ಮಳೆಗೆ ಮೈದುಂಬಿಕೊಂಡ ಮಜ್ಜೂರು ಕೆರೆ

7
ಶಿರಹಟ್ಟಿ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆ; ಅನ್ನದಾತರ ಮುಖದಲ್ಲಿ ಸಂಭ್ರಮ

ಮಳೆಗೆ ಮೈದುಂಬಿಕೊಂಡ ಮಜ್ಜೂರು ಕೆರೆ

Published:
Updated:

ಶಿರಹಟ್ಟಿ: ಕಳೆದ ಮೂರು ವಾರಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಮಜ್ಜೂರು, ಹೊಸಳ್ಳಿ, ಶೆಟ್ಟಿಕೇರಿ, ಮಾಗಡಿ ಗ್ರಾಮಗಳ ಪ್ರಮುಖ ಕೆರೆಗಳು, ಚೆಕ್‌ಡ್ಯಾಂಗಳು ಬಹುತೇಕ ಭರ್ತಿಯಾಗಿವೆ.

ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದ ಮಜ್ಜೂರು ಕೆರೆ ತಿಂಗಳ ಹಿಂದಿನವರೆಗೆ ನೀರು ಬತ್ತಿ, ಬರಡಾಗಿ ಕಾಣುತ್ತಿತ್ತು. ಇದೀಗ ಮಳೆಯಿಂದ, ಹಳ್ಳಗಳ ಮೂಲಕ ಹರಿದು ಬಂದ ನೀರು ಕೆರೆಯ ಒಡಲು ತುಂಬಿದೆ. ಕೆರೆ ಮೈದುಂಬಿಕೊಂಡಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ತಣಿಸಿದೆ. ಈ ಕೆರೆಯ ನೀರನ್ನು ಬಳಸಿಕೊಂಡು ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ತೆಗೆಯುತ್ತಾರೆ. ಕೆರೆ ತುಂಬಿರುವುದರಿಂದ ಗ್ರಾಮದಲ್ಲಿ ಮುಖದಲ್ಲಿ ಸಂಭ್ರಮ ಮೂಡಿದೆ.

ಮಜ್ಜೂರು, ಮಜ್ಜೂರು ತಾಂಡಾ, ತೆಗ್ಗಿನಭಾವನೂರ, ನವೆಭಾವನೂರ, ಕುಸಲಾಪೂರ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಈ ಕೆರೆ ಭರ್ತಿಯಾಗಲು,ಮಳೆಯಾದರೆ ಇನ್ನು ಕೆಲವೇ ದಿನಗಳು ಸಾಕು. ‘ಇನ್ನೆರಡು ದೊಡ್ಡ ಮಳೆಗೆ ಕೆರೆ ಭರ್ತಿಯಾಗುವ ಸಂಭವವಿದೆ’ ಎಂದು ಗ್ರಾಮದ ರೈತರಾದ ಶಿವನಗೌಡ ಪಾಟೀಲ ಹಾಗೂ ಕುಮಾರ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.

175 ಎಕರೆ ವಿಸ್ತೀರ್ಣದ ಈ ಕೆರೆ ಭರ್ತಿಯಾದರೆ ಸುತ್ತಮುತ್ತಲಿನ 1780 ಎಕರೆ ಪ್ರದೇಶಕ್ಕೆ ಕೃಷಿಗೆ ನೀರು ಲಭ್ಯವಾಗಲಿದೆ.

ಮಾಗಡಿ ಕೆರೆಯೂ ಭರ್ತಿ

ಗದಗ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮ ಮಾಗಡಿ ಕೆರೆ ಸಹ ಭರ್ತಿಯಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿದೆ. ಅಂತರ್ಜಲ ಮಟ್ಟವೂ ಹೆಚ್ಚಿದ್ದು, ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಹರಿಯುತ್ತಿದೆ.

ಈ ಕೆರೆಯ ಪುನಶ್ಚೇತನ ಆಗಬೇಕಿದ್ದು, ಕೆರೆ ಸುತ್ತಮುತ್ತ ಅರಣ್ಯ ಇಲಾಖೆ ಸಸಿಗಳನ್ನು ನೆಟ್ಟು ಪ್ರವಾಸಿಗರನ್ನು ಹಾಗೂ ಪಕ್ಷಿಗಳನ್ನು ಆಕರ್ಷಿಸುವ ಕೆಲಸ ಮಾಡಬೇಕಿದೆ.

ಹೊಸಳ್ಳಿ ಹಾಗೂ ಶೆಟ್ಟಿಕೇರಿ ಕೆರೆಗಳು ಸಹ ಬಹುತೇಕ ತುಂಬಿವೆ. ಕಪ್ಪತ್ತಗುಡ್ಡದಲ್ಲಿ ಅರಣ್ಯ ಇಲಾಖೆ ತಡೆಗೋಡೆ ನಿರ್ಮಿಸಿದ್ದು, ನೀರಿಂಗಿಸುವ ಕೆಲಸ ಮಾಡಿದೆ. ತಾಲ್ಲೂಕಿನ ಹಲವೆಡೆ ಚೆಕ್‌ ಡ್ಯಾಮ್‌ಗಳು ಭರ್ತಿಯಾಗಿದ್ದು, ರೈತರಿಗೆ ವರದಾನವಾಗಿದೆ.

ಮಂಜುನಾಥ ಆರಪಲ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry