ಆಸ್ಪತ್ರೆಗೆ ಬೀಗ ಹಾಕಿ ರೋಗಿಗಳ ಪ್ರತಿಭಟನೆ

7
ಹೆಚ್ಚಿನ ವೈದ್ಯರು: ಸಿಬ್ಬಂದಿ ನೀಡುವಂತೆ ಆಗ್ರಹ

ಆಸ್ಪತ್ರೆಗೆ ಬೀಗ ಹಾಕಿ ರೋಗಿಗಳ ಪ್ರತಿಭಟನೆ

Published:
Updated:

ಮುದ್ದೇಬಿಹಾಳ: ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೋಗಿಗಳು, ಸ್ಥಳೀಯ ಸಾರ್ವಜನಿಕ ಸಂಘಟನೆಗಳ ಸದಸ್ಯರೊಂದಿಗೆ ಸೇರಿ ಆಸ್ಪತ್ರೆ ಮುಖ್ಯ ಪ್ರವೇಶ ದ್ವಾರವನ್ನು ಶನಿವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪಟ್ಟಣದ ವಿವಿಧ ಬಡಾವಣೆ ಮತ್ತು ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳಿಂದ ನೂರಕ್ಕೂ ಹೆಚ್ಚು ಬಡ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ‘ವೈದ್ಯರಿಲ್ಲ, ನಾವೇನು ಮಾಡೋಣ’ ಎಂದು ಹೇಳಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ರೋಗಿಗಳ ಜೊತೆ ಬಂದಿದ್ದ ಸಂಬಂಧಿಕರು ತಾಲ್ಲೂಕು ವೈದ್ಯಾಧಿಕಾರಿ ಜೊತೆ ಮೊಬೈಲ್‌ ಫೋನ್‌ನಲ್ಲಿ ಮಾತನಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ದಿಢೀರ್ ಹೋರಾಟಕ್ಕಿಳಿಸಿದರು.

ವಿಕಲಚೇತನ ಒಕ್ಕೂಟದ ಪದಾಧಿಕಾರಿ ಮುನ್ನಿ ಮುಲ್ಲಾ ಮಾತನಾಡಿ, ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಚಿಕಿತ್ಸೆ ಕೊಡುವ ತಜ್ಞ ವೈದ್ಯರ ಕೊರತೆ ಇದೆ. ಬಡಜನರು ಚಿಕಿತ್ಸೆಗಾಗಿ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವೂ ಸಿಗುತ್ತಿಲ್ಲ. ಹಣ ಖರ್ಚು ಮಾಡಿಕೊಂಡು ದೂರದ ಊರಿನಿಂದ ಬರುವ ಜನರು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಸೌಲಭ್ಯ ಪಡೆಯಲು ಹಣ ನೀಡಲೇಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಯಮದ ಪ್ರಕಾರ ಇಲ್ಲಿನ ಒಳರೋಗಿಗಳಿಗೆ ಆಸ್ಪತ್ರೆಯಿಂದಲೇ ಉಚಿತ ಊಟದ ವ್ಯವಸ್ಥೆ ಕಲ್ಪಿಸಬೇಕು. ಆದರೆ ಒಳರೋಗಿಗಳಿಗೆ ಇಲ್ಲಿ ಊಟವನ್ನೇ ಕೊಡುವುದಿಲ್ಲ. ರೋಗಿಗಳು ತಾವೇ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕಾದ ದುಸ್ಥಿತಿ ಇಲ್ಲಿದೆ. ಒಳರೋಗಿಗಳ ಊಟಕ್ಕೆಂದು ಬರುವ ಅನುದಾನ ಖರ್ಚಾಗಿದೆ ಎಂದು ತೋರಿಸಿ ತಾವೇ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಆಸ್ಪತ್ರೆ ಸಾರ್ವಜನಿಕರಿಗೆ ನಿಷ್ಪ್ರಯೋಜಕವಾಗಿದೆ ಎಂದು ನೂತನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಈ ಹಿಂದೆ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆಸ್ಪತ್ರೆ ಶುರುವಾದ ದಿನದಿಂದಲೂ ಸಮಸ್ಯೆಗಳು ತಾಂಡವವಾಡುತ್ತಿವೆ. ಇಲ್ಲಿಯ ಕೆಲವು ಸಿಬ್ಬಂದಿಯನ್ನು ಕೂಡಲೇ ಬದಲಾಯಿಸಿ ಸೂಕ್ತ ವೈದ್ಯರನ್ನು, ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ರೋಗಿಗಳ ಬಂಧುಗಳು ಒತ್ತಾಯಿಸಿದರು.

ಪ್ರತಿಭಟನೆಯ ವಿಷಯ ತಿಳಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ರಾತ್ರಿ ಪಾಳಿ ಕೆಲಸ ಮುಗಿಸಿ ವಿಶ್ರಾಂತಿಗೆ ತೆರಳಿದ್ದ ಡಾ.ಸಂಗಮೇಶ ಪಟ್ಟಣದ ಅವರಿಗೇ ಆಸ್ಪತ್ರೆಗೆ ಬಂದು ರೋಗಿಗಳ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಪಟ್ಟಣದ ಅವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪ್ರಾರಂಭಿಸಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry