಗಳು, ಸಜ್ಜಲಗುಡ್ಡದ ಶರಣಮ್ಮ, ಗುಡ್ಡಾಪುರ ದಾನಮ್ಮ ಸೇರಿದಂತೆ 36 ಕೃತಿಗಳನ್ನು ರಚಿಸಿದ್ದಾರೆ. 1971 ರಿಂದ ‘ಸುಶೀಲ’ ಎಂಬ ಮಾಸ ಪತ್ರಿಕೆಯನ್ನು ಹೊರ ತರುತ್ತಿದ್ದಾರೆ. ನಾಡು, ನುಡಿಯ ಬಗ್ಗೆ ‘ಪ್ರಜಾವಾಣಿ’ ನೀಡಿದ ಸಂದರ್ಶನ ಇಂತಿದೆ.

ಪ್ರಾಥಮಿಕ, ಪ್ರೌಢಶಾಲೆ ಅಧ್ಯಯನ ಯಾವ ಭಾಷಾ ಮಾಧ್ಯಮದಲ್ಲಿರಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು?

ನೌಕರಿ ದೊರೆಯುತ್ತದೆ ಎಂಬ ಒಂದೇ ಕಾರಣಕ್ಕೆ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸುತ್ತಿದ್ದೇವೆ. ಎಷ್ಟು ಜನರು ನೌಕರಿ ಮಾಡಲು ಸಾಧ್ಯ? ನೌಕರಿ ಮಾಡದವರು ಬದುಕಿಲ್ಲವೇ ? ಇಂಗ್ಲಿಷ್‌ ಕಲಿತರೆ ಜೀವನ ಸಾರ್ಥಕವಾದಂತೆ ಎಂದು ಪ್ರಚಾರ ಮಾಡುವುದನ್ನೇ ಕೆಲವರು ಉದ್ಯೋಗವಾಗಿಸಿಕೊಂಡಿದ್ದಾರೆ. ಈ ನೆಲದ ಅಸ್ಮಿತೆ ಹೊಂದಿರುವ ಕನ್ನಡ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಬೇಕು. ಜೀವನವನ್ನು ಮುನ್ನೆಡೆಸಲು ಬೇಕಾದ ಶಕ್ತಿ ನೀಡುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಇದೆ.ಕನ್ನಡ ಮಾಧ್ಯಮ ಅಧ್ಯಯನ ಮಾಡಿದವರಿಗೆ ಸರ್ಕಾರವೂ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು.

ವಿದ್ಯಾರ್ಥಿಗಳು, ಯುವ ಜನರು ಸಾಹಿತ್ಯದಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಸಾಹಿತ್ಯದತ್ತ ಸೆಳೆಯಲು ಏನು ಮಾಡಬೇಕು?

ತಂತ್ರಜ್ಞಾನವು ಕನ್ನಡ ಭಾಷೆಯ ಶತ್ರುವಾಗಿದೆ. ಟಿವಿ, ಮೊಬೈಲ್‌ನಿಂದಾಗಿ ಸಾಹಿತ್ಯ ಅಧ್ಯಯನ ಮಾಡುತ್ತಿಲ್ಲ. ಎಸ್ಎಸ್‌ಎಲ್‌ಸಿ ಪಾಸಾದವರಿಗೂ ತಪ್ಪಿಲ್ಲದಂತೆ ಸರಿಯಾಗಿ ಬರೆಯಲು ಬರುವುದಿಲ್ಲ. ಮನುಷ್ಯ ಜೀವನದ ಪ್ರತಿಬಿಂಬ ಆಗಿರುವ ಸಾಹಿತ್ಯದ ಮಹತ್ವವನ್ನು ತಿಳಿಸಿಕೊಡಬೇಕು. ನೈತಿಕ ಬಲ ಸಿಗುವುದು ಸಾಹಿತ್ಯದಿಂದ ಮಾತ್ರ. ಅವರಿಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಬೇಕು.

ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆಯುತ್ತಿವೆ. ಭಾಷಾ ಬೆಳವಣಿಗೆಗೆ ಅವುಗಳಿಂದ ಹೆಚ್ಚಿನ ಉಪಯೋಗ ಆಗುತ್ತಿಲ್ಲ ಎಂಬ ಟೀಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೊಡ್ಡ, ದೊಡ್ಡ ಸಮ್ಮೇಳನಗಳಿಗಿಂತ ಚಿಕ್ಕ, ಚಿಕ್ಕ ಸಮ್ಮೇಳನಗಳನ್ನು ಅಲ್ಲಲ್ಲಿ ಮೂರು ತಿಂಗಳಿಗೊಮ್ಮೆ ಆಚರಿಸಬೇಕು. ಒಂದೆಡೆ ಎಲ್ಲರೂ ಸೇರುವುದರಿಂದ ನಾಡು, ನುಡಿ, ಜಲ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಗುತ್ತದೆ. ಹೋರಾಟಕ್ಕೆ ಸಮ್ಮೇಳನಗಳೇ ಹಲವು ಬಾರಿ ವೇದಿಕೆಯಾಗಿವೆ.

ಕನ್ನಡ ಭಾಷೆ ಉಳಿಸಿ, ಬೆಳೆಸಲು ನಿಮ್ಮ ಸಲಹೆಗಳೇನು?

ಎಲ್ಲ ಫಲಕಗಳನ್ನು ಕನ್ನಡದಲ್ಲಿ ಹಾಕಬೇಕು. ವಚನ, ದಾಸ ಸಾಹಿತ್ಯದ ಸತ್ವವನ್ನು ಜನರಿಗೆ ತಿಳಿಸಬೇಕು. ಸಣ್ಣ, ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕು. ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಬರೆಯಬೇಕು. ಭಾಷೆಯ ಉಳಿವಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಈಗ ರಚನೆಯಾಗುತ್ತಿರುವ ಸಾಹಿತ್ಯದ ಗುಣಮಟ್ಟ ಹೇಗಿದೆ?

ಗುಣಮಟ್ಟ ಪರವಾಗಿಲ್ಲ. ಜನರ ಭಾವನೆ, ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಾಹಿತ್ಯ ರಚಿಸಬೇಕು. ಆಗ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ.

ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟ ಆಗುತ್ತಿವೆ. ಆದರೆ, ಓದುಗರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಏನು ಹೇಳುವಿರಿ?

ಶಾಲಾ–ಕಾಲೇಜು ಪಠ್ಯಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಪೋಷಕರು ಅದಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ. ಜೀವನದ ದಾರಿ ತೋರುವ ಸಾಹಿತ್ಯ ಪುಸ್ತಕಗಳನ್ನು ಮಕ್ಕಳಿಗೆ ಓದಿಸಬೇಕು . ಶಾಲೆಯಿಂದಲೇ ಇದು ಆರಂಭವಾಗಬೇಕು.

ಸಮ್ಮೇಳನದಲ್ಲಿ ಇಂದು

ಬೆಳಿಗ್ಗೆ 8.30ಕ್ಕೆ ರಾಷ್ಟ್ರ, ಕನ್ನಡ, ಪರಿಷತ್‌ ಧ್ವಜಾರೋಹಣ

ಬೆಳಿಗ್ಗೆ 10.00ಕ್ಕೆ ಸಮ್ಮೇಳನ ಉದ್ಘಾಟನೆ: ಡಾ.ಕೆ.ಆರ್‌. ದುರ್ಗಾದಾಸ. ನಂತರ ಸಮ್ಮೇಳನಾಧ್ಯಕ್ಷ ಎಂ.ಎಂ. ಕನಕೇರಿ ಮಾತನಾಡುವರು. ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 12ಕ್ಕೆ ಆಧುನಿಕ ಸಾಹಿತ್ಯದ ಒಲುವು–ಸವಾಲುಗಳು ಕುರಿತು ಗೋಷ್ಠಿ. ವಾಸ್ತವಿಕತೆ– ಸ್ತ್ರೀ ಸಬಲೀಕರಣ ಕುರಿತು ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ, ಹೊಸ ಪೀಳಿಗೆ ಸಾಹಿತ್ಯಾಸಕ್ತಿ ಕುರಿತು ಮಲ್ಲಿಕಾರ್ಜುನ ಸಿದ್ದಣ್ಣವರ ಮಾತು.

ಮಧ್ಯಾಹ್ನ 3ಕ್ಕೆ ಕವಿಗೋಷ್ಠಿ. ಅಧ್ಯಕ್ಷತೆ: ಗೋವಿಂದ ಮಣ್ಣೂರ

ಸಂಜೆ 5ಕ್ಕೆ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ.

ಸಂಜೆ 6ಕ್ಕೆ ಸಮಾರೋಪ . ಸಮಾರೋಪ ಭಾಷಣ: ಎಸ್‌.ಆರ್. ಗುಂಜಾಳ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry