ಮೋದಿಯಿಂದ ಪ್ರಜಾಪ್ರಭುತ್ವ ನಾಶ

7
ಪ್ರೊ.ಶೇಷಾದ್ರಿ ಅಭಿವಂದನೆ ಕಾರ್ಯಕ್ರಮ; ಪ್ರೊ.ಶರ್ಮ ಟೀಕೆ

ಮೋದಿಯಿಂದ ಪ್ರಜಾಪ್ರಭುತ್ವ ನಾಶ

Published:
Updated:

ಬಳ್ಳಾರಿ: ‘ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಚುನಾವಣೆಯ ಮೂಲಕವೇ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ನಂತರ ಅದರ ಸಂಸ್ಥೆಗಳಾದ ಸಂಸತ್ತು. ನ್ಯಾಯಾಂಗ ಮತ್ತು ಕಾರ್ಯಾಂಗಗಳನ್ನು ನಾಶಪಡಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು ಚಿಂತಕ ಪ್ರೊ.ಕೆ.ಎಸ್‌.ಶರ್ಮ ಆರೋಪಿಸಿದರು.

ನಗರದ ಐಸಿಎಐ ಭವನದಲ್ಲಿ ಶುಕ್ರವಾರ ಸಂಜೆ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಶೇಷಾದ್ರಿ ಅಭಿವಂದನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಅಧಿಕಾರಕ್ಕೆ ಬಂದ ನಂತರದ ನಾಲ್ಕು ವರ್ಷಗಳಲ್ಲಿ ಮೋದಿ ಪ್ರಜಾಪ್ರಭುತ್ವವನ್ನು ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಲೇ ವಿನಾಶದ ಪ್ರಯತ್ನ ನಡೆಸಿದ್ದಾರೆ. ಇದು ಮೂಲಭೂತವಾದಕ್ಕಿಂತ ಅಪಾಯಕಾರಿಯಾದ ನಡೆ’ ಎಂದು ಪ್ರತಿಪಾದಿಸಿದರು.

‘ಅಮೆರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರದ ಹಲವು ಘಟನಾವಳಿಗಳಲ್ಲಿ ಸಾಮ್ಯತೆ ಇದೆ. ಜನಪರವಾದ ಆರ್ಥಿಕ ಮತ್ತು ಸಾಮಾಜಿಕ ಸಂರಚನೆಗಳೆಲ್ಲವೂ ನಾಶವಾಗಿವೆ. ಈ ಅಂಶಗಳತ್ತ ಅಭಿವಂದನಾ ಕಾರ್ಯಕ್ರಮ ಗಮನ ಸೆಳೆಯುತ್ತಿರುವುದು ವಿಶೇಷ’ ಎಂದರು.

ಕೃತಿಗಳ ಬಿಡುಗಡೆ: ಇದೇ ಸಂದರ್ಭದಲ್ಲಿ ‘ಜೈವಿಕ ಬುದ್ಧಿಜೀವಿ ಡಾ.ಬಿ.ಶೇಷಾದ್ರಿ’ ಹಾಗೂ ಇಂಗ್ಲಿಷ್‌ನ ಅವತರಣಿಕೆ ‘ಎಸ್ಸೇಸ್‌ ಇನ್‌ ಹಾನರ್‌ ಆಫ್‌ ಬಿ.ಶೇಷಾದ್ರಿ: ಗ್ರೋಥ್‌, ಈಕ್ವಿಟಿ ಅಂಡ್‌ ಜಸ್ಟೀಸ್‌’ ಕೃತಿಯನ್ನು ಅವರು ಬಿಡುಗಡೆ ಮಾಡಿದರು.

ನಂತರ ‘ಮಾನವ ಅಭಿವೃದ್ಧಿ’ ಕುರಿತು ಉಪನ್ಯಾಸ ನೀಡಿದ ಆರ್ಥಿಕ ತಜ್ಞ ಪ್ರೊ.ಟಿ.ಆರ್‌.ಚಂದ್ರಶೇಖರ್‌, ‘ವರಮಾನ ಎಂಬುದು ಅಭಿವೃದ್ಧಿಯ ಸಾಧನವಷ್ಟೇ. ಆದರೆ ಅದನ್ನೇ ಅಭಿವೃದ್ಧಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಭಿವೃದ್ಧಿ ಬದುಕಿನ ಸಮೃದ್ಧತೆಗೆ ಸಂಬಂಧಿಸಿದ್ದೇ ಹೊರತು ಆರ್ಥಿಕ ಸಮೃದ್ಧಿಗೆ ಸಂಬಂಧಿಸಿದ್ದಲ್ಲ’ ಎಂದು ವಿಶ್ಲೇಷಿಸಿದರು.

ಸಮಿತಿಯ ಅಧ್ಯಕ್ಷ, ಶಾಸಕ ಕೆ.ಸಿ.ಕೊಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಟಿ.ಜಿ.ವಿಠಲ್‌, ಕೃತಿಗಳ ಸಂಪಾದಕ ಪ್ರೊ.ಅಬ್ದುಲ್‌ ಅಜೀಜ್‌, ಎಸ್‌.ಪನ್ನರಾಜ್‌ ವೈ.ಜೆ.ರಘುನಾಥರೆಡ್ಡಿ ಮತ್ತು ಪ್ರೊ.ಎಚ್‌.ಡಿ.ಪ್ರಶಾಂತ್‌ ವೇದಿಕೆಯಲ್ಲಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry