ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡವಿಲ್ಲದೇ ಕಲಿಯಿರಿ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಮಕ್ಕಳೇ, ಬೇಸಿಗೆ ರಜೆ ಮುಗಿದು ಮತ್ತೆ ಶಾಲೆಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಜೀವನದಲ್ಲಿ ನೀವೀಗ ಒಂದು ಹಂತ ಮೇಲೇರಿದ್ದೀರಿ. ಈಗ ನೀವು ಓದುತ್ತಿರುವ ತರಗತಿಯ ವಿವಿಧ ವಿಷಯಗಳ ಪಾಠ ಈಗಷ್ಟೇ ಪ್ರಾರಂಭವಾಗಿದೆ. ಬಹುತೇಕ ವಿಷಯಗಳಲ್ಲಿ ಹೊಸ ಪಠ್ಯಪುಸ್ತಕ ಜಾರಿಗೆ ಬಂದಿದೆ. ಸಿ.ಬಿ.ಎಸ್.ಇ. ಪಠ್ಯಪುಸ್ತಕಗಳನ್ನು ಹಲವು ಹಂತದ ತರಗತಿಗಳಿಗೆ ಅಳವಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ, ನಿಮ್ಮ ಕಲಿಕೆಯ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಯ ಅವಶ್ಯಕತೆ ಉಂಟಾಗಿದೆ. ಆ ಬದಲಾವಣೆ ಹೀಗಿರಲಿ:

ಕಲಿಕೆಗೆ ಪೂರಕವಾದ ಮನೋಭಾವವನ್ನು ಬೆಳೆಸಿಕೊಳ್ಳಿ: ನಿಮ್ಮ ಕಲಿಕೆಯ ಪ್ರಕ್ರಿಯೆ ಉತ್ಸಾಹಪೂರ್ಣವಾಗಿರಬೇಕಾದಲ್ಲಿ ಅದಕ್ಕೆ ಪೂರಕವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾಂತ್ರಿಕವಾಗಿ ಕಲಿಯುವುದರ ಬದಲಿಗೆ ಇದೇಕೆ ಹೀಗೆ – ಎಂದು ಪ್ರಶ್ನಿಸುವ ಮನೋಭಾವ ಮೂಡಬೇಕು. ಯಾವುದನ್ನೇ ಆಗಲಿ, ಕೇವಲ ನೋಡುವುದನ್ನು ಬಿಟ್ಟು, ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿರಾಸಕ್ತಿಯನ್ನು ದೂರಮಾಡಿ, ಆಸಕ್ತಿ, ಕುತೂಹಲಗಳನ್ನು ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕಕ್ಕೇ ಸೀಮಿತಗೊಳ್ಳದೆ, ವೈಯುಕ್ತಿಕ ಅನುಭವಗಳ ಆಧಾರದ ಮೇಲೆ ಮಾಹಿತಿಯನ್ನು ಗಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು.

ನಿಮ್ಮ ಗಮನವೆಲ್ಲ ಪಾಠದ ಕಡೆಗಿರಲಿ: ಪ್ರತಿದಿನ ತರಗತಿಯನ್ನು ಪ್ರವೇಶಿಸಿದ ಮೇಲೆ ನಿಮ್ಮ ಗಮನ ಆ ದಿನದ ಪಾಠದ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಶಿಕ್ಷಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಸಾರಾಂಶದ ರೂಪದಲ್ಲಿ ಟಿಪ್ಪಣಿಯನ್ನು ಮಾಡಿಕೊಳ್ಳಿ. ಅವರು ಬೋರ್ಡ್‍ನ ಮೇಲೆ ಬರೆಯುವ ಮಾಹಿತಿಗಳನ್ನು ನೀವೂ ಬರೆದುಕೊಳ್ಳಿ. ಶಿಕ್ಷಕರು ಚಿತ್ರಗಳನ್ನು ಬಿಡಿಸುವಾಗ ಎಲ್ಲಿಂದ ಪ್ರಾರಂಭಿಸಿ ಎಲ್ಲಿ ಮುಗಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಮಂಡಿಸುವ ಹಂತಗಳನ್ನು ಮನನ ಮಾಡಿಕೊಳ್ಳಿ. ನೋಡುವುದು ಮತ್ತು ಕೇಳುವುದು ಕಲಿಕೆಯ ಪ್ರಕ್ರಿಯೆಯಲ್ಲಿ ಬಹುಮುಖ್ಯ ಹಂತಗಳು. ಈ ಎರಡೂ ಪ್ರಕ್ರಿಯೆಗಳು ತರಗತಿಯಲ್ಲಿ ನಿಮ್ಮನ್ನು ಸಕ್ರಿಯವಾಗಿಡುವಲ್ಲಿ ನೆರವಾಗುತ್ತವೆ. ನೋಡಿದ್ದನ್ನು ಮತ್ತು ಕೇಳಿದನ್ನು ಅರ್ಥಮಾಡಿಕೊಂಡು, ಮನನಮಾಡಿಕೊಳ್ಳುವ ಕಾರ್ಯದಲ್ಲಿ ನಿಮ್ಮ ಮನಸ್ಸು ಜಾಗೃತವಾಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಚಿತ್ತವನ್ನು ಬೇರೆಡೆಗೆ ಸೆಳೆಯಬಹುದಾದ ಎಲ್ಲ ಬಗೆಯ ಆಕರ್ಷಣೆಗಳಿಂದ ನೀವು ದೂರವಿರಬೇಕು.

ಪ್ರಯೋಗ, ಪ್ರಾತ್ಯಕ್ಷಿಕೆಗಳನ್ನು ವಿವರವಾಗಿ ವೀಕ್ಷಿಸಿ: ದೇಶದಾದ್ಯಂತ ಈಗ ಬಳಸಲಾಗುತ್ತಿರುವ ಕಲಿಕೆಯ ಪದ್ಧತಿಗೆ ರಚನಾತ್ಮಕತೆ ಎಂಬ ಹೆಸರಿದೆ. ಈ ವಿಧಾನದಲ್ಲಿ, ವಿದ್ಯಾರ್ಥಿಗಳು ತಮ್ಮ ತರಗತಿಯ ಅನುಭವಗಳ ಆಧಾರದ ಮೇಲೆ ಜ್ಞಾನವನ್ನು ತಾವೇ ಕಟ್ಟಿಕೊಳ್ಳಬೇಕು. ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಮಾತನ್ನು ಒತ್ತಿ ಹೇಳಲಾಗಿದೆ. ಹೀಗಾಗಿ, ನಿಮ್ಮ ಕಲಿಕೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ಶಿಕ್ಷಕರು ತರಗತಿಯಲ್ಲಿ ಪ್ರಯೋಗ, ಪ್ರಾತ್ಯಕ್ಷಿಕೆ ಅಥವಾ ಚಟುವಟಿಕೆಗಳನ್ನು ಯೋಜಿಸಿರುತ್ತಾರೆ. ಶಿಕ್ಷಕರು ಮಾಡುವ ಪ್ರಯೋಗ ಅಥವಾ ತೋರಿಸುವ ಪ್ರಾತ್ಯಕ್ಷಿಕೆಯನ್ನು ಗಮನವಿಟ್ಟು ವೀಕ್ಷಿಸಿ. ಅದರ ವಿವಿಧ ಹಂತಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಿ. ಉದ್ದೇಶ, ವಿಧಾನ ಹಾಗೂ ಫಲಿತಾಂಶಗಳ ಬಗ್ಗೆ ಗಮನವಿರಲಿ. ಪ್ರಯೋಗ ಅಥವಾ ಪ್ರಾತ್ಯಕ್ಷಿಕೆ ಯಾವ ವಿಷಯದ, ಯಾವ ಪಾಠಕ್ಕೆ ಸಂಬಂಧಿಸಿದ್ದು ಎಂಬುದನ್ನು ಮುಂಚೆಯೇ ತಿಳಿದುಕೊಂಡಿದ್ದರೆ, ಅದರ ಬಗ್ಗೆ ನಿಮಗೆ ಹೆಚ್ಚು ಆಸಕ್ತಿಯಿಂದ ಕಲಿಯಲು ಸಾಧ್ಯವಾಗುತ್ತದೆ.

ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ: ಕಲಿಕೆಗೆ ಪೂರಕವಾದಂತ ಹಲವಾರು ಚಟುವಟಿಕೆಗಳನ್ನು ತರಗತಿಯಲ್ಲಿ ನಿಮ್ಮ ಶಿಕ್ಷಕರು ಮಾಡಿಸಬಹುದು. ಇವುಗಳಲ್ಲಿ ವೈಯುಕ್ತಿಕವಾಗಿ ಮಾಡುವ ಚಟುವಟಿಕೆಗಳು ಹಾಗೂ ಗುಂಪಿನಲ್ಲಿ ಮಾಡುವ ಚಟುವಟಿಕೆಗಳು ಇರಬಹುದು. ಇಂಥ ಚಟುವಟಿಕೆಗಳು ನಿಮ್ಮ ವಿಷಯ ಗ್ರಹಣಸಾಮರ್ಥ್ಯವನ್ನು ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈಯುಕ್ತಿಕ ಚಟುವಟಿಕೆಯಾದಲ್ಲಿ, ಅದಕ್ಕೆ ಬೇಕಾದ ಪೂರಕ ಮಾಹಿತಿಯನ್ನು ಸಂಗ್ರಹಿಸಿ. ಗುಂಪು ಚಟುವಟಿಕೆಯಾದಲ್ಲಿ ಜವಾಬ್ದಾರಿಯನ್ನು ಹಂಚಿಕೊಳ್ಳಿ. ಗುಂಪಿನ ನಾಯಕತ್ವವನ್ನು ನೀವೇ ವಹಿಸಿಕೊಳ್ಳಿ. ಗುಂಪಿನಲ್ಲಿ ಇರುವ ಎಲ್ಲರೂ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ.

ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ: ಶಾಲೆಯಲ್ಲಿ ನಡೆಯುವ ಕ್ರೀಡೆ, ಸಾಹಿತ್ಯ ಹಾಗೂ ಲಲಿತಕಲೆಗಳಿಗೆ ಸಂಬಂಧಿಸಿದ ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ. ಇದರಿಂದ ನಿಮ್ಮ ಕಲಿಕೆಯ ಪ್ರಕ್ರಿಯೆಯ ಏಕತಾನತೆ ದೂರವಾಗುತ್ತದೆ. ಮನಸ್ಸಿಗೆ ಮತ್ತು ದೇಹಕ್ಕೆ ಅವಶ್ಯಕವಾದ ಬದಲಾವಣೆ ದೊರಕುತ್ತದೆ. ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆ ಮುಖ್ಯವೇ ಹೊರತು ಬಹುಮಾನವಲ್ಲ. ಆಶು ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ನಿಮ್ಮಲ್ಲಿರಬಹುದಾದ ಅವ್ಯಕ್ತ ವೇದಿಕೆ ಭಯವನ್ನು ಹೋಗಲಾಡಿಸಿಕೊಳ್ಳಬಹುದು. ಶಾಲೆಯಲ್ಲಿ ಮತ್ತು ನಿಮ್ಮ ಸಮಾಜದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಶಿಕ್ಷಕರ ನೆರವಿನಿಂದ ಆಯೋಜಿಸಿ.

ಈಗಿನಿಂದಲೇ ಅಧ್ಯಯನ ಪ್ರಾರಂಭಿಸಿ: ತರಗತಿಯಲ್ಲಿ ಕಲಿತ ಪಾಠಗಳನ್ನು, ಅದರ ಬಗ್ಗೆ ನೀವು ಮಾಡಿಕೊಂಡಿರುವ ಟಿಪ್ಪಣಿಗಳನ್ನು ಸಂಜೆ ಮನೆಗೆ ಹೋದ ಮೇಲೆ ಮತ್ತೆ ಪುನರ್ಮನನ ಮಾಡಿಕೊಳ್ಳಿ. ನಿಮ್ಮ ಶಾಲೆಯ ವೇಳಾಪಟ್ಟಿಗೆ ಅನುಗುಣವಾಗಿ ಮನೆಯಲ್ಲಿನ ಓದಿಗೆ ಒಂದು ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಓದುವಾಗ ಮನಸ್ಸಿನಲ್ಲಿ ಏಕಾಗ್ರತೆ ಇರಲಿ. ಅಧ್ಯಯನದ ಸಮಯದಲ್ಲಿ ನಿಮ್ಮ ಚಿತ್ತವನ್ನು ಬೇರೆಡೆಗೆ ಸೆಳೆಯುವ ಮಾಧ್ಯಮ ಹಾಗೂ ಉಪಕರಣಗಳನ್ನು ದೂರವಿಡಿ. ಅಂದಿನ ಪಾಠಗಳನ್ನು ಅಂದೇ ಪುನರ್ಮನನ ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನೀವು ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ, ಯಾವುದೇ ರೀತಿಯ ಒತ್ತಡವೂ ಇಲ್ಲದೆ ನಿಮ್ಮ ಕಲಿಕೆಯನ್ನು ಸುಗಮಗೊಳಿಸಿಕೊಳ್ಳಬಹುದು.

ಸ್ನೇಹಿತರ ಜೊತೆಗೆ ಚರ್ಚಿಸಿ: ನಿಮ್ಮ ಸಮಾನಮನಸ್ಕ ಸಹಪಾಠಿಗಳ ಗುಂಪೊಂದನ್ನು ರಚಿಸಿಕೊಳ್ಳಿ. ನೀವು ಅಧ್ಯಯನ ಮಾಡಿದ ವಿಷಯಗಳನ್ನು ಪ್ರತಿ ದಿನ ಅವರೊಂದಿಗೆ ಚರ್ಚಿಸಿ. ನೀವು ಓದಿ, ಅರ್ಥ ಮಾಡಿಕೊಂಡ ಯಾವುದೇ ವಿಷಯವನ್ನು ಇನ್ನೊಬ್ಬರಿಗೆ ಅರ್ಥವಾಗುವಂತೆ ನೀವು ಹೇಳಬಲ್ಲಿರಿ ಅಂದರೆ, ಅದು ನಿಮ್ಮ ಕಲಿಕೆ ಸಮಂಜಸವಾಗಿದೆ ಎನ್ನುವುದರ ಗುರುತು. ನಿಮ್ಮಿಂದ ನಿಮ್ಮ ಸ್ನೇಹಿತರು ಕಲಿಯುತ್ತಾರೆ. ನೀವೂ ಅವರಿಂದ ಹಲವಾರು ಕ್ಲಿಷ್ಟ ಸಿದ್ಧಾಂತಗಳನ್ನು ಸುಲಭವಾಗಿ ಕಲಿತುಕೊಳ್ಳಬಹುದು. ಇದರಿಂದ, ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಕಲಿಕೆ ಪರಸ್ಪರ ಪೂರಕವಾಗಿ ಸಾಗುತ್ತದೆ. ಸಮಯ ಅಮೂಲ್ಯ. ಅದು ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು.

ನೀವು ಖಂಡಿತ ಬದಲಾಗುತ್ತೀರಿ
ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ನಿಮ್ಮನ್ನು ನೀವು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ, ಕ್ರಮೇಣ ನಿಮ್ಮ ಶೈಕ್ಷಣಿಕ ಪ್ರಗತಿ ಏರುಮುಖವಾಗುವುದರಲ್ಲಿ ಸಂಶಯವಿಲ್ಲ. ಆಲಸ್ಯ, ಹಿಂಜರಿಕೆ, ಮುಂತಾದ ಗುಣಗಳನ್ನು ದೂರವಿಟ್ಟು, ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಗುರಿಸಾಧನೆಯ ಪಥದಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯಿರಿ. ನಿಮ್ಮಲ್ಲಿ ಬದಲಾವಣೆ ಉಂಟಾಗುವುದನ್ನು ನೀವೇ ಗಮನಿಸುತ್ತೀರಿ. ಯಾವ ಒತ್ತಡವೂ ಇಲ್ಲದೆ ನಿರಾತಂಕವಾಗಿ ನಿಮ್ಮ ಅಧ್ಯಯನವನ್ನು ಪೂರೈಸಿ, ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ. ನಿಮಗೆ ಶುಭವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT