ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಾಂತರ ನಷ್ಟ, ಮಹಿಳೆಗೆ ಗಾಯ; ನದಿ ಹರಿವು ಹೆಚ್ಚಳ

ಮೂಲ್ಕಿ, ಸುಳ್ಯ, ಬಂಟ್ವಾಳದಲ್ಲಿ ವರುಣನ ಆರ್ಭಟಕ್ಕೆ ತತ್ತರಿಸಿದ ಜನರು, ವ್ಯಾಪಕ ಆಸ್ತಿ ಹಾನಿ
Last Updated 10 ಜೂನ್ 2018, 10:12 IST
ಅಕ್ಷರ ಗಾತ್ರ

ಮೂಲ್ಕಿ: ಇಲ್ಲಿನ ಮೂಲ್ಕಿ ಹೋಬಳಿಯ ಕಿಲ್ಪಾಡಿ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಬಂದ ಗಾಳಿ ಮಳೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಮಹಿಳೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರ್ದಬ್ಬು ದೈವಸ್ಥಾನದ ಬಳಿಯ ಕಾಂಪರ ಮೇಸ್ತ್ರಿಯ ಮನೆಯ ಚಾವಣಿಗೆ ತೆಂಗಿನ ಮರ ಬಿದ್ದು ಮನೆಯ ಹೆಂಚುಗಳು ಹಾಗೂ ರೀಪು, ಪಕ್ಕಾಸುಗಳು ಮುರಿದು ಬಿದ್ದಿವೆ. ಒಳಗಿದ್ದ ಸುಬ್ಬಿ ಎಂಬವರ ಮಗಳು ರತ್ನಾ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಕಾರ್ನಾಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಾಜ ಸೇವಕ ರಾಜೇಶ್ ಅಮೀನ್ ಅವರು ಆಶ್ರಯ ನೀಡಿದ್ದಾರೆ. ₹ 2.5 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್, ಸದಸ್ಯ ನಾಗರಾಜ್ ಕುಲಾಲ್ ಹಾಗೂ ಸ್ಥಳೀಯ ಯುವ ನಾಯಕ ಮಧುಸೂದನ್ ಶೆಟ್ಟಿಗಾರ್ ಅವರು ಬಂದು ಘಟನೆಯಲ್ಲಿ ಗಾಯಗೊಂಡವಿಗೆ ನೆರವಾಗಿದ್ದಾರೆ.

ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಗ್ರಾಮ ಕರಣಿಕ ಮಂಜುನಾಥ್ ಹಾಗೂ ಸಹಾಯಕ ಭಾಸ್ಕರ ಪೂಜಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಬಗ್ಗೆ ಮೂಲ್ಕಿಯ ವಿಶೇಷ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.

ಪಡುಪಣಂಬೂರು: ಮೂಲ್ಕಿ ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಪು ಬಳಿಯ ತೋಕೂರಿನಲ್ಲಿ ಸಂತೋಷ್ ಎಂಬವರ ಮನೆಗೆ ಗಾಳಿಗೆ ಮನೆಯ ಒಂದು ಭಾಗದ ಹೆಂಚುಗಳು ಹಾರಿ, ₹ 20 ಸಾವಿರ ನಷ್ಟ ಆಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ ದಾಸ್, ಸದಸ್ಯ ದಿನೇಶ್ ಕುಲಾಲ್, ಪಿಡಿಒ ಅನಿತಾ ಕ್ಯಾಥರಿನ್, ಗ್ರಾಮ ಕರಣಿಕ ಮೋಹನ್ ಅವರು ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ವ್ಯಾಪಕ ಹಾನಿ

ಸುಳ್ಯ: ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ವ್ಯಾಪಕ ಹಾನಿ ಉಂಟಾಗಿದೆ. ಪೆರುವಾಜೆಯ ಜಲದುರ್ಗಾದೇವಿ ದೇವಸ್ಥಾನಕ್ಕೆ ನೆರೆ ನೀರು ನುಗ್ಗಿದೆ. ದೇವಸ್ಥಾನದ ಎದುರಿನ ತೋಡಿನಿಂದ  ಮಳೆ ನೀರು ದೇವಸ್ಥಾನದ ಹೊರ ಮತ್ತು ಒಳಾಂಗಣ ಪ್ರವೇಶಿಸಿತು. ಗಣಪತಿ ಗುಡಿ ಜಲಾವೃತಗೊಂಡಿತು.  ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಬಲ ಭಾಗದಲ್ಲಿ ಪಯಸ್ವಿನಿ ನದಿಯ ದಡದ ತಡೆಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿ ಉಂಟಾಗಿದೆ.

ಗ್ರಾಮದ ಜ್ಯೋತಿ ಪ್ರೌಢಶಾಲೆ ಬಳಿ ಕೊರಪ್ಪೊಳು ಎಂಬುವರ ಮನೆಯ ಗೋಡೆ ಕುಸಿದು, ಮನೆಯೊಳಗಿನ ಪಾತ್ರೆ ವಸ್ತುಗಳು ಸಂಪೂರ್ಣ ನುಜ್ಜುಗುಜ್ಜಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ನಾರ್ಣಪ್ಪ ಗೌಡರ ಮನೆಯ ವಿದ್ಯುತ್ ಲೈನಿಗೆ ಮರ ಬಿದ್ದು 2 ಕಂಬ ತುಂಡಾಗಿದೆ. ಪೆರುವಾಜೆಯಲ್ಲಿ ಬುಡಸಮೇತ ಉರುಳಿ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ದುಗಲಡ್ಕದ ಕೆದ್ಕಾನ ಶ್ರೀಧರ ಆಚಾರ್ಯರ ಮನೆಯ ಕಾಂಪೌಂಡ್ ಕುಸಿದಿರುವುದರಿಂದ ಮನೆ ಅಪಾಯದಲ್ಲಿದೆ.

ಅಲೆಟ್ಟಿ ಗ್ರಾಮದ ಕುಂಭಕ್ಕೋಡು ಎಂಬಲ್ಲಿ ಬೃಹತ್ ಮರವು ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಳ್ಯ ಗೃಹ ರಕ್ಷಕ ದಳದ ಸಿಬ್ಬಂದಿ ಮರವನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ದುಗಲಡ್ಕ ಕೊಕುಳಿ ನಿವಾಸಿ ಜನಾರ್ದನ ಗೌಡ ಎಂಬುವರ ಕೊಟ್ಟಿಗೆಗೆ ಮರದ ಕೊಂಬೆ ಮುರಿದು ಬಿದ್ದು ಹಾನಿಯಾಗಿದೆ.

ಬಂಟ್ವಾಳ: ನದಿ ನೀರು 4 ಅಡಿ ಏರಿಕೆ

ಬಂಟ್ವಾಳ: ತಾಲ್ಲೂಕಿನಾದ್ಯಂತ ಶನಿವಾರ 74.9ಮಿ.ಮೀ.ಮಳೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟದ 3.8 ಅಡಿ ಏರಿಕೆ ಕಂಡಿದೆ. ತಾಲ್ಲೂಕಿನ ಕಡೇಶ್ವಾಲ್ಯ ನಿವಾಸಿ ಪೂವಪ್ಪ ಪೂಜಾರಿ ಎಂಬವರ ಮನೆ ಮಾಡು ಹಾನಿಗೀಡಾಗಿದ್ದು, ₹15ಸಾವಿರ ನಷ್ಟ ಸಂಭವಿಸಿದೆ. ಉಳಿದಂತೆ ಬಡಗಕಜೆಕಾರು ನಿವಾಸಿ ಜಯಪೂಜಾರಿ ಮನೆಗೆ ₹20ಸಾವಿರ, ವಿಮಲ ಎಂಬವರ ಮನೆಗೆ ₹45ಸಾವಿರ, ಬೀಫಾತುಮ್ಮ ಮನೆಗೆ ₹60ಸಾವಿರ ಮೊತ್ತದ ಹಾನಿ ಸಂಭವಿಸಿದೆ.

ಇಲ್ಲಿನ ವೀರಕಂಭ ನಿವಾಸಿ ಕಮಲ ನಾರಾಯಣ ಶೆಟ್ಟಿ ಎಂಬವರ ಮನೆಗೆ ₹15ಸಾವಿರ, ಬೋಳಂತೂರು ಗ್ರಾಮದ ಸುರಿಬೈಲು ಅಂಗಡಿಮಾರು ನಿವಾಸಿ ಇಸ್ಮಾಯಿಲ್ ಎಂಬವರ ಮನೆ ಕುಸಿದು ಬಿದ್ದು ₹3ಲಕ್ಷ ಹಾನಿ ಸಂಭವಿಸಿದೆ. ಕೊಳ್ನಾಡು ಗ್ರಾಮ ನಿವಾಸಿ ಮಹಮ್ಮದ್ ಎಂಬವರ ಮನೆಗೆ ₹20ಸಾವಿರ, ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಮನೆಯೊಂದಕ್ಕೆ ₹2ಸಾವಿರ ಮತ್ತು ತುಂಬೆ ಕೋರ್ದಬ್ಬು ದೈವಸ್ಥಾನ ಆವರಣ ಗೋಡೆ ಕುಸಿದು ಬಿದ್ದು ಹಾನಿಗೀಡಾಗಿದೆ.

ವಿಟ್ಲ ಕಸ್ಬಾ ಗ್ರಾಮದ ಪಾರ್ವತಿ ಮಲೆಯಪ್ಪ ಎಂಬವರ ಮನೆಗೆ ₹10ಸಾವಿರ, ಜಯಂತಿ ಗಣೇಶ ಎಂಬವರ ಮನೆಗೆ ₹15ಸಾವಿರ, ಬಾಲಕೃಷ್ಣ ಪೂಜಾರಿ ಎಂಬವರ ಮನೆ ಸಮೀಪದ ತಡೆಗೋಡೆ ಕುಸಿದು ಬಿದ್ದು ₹25ಸಾವಿರ ನಷ್ಟ ಸಂಭವಿಸಿದೆ. ಬಂಟ್ವಾಳ ಕಸ್ಬಾ ಗ್ರಾಮದ ಕೃಷ್ಣ ಕಾಮತ್ ಎಂಬವರ ಮನೆಗೆ ₹1ಲಕ್ಷ, ದಾಮೋದರ ಕಾಮತ್ ಎಂಬವರ ಮನೆಗೆ ₹1ಲಕ್ಷ, ಜಯಪ್ರಕಾಶ ಕಾಮತ್ ಎಂಬವರ ಮನೆಗೆ ₹ 1ಲಕ್ಷ, ವೀರಭಾಯಿ ಎಂಬವರ ಮನೆಗೆ ₹1.50ಲಕ್ಷ ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ  ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT