ಲಾಠಿ ಹಿಡಿಯುವ ಕೈಯಲ್ಲಿ ತಬಲಾ ನಾದ

7
ಎಎಸ್ಐ ರಾಚಯ್ಯಸ್ವಾಮಿ ಮಠಪತಿ ಕಲೆಗೆ ತಲೆದೂಗದ ಕಲಾಸಕ್ತರಿಲ್ಲ

ಲಾಠಿ ಹಿಡಿಯುವ ಕೈಯಲ್ಲಿ ತಬಲಾ ನಾದ

Published:
Updated:

ಹುಮನಾಬಾದ್: ತಾಲ್ಲೂಕು ಗೋರ್ಟಾ ಗ್ರಾಮದ ಸಂಗೀತ ಪರಂಪರೆಯ ಮನೆತನದಲ್ಲಿ ಜನಿಸಿದ ರಾಚಯ್ಯಸ್ವಾಮಿ ಮಠಪತಿ ಅವರು ಪೊಲೀಸ್‌ ಇಲಾಖೆಯಲ್ಲಿದ್ದರೂ ತಮ್ಮ ಪ್ರವೃತ್ತಿಯಾಗಿರುವ ತಬಲಾ ಕಲೆಯನ್ನು ಮರೆತಿಲ್ಲ.

ರಾಚಯ್ಯಸ್ವಾಮಿ ಅವರು ಧಾರವಾಡದ ಸಂಗೀತ ಕಲಾವಿದ ಬಸವರಾಜ ಜಂಡಿಬೇರಿ ಅವರ ಬಳಿ 1986ರಲ್ಲಿ ಸಂಗೀತದಲ್ಲಿ ಡಿಪ್ಲೊಮಾ ಪೂರೈಸಿದ್ದಾರೆ.

1988ರಲ್ಲಿ ಕಾನ್‌ಸ್ಟೆಬಲ್ ಆಗಿ ಇಲಾಖೆಗೆ ಸೇರಿದ ರಾಚಯ್ಯಸ್ವಾಮಿ, ಅವಕಾಶ ಸಿಕ್ಕಾಗ ಮಠ, ಮಂದಿರಗಳಲ್ಲಿ ನಡೆಯುವ ಭಜನೆ, ಕೀರ್ತನೆ, ಪುರಾಣ ಕಾರ್ಯಕ್ರಮಗಳಲ್ಲಿ ತಬಲಾ ಸಾಥ್‌ ನೀಡುತ್ತಿದ್ದರು.

ಜನರನ್ನು ಬೆದರಿಸುವುದು ಮಾತ್ರ ಪೊಲೀಸರಿಗೆ ಗೊತ್ತು ಎಂಬ ಅಭಿಪ್ರಾಯಕ್ಕೆ ಅವರು ಸಂಪೂರ್ಣ ತದ್ವಿರುದ್ಧ. ಪೊಲೀಸ್ ಇಲಾಖೆಯಲ್ಲಿಯೂ ಕವಿಗಳು, ಸಾಹಿತಿಗಳು, ಕಲಾವಿದರು ಇದ್ದಾರೆ. ಅವರ ಸಾಲಿನಲ್ಲಿ ನಿಲ್ಲುತ್ತಾರೆ ರಾಚಯ್ಯಸ್ವಾಮಿ.

ತಾಲ್ಲೂಕಿನ ಮೋಳಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಗೋದಾವರಿ ಜೊತೆಯಲ್ಲಿ ಪುತ್ರರಾದ ವಿರೇಶ, ಶರಣೇಶ ಅವರು ತಂದೆಗೆ ಸಾಥ್‌ ನೀಡುತ್ತಾರೆ.

ಮಠಪತಿ ಇಲ್ಲದ ಕಾರ್ಯಕ್ರಮಗಳೇ ಇಲ್ಲ: ಶಾಲಾ, ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಪರಿಷತ್‌, ಬಸವಸೇವಾ ಪ್ರತಿಷ್ಠಾನ ಇತ್ಯಾದಿ ಸಂಘಟನೆಗಳು ಹಮ್ಮಿಕೊಳ್ಳುವ ಸಾಹಿತ್ಯ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳಲ್ಲಿ ಇವರ ಸಂಗೀತ ಸೇವೆ ಇರುತ್ತದೆ.

ಯಾವುದೇ ಕಾರ್ಯಕ್ರಮದಲ್ಲಿ ಹಣ ನೀಡಿದರೂ ಪಡೆಯದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಈ ಎಲ್ಲದರ ಜತೆಗೆ ಕಲಾಸಕ್ತ ಮಕ್ಕಳಿಗೆ ಉಚಿತವಾಗಿ ತಬಲಾ ಹಾಗೂ ಹಾರ್ಮೋನಿಯಂ ಕಲಿಸುತ್ತಾರೆ. ಬೀದರ್‌ ಜಿಲ್ಲೆ ಹಾರಕೂಡ ಶ್ರೀಗಳ ಮಠ ಸೇರಿ ಕಲಬುರ್ಗಿ, ರಾಯಚೂರು, ಧಾರವಾಡ, ಬಾಗಲಕೋಟೆ, ಬೆಟಗೇರಿ ಮೊದಲಾದ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ನಮ್ಮದು ಸಂಗೀತ ಪರಂಪರೆಯ ಮನೆತನ. ಪೊಲೀಸ್ ಇಲಾಖೆಯಲ್ಲಿದ್ದರೂ ವೃತ್ತಿ ಜತೆಗೆ ಪ್ರವೃತ್ತಿಗೂ ಆದ್ಯತೆ ನೀಡುತ್ತೇನೆ

- ರಾಚಯ್ಯಸ್ವಾಮಿ ಮಠಪತಿ, ಎಎಸ್‌ಐ

ಶಶಿಕಾಂತ ಭಗೋಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry