ಮೂರನೇ ಘಟಕದ ವಾಣಿಜ್ಯಿಕ ಉತ್ಪಾದನೆ ಶೀಘ್ರ

7
ಕೂಡಗಿ ಎನ್‌ಟಿಪಿಸಿಯ ಮೊದಲ ಹಂತದ ಕಾಮಗಾರಿ ಪೂರ್ಣದತ್ತ...

ಮೂರನೇ ಘಟಕದ ವಾಣಿಜ್ಯಿಕ ಉತ್ಪಾದನೆ ಶೀಘ್ರ

Published:
Updated:

ನಿಡಗುಂದಿ: ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮದ (ಎನ್‌ಟಿಪಿಸಿ) ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರದ ಮೊದಲ ಹಂತದ ಕಾಮಗಾರಿ ಬಹುತೇಕ ಅಂತಿಮಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿ ಭರದಿಂದ ಸಾಗಿವೆ.

800 ಮೆಗಾವಾಟ್ ವಿದ್ಯುತ್‌ ಸಾಮರ್ಥ್ಯದ ಮೂರು ಘಟಕಗಳು ಕಾರ್ಯಾರಂಭಗೊಳ್ಳುವ ಮೂಲಕ ಮೊದಲ ಹಂತ ಪೂರ್ಣಗೊಂಡಂತಾಗಿದೆ. ಇನ್ನೂ ಎರಡನೇ ಹಂತದಲ್ಲಿ ತಲಾ 800 ಮೆಗಾವಾಟ್‌ನ ಎರಡು ಘಟಕಗಳ ನಿರ್ಮಾಣಕ್ಕೆ ಕೇಂದ್ರದ ಅನುಮತಿ ದೊರೆತಿಲ್ಲ ಎಂದು ಎನ್‌ಟಿಪಿಸಿ ಮೂಲಗಳು ತಿಳಿಸಿವೆ.

800 ಮೆಗಾವಾಟ್‌ ಸಾಮರ್ಥ್ಯದ ಮೂರನೇ ಘಟಕದ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಪೂರ್ಣಗೊಂಡಿದ್ದು, ಯಾವುದೇ ಕ್ಷಣದಲ್ಲಿಯೂ ವಾಣಿಜ್ಯಿಕ ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿದೆ. ಎನ್‌ಟಿಪಿಸಿ ಆಡಳಿತ ಮಂಡಳಿಯ ಹಸಿರು ನಿಶಾನೆ ದೊರೆತ ತಕ್ಷಣ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಎನ್‌ಟಿಪಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಐದು ರಾಜ್ಯಗಳಿಗೆ ವಿದ್ಯುತ್‌:

ಕೂಡಗಿ ಘಟಕದಿಂದ ರಾಜ್ಯಕ್ಕೆ ಶೇ 54, ಉಳಿದ ವಿದ್ಯುತ್‌ನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ಕೇಂದ್ರದ ಪವರ್‌ ಗ್ರಿಡ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.

ಪ್ರಸ್ತುತ ನಿತ್ಯ ಆರು ರೇಕ್‌ಗಳಲ್ಲಿ (ಆರು ಗೂಡ್ಸ್‌ ರೈಲ್ವೆಗಳಲ್ಲಿ) ಕಲ್ಲಿದ್ದಲು ತೆಲಂಗಾಣದ ಸಿಂಗರೇಣಿ ಗಣಿಗಳಿಂದ, ಝಾರ್ಖಂಡ್‌ನ ಫಕ್ರಿ, ಬರ್ವಾಡಿಯಿಂದ ಬರುತ್ತಿದೆ. ಕಲ್ಲಿದ್ದಲಿನ ಕೊರತೆಯಿಲ್ಲ, ದಾಸ್ತಾನು ಸಾಕಷ್ಟಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರು ಪೂರೈಕೆಯಾಗುತ್ತಿದ್ದು, 15 ದಿನ ನೀರಿನ ಕೊರತೆಯಾಗದಷ್ಟು ನೀರಿನ ಸಂಗ್ರಾಹಕವೂ ಇಲ್ಲಿದೆ ಎಂದವರು ತಿಳಿಸಿದರು.

ಬಳಕೆಯಾದ ನಂತರ ಉಳಿದ ಕಲ್ಲಿದ್ದಲು ಆ್ಯಶ್‌ (ಹಾರುಬೂದಿ) ಸಂಗ್ರಹಕ್ಕಾಗಿ ಎಲ್ಲಾ ಮೂಲ ಸೌಲಭ್ಯ ಇದ್ದರೂ, ಸಿಮೆಂಟ್ ಕಾರ್ಖಾನೆ ಸೇರಿದಂತೆ ನಾನಾ ಕಡೆ ಆ್ಯಶ್‌ಗೆ ಬೇಡಿಕೆ ಹೆಚ್ಚಿದ್ದು, ಹೀಗಾಗಿ ಸದ್ಯ ಕೂಡಗಿ ಘಟಕದಲ್ಲಿ ಕಲ್ಲಿದ್ದಲು ಆ್ಯಶ್‌ ಸಂಗ್ರಹವಿಲ್ಲ. ನಿತ್ಯ ಹಾರು ಬೂದಿಯನ್ನು ಕಾರ್ಖಾನೆಯವರೇ ಬಂದು ಒಯ್ಯುತ್ತಾರೆ ಎಂದು ಎನ್‌ಟಿಪಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಡಿಮೆಯಾದ ಕಾರ್ಮಿಕರು:

ಎನ್‌ಟಿಪಿಸಿಯ ಚಿಮಣಿ, ಬಾಯ್ಲರ್‌ ನಿರ್ಮಾಣ, ಮೂಲ ಸೌಕರ್ಯ ಒದಗಿಸುವ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಹಲ ಕಂಪನಿಗಳು ನಾಲ್ಕು ವರ್ಷಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಕಂಪನಿಗಳ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿಂದ ಹೋಗುತ್ತಿದ್ದಾರೆ. ಬಿಹಾರ, ಝಾರ್ಖಂಡ್‌, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿದಂತೆ ನಾನಾ ಕಡೆಯಿಂದ ಇಲ್ಲಿಗೆ ಬಂದಿದ್ದ 5,000ಕ್ಕೂ ಹೆಚ್ಚು ದಿನಗೂಲಿಗಳ ಸಂಖ್ಯೆಯೂ ದಿನೇದಿನೇ ಕಡಿಮೆಯಾಗುತ್ತಿದೆ.

ವಿದ್ಯುತ್ ಘಟಕದ ಬಳಿಯೇ ಟೌನ್‌ಶಿಪ್ ತಲೆ ಎತ್ತುತ್ತಿದ್ದು, ಎನ್‌ಟಿಪಿಸಿ ನೌಕರರ ಮಕ್ಕಳ ಅನುಕೂಲಕ್ಕಾಗಿಯೇ ಇದೇ ವರ್ಷದಿಂದ ಸಿಬಿಎಸ್ಇ ಶಾಲೆ ಆರಂಭಿಸಲಾಗಿದೆ. ಈ ಶಾಲೆಯಲ್ಲಿ ಕೂಡಗಿ ಸುತ್ತಲಿನ ವಿದ್ಯಾರ್ಥಿಗಳು ಕಲಿಯಬಹುದು ಎಂದು ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ವಿ.ಜಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಜೂನ್‌ 18ರಿಂದ ಸಿಬಿಎಸ್‌ಇ ಶಾಲೆ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ ಎಲ್‌ಕೆಜಿಯಿಂದ 8ನೇ ವರ್ಗದವರೆಗೆ ತರಗತಿಗಳಿವೆ

- ವಿ.ಜಯನಾರಾಯಣ, ಎಚ್‌ಆರ್‌ ವ್ಯವಸ್ಥಾಪಕ

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry