ಪರೋಪಕಾರವೇ ದೇವರಿಗೆ ಸಲ್ಲಿಸುವ ತೆರಿಗೆ

7
ಜಿಲ್ಲಾ ಮಾಧ್ವ ಬ್ರಾಹ್ಮಣರ ಸಮ್ಮೇಳನದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನುಡಿ

ಪರೋಪಕಾರವೇ ದೇವರಿಗೆ ಸಲ್ಲಿಸುವ ತೆರಿಗೆ

Published:
Updated:

ತುಮಕೂರು: ‘ನಾವು ಪರೋಪಕಾರ ಮಾಡುವುದೇ ಪರಮಾತ್ಮ ಎಂಬ ಸರ್ಕಾರಕ್ಕೆ ನೀಡುವ ತೆರಿಗೆಯಾಗಿದೆ. ತೆರಿಗೆ ವಂಚಿಸಿದರೆ ಸಂಕಷ್ಟಗಳು ಎದುರಾಗುತ್ತವೆ. ಪರೋಪಕಾರದ ಮೇಲೆಯೇ ವಿಶ್ವವು ನಿಂತಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖಿಲ ಭಾರತ ಮಾಧ್ವ ಮಹಾ ಮಂಡಲ ತುಮಕೂರು ಶಾಖೆ, ಜಿಲ್ಲೆಯ ಮಾಧ್ವ ಮಠ ಮಂದಿರ ಹಾಗೂ ಮಾಧ್ವ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ಧ ಜಿಲ್ಲಾ ಮಾಧ್ವ ಬ್ರಾಹ್ಮಣರ ಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ಸಮಾಜ ಕಾರ್ಯದಲ್ಲಿ ತೊಡಗಿಕೊಂಡು ದೇವರನ್ನು ಮರೆಯಬಾರದು. ಹಾಗೆಯೇ ಅಧ್ಯಾತ್ಮದಲ್ಲಿ ತೊಡಗಿಕೊಂಡು ಸಮಾಜವನ್ನು ಕಡೆಗಣಿಸಬಾರದು. ಜಗತ್ತು ಮಾತ್ರ ಸತ್ಯ ಎಂದುಕೊಂಡು ದೇವರನ್ನು ಮರೆತರೆ ಅದು ಸ್ವಚ್ಛಂದ ಪ್ರವೃತ್ತಿ, ಅಹಂಕಾರ ಆಗುತ್ತದೆ’ ಎಂದು ನುಡಿದರು.

‘ಮಧ್ವಾಚಾರ್ಯರು ದೇವರೂ ಸತ್ಯ, ಜಗತ್ತು ಸತ್ಯ ಎಂದು ಸಂದೇಶ ನೀಡಿದ್ದಾರೆ. ದೇವರಲ್ಲಿ ಭಕ್ತಿ ಇಡು. ಜಗತ್ತಿನಲ್ಲಿ ನಿನ್ನ ಕರ್ತವ್ಯ ನೀನು ಮಾಡು ಎಂದಿದ್ದಾರೆ. ಅವರ ಈ ಸಿದ್ಧಾಂತ ವಿಶ್ವಧರ್ಮದ ಸಿದ್ಧಾಂತವಾಗಿದೆ. ಜಗತ್ತಿನ ಒಳಿತನ್ನೇ ಅವರ ಸಿದ್ಧಾಂತ ಒಳಗೊಂಡಿದೆ’ ಎಂದು ವಿವರಿಸಿದರು.

‘ಪ್ರಾಣಿ, ಪಕ್ಷಿ, ಮನುಷ್ಯ, ಗೋವು ಹೀಗೆ ಎಲ್ಲರಿಗೂ ಮನುಷ್ಯ ಸೇವೆ ಮಾಡಬೇಕು. ಭಕ್ತನಿಗೆ ಜಾತಿ ಮತವಿಲ್ಲ. ಭಕ್ತಿಯುಳ್ಳವನೇ ಭಗವಂತನಿಗೆ ಶ್ರೇಷ್ಠ. ‘ಮಾಧ್ವರು ಮಾಧ್ವ ಸಂಘಟನೆಗೆ ಸೀಮಿತರಾಗಬಾರದು. ಮಾಧ್ವರಾಗಿ, ಬ್ರಾಹ್ಮಣರಾಗಿ, ಹಿಂದೂಗಳಾಗಿ ಜವಾಬ್ದಾರಿ ನಿಭಾಯಿಸಬೇಕು’ ಎಂದು ಸೂಚಿಸಿದರು.

ಮುಖ್ಯ ಅತಿಥಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್ ಮಾತನಾಡಿ, ‘ಜಿಲ್ಲೆಯಲ್ಲಿ ಬ್ರಾಹ್ಮಣರ 18 ಸಂಘ ಸಂಸ್ಥೆಗಳಿವೆ. ಮಾಧ್ವರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾಕ್ಕೆ ಸದಸ್ಯರಾಗಬೇಕು’ ಎಂದು ಮನವಿ ಮಾಡಿದರು.

ಮಧ್ವ ಮತ ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಮತ್ತು ಯುವಕರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಬೆಂಗಳೂರು ಪಿ.ಇ.ಎಸ್.ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಕೃಷ್ಣರಾಜ ಕುತ್ಪಾಡಿ ಮಾತನಾಡಿ,‘ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ತಿಳಿಸಿಕೊಡಬೇಕು’ ಎಂದು ಹೇಳಿದರು.

‘ತಂತ್ರಜ್ಞಾನ ಬದುಕಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ತಾಯಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಮೊಬೈಲ್ ಕೊಡಬಾರದು. ಬದಲಾಗಿ ಉತ್ತಮ ಕಥೆಗಳನ್ನು ಹೇಳಬೇಕು. ಇದರಿಂದ ಏಕಾಗ್ರತೆ, ಜ್ಞಾನ ಹೆಚ್ಚುತ್ತದೆ’ ಎಂದು ತಿಳಿಸಿದರು.

ಸಾನ್ನಿಧ್ಯವಹಿಸಿದ್ದ ಸೋಸಲೆ ವ್ಯಾಸರಾಜ ಮಠಾಧೀಶ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ‘ಸಮಾಜವು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಂಘಟಿತರಾಗಬೇಕು. ಇನ್ನೂ ಏಳಿಗೆ ಸಾಧಿಸಬೇಕು’ ಎಂದು ನುಡಿದರು.

ಅಖಿಲ ಭಾರತ ಮಾಧ್ವ ಮಹಾ ಮಂಡಲ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಅಧ್ಯಕ್ಷತೆವಹಿಸಿದ್ದರು. ‘ಪೂರ್ಣಪ್ರಮತಿ’ ಸ್ಮರಣ ಸಂಚಿಕೆಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.

ಸಮ್ಮೇಳನಗಳು ಸಂಘಟನೆಗೆ ಪೂರಕ

‘ಪ್ರಕೃತಿ ಎಂಬುದು ಆ ಭಗವಂತನ ಮನೆ ಇದ್ದ ಹಾಗೆ. ಇಲ್ಲಿ ಮನುಷ್ಯ ಅಚ್ಚುಕಟ್ಟಾಗಿ ಬದುಕಿ ಬಾಳಿ ಭಗವಂತನ ಕೃಪೆಗೆ ಪಾತ್ರವಾಗಬೇಕು. ಈಶ–ದಾಸ ಎಂಬ ತತ್ವವನ್ನು ಪಾಲಿಸಬೇಕು’ ಎಂದು ಪ್ರಧಾನ ಭಾಷಣ ಮಾಡಿದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣಾಚಾರ್ಯ ನುಡಿದರು.

'ಈ ರೀತಿ ಸಮ್ಮೇಳನಗಳು ನಡೆದರೆ ಸಮಾಜದ ಸಂಘಟನೆಗೆ ಸಹಾಯವಾಗಲಿದೆ. ಘೋಷಣೆ ಕೂಗಿ, ಧರಣಿ ನಡೆಸಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರೆ ಮಾತ್ರ ಸಂಘಟನೆಯಲ್ಲ. ಈ ರೀತಿ ಸಮ್ಮೇಳನಗಳಲ್ಲಿ ಎಲ್ಲರೂ ಸೇರಿ ಸಮಾಜದ ಒಳಿತಿನ ಬಗ್ಗೆ, ಧಾರ್ಮಿಕ ತತ್ವ ಚಿಂತನೆಗಳ ಬಗ್ಗೆ ತಿಳಿಯುವುದೂ ಸಂಘಟನೆಯೇ ಆಗಿದೆ’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆಯಲಿ

‘ಜಿಲ್ಲಾ ಮಟ್ಟದಲ್ಲಿ ಸಮ್ಮೇಳನಗಳು ನಡೆಯುವುದು ಉತ್ತಮ ಬೆಳವಣಿಗೆ. ಇದು ಸಮಾಜ ಸಂಘಟನೆಗೆ ಬಲ ನೀಡಲಿದೆ’ ಎಂದು ಉಡುಪಿ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

‘ಸಾರ್ವಭೌಮ ದೇವರು ಒಬ್ಬನೇ. ಸಂವಿಧಾನದ ಚೌಕಟ್ಟಿನಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಆಡಳಿತ ವ್ಯವಸ್ಥೆ ಹೇಗೆ ಇರುತ್ತದೆಯೋ ಅದೇ ರೀತಿ ಬೇರೆ ಬೇರೆ ದೇವರು, ಗುರುಗಳು ಇರುತ್ತಾರೆ. ಅವರ ಮೂಲಕವೇ ಸಾರ್ವಭೌಮ ದೇವರು ಎಲ್ಲರಿಗೂ ಒಳಿತು ಮಾಡುತ್ತಾನೆ. ಅಂಜದೇ, ಅಳುಕದೇ ಸಮಾಜದಲ್ಲಿ ಬಾಳಬೇಕು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry