ಪೆಲೆಯ ಲೀಲೆ; ಮುಲ್ಲರ್ ದಾಖಲೆ

7

ಪೆಲೆಯ ಲೀಲೆ; ಮುಲ್ಲರ್ ದಾಖಲೆ

Published:
Updated:

ಡೀಗೊ ಮರಡೋನಾ

ವಿಶ್ವದ ಪ್ರಸಿದ್ಧ ಫುಟ್‌ಬಾಲ್ ಆಟಗಾರರ ಬಗ್ಗೆ ಮಾತನಾಡುವಾಗ ಡೀಗೊ ಮರಡೋನಾ ಅವರನ್ನು ನೆನೆಯದೇ ಇರಲು ಸಾಧ್ಯವಿಲ್ಲ. ಆಕ್ರಮಣಕಾರಿ ಮಿಡ್‌ಫೀಲ್ಡರ್‌ ಆಗಿದ್ದ ಅವರು ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಈ ಪೈಕಿ ಒಂದು ಬಾರಿ ಪ್ರಶಸ್ತಿ ಗೆದ್ದ ತಂಡದಲ್ಲೂ ಒಂದು ಬಾರಿ ರನ್ನರ್ ಅಪ್ ತಂಡದಲ್ಲೂ ಇದ್ದರು. ಎರಡು ಬಾರಿ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

1986ರಲ್ಲಿ ಅರ್ಜೆಂಟೀನಾ ತಂಡ ಮರಡೋನಾ ಅವರ ನಾಯಕತ್ವದಲ್ಲೇ ಪ್ರಶಸ್ತಿ ಗೆದ್ದಿತ್ತು. ಅತ್ಯಂತ ನಾಜೂಕಿನ ಆಟಗಾರ ಎಂದೆನಿಸಿಕೊಂಡಿರುವ ಮರಡೋನಾ ಚೆಂಡನ್ನು ಡ್ರಿಬ್ಲಿಂಗ್ ಮಾಡು ವುದರಲ್ಲಿ ನಿಪುಣರು. ನಿಖರ ಪಾಸಿಂಗ್‌ ಮೂಲಕ ಚೆಂಡನ್ನು ಗುರಿಯೆಡೆಗೆ ಸಾಗಿಸುವ ಅವರ ‘ಕಲೆ’ ನೋಡಲು ಚಂದ. ‘ರಬೋನಾ’ ಎಂದು ಕರೆಯಲಾಗುವ ಹಿಮ್ಮುಖ ಕ್ರಾಸ್ ಪಾಸ್‌ ಅವರಿಗೆ ಹೆಚ್ಚು ಖ್ಯಾತಿ ಗಳಿಸಿಕೊಟ್ಟ ಶೈಲಿಯಾಗಿದೆ. 1986ರ ವಿಶ್ವಕಪ್‌ನ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಕೈಯಲ್ಲಿ ಗೋಲು ಗಳಿಸಿದ್ದು ಇಂದಿಗೂ ‘ದೇವರ ಕೈ’ ಎಂಬ ಹೆಸರಿನಲ್ಲಿ ಉಳಿದಿದೆ.

*ಕಾಕಾ

ಕ್ಲಬ್ ಟೂರ್ನಿಗಳಲ್ಲಿ ಅತ್ಯಪೂರ್ವ ಸಾಧನೆಗಳನ್ನು ಮಾಡಿರುವ ಬ್ರೆಜಿಲ್‌ನ ಕಾಕಾ ಮೂರು ಬಾರಿ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಲ್ಗೊಂಡಿ ದ್ದಾರೆ. 2002ರಲ್ಲಿ ಚೊಚ್ಚಲ ಟೂರ್ನಿಯಲ್ಲೇ ತಂಡಕ್ಕೆ ಪ್ರಶಸ್ತಿ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತಂಡಕ್ಕಾಗಿ ನೀಡಿದ ಕಾಣಿಕೆ ಅಪಾರ. ಒಟ್ಟು 27 ಅರ್ಹತಾ ಪಂದ್ಯಗಳನ್ನು ಆಡಿರುವ ಅವರು 10 ಗೋಲು ಗಳಿಸಿದ್ದಾರೆ.

ಫಿಫಾ ಆಯೋಜಿಸುವ ವಿವಿಧ ಟೂರ್ನಿಗಳಲ್ಲಿ 54 ಬಾರಿ ಕಣಕ್ಕೆ ಇಳಿದಿರುವ ಕಾಕಾ 16 ಗೋಲು ಗಳಿಸಿದ್ದಾರೆ. 38 ಪಂದ್ಯಗಳಲ್ಲಿ ಬ್ರೆಜಿಲ್‌ನ ಗೆಲುವಿಗೆ ಕಾರಣರಾಗಿದ್ದಾರೆ. ಆಕ್ರಮಣಕಾರಿ ಮಿಡ್‌ಫೀಲ್ಡರ್ ಆಗಿರುವ ಈ ಆಟಗಾರ ವಿವಿಧ ಕ್ಲಬ್‌ಗಳ ಪರವಾಗಿ ಒಟ್ಟು 461 ಪಂದ್ಯಗಳನ್ನು ಆಡಿದ್ದು 149 ಗೋಲು ಗಳಿಸಿದ್ದಾರೆ. ವಿಶ್ವದ ಅತಿ ವೇಗದ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗುವ ಕಾಕಾ ಎದುರಾಳಿ ರಕ್ಷಣಾ ಕೋಟೆಯೊಳಗೆ ನುಗ್ಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದರಲ್ಲಿ ನಿಪುಣರು.

*ಪೆಲೆ

ಬ್ರೆಜಿಲ್‌ನ ಫುಟ್‌ಬಾಲ್‌ ಎಂದಾಕ್ಷಣ ಕಣ್ಣ ಮುಂದೆ ಬಂದು ನಿಲ್ಲುವ ಹೆಸರು ಪೆಲೆ. ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ ಪೆಲೆ ಮೂರು ಬಾರಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಏಕೈಕ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಬ್ರೆಜಿಲ್‌ ಪರ ಒಟ್ಟು 92 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 77 ಗೋಲು ಬಾರಿಸಿ ಈ ದೇಶದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ.

ವಿಶ್ವಕಪ್ ಟೂರ್ನಿಯೊಂದರ ಫೈನಲ್‌ನಲ್ಲಿ ಆಡಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ಫಾರ್ವರ್ಡ್‌ ಮತ್ತು ಆಕ್ರಮಣಕಾರಿ ಮಿಡ್‌ಫೀಲ್ಡರ್ ಆಗಿದ್ದರು ಅವರು. ಎದುರಾಳಿ ತಂಡದ ಆಟಗಾರರ ಕಣ್ತಪ್ಪಿಸಿ ಚೆಂಡನ್ನು ಮುನ್ನುಗ್ಗಿಸುವ ಮತ್ತು ನಿಖರವಾಗಿ ಗುರಿ ಮುಟ್ಟಿಸುವ ಅವರ ಕಲೆಯನ್ನು ಆಸ್ವಾದಿಸುವುದಕ್ಕೆಂದೇ ಕ್ರೀಡಾಂಗಣಕ್ಕೆ ಲಗ್ಗೆ ಇರಿಸುತ್ತಿದ್ದ ಪ್ರೇಕ್ಷಕರು ಸಾಕಷ್ಟು ಇದ್ದರು. ಇತ್ತೀಚೆಗೆ ಮೂರನೇ ಮದುವೆಯಾಗಿ ಅವರು ಸುದ್ದಿ ಮಾಡಿದ್ದರು.

*

ರೊನಾಲ್ಡಿನೊ

28 ವರ್ಷಗಳ ಕಾಲ ಫುಟ್‌ಬಾಲ್ ಅಂಗಣದಲ್ಲಿ ಮೆರೆದ ಬ್ರೆಜಿಲ್‌ನ ರೊನಾಲ್ಡಿನೊ ವಿಶ್ವಕಪ್‌ನಲ್ಲಿ ಆಡಿದ್ದು ಕಡಿಮೆ; ಗಳಿಸಿದ ಗೋಲುಗಳ ಸಂಖ್ಯೆಯೂ ದೊಡ್ಡದಲ್ಲ. ಆದರೆ ಫುಟ್‌ಬಾಲ್ ಜಗತ್ತು ಅವರ ಆಟವನ್ನು ಸವಿ ಯಲು ಮುಗಿ ಬೀಳುತ್ತಿತ್ತು. 2002ರಲ್ಲಿ ಮೊದಲ ವಿಶ್ವಕಪ್ ಆಡಿದ ಅವರು ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳಲ್ಲಿ ಕಣಕ್ಕೆ ಇಳಿದು ತಂಡಕ್ಕೆ ದಾಖಲೆಯ ಐದನೇ ವಿಶ್ವಕಪ್ ಕಿರೀಟ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೊನಾಲ್ಡೊ ಮತ್ತು ರಿವಾಲ್ಡೊ ಅವರನ್ನು ಒಳಗೊಂಡ ಫಾರ್ವರ್ಡ್ ವಿಭಾಗವನ್ನು ಕಟ್ಟಿ ಹಾಕಲು ಈ ಟೂರ್ನಿಯಲ್ಲಿ ಕೆಲವು ತಂಡಗಳು ಹರಸಾಹಸಪಟ್ಟಿದ್ದವು. ಆದರೆ 2006ರ ಟೂರ್ನಿಯಲ್ಲಿ ಅವರು ನಿರಾಸೆಗೆ ಒಳಗಾಗಿದ್ದರು. 2010 ಮತ್ತು 2014ರ ವಿಶ್ವಕಪ್‌ನಲ್ಲಿ ಆಡುವ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲೂ ವಿಫಲರಾಗಿದ್ದರು. ಅಂಗಣದ ಎರಡೂ ಬದಿಯಲ್ಲಿ ಚೆಂಡನ್ನು ನಿಯಂತ್ರಿಸಿ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವ ರೊನಾಲ್ಡಿನೊ 97 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 33 ಗೋಲು ಗಳಿಸಿ ಮಿಂಚಿದ್ದಾರೆ.

*ಜಿನೆದಿನ್ ಜಿದಾನ್

ಜರ್ಮನಿಯ ಬರ್ಲಿನ್‌ನಲ್ಲಿ 2006ರ ಜುಲೈ ಒಂಬತ್ತರ ರಾತ್ರಿ ನಡೆದ ಆ ಘಟನೆ ಫುಟ್‌ಬಾಲ್ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ವಿಶ್ವಕಪ್‌ ಫೈನಲ್‌ನಲ್ಲಿ ಎದುರಾಳಿ ತಂಡದ ಆಟಗಾರನ ಎದೆಗೆ ಫ್ರಾನ್ಸ್‌ನ ಜಿನೆದಿನ್ ಜಿದಾನ್ ಡಿಚ್ಚಿ ಹೊಡೆದ ಆ ಪ್ರಸಂಗ ವಿಶ್ವ ವಿಖ್ಯಾತ ಆಟಗಾರನ ವಿರುದ್ಧ ಜಗತ್ತೇ ಕೆಟ್ಟ ನುಡಿಗಳನ್ನಾಡುವಂತೆ ಮಾಡಿತ್ತು. ಈ ಟೂರ್ನಿಯೊಂದಿಗೆ ನಿವೃತ್ತರಾಗಲು ಸಜ್ಜಾಗಿದ್ದ ಅವರಿಗೆ ಫುಟ್‌ಬಾಲ್ ಪ್ರಿಯರು ‘ಕಹಿ ನುಡಿಯ’ ವಿದಾಯ ಹೇಳಿದ್ದರು.

ಇದೊಂದು ಕೆಟ್ಟ ಘಟನೆ ಬಿಟ್ಟರೆ ಜಿದಾನ್‌ ವೃತ್ತಿ ಜೀವನ ಪೂರ್ತಿ ಸಂಭ್ರಮ, ಉಲ್ಲಾಸದಿಂದ ಕೂಡಿತ್ತು. 17ನೇ ವಯಸ್ಸಿನಲ್ಲಿ ಫುಟ್‌ಬಾಲ್ ಅಂಗಣಕ್ಕೆ ಇಳಿದ ಜಿದಾವ್ 1998ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು. ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದ ಆಕ್ರಮಣ ಕಾರಿ ಮಿಡ್‌ಫೀಲ್ಡರ್‌ ಒಂದು ಬಾರಿ ವಿಶ್ವಕಪ್‌ ಗೆದ್ದ ತಂಡದಲ್ಲಿ ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ 108 ಪಂದ್ಯಗಳನ್ನು ಆಡಿರುವ ಅವರು 31 ಗೋಲುಗಳ ಕಾಣಿಕೆ ನೀಡಿದ್ದಾರೆ. ರಿಯಲ್ ಮ್ಯಾಡ್ರಿಡ್‌ ತಂಡದ ಕೋಚ್ ಆಗಿದ್ದ ಅವರು ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿಕೊಟ್ಟು ಈಚೆಗೆ ನಿವೃತ್ತರಾಗಿದ್ದಾರೆ.

ವೇಯ್ನ್ ರೂನಿ

ಈ ಅದ್ಭುತ ಆಟಗಾರ ವಿಶ್ವ ಫುಟ್‌ಬಾಲ್‌ನಲ್ಲಿ ಮಿನುಗು ತಾರೆ. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು ರಾಷ್ಟ್ರೀಯ ತಂಡದ ಇತರ ಪಂದ್ಯಗಳಲ್ಲಿ ಅವರು ತೋರಿದ ಸಾಮರ್ಥ್ಯವೇ ಈ ಖ್ಯಾತಿಗೆ ಕಾರಣ. ಫಾರ್ವರ್ಡ್ ಆಟಗಾರ ಆಗಿರುವ ರೂನಿ ಒಟ್ಟು 119 ಪಂದ್ಯಗಳಲ್ಲಿ ಇಂಗ್ಲೆಂಡ್ ಪರವಾಗಿ ಆಡಿದ್ದು 53 ಗೋಲು ಗಳಿಸಿ ಮಿಂಚಿದ್ದಾರೆ. ಅಪಾರ ಕೌಶಲ ಹೊಂದಿರುವ ರೂನಿ, ಅಂಗಣದಲ್ಲಿ ತೋರುವ ತಂತ್ರಗಳು ಅಪೂರ್ವ. ಗಾಳಿಯಲ್ಲಿ ಜಿಗಿದು ಚೆಂಡನ್ನು ವಶಕ್ಕೆ ಪಡೆಯುವ ಅವರ ಶೈಲಿ ಮನಮೋಹಕ. ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಆಪದ್ಬಾಂಧವನಂತೆ ಕಾರ್ಯನಿರ್ವಹಿಸಿದ್ದು ಒಟ್ಟು 26 ಪಂದ್ಯಗಳಲ್ಲಿ 16 ಗೋಲು ಗಳಿಸಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡುವ ಸಾಧ್ಯತೆ ಇದೆ.

ಡೇವಿಡ್ ಬೆಕೆಂ

ಮೈ ತುಂಬ ಟ್ಯಾಟೂಗಳ ವಿನ್ಯಾಸ ಹಾಕಿಸಿಕೊಂಡು ಅಂಗಣಕ್ಕೆ ಇಳಿಯುತ್ತಿದ್ದ ಡೇವಿಡ್ ಬೆಕೆಂ ಒಂದು ಕಾಲದಲ್ಲಿ ಇಂಗ್ಲೆಂಡ್ ತಂಡದ ಆಪದ್ಬಾಂಧವ ಆಗಿದ್ದವರು. ಪಾಸಿಂಗ್‌, ಕ್ರಾಸಿಂಗ್ ಮತ್ತು ಫ್ರೀ ಕಿಕ್‌ಗಳಲ್ಲಿ ನೈಪುಣ್ಯ ಹೊಂದಿದ್ದ ಅವರು ಕ್ಲಬ್ ಮಟ್ಟದ ಪಂದ್ಯಗಳಲ್ಲಿ ಮಿಂಚು ಹರಿಸಿ ರಾಷ್ಟ್ರೀಯ ತಂಡದಲ್ಲಿ ಅಭಿ ಮಾನಿಗಳನ್ನು ರೋಮಾಂಚ ನಗೊ ಳಿಸಿದವರು. ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ದಾಗ ಅವರ ವಯಸ್ಸು 21 ವರ್ಷ.

ಆರು ವರ್ಷ ನಾಯಕರಾಗಿ 58 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮೂರು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡ ಸಾಧನೆಯನ್ನೂ ಮಾಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ರಿಯಲ್ ಮ್ಯಾಡ್ರಿಡ್‌ ತಂಡಗಳಲ್ಲಿ ಅವರು ಗಳಿಸಿದ ಖ್ಯಾತಿ ಅಪಾರ. ಅಂಗಣದ ಆಚೆ ಸಾಮಾಜಿಕ ಕಾರ್ಯಗಳಲ್ಲೂ ಡೇವಿಡ್‌ ಬೆಕೆಂ ಹೆಸರು ಮಾಡಿದ್ದಾರೆ. ಫುಟ್‌ಬಾಲ್ ಅಕಾಡೆಮಿಯೊಂದನ್ನು ಸ್ಥಾಪಿಸಿ ತರಬೇತಿಯನ್ನೂ ನೀಡುತ್ತಿದ್ದಾರೆ.

*ಗರ್ಡ್‌ ಮುಲ್ಲರ್‌ 

ಆಡಿದ ಪಂದ್ಯಗಳ ಸಂಖ್ಯೆಗಿಂತ ಗಳಿಸಿದ ಗೋಲುಗಳ ಸಂಖ್ಯೆ ಹೆಚ್ಚು ಇರುವ ಅಪರೂಪದ ಆಟಗಾರ, ಜರ್ಮನಿಯ ಗರ್ಡ್‌ ಮುಲ್ಲರ್‌. ರಾಷ್ಟ್ರೀಯ ತಂಡಕ್ಕಾಗಿ 62 ಪಂದ್ಯಗಳನ್ನು ಆಡಿರುವ ಅವರು ಒಟ್ಟು 68 ಗೋಲು ಗಳಿಸಿದ್ದಾರೆ. ವಿವಿಧ ಕ್ಲಬ್‌ಗಳ ಪರವಾಗಿ 555 ಪಂದ್ಯ ಆಡಿದ್ದು 487 ಗೋಲುಗಳ ಅಪೂರ್ವ ಸಾಧನೆ ಮಾಡಿದ್ದಾರೆ. ಹೆಚ್ಚು ಎತ್ತರವಿಲ್ಲದ, ವೇಗದ ಡ್ರಿಬ್ಲಿಂಗ್‌ ಮಾಡದ ಈ ಸ್ಟ್ರೈಕರ್‌ ಚುರುಕಿನ ಆಟಕ್ಕೆ ಹೆಸರುವಾಸಿ. ವಿಶ್ವಕಪ್‌ನಲ್ಲಿ ಅವರು ಪ್ರತಿನಿಧಿಸಿದ 13 ಪಂದ್ಯಗಳ ಪೈಕಿ 11ರಲ್ಲಿ ಜರ್ಮನಿ ಗೆದ್ದಿದೆ. 1974ರಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲೂ ಅವರು ಇದ್ದರು.

ಈ ಟೂರ್ನಿಯ ಫೈನಲ್‌ನ 43ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದುಕೊಟ್ಟು ಅವರು ಜರ್ಮನಿ ಅಭಿಮಾನಿಗಳ ಕಣ್ಮಣಿಯಾಗಿದ್ದರು. ಜರ್ಮನಿಯ ‘ಬಾಂಬರ್‌’ ಎಂದೇ ಕರೆಯಲಾಗುವ ಅವರು ಕ್ಲಬ್‌ ಫುಟ್‌ಬಾಲ್‌ನಲ್ಲಿ ಮ್ಯೂನಿಚ್ ಪರ ದಾಖಲೆ ಸಂಖ್ಯೆಯ ಗೋಲು ಗಳಿಸಿದ್ದಾರೆ. ಯುರೋಪಿಯನ್‌ ಕ್ಲಬ್ ಪಂದ್ಯಗಳಲ್ಲೂ ಗೋಲು ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ಫುಟ್‌ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅವರು ಈಗ 12ನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry