ನೆಲಕ್ಕೆ ಉರುಳಿದ ಮರ: ಕಡಲಿನ ಅಬ್ಬರ

7
ನಗರದಲ್ಲಿ ಮುಂದುವರಿದ ಮುಂಗಾರು ಮಳೆ: ಬಿಟ್ಟು ಬಿಟ್ಟು ಸುರಿದ ಕಾರಣ ಭಾರೀ ಸಂಕಷ್ಟ ಇಲ್ಲ

ನೆಲಕ್ಕೆ ಉರುಳಿದ ಮರ: ಕಡಲಿನ ಅಬ್ಬರ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರವೂ ಮಳೆ ಮುಂದುವರಿದಿದ್ದು, ಹಲವೆಡೆ ಮರಗಳು ನೆಲಕ್ಕೆ ಉರುಳಿವೆ. ಬುಧವಾರ ರಾತ್ರಿಯಿಂದಲೇ ಆರಂಭವಾಗಿರುವ ಮಳೆ ಸತತ ನಾಲ್ಕನೇ ದಿನವೂ ನಿರಂತರವಾಗಿ ಸುರಿಯಿತು. ನಗರದ ಹಲವೆಡೆ ಮರಗಳು ನೆಲಕ್ಕೆ ಉರುಳಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಗರದ ಆರ್‌ಟಿಒ ಕಚೇರಿ ಬಳಿ ಬೃಹತ್‌ ಮರಗಳು ಉರುಳಿ ಬಿದ್ದಿದ್ದು, ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಮಂಗಳೂರು ರೈಲು ನಿಲ್ದಾಣದ ಬಳಿಯೂ ಮರ ಉರುಳಿ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ನಗರದ ಜೈಲ್‌ ರಸ್ತೆಯಲ್ಲಿಯೂ ಬೃಹತ್‌ ಮರವೊಂದು ನೆಲಕ್ಕೆ ಉರುಳಿದೆ. ಪಚ್ಚನಾಡಿಯಲ್ಲಿ ಮರ ಬುಡಸಮೇತ ವಿದ್ಯುತ್‌ ಪರಿವರ್ತಕದ ಮೇಲೆ ಬಿದ್ದಿದ್ದು, ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು.

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ರಾಮಕಾಂತಿ ಥಿಯೇಟರ್ ಸಮೀಪ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದೆ. ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ಕಟ್ಟಡ ಕುಸಿದು ಬಿದ್ದಿದ್ದು, 2 ಬೈಕ್‌ಗಳು ಜಖಂಗೊಂಡಿವೆ.

ನಗರದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಎರಡನೇ ಶನಿವಾರವಾಗಿದ್ದರಿಂದ ಹಾಗೂ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಜನ ಸಂಚಾರ ವಿರಳವಾಗಿತ್ತು.

ಕೊಟ್ಟಾರ ಚೌಕಿಯಲ್ಲಿ ಮತ್ತೆ ಕೃತಕ ನೆರೆ: ವಾರದ ಹಿಂದಷ್ಟೇ ಭಾರಿ ಮಳೆಯಿಂದ ತತ್ತರಿಸಿದ್ದ ಕೊಟ್ಟಾರ ಚೌಕಿಯಲ್ಲಿ ಶನಿವಾರ ಮತ್ತೆ ಕೃತಕ ನೆರೆ ಸೃಷ್ಟಿಯಾಗಿತ್ತು. ರಸ್ತೆ ಪಕ್ಕದ ಚರಂಡಿಗಳು ತುಂಬಿ ಹರಿದಿದ್ದು, ಅಂಗಡಿಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಕೆಲವು ಗೂಡಂಗಡಿಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.

ಇನ್ನೆರಡು ದಿನ ಮಳೆ: ಕರಾವಳಿಯಲ್ಲಿ ಈಗಾಗಲೇ ಮಳೆಯ ಆರ್ಭಟ ಮುಂದುವರಿದಿದ್ದು, ಇನ್ನೂ 2–3 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರು ಬಾವಿಯಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಹೀಗಾಗಿ ಪ್ರವಾಸಿಗರು ಸಮುದ್ರ ತೀರಕ್ಕೆ ಹಾಗೂ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಕಡಲ ತೀರದಲ್ಲಿ ಗೃಹರಕ್ಷಕರ ಪಹರೆಯನ್ನು ಹಾಕಿದೆ.

ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ತಣ್ಣೀರು ಬಾವಿ, ಪಣಂಬೂರು, ಸಸಿಹಿತ್ಲು, ಮೂಲ್ಕಿ ಬೀಚ್‌ಗಳಲ್ಲಿ ತಲಾ ಮೂವರು 3 ಗೃಹ ರಕ್ಷಕರನ್ನು ನಿಯೋಜಿಸಲಾಗಿದ್ದು, ಅವರಿಗೆ ಅಗತ್ಯ ಸೂಚನಾ ಫಲಕಗಳು, ಹಗ್ಗ, ಜಾಕೆಟ್‌ಗಳನ್ನು ಒದಗಿಸಲಾಗಿದೆ. ಈ ಗೃಹರಕ್ಷಕರು 24 ಗಂಟೆ ಬೀಚ್‌ನಲ್ಲಿ ಕಾವಲು ಇರಲಿದ್ದಾರೆ.

ಈ ಗೃಹರಕ್ಷಕರಿಗೆ ಈಗಾಗಲೇ ವಿಪತ್ತು ನಿರ್ವಹಣೆ ಕುರಿತಂತೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ. ಗೃಹರಕ್ಷಕರಿಗೆ ವಿಶ್ರಾಂತಿ ಪಡೆಯುವುದಕ್ಕೆ ತಾತ್ಕಾಲಿಕ ಟೆಂಟ್‌ಗಳ ನಿರ್ಮಾಣ ಮಾಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. 8 ಕಡೆಗಳಲ್ಲಿ ಟೆಂಟ್‌ ನಿರ್ಮಾಣ ಮಾಡಲಾಗುತ್ತಿದೆ.

ಸಮುದ್ರದಲ್ಲಿ ಯಾವುದೇ ಪ್ರಾಣಹಾನಿ ಆಗದಂತೆ ನೋಡಿಕೊಳ್ಳುವುದೇ ಪ್ರಮುಖ ಉದ್ದೇಶವಾಗಿದ್ದು, ಅದಕ್ಕಾಗಿ ಗೃಹರಕ್ಷಕರ ಪಹರೆ ಹಾಕಲಾಗಿದೆ ‌

ಡಾ. ಮುರಲೀ ಮೋಹನ್ ಚೂಂತಾರು,  ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry