ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿ

7

ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿ

Published:
Updated:

ವಿಜಯಪುರ: ಮುಂಗಾರಿನ ಆರಂಭದ ಬೆನ್ನಿಗೆ ನಗರವೂ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಚಿಕೂನ್‌ ಗುನ್ಯಾ, ಡೆಂಗ್ಯು, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.

ಕಳೆದ ನಾಲ್ಕು ವರ್ಷದಿಂದ ಸ್ವಚ್ಛತಾ ಅಭಿಯಾನದ ಹೆಸರಲ್ಲಿ ಆಂದೋಲನ ನಡೆದರೂ ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಪ್ರತಿ ವರ್ಷ ಜನರನ್ನು ಬಾಧಿಸುತ್ತಿವೆ. ಜನೇವರಿಯಿಂದ ಮೇ. ಅಂತ್ಯದವರೆಗೆ ಜಿಲ್ಲೆಯಲ್ಲಿ ಚಿಕೂನ್‌ ಗುನ್ಯಾ 38, ಡೆಂಗ್ಯು 22, ಮಲೇರಿಯಾ 12 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಯಾವುದೇ ಸಾವು ಸಂಭವಿಸಿರುವ ವರದಿಯಾಗಿಲ್ಲ.

ನಗರದ ಬಹುತೇಕ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಚರಂಡಿ ನೀರು ಮತ್ತು ಮಳೆ ನೀರು ನಿಂತು ಸೊಳ್ಳೆಗಳು ಹುಟ್ಟಲು ಕಾರಣವಾಗಿದೆ. ಇದರಿಂದ ರಾತ್ರಿ ಆಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳ ಕಾಟ ತಡೆಯಕ್ಕಾಗುತ್ತಿಲ್ಲ. ಸಾಂಕ್ರಾಮಿಕ ರೋಗಗಳು ತಗಲುವ ಭೀತಿ ಹೆಚ್ಚಿದೆ. ಪಾಲಿಕೆಯವರು ಎಚ್ಚೆತ್ತುಕೊಂಡು ಎಲ್ಲಿಯೂ ನೀರು ನಿಲ್ಲದಂತೆ ರಸ್ತೆಗಳನ್ನು ಸುಧಾರಿಸಬೇಕು. ಚರಂಡಿ ಸ್ವಚ್ಛಗೊಳಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಗಿಂಗ್ ಮಾಡಿಸಬೇಕು. ಆರೋಗ್ಯ ಇಲಾಖೆ ರೋಗಗಳಿಂದ ರಕ್ಷಿಸಿಕೊಳ್ಳಲು ತಿಳಿವಳಿಕೆ ನೀಡಬೇಕು ಎನ್ನುತ್ತಾರೆ ನಗರ ನಿವಾಸಿ ಅನೀಲ ಬಿರಾದಾರ.

ಮಳೆಗಾಲ ಸಂದರ್ಭ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಒಂದು ಬಾರಿಗೆ ಸೊಳ್ಳೆಗಳು 100ಕ್ಕೂ ಅಧಿಕ ಉತ್ಪತ್ತಿ ಮಾಡುತ್ತದೆ. ಸಂಬಂಧಿಸಿದ ಇಲಾಖೆ ಜವಾಬ್ದಾರಿಯಿಂದ ತೆಂಗಿನ ಚಿಪ್ಪು, ಟೈರ್‌, ಪ್ಲಾಸ್ಟಿಕ್‌ ಮತ್ತಿತ್ತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಜವಾಬ್ದಾರಿ ವಹಿಸಿದರೆ, ಸಾರ್ವಜನಿಕರು ಮನೆಯಲ್ಲಿ ಪ್ರೀಡ್ಜ್, ಏರ್‌ ಕೂಲರ್‌ಗಳಲ್ಲಿನ ನೀರನ್ನು ಆಗಾಗ ಬದಲಿಸಿ ಶುಚಿಯಾಗಿ ಇಡುವುದು ಮತ್ತು ಏಳು ದಿನಕ್ಕಿಂತ ಹೆಚ್ಚಿನ ಅವಧಿಗೆ ನೀರು ಸಂಗ್ರಹಿಸುವದು ನಿಲ್ಲಿಸಿದರೆ ಸೊಳ್ಳೆಗಳ ಉತ್ಪತ್ತಿ ನಿಂತು ರೋಗಗಳಿಗೆ ಕಡಿವಾಣ ಬೀಳಲಿದೆ ಎಂದು ಮಲೇರಿಯಾ ಜಿಲ್ಲಾಧಿಕಾರಿ ಡಾ. ಸಂಪತ್ತ ಗುಣಾರಿ ಹೇಳಿದರು.

ಚಿಕೂನ್‌ ಗುನ್ಯಾ, ಡೆಂಗ್ಯು, ಮಲೇರಿಯಾ ಹರಡದಂತೆ ಜಾಗೃತಿ ಮೂಡಿಸಲು ತಲಾ ಒಬ್ಬರು ಆಶಾ ಕಾರ್ಯಕರ್ತೆಯರ ಮತ್ತು ಕಿರಿಯ ಆರೋಗ್ಯ ಸಹಾಯಕಿಯರ 112 ತಂಡಗಳನ್ನು ರಚಿಸಿ ಜಿಲ್ಲೆಯಾದ್ಯಂತ ಪ್ರತಿ ಶುಕ್ರವಾರ ಮತ್ತು ಶನಿವಾರ ಮನೆ ಮನೆಗೆ ತೆರಳಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಜನೇವರಿಯಿಂದ ಮೇ ಅಂತ್ಯದವರೆಗೆ ಮೂರು ಲಕ್ಷ ಮನೆಗಳನ್ನು ತಲುಪಿದ್ದೇವೆ. ಸಂಧಿ ನೋವು, ತಲೆ ನೋವು, ಸುಸ್ತು, ತೀವ್ರವಾದ ಜ್ವರ, ಮೇಲೆ ಏಲೆದಷ್ಟು ಕಾಲು ನೋವು ಹೀಗೆ ಚಿಕೂನ್‌ ಗುನ್ಯಾ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಡಾ.ಗುಣಾರಿ ತಿಳಿಸಿದರು.

112 ತಂಡ ರಚನೆ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು 112 ತಂಡ ರಚಿಸಿ ಜಿಲ್ಲೆಯಾದ್ಯಂತ ಮನೆ ಮನೆಗೆ ಭೇಟಿ ಕೊಟ್ಟು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ನಗರದಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದರೆ ಒಳ್ಳೆಯದು

- ಡಾ.ಸಂಪತ್‌ ಗುಣಾರಿ, ಮಲೇರಿಯಾ ಜಿಲ್ಲಾಧಿಕಾರಿ

-ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry