ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ’

ಎರಡನೇ ಹಂತದ ಪ್ರವಾಸದಲ್ಲಿ ಅಧಿಕಾರಿಗಳೊಂದಿಗೆ ಬರುವೆ: ಶಾಸಕ ಸಿದ್ದರಾಮಯ್ಯ
Last Updated 10 ಜೂನ್ 2018, 11:48 IST
ಅಕ್ಷರ ಗಾತ್ರ

ಬೇಲೂರ (ಬಾದಾಮಿ) : ‘ನಾನು ಚುನಾವಣೆ ಸಮಯದಲ್ಲಿ ಈ ಕ್ಷೇತ್ರದಲ್ಲಿ ಒಂದು ದಿನ ಮಾತ್ರ ಮತಯಾಚಿಸಿದ್ದೆ. ಮನೆ ಮನೆಗೆ ಬರದಿದ್ದರೂ ನನ್ನ ಮತ್ತು ಪಕ್ಷದ ಮೇಲಿನ ಅಭಿಮಾನದಿಂದ ನೀವು ಆಯ್ಕೆಮಾಡಿ ಕಳಿಸಿದ್ದೀರಿ. ಆ ಋಣ ತೀರಿಸುವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವೆ’ ಎಂದು ಶಾಸಕ ಸಿದ್ದರಾಮಯ್ಯ ಹೇಳಿದರು.

ಬೇಲೂರಿನ ಅನ್ನದಾನೇಶ್ವರ ಮಂಟಪದಲ್ಲಿ ಶನಿವಾರ ಮತದಾರರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ‘ಈಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎರಡನೇ ಹಂತದ ಪ್ರವಾಸದಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತುಕೊಂಡು ಅಭಿವೃದ್ಧಿ ಮಾಡುವೆ’ ಎಂದು ಭರವಸೆ ನೀಡಿದರು.

‘ನಾನು ದೂರದ ಊರಿನವನು ಎಂದು ಭಾವಿಸಿ ಸಂಕೋಚ ಪಡಬೇಡಿ. ರಾಜಕೀಯ ಚುನಾವಣೆಯಲ್ಲಿ ಮಾತ್ರ. ಅಭಿವೃದ್ಧಿಯಲ್ಲಿ
ರಾಜಕೀಯ ಬೇಡ. ಈ ಕ್ಷೇತ್ರದಲ್ಲಿ ನನಗೆ ಮತಕೊಟ್ಟವರ ಮತ್ತು ಕೊಡದಿದ್ದವರ ಇಬ್ಬರ ಪ್ರತಿನಿಧಿಯೂ ನಾನು. ಗ್ರಾಮದಲ್ಲಿ ಏನೇ ಸಮಸ್ಯೆ ಇದ್ದರೂ ಬಂದು ಭೇಟಿ ಮಾಡಬಹುದು ಎಂದು ಅವರು ತಿಳಿಸಿದರು.

ಬೇಲೂರಿಗೆ ಕುಡಿಯುವ ನೀರು ಕಲ್ಪಿಸಲು ಹಾಗೂ ಸಮುದಾಯ ಭವನ ನಿರ್ಮಿಸಿ ಕೊಡಲು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮಂಗಳೂರ ಗ್ರಾಮ ದಲ್ಲಿ ಬ್ರಿಟಿಷರ ಕಾಲದಲ್ಲಿ ಮತ್ತು ಹೊಸದಾಗಿ ನಿರ್ಮಿಸಿದ ಏತನೀರಾವರಿ ಯೋಜನೆ ಮತ್ತು ಸ್ಥಗಿತಗೊಂಡ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲು ಗ್ರಾಮಸ್ಥರು ಮನವಿ ಮಾಡಿದರು.

ಜಾಲಿಹಾಳ, ಚೊಳಚಗುಡ್ಡ,ಕಾತರಕಿ ಮತ್ತು ಹೆಬ್ಬಳ್ಳಿಯಲ್ಲೂ ಕೃತಜ್ಞತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ, ಪಕ್ಷದ ವೀಕ್ಷಕ ಪಾರಸ್ಮಲ್‌ ಜೈನ್‌, ವಿಧಾನಪರಿಷತ್ ಸದಸ್ಯರಾದ ಎಸ್‌.ಆರ್‌. ಪಾಟೀಲ, ಆರ್‌.ಬಿ. ತಿಮ್ಮಾಪುರ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಎಸ್‌.ಜಿ. ನಂಜಯ್ಯನಮಠ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕಮಲಾ ಮರಿಸ್ವಾಮಿ,ಡಾ. ದೇವರಾಜ ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ. ಯಲಿಗಾರ. ಡಾ. ಎಂ.ಎಚ್‌. ಚಲವಾದಿ, ಮಾಧ್ಯಮ ವಕ್ತಾರ ಅನಿಲ್ ದಡ್ಡಿ, ಎಸ್‌.ಡಿ. ಜೋಗಿನ, ಐ.ಎಚ್‌. ಹುನಗುಂಡಿ, ಮಹಾಂತೇಶ ಹಟ್ಟಿ ಕಾರ್ಯಕ್ರಮದಲ್ಲಿ ಇದ್ದರು.

‘ನಾನು ಜಾತಿವಾದಿ ಅಲ್ಲ’

ಹೆಬ್ಬಳ್ಳಿ (ಬಾಗಲಕೋಟೆ): ‘ನಾನು ಜಾತಿವಾದಿ ಅಲ್ಲ. ಮೊದಲು ನಾವೆಲ್ಲಾ ಮನುಷ್ಯರು. ಬಸವಣ್ಣ, ಕನಕದಾಸ, ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟು ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದೇನೆ’ ಎಂದು ಶಾಸಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ ಶನಿವಾರ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ‘ರಾಜಕಾರಣದಲ್ಲಿ ನಾನೆಂದೂ ಜಾತಿ ನೋಡಿದವನು ಅಲ್ಲ. ಹಾಗಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಕಾರ್ಯಕ್ರಮ ರೂಪಿಸಿರಲಿಲ್ಲ. ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿದ್ದೇನೆ’ ಎಂದರು.

‘ರಾಜಕಾರಣದಲ್ಲಿ ನಾನು ಆ ಜಾತಿ, ಈ ಜಾತಿ ಎಂದು ನೋಡಿದವನಲ್ಲ. ನನ್ನ ಅಧಿಕಾರದ ಅವಧಿಯ ಕಾರ್ಯಕ್ರಮ ತೆಗೆದು ನೋಡಿದರೆ ಇದು ಸ್ಪಷ್ಟಗೊಳ್ಳುತ್ತದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಭಾಗ್ಯ ಎಲ್ಲ ಜಾತಿ–ವರ್ಗದವರಿಗೂ ಕೊಟ್ಟಿದ್ದೇನೆ. ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವನಮ್ಮವ, ಇವನಮ್ಮವ ಎಂದು ಬಸವಣ್ಣನವರು ಹೇಳಿದ್ದಾರೆ. ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಕನಕದಾಸರು ಹೇಳಿದ್ದಾರೆ. ಹಾಗಾಗಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೊ ಅವರನ್ನು ಜಾತಿ ನೋಡದೇ ಬೆಂಬಲಿಸುತ್ತಾ ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT