‘ಹಾವೇರಿ ಗೋಲಿಬಾರ್’ಗೆ 10 ವರ್ಷ

7
‘ರೈತ ಹುತಾತ್ಮ ದಿನ’ ಆಚರಣೆ; ಇಂದಿಗೂ ಸುಧಾರಿಸದ ಸಂತ್ರಸ್ತರ ಜೀವನ

‘ಹಾವೇರಿ ಗೋಲಿಬಾರ್’ಗೆ 10 ವರ್ಷ

Published:
Updated:

ಹಾವೇರಿ: ಜೂನ್‌ನಲ್ಲಿ ಮುಂಗಾರು ಶುರುವಾಗಿ ಇಳೆ ಹದಗೊಂಡಾಗ, ರೈತಾಪಿ ವರ್ಗವೆಲ್ಲ ಸಂಭ್ರಮದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತದೆ. ಆದರೆ, ಜಿಲ್ಲೆಯ ರೈತರಿಗೆ ಮಾತ್ರ ಪ್ರತಿ ಮುಂಗಾರಿನ ಮೋಡದೊಂದಿಗೆ ಗೋಲಿಬಾರ್‌ನ ಕಹಿ ನೆನಪುಗಳು ಕಾಡುತ್ತವೆ.

2008ರ ಜೂನ್ 10ರಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದ ‘ಗೋಲಿಬಾರ್’ನಿಂದಾಗಿ, ಅವರೆದೆಯಲ್ಲಿ ಆಗಿರುವ ಗಾಯಗಳು ಇನ್ನೂ ವಾಸಿಯಾಗಿಲ್ಲ.

ಬೀಜ ಮತ್ತು ರಸಗೊಬ್ಬರ ನೀಡುವಂತೆ ಆಗ್ರಹಿಸಿ ಅಂದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ‘ಗೋಲಿಬಾರ್’ ನಡೆದಿತ್ತು. ಈ ಘಟನೆಯಲ್ಲಿ ಸಿದ್ಧಲಿಂಗಪ್ಪ ಚನ್ನಬಸಪ್ಪ ಚೂರಿ ಹಾಗೂ ಪುಟ್ಟಪ್ಪ ಹೇಮಪ್ಪ ಹೊನ್ನತ್ತಿ ಮೃತಪಟ್ಟಿದ್ದರು. ಇತರ 9 ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದ ನೋವು ಒಂದು ಬಗೆಯದಾದರೆ, ಗುಂಡೇಟಿನಿಂದ ಗಾಯಗೊಂಡವರ  ಬದುಕಿನ ಸಂಕಟವೇ ಮತ್ತೊಂದು ಬಗೆಯದು.

ಅಪ್ಪನನ್ನು ಕಳೆದುಕೊಂಡಾಗ 11 ವರ್ಷದ ಬಾಲಕನಿದ್ದ ಕಿರಣ್‌ ಚೂರಿ ಈಗ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ. ‘ಆಗ ಅಪ್ಪನನ್ನು ಕಳೆದುಕೊಂಡಿದ್ದಕ್ಕೆ ನೋವಾಗಿತ್ತು. ಈಗ ರೈತರ ಸಂಕಷ್ಟ ಹಾಗೂ ಅವರನ್ನು ಕಳೆದುಕೊಳ್ಳುವ ನೋವೂ ತಿಳಿಯುತ್ತಿದೆ’ ಎನ್ನುತ್ತಾರೆ ಅವರು.

ಸಿದ್ಧಲಿಂಗಪ್ಪ ಅವರ ಪತ್ನಿ ಕುಸುಮಾ, ಪತಿಯನ್ನು ಕಳೆದುಕೊಂಡ ಆ ದಿನವನ್ನು ಹಾಗೂ ಎದುರಿಸಿದ ಸಂಕಟವನ್ನು ಹೀಗೆ ಬಿಚ್ಚಿಡುತ್ತಾರೆ. ‘ಆಗ ಮಗ 11 ವರ್ಷದವನಿದ್ದ. ಮಗಳು 9 ವರ್ಷದವಳಿದ್ದಳು. ಎರಡು ಮಕ್ಕಳನ್ನು ಕಟ್ಟಿಕೊಂಡು ಸಮಾಜದಲ್ಲಿ ಕಷ್ಟ– ನೋವುಗಳನ್ನು ನುಂಗಿಕೊಂಡು ಬದುಕಿದ್ದೇನೆ. ಅವರನ್ನು (ಸಿದ್ಧಲಿಂಗಪ್ಪ) ನಮ್ಮಿಂದ ಕಿತ್ತುಕೊಂಡರು. ಆದರೆ, ಮಕ್ಕಳಿಗೆ ಶಿಕ್ಷಣ ಕೊಟ್ಟು ಬೆಳೆಸಬೇಕು ಎಂಬ  ಏಕೈಕ ಗುರಿಯಿಂದ ಜೀವನ ಸಾಗಿಸುತ್ತಿದ್ದೇನೆ’ ಎಂದು ಮೌನಕ್ಕೆ ಜಾರಿದರು.

ಪತಿಯ ಸಾವಿನ ನಂತರ ಸರ್ಕಾರದಿಂದ ಸಿ ದರ್ಜೆ ನೌಕರಿ ಸಿಕ್ಕಿದ್ದು, ಈಗ ಹಿರೇಕೆರೂರ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ವರ್ಗವಾಗಿದೆ. ಮಗಳ ವಿದ್ಯಾಭ್ಯಾಸಕ್ಕಾಗಿ ಹಾವೇರಿಯಲ್ಲೇ ಇದ್ದು, ಪ್ರತಿನಿತ್ಯ ಓಡಾಡುತ್ತಿದ್ದಾರೆ.

ಇನ್ನು, ಆ ದಿನವನ್ನು ನೆನಪು ಮಾಡಿಕೊಳ್ಳಲೂ ಹೆದರುತ್ತಾರೆ ರೈತ ಪುಟ್ಟಪ್ಪ ಹೊನ್ನತ್ತಿ ಅವರ ಪತ್ನಿ ಕರಬಸಮ್ಮ. ಸರ್ಕಾರ ನೀಡಿರುವ ಸೌಲಭ್ಯಗಳಾಚೆ ಅವರಿಗೆ ಬದುಕಿಲ್ಲ ಎಂಬ ಕೊರಗಿದೆ.

ಅವರಿಗೆ ಸರ್ಕಾರಿ ಶಾಲೆಯೊಂದರಲ್ಲಿ ಡಿ ದರ್ಜೆಯ ಕೆಲಸ ಸಿಕ್ಕಿದೆ. ಮೂವರು ಮಕ್ಕಳಿಗೆ ಸರ್ಕಾರದ ವತಿಯಿಂದ ಇಲ್ಲಿಯವರೆಗೆ ಉಚಿತ ಶಿಕ್ಷಣ ಸಿಕ್ಕಿದೆ. ಆದರೆ, ಇತ್ತೀಚೆಗೆ ಅವರ ದೊಡ್ಡ ಮಗಳನ್ನು ಖಾಸಗಿ ಶಾಲೆಯಲ್ಲಿ ಸೇರಿಸಲು ಹೋದಾಗ, ಅವರು ಕೇಳಿದ ಡೋನೇಶನ್‌ ನೀಡಲಾಗಲಿಲ್ಲ ಎಂಬ ನೋವಿದೆ.

ಮಾಸದ ಗುಂಡೇಟು: ಗಾಯಗೊಂಡವರ ಪೈಕಿ ಭುಜಕ್ಕೆ ಗುಂಡೇಟು ತಗುಲಿದ ಆಲದಕಟ್ಟಿಯ ರಜಾಕ್ ಮೊಹಿಯುದ್ದೀನ್ ಕಲಕೋಟಿ ಬದುಕು ಇನ್ನೂ ಸುಧಾರಿಸಿಲ್ಲ.

‘ನಾನು ಹಮಾಲಿಗಾಗಿ ಎತ್ತಿನ ಬಂಡಿ ಕಟ್ಟಿಕೊಂಡು ಬಂದಿದ್ದೆ. ಗುಂಡು ನನ್ನ ಭುಜಕ್ಕೆ ಬಿತ್ತು. ಆ ಬಳಿಕ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಾನು ಬದುಕಿದ್ದೇ ತಪ್ಪಾಯಿತೇ?’ ಎಂದು ನೋವು ತೋಡಿಕೊಂಡರು.

‘ಘಟನೆಯ ಬಳಿಕ ಕೆಲವರು ಬಂದು ಆರ್ಥಿಕ ಸಹಾಯ ನೀಡಿದರು. ಆದರೆ, ಅದು ನನ್ನ ವೈದ್ಯಕೀಯ ವೆಚ್ಚಕ್ಕೂ ಸಾಲಲಿಲ್ಲ. ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಅವರ ಶಿಕ್ಷಣ, ಮನೆ ಖರ್ಚುಗಳನ್ನು ಪತ್ನಿಯೇ ದುಡಿದು ನಿರ್ವಹಿಸಬೇಕಾಗಿದೆ. ಸಣ್ಣದೊಂದು ಸರ್ಕಾರಿ ಕೆಲಸ ಕೊಡಿ ಎಂದು ಪರಿಪರಿಯಾಗಿ ಮನವಿ ಮಾಡಿದೆ. ಯಾರೂ ಸ್ಪಂದಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ರಜಾಕ್‌.

‘ನಾವು ಒಂಬತ್ತು ಮಂದಿ, ಗುಂಡೇಟು ಬಿದ್ದರೂ ಬದುಕಿ ಉಳಿದಿದ್ದೆವು. ಈ ಪೈಕಿ ವರದಾಹಳ್ಳಿಯ ಯಲ್ಲಪ್ಪ ತಂಬಳ್ಳಿ, ಬಳಿಕ ನಿಧನರಾಗಿದ್ದಾರೆ. ಉಳಿದವರ ಬದುಕು ಕಷ್ಟಕರವಾಗಿದೆ’ ಎನ್ನುತ್ತಾರೆ ಹೆಡಿಗ್ಗೊಂಡದ ಮಲ್ಲಪ್ಪ ಸಿದ್ದಪ್ಪ ಬಣಕಾರ.

‘ಆಗ, ವಿವಿಧ ರಾಜಕೀಯ ಮುಖಂಡರು ಆರ್ಥಿಕ ಸಹಾಯ ಮಾಡಿದ್ದರು. ಆದರೆ, ಮಕ್ಕಳ ಶಿಕ್ಷಣದ ಖರ್ಚು, ಅನುಕಂಪದ ಉದ್ಯೋಗ, ನಿವೇಶನ ಮತ್ತಿತರ ಸೌಲಭ್ಯ ನೀಡುವುದಾಗಿ ಹೇಳಿದ ಭರವಸೆಗಳು ಈಡೇರಿಲ್ಲ. ಈಗ, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಬ್ಬರು ಮಕ್ಕಳು ಓದುತ್ತಿದ್ದಾರೆ. ಮನೆ ನಿಭಾಯಿಸುವುದೇ ತ್ರಾಸದಾಯಕವಾಗಿದೆ’ ಎಂದು ಅವರು ನೋವು ಹಂಚಿಕೊಂಡರು.

ಪುತ್ಥಳಿ ಸ್ಥಾಪನೆಗೆ ಒತ್ತಾಯ...

ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚನ್ನಬಸಪ್ಪ ಚೂರಿ ಮತ್ತು ಪುಟ್ಟಪ್ಪ ಹೇಮಪ್ಪ ಹೊನ್ನತ್ತಿ ಅವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸಬೇಕು ಎಂದು ಮೃತಪಟ್ಟ ರೈತರ ಕುಟುಂಬದವರು ಹಾಗೂ ರೈತ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿದ್ದು, ಇದುವರೆಗೂ ಆಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry