ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಮುಡಿಗೆ ವಿಶ್ವಕಪ್‌?

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಫುಟ್‌ಬಾಲ್‌ ವಿಶ್ವಕಪ್‌ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದಂತೆ ಅನೇಕ ಅಚ್ಚರಿಗಳು ಕಾಣಸಿಗುತ್ತವೆ. ಬಲಿಷ್ಠ ಎಂಬ ಹೆಗ್ಗಳಿಕೆಯೊಂದಿಗೆ ಅಂಗಳಕ್ಕಿಳಿದ ತಂಡಗಳು ನೆಲಕಚ್ಚಿರುವ ಸಾಕಷ್ಟು ಉದಾಹರಣೆಗಳಿವೆ. ಅಮೆರಿಕ, ನೆದರ್‌ಲ್ಯಾಂಡ್ಸ್‌, ಇಟಲಿಯಂತಹ ಶಕ್ತಿಯುತ ತಂಡಗಳು ಈ ಬಾರಿಯ ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿವೆ. ಹಾಗಾಗಿ, ಈ ಬಾರಿ ರೋಚಕ ಪಂದ್ಯಗಳ ರಸದೌತಣ ಕಾಲ್ಚೆಂಡಿನ ಅಭಿಮಾನಿಗಳಿಗೆ ಸಿಗುವುದು ಸುಳ್ಳಲ್ಲ. ಈ ವಿಶ್ವಕಪ್‌ನ ಟ್ರೋಫಿ ಎತ್ತಿ ಹಿಡಿಯುವ ನೆಚ್ಚಿನ ತಂಡಗಳು, ಅವುಗಳ ಬಲಾಬಲ ಹಾಗೂ ವೈಫಲ್ಯ ಕುರಿತಾದ ಒಂದು ನೋಟ ಇಲ್ಲಿದೆ.

1) ಜರ್ಮನಿ
ಇಲ್ಲಿಯವರೆಗಿನ ಸಾಧನೆ: 4 ಬಾರಿ ಚಾಂಪಿಯನ್
ರ‍್ಯಾಂಕ್‌: 01
ಪ್ರಮುಖ ಆಟಗಾರ: ಟೋನಿ ಕ್ರೋಸ್‌

ಸಂಘಟಿತ ಹೋರಾಟ ನಡೆಸುವ ಜರ್ಮನಿ ತಂಡ ವಿಶ್ವಕಪ್‌ನಲ್ಲಿ ಅನೇಕ ಬಾರಿ ಯಶಸ್ವಿಯಾಗಿದೆ. ಹಾಲಿ ಚಾಂಪಿಯನ್ ಜರ್ಮನಿ, ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ತಂಡದ ಮಿಡ್ ಫೀಲ್ಡಿಂಗ್ ವಿಭಾಗ ಹಿಂದಿಗಿಂತಲೂ ಸಾಕಷ್ಟು ಶಕ್ತಿಯುತವಾಗಿದೆ. ಸಮಿ ಖೆದಿರಾ, ಮೀಸತ್‌ ಓಜಿಲ್‌ ಈ ವಿಭಾಗದಲ್ಲಿ ಅನೇಕ ಸಲ ತಮ್ಮ ಸಾಮರ್ಥ್ಯ ತೋರಿದ್ದಾರೆ. ಫಾರ್ವರ್ಡ್‌ ವಿಭಾಗದ ಥಾಮಸ್‌ ಮುಲ್ಲರ್ ಹಾಗೂ ಮಿಡ್‌ಫೀಲ್ಡರ್‌ ಟೋನಿ ಕ್ರೋಸ್‌ ಒತ್ತಡದ ವೇಳೆಯಲ್ಲೂ ಗೋಲು ಗಳಿಸುವ ಆಟಗಾರರು.

2) ಬ್ರೆಜಿಲ್
ಇಲ್ಲಿಯವರೆಗಿನ ಸಾಧನೆ: 5 ಬಾರಿ ಚಾಂಪಿಯನ್
ರ‍್ಯಾಂಕ್‌: 02
ಪ್ರಮುಖ ಆಟಗಾರ: ನೇಮರ್‌

ಕಳೆದ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ನಲ್ಲಿನ ಹೀನಾಯ ಸೋಲಿನಿಂದ ಬ್ರೆಜಿಲ್‌ ತಂಡವನ್ನು ಅದರ ನೂತನ ಕೋಚ್‌ ಟಿಟೆ ಅವರು ಹೊರತಂದಿದ್ದಾರೆ. ಗಾಯದಿಂದ ನರಳುತ್ತಿದ್ದ ಪ್ರಮುಖ ಆಟಗಾರ ನೇಮರ್‌ ತಂಡಕ್ಕೆ ಮರಳಿರುವುದು ವರವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು. ತಂಡದ ಫಿಲಿಪ್‌ ಕುಟಿನ್ಹೊ, ಗೆಬ್ರಿಯಲ್‌ ಜೀಸಸ್, ವಿಲಿಯನ್‌ ಅವರು ಮಿಡ್‌ಫೀಲ್ಡಿಂಗ್ ಹಾಗೂ ರಕ್ಷಣಾ ವಿಭಾಗದಲ್ಲಿ ಯೋಜನೆ ಸಿದ್ಧಪಡಿಸುವ ಸಾಮರ್ಥ್ಯ ಉಳ್ಳವರು. ಗಾಯದಿಂದ ಹಿಂದೆ ಸರಿದಿರುವ ಡ್ಯಾನಿ ಆಲ್ವ್ಸ್‌ ಅವರ ಅಲಭ್ಯತೆ ತಂಡಕ್ಕೆ ಸಮಸ್ಯೆಯಾಗಬಹುದು.

3) ಬೆಲ್ಜಿಯಂ
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 03
ಪ್ರಮುಖ ಆಟಗಾರ:ಎಡೆನ್‌ ಹೆಜಾರ್ಡ್‌

ಯೋಜನಾಬದ್ಧವಾಗಿ ಪೈಪೋಟಿ ನೀಡುವ ತಂಡ ಎಂದೇ ಹೆಸರುವಾಸಿಯಾಗಿರುವ ಬೆಲ್ಜಿಯಂ ಅನೇಕ ಪ್ರತಿಭಾಶಾಲಿ ಆಟಗಾರರನ್ನು ಹೊಂದಿದೆ. ಫಾರ್ವರ್ಡ್‌ ವಿಭಾಗದ ಎಡೆನ್‌ ಹೆಜಾರ್ಡ್‌, ರೊಮೆಲು ಲುಕಾಕು ಹಾಗೂ ಡ್ರೈಸ್‌ ಮರ್ಟೆನ್ಸ್‌ ಅವರು ಡ್ರಿಬ್ಲಿಂಗ್‌ ತಂತ್ರಗಾರಿಕೆಯಲ್ಲಿ ಉತ್ತಮ ಆಟಗಾರರು. ಮಿಡ್‌ಫೀಲ್ಡರ್‌ ಕೆವಿನ್‌ ಡಿ ಬ್ರುಯ್ನೆ ಅವರು ಗೋಲು ಗಳಿಸುವ ಪ್ರಮುಖ ಆಟಗಾರರಿಗೆ ಬೆಂಬಲವಾಗಿ ನಿಲ್ಲಬಲ್ಲ ಆಟಗಾರ. ಆದರೆ, ಒತ್ತಡದ ಸಮಯದಲ್ಲಿ ಹೆಚ್ಚು ಸೋಲು ಕಂಡಿರುವ ತಂಡ ಈ ಬಾರಿ ಯಾವ ರೀತಿ ತನ್ನ ವೈಫಲ್ಯವನ್ನು ಮೆಟ್ಟಿ ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ.

4) ಪೋರ್ಚುಗಲ್
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 04
ಪ್ರಮುಖ ಆಟಗಾರ: ಕ್ರಿಸ್ಟಿಯಾನೊ ರೊನಾಲ್ಡೊ

ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡದ ಪ್ರಮುಖ ಶಕ್ತಿ. ಅನೇಕ ಬಾರಿ ಏಕಾಂಗಿ ಹೋರಾಟ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬರ್ನಾರ್ಡೊ ಸಿಲ್ವಾ, ಆ್ಯಂಡ್ರೆ ಸಿಲ್ವಾ ಹಾಗೂ ಗೆಲ್ಸನ್‌ ಮಾರ್ಟಿನ್ಸ್‌ ಅವರು ರಕ್ಷಣಾ ಹಾಗೂ ಮಿಡ್‌ಫೀಲ್ಡಿಂಗ್‌ ವಿಭಾಗದ ಪ್ರಮುಖ ಆಟಗಾರರು. ಆದರೆ, ರಕ್ಷಣಾ ವಿಭಾಗದ ಬ್ರುನೊ ಆಲ್ವ್ಸ್‌ ಹಾಗೂ ಜೋಸ್‌ ಫಾಂಟ್‌ ಅವರ ಇತ್ತೀಚಿನ ವೈಫಲ್ಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

5) ಅರ್ಜೆಂಟೀನಾ
ಇಲ್ಲಿಯವರೆಗಿನ ಸಾಧನೆ: 2 ಬಾರಿ ಚಾಂಪಿಯನ್
ರ‍್ಯಾಂಕ್‌: 05
ಪ್ರಮುಖ ಆಟಗಾರ: ಏಂಜೆಲ್‌ ಡಿ ಮರಿಯಾ

ಅತ್ಯಂತ ಬಲಿಷ್ಠ ಫಾರ್ವರ್ಡ್‌ ಆಟಗಾರರನ್ನು ಹೊಂದಿರುವ ತಂಡ. ಕಳೆದ ಬಾರಿಯ ರನ್ನರ್ಸ್‌ ಅಪ್‌ ತಂಡದ ಮೇಲೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಲಯೊನೆಲ್‌ ಮೆಸ್ಸಿ ತಂಡದ ಬಲಾಢ್ಯ ಶಕ್ತಿ. ಮಿಡ್‌ಫೀಲ್ಡಿಂಗ್‌ ಹಾಗೂ ರಕ್ಷಣಾ ವಿಭಾಗದಲ್ಲಿ ಸರ್ಜಿಯೊ ಅಗುರೊ, ಪೌಲೊ ಡಿಬಾಲಾ ಹಾಗೂ ಗೊಂಜಾಲೊ ಹಿಗ್ವೆನ್‌ ಅವರು ಮೆಸ್ಸಿ ಅವರಿಗೆ ಬೆಂಬಲವಾಗಿ ನಿಲ್ಲಬಲ್ಲವರು. ಅನುಭವಿ ಆಟಗಾರರಾದ ಫೆಡೆರಿಕೊ ಫಾಜಿವೊ ಹಾಗೂ ನಿಕೊಲಾಸ್‌ ಒಟಮೆಡಿ ಅವರು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಮಿಂಚದಿರುವುದು ಸಂಘಟನಾತ್ಮಕ ಹೋರಾಟದ ದೃಷ್ಟಿಯಿಂದ ತಂಡಕ್ಕೆ ಕೊಂಚ ಹಿನ್ನಡೆ.

6) ಸ್ವಿಟ್ಜರ್ ಲೆಂಡ್
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 06
ಪ್ರಮುಖ ಆಟಗಾರ: ಗ್ರಾನಿತ್‌ ಕ್ಸಾಕಾ

2016ರ ಯುರೋ ಕಪ್‌ನಲ್ಲಿ ಆಡಿದ್ದ ಹೆಚ್ಚಿನ ಆಟಗಾರರು ಈ ಬಾರಿ ತಂಡದಲ್ಲಿದ್ದಾರೆ. ಸಂಘಟನಾತ್ಮಕ ಹೋರಾಟ, ವ್ಲಾಡಿಮಿರ್‌ ಪೆಟ್ಕೊವಿಕ್‌ ಅವರ ತರಬೇತಿ ಹಾಗೂ ಯೋಜನೆ ತಂಡದಲ್ಲಿ ಅನೇಕ ಬದಲಾವಣೆ ತಂದಿರುವುದು ಸುಳ್ಳಲ್ಲ. ಮಿಡ್‌ಫೀಲ್ಡಿಂಗ್‌ ಹಾಗೂ ಫಾರ್ವರ್ಡ್‌ ವಿಭಾಗದ ಇತ್ತೀಚಿನ ಸಾಧನೆ ಅಷ್ಟೇನೂ ಆಶಾದಾಯಕವಾಗಿಲ್ಲ. ಸಂಘಟನಾತ್ಮಕ ಹೋರಾಟದಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಿದೆ. ಫಾರ್ವರ್ಡ್‌ ವಿಭಾಗದ ಗ್ಯಾರಿಸ್‌ ಸೆಫೆರೊವಿಕ್‌ ತೀವ್ರ ಪೈಪೋಟಿಯ ಪಂದ್ಯಗಳಲ್ಲೂ ಗೋಲು ಗಳಿಸುವ ಆಟಗಾರ.

7) ಫ್ರಾನ್ಸ್
ಇಲ್ಲಿಯವರೆಗಿನ ಸಾಧನೆ: ಒಂದು ಬಾರಿ ಚಾಂಪಿಯನ್
ರ‍್ಯಾಂಕ್‌: 07
ಪ್ರಮುಖ ಆಟಗಾರ‘: ಆ್ಯಂಟನಿ ಗ್ರಿಜ್‌ಮನ್‌

ಎಲ್ಲ ವಿಭಾಗಗಳಲ್ಲೂ ಪ್ರತಿಭಾನ್ವಿತರನ್ನು ಹೊಂದಿದೆ ಎಂದು ಜಿನೆದಿನ್‌ ಜಿದಾನ್‌ ಅವರಂತಹ ಶ್ರೇಷ್ಠ ಆಟಗಾರರಿಂದ ಕರೆಸಿಕೊಂಡ ತಂಡ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತೋರಿದ ಸಾಮರ್ಥ್ಯ ತಂಡದ ಆತ್ಮವಿಶ್ವಾಸದ ಹೆಚ್ಚುವಂತೆ ಮಾಡಿರುವುದು ಸುಳ್ಳಲ್ಲ. ಆ್ಯಂಟನಿ ಮಾರ್ಶಿಯಲ್‌, ಅಲೆಕ್ಸಾಂಡರ್‌ ಲೆಕಾಜೆಟ್ಟ್ ಫಾರ್ವರ್ಡ್‌ ವಿಬಾಗದ ಪ್ರಮುಖ ಆಟಗಾರರು. ಅನುಭವಿ ಆಟಗಾರರಾದ ಆ್ಯಂಟನಿ ಗ್ರಿಜ್‌ಮನ್‌, ಕಿಲಿಯಾನ್‌ ಬಾಪ್ಪೆ, ಓಲಿವಿಯರ್‌ ಗಿರೌಡ್‌ ಹಾಗೂ ಥಾಮಸ್‌ ಲೆಮರ್‌ ಅವರು ಮಿಡ್‌ಫೀಲ್ಡಿಂಗ್‌ ಹಾಗೂ ರಕ್ಷಣಾ ವಿಭಾಗದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

8) ಸ್ಪೇನ್
ಇಲ್ಲಿಯವರೆಗಿನ ಸಾಧನೆ: ಒಂದು ಬಾರಿ ಚಾಂಪಿಯನ್
ರ‍್ಯಾಂಕ್‌: 10
ಪ್ರಮುಖ ಆಟಗಾರ: ಡೆವಿಡ್‌ ವಿಲ್ಲಾ

ಇಸ್ಕೊ ಅರ್ಸೆನ್ಸಿವೊ ಹಾಗೂ ಮಾರ್ಕೊ ಆರ್ಸೆನ್ಸಿವೊ ಅವರಂತಹ ತಾಂತ್ರಿಕ ನೈಪುಣ್ಯತೆ ಹೊಂದಿರುವ ಆಟಗಾರರು ತಂಡದ ಶಕ್ತಿ. ಎಲ್ಲ ವಿಭಾಗಗಳಲ್ಲೂ ಸಮಬಲ ಹೊಂದಿರುವ ತಂಡವಾಗಿ ಸ್ಪೇನ್‌ ಹೆಸರುವಾಸಿ. ಸೆರ್ಜಿ ಬುಸ್ಕೆಟ್ಸ್‌, ಆ್ಯಂಡ್ರೆಸ್‌ ಐನೆಸ್ಟಾ, ಡೆವಿಡ್‌ ಸಿಲ್ವಾ ಅವರು ಮಿಡ್‌ಫೀಲ್ಡಿಂಗ್‌, ರಕ್ಷಣಾ ಹಾಗೂ ಫಾರ್ವರ್ಡ್‌ ವಿಭಾಗಗಳಲ್ಲಿ ತಂಡವನ್ನು ಮುನ್ನಡೆಸುವ ಅನುಭವ ಹೊಂದಿದ್ದಾರೆ.

9) ಇಂಗ್ಲೆಂಡ್
ಇಲ್ಲಿಯವರೆಗಿನ ಸಾಧನೆ: ಒಂದು ಬಾರಿ ಚಾಂಪಿಯನ್
ರ‍್ಯಾಂಕ್‌: 12
ಪ್ರಮುಖ ಆಟಗಾರ: ಹ್ಯಾರಿ ಕೇನ್‌

ಗರೆತ್‌ ಸೌತ್‌ಗೇಟ್‌ ಅವರಿಂದ ತರಬೇತಿ ಪಡೆದಿರುವ ತಂಡ ಅರ್ಹತಾ ಸುತ್ತಿನ ಒಂದೂ ಪಂದ್ಯದಲ್ಲಿ ಸೋತಿಲ್ಲ. ಗ್ಯಾರಿ ಕಹಿಲ್‌ ಹಾಗೂ ಹ್ಯಾರಿ ಕೇನ್‌ ಅವರು ಮುಂಚೂಣಿ ವಿಭಾಗದ ಭರವಸೆಯ ಆಟಗಾರರು. ಆದರೆ, ಬಲಾಢ್ಯ ತಂಡಗಳೊಂದಿಗೆ ಆಡುವಾಗ ಈ ತಂಡದ ರಕ್ಷಣಾ ವಿಭಾಗ ಅನೇಕ ಬಾರಿ ಎಡವಿದೆ. ಪೈಪೋಟಿ ಮೀರುವ, ಯೋಜನೆಯ ಅನುಷ್ಠಾನದಲ್ಲಿನ ವೈಫಲ್ಯ ಈ ತಂಡಕ್ಕೆ ಹಿನ್ನಡೆಯಾಗಬಹುದು.

10) ಉರುಗ್ವೆ
ಇಲ್ಲಿಯವರೆಗಿನ ಸಾಧನೆ: ಎರಡು ಬಾರಿ ಚಾಂಪಿಯನ್
ರ‍್ಯಾಂಕ್‌: 14
ಪ್ರಮುಖ ಆಟಗಾರ: ಲೂಯಿಸ್‌ ಸಾರೆಜ್‌

ಫೆಡೆರಿಕೊ ವಾಲ್ವೆರ್ಡ್‌, ರೊಡ್ರಿಗೊ ಬೆಂಟಾಂಕುರ್‌ ಹಾಗೂ ಮಾರ್ಶಿಯಸ್‌ ವೆಸಿನೊ ಮಿಡ್‌ಫೀಲ್ಡಿಂಗ್‌ ವಿಭಾಗದಲ್ಲಿ ತಂಡದ ಶಕ್ತಿ. ಲೂಯಿಸ್‌ ಸಾರೆಜ್‌ ಹಾಗೂ ಎಡಿಸನ್‌ ಕೆವಾನಿ ಅವರು ಗೋಲು ಗಳಿಸುವ ಪ್ರಮುಖ ಆಟಗಾರರು. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇವರಿಬ್ಬರ ಪಾಲುದಾರಿಕೆಯಲ್ಲೇ ತಂಡ ಹೆಚ್ಚಿನ ಗೋಲುಗಳನ್ನು ದಾಖಲಿಸಿತ್ತು. ಆದರೆ, ಅನುಭವಿ ಕ್ರಿಸ್ಟಿಯನ್‌ ರಾಡ್ರಿಗಸ್‌ ಅವರ ವೈಫಲ್ಯವನ್ನು ತಂಡ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

11) ಕೋಸ್ಟಾರಿಕ
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 23
ಪ್ರಮುಖ ಆಟಗಾರ: ಕೆಲರ್‌ ನವಾಸ್‌

ಇತ್ತೀಚಿನ ದಿನಗಳಲ್ಲಿ ಅತ್ಯಂತ ಬಲಿಷ್ಠ ರಕ್ಷಣಾ ವಿಭಾಗ ಹಾಗೂ ಫಾರ್ವರ್ಡ್‌ ಆಟಗಾರರನ್ನು ಹೊಂದಿರುವ ತಂಡ ಎಂಬ ಹೆಗ್ಗಳಿಕೆ. ಹಿಂದಿನ ಬಾರಿ ಸೆಮಿಫೈನಲ್‌ ಪ್ರವೇಶದ ಸಾಧನೆ ಮಾಡಿದ್ದ ತಂಡಕ್ಕೆ ಆತ್ಮವಿಶ್ವಾಸದ ಕೊರತೆ ಇಲ್ಲ. ಜಿಯಾನ್‌ಕಾರ್ಲೊ ಗೊನ್ಸಾಲ್ವೆಜ್‌ ಹಾಗೂ ಆಸ್ಕರ್‌ ಡುವಾರ್ಟೆ ಅವರು ರಕ್ಷಣಾ ವಿಭಾಗದ ಉತ್ತಮ ಆಟಗಾರರು.

12) ಕೊರಿಯಾ ಗಣರಾಜ್ಯ
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 57
ಪ್ರಮುಖ ಆಟಗಾರ: ಸನ್‌ ಹ್ಯುಂಗ್‌ ಮಿನ್‌

ಏಷ್ಯಾ ಖಂಡದಿಂದ ವಿಶ್ವಕಪ್‌ಗೆ ಅರ್ಹತೆ ಗಳಿಸಿರುವ ತಂಡ. ಫಾರ್ವರ್ಡ್‌ ಹಾಗೂ ರಕ್ಷಣಾ ವಿಭಾಗದಲ್ಲಿ ಉತ್ತಮ ಆಟಗಾರರನ್ನು ಹೊಂದಿದೆ. ಸನ್‌ ಹ್ಯುಂಗ್‌ ಮಿನ್‌ ಅವರು ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮವಾಗಿ ಆಡಬಲ್ಲರು ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಆದರೆ, ಪ್ರಮುಖ ಆಟಗಾರರಾದ ಲೀ ಕ್ಯುನ್‌ ಹಾಗೂ ಕ್ವೊನ್‌ ಚಾಂಗ್‌ ಹೂನ್‌ ಅವರ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಬಹುದು.

13) ಜಪಾನ್
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 61
ಪ್ರಮುಖ ಆಟಗಾರ: ಮಯಾ ಯೋಶಿದಾ

ಕಿಸುಕೆ ಹೊಂಡಾ, ಶಿಂಜಿ ಕಗವಾ ಹಾಗೂ ಶಿಂಜಿ ಓಕಾಜಾಯಿ ಫಾರ್ವರ್ಡ್‌ ವಿಭಾಗದ ವಿಶ್ವಸನೀಯ ಆಟಗಾರರು. ಹ್ಯಾಲಿ ಹೊಡ್ಜಿಕ್‌ ಅವರು ಮಿಡ್‌ಫೀಲ್ಡಿಂಗ್‌ ಹಾಗೂ ರಕ್ಷಣಾ ವಿಭಾಗದ ಜವಾಬ್ದಾರಿ ಹೊರುವ ಸಾಮರ್ಥ್ಯ ಉಳ್ಳ ಆಟಗಾರ. ಆದರೆ, ತಂಡದ ಆಟಗಾರರಿಗೆ ಸಂಬಂಧಿಸಿದಂತೆ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸಿದ್ಧಪಡಿಸಿಕೊಂಡ ವಿಭಿನ್ನ ರೀತಿಯ ಯೋಜನೆಗಳು ವಿಫಲವಾಗಿವೆ. ಹಾಗಾಗಿ, ಪ್ರಬಲ ಪೈಪೋಟಿಯ ವಿಶ್ವಕಪ್‌ನ ಪಂದ್ಯಗಳಲ್ಲಿ ಯಾವ ಯೋಜನೆಯೊಂದಿಗೆ ತಂಡ ಅಂಗಳಕ್ಕಿಳಿಯಲಿದೆ ಎಂಬುದು ಕೂತೂಹಲಕರ ಸಂಗತಿ. ‌

14) ರಷ್ಯಾ
ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ
ರ‍್ಯಾಂಕ್‌: 70
ಪ್ರಮುಖ ಆಟಗಾರ: ಇಗೊರ್‌ ಅಕಿನ್‌ಫೀವ್‌

ಆತಿಥೇಯ ರಾಷ್ಟ್ರವು ಅರ್ಹತಾ ಸುತ್ತಿನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿಲ್ಲ. ಹಾಗಾಗಿ ಉತ್ತಮ ಪೈಪೋಟಿ ನೀಡಲೇಬೇಕಾದ ಒತ್ತಡದಲ್ಲಿ ಇದೆ. ಅನೇಕ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ದೊಡ್ಡ ಹಿನ್ನಡೆ. ಸ್ಟ್ರೈಕರ್‌ ಅಲೆಕ್ಸಾಂಡರ್‌ ಕೊಕೊರಿನ್‌ ಅವರು ಅಲಭ್ಯರಾಗಿದ್ದಾರೆ. ಪರ್ಯಾಯವಾಗಿ ತಂಡ ಯಾವ ರೀತಿಯ ಯೋಜನೆ ಸಿದ್ಧಪಡಿಸಿಕೊಳ್ಳುತ್ತದೆ ಎಂಬುದು ಯಕ್ಷ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT