ನ್ಯಾಯಾಂಗ ಇಲಾಖೆ ನೌಕರರಿಗ ಕಾನೂನು ಅರಿವಿಲ್ಲ

7
ಕಾನೂನು ನೆರವು ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಸವರಾಜ ಬೇಸರ

ನ್ಯಾಯಾಂಗ ಇಲಾಖೆ ನೌಕರರಿಗ ಕಾನೂನು ಅರಿವಿಲ್ಲ

Published:
Updated:

ಚಾಮರಾಜನಗರ: ‘ಸರ್ಕಾರಿ ನೌಕರರು ಕೆಲಸಕ್ಕೆ ಸೇರ್ಪಡೆಗೊಳ್ಳುವಾಗ ಅವರ ಹಕ್ಕುಗಳ ಬಗ್ಗೆ ಮಾತ್ರ ತಿಳಿಯುತ್ತಾರೆ. ತಮ್ಮ ಕರ್ತವ್ಯಗಳನ್ನು ಮರೆಯುತ್ತಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಬಸವರಾಜ ಹೇಳಿದರು.

ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲೆಯ ನ್ಯಾಯಾಂಗ ಇಲಾಖೆಯು ನ್ಯಾಯಾಂಗ ಸಿಬ್ಬಂದಿ ವರ್ಗದವರಿಗಾಗಿ ಶನಿವಾರ ಆಯೋಜಿಸಿದ್ದ ‘ಕಾನೂನು ನೆರವು ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ನೌಕರರು ತಮ್ಮ ಹಕ್ಕುಗಳ ಜೊತೆಗೆ, ಕರ್ತವ್ಯದ ಬಗ್ಗೆಯೂ ತಿಳಿದಿರಬೇಕು’ ಎಂದು ಹೇಳಿದರು. ‘ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವ ಹಲವರಿಗೆ ಕಾನೂನುಗಳ ಬಗ್ಗೆ ಅರಿವು ಇಲ್ಲ. ಇಲ್ಲಿ ಕಾರ್ಯನಿರ್ವಹಿಸುವವರಿಗೇ ಕಾನೂನು ಬಗ್ಗೆ ತಿಳಿವಳಿಕೆ ಇಲ್ಲ ಎಂದಾದರೆ, ಇತರರಲ್ಲಿ ಅವರು ಹೇಗೆ ಅರಿವು ಮೂಡಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಮತ್ತು ಮಹಿಳೆಯರಿಗೆ ಉಚಿತವಾಗಿ ಕಾನೂನು ಅರಿವು ನೀಡುವ ಕಾರ್ಯ ಮಾಡುತ್ತಿದೆ. ನ್ಯಾಯಾಂಗದ ಸಿಬ್ಬಂದಿ ಈ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ವಕೀಲರು, ಕಕ್ಷಿದಾರರು ಮತ್ತು ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ನ್ಯಾಯಾಂಗ ವ್ಯವಸ್ಥೆ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಮಾತನಾಡಿ, ‘ನ್ಯಾಯಾಂಗದ ಸಿಬ್ಬಂದಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ಇರಬೇಕು’ ಎಂದರು.‌

ಕೊಳ್ಳೇಗಾಲದ ಜಿಎಂಎಫ್‌ ಸಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಟಿ.ಶ್ರೀಕಾಂತ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮಾತನಾಡಿದರು.

ಕೊಳ್ಳೇಗಾಲ ಜೆಎಂಎಫ್‌ಸಿಯ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಜೆ. ಕೃಷ್ಣ, ಗುಂಡ್ಲುಪೇಟೆ ಜೆಎಂಎಫ್‌ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ್‌ ಪಿ. ದಿಡ್ಡಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಚಾಮರಾಜನಗರದ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ. ರಮೇಶ್‌, ಚಾಮರಾಜನಗರ ಜೆಎಂಎಫ್‌ಸಿಯ ಸಿವಿಲ್‌ ನ್ಯಾಯಾಧೀಶೆ ವಿ.ದೀಪಾ, ಗುಂಡ್ಲುಪೇಟೆ ಜೆಎಂಎಫ್‌ಸಿಯ ಸಿವಿಲ್‌ ನ್ಯಾಯಾಧೀಶರಾದ ಜೆ. ಯೋಗೇಶ್‌ ಮತ್ತು ಎನ್‌. ಶರತ್‌ ಚಂದ್ರ ಹಾಗೂ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಇದ್ದರು.

‘ಕರ್ತವ್ಯದ ಬಗ್ಗೆ ಅರಿವಿರಲಿ’

‘ಯಾವುದಾದರೂ ಸಮಸ್ಯೆ ಬಂದಾಗಲೇ, ನಾವು ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಹಕ್ಕುಗಳ ಬಗ್ಗೆ ನೋಡುತ್ತೇವೆ. ಕರ್ತವ್ಯ ಬಗ್ಗೆ ಯೋಚನೆ ಮಾಡುವುದಿಲ್ಲ. ಎಲ್ಲದರ ಬಗ್ಗೆಯೂ ನಾವು ತಿಳಿದಿರಬೇಕು. ತಪ್ಪು ಮಾಡಿದರೆ ಏನು ಶಿಕ್ಷೆ ಎಂಬುದೂ ಗೊತ್ತಿರಬೇಕು’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ. ವಿನಯ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry