ಬುಧವಾರ, ಜುಲೈ 6, 2022
22 °C

ಕಷ್ಟಕೊಟ್ಟ ಕೂದಲಿಗೆ ಎಷ್ಟೊಂದು ಅಭಿಮಾನಿಗಳು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಗುಂ ಗುರು ಕೂದಲಿನಲ್ಲಿ ಒಂದೊಮ್ಮೆ ಹೊಟ್ಟು. ಅದನ್ನು ಕಂಡು ಗೋಳೋ ಎಂದು ಅಳತೊಡಗಿದ ಅನುಪಮಾ ಪರಮೇಶ್ವರನ್ ಸಂಕಷ್ಟ ಪರಿಹರಿಸಿದ್ದು ಅವರ ತಾಯಿ. ಒತ್ತೊತ್ತಾದ ಗುಂಗುರು ಕೂದಲನ್ನು ನಿಭಾಯಿಸುವುದು ಕಷ್ಟವಿತ್ತು. ಮನೆಯಲ್ಲಿ ಸಂಪ್ರದಾಯಸ್ಥರೇ ಹೆಚ್ಚಾಗಿ ಇದ್ದಿದ್ದರಿಂದ ಅದಕ್ಕೆ ಕತ್ತರಿ ಹಾಕಲು ಬಿಡುತ್ತಿರಲಿಲ್ಲ.

ಕೇರಳದ ಇರಿಂಜಲಕುಡ ಬಳಿಯ ಹಳ್ಳಿಯೊಂದರ ಹುಡುಗಿ ಅನುಪಮಾ ಪರಮೇಶ್ವರನ್ ಈಗ ತೆಲುಗಿನ ಮುಂಚೂಣಿ ನಟಿಯರಲ್ಲಿ ಒಬ್ಬರು. ಕೊಟ್ಟಾಯಂನಲ್ಲಿ ಪದವಿ ಓದನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆಲುಗು ಚಿತ್ರರಂಗದತ್ತ ಅವರು ಮುಖಮಾಡಿದ್ದೇ ಬದುಕು ಬದಲಾಯಿತು. ಚಿತ್ರೀಕರಣ ಮುಗಿಸಿ ಮತ್ತೆ ಪದವಿಯನ್ನು ಪೂರೈಸಬೇಕು ಎಂಬ ಬಯಕೆ ಮಾತ್ರ ಹಾಗೆಯೇ ಉಳಿದಿದೆ. ನಾಟಕ, ಸಿನಿಮಾ ಗೀಳು ಹತ್ತಿದ್ದು ಬಾಲ್ಯದಲ್ಲಿ. ಮನೆಯ ಹತ್ತಿರದ ಮಕ್ಕಳೆಲ್ಲ ಸೇರಿ ಪುಟಾಣಿ ರಂಗತಂಡ ಕಟ್ಟಿಕೊಂಡರು.

ಅನುಪಮಾ ವಿವಿಧ ರಸಗಳನ್ನು ಉಕ್ಕಿಸುವ ಪಾತ್ರಗಳಲ್ಲಿ ಅಭಿನಯಿಸಿ ಸಾಣೆಗೆ ಒಡ್ಡಿಕೊಂಡರು. ಸಿನಿಮಾ ನೋಡುವುದು ಕೂಡ ರಂಗಚಟುವಟಿಕೆಯ ಭಾಗವಾಗಿತ್ತು. ನಂತರ ಪಾತ್ರಗಳ ಪೋಷಣೆ, ಅಭಿನಯ, ತಂತ್ರಗಾರಿಕೆ ಕುರಿತು ಎಲ್ಲರೂ ಚರ್ಚಿಸುತ್ತಿದ್ದರು. ಚಿತ್ರಕಥೆಯನ್ನು ಬಿಡಿಸಿ ನೋಡುವುದು ಹೇಗೆ ಎನ್ನುವ ಪಾಠ ಕಲಿತದ್ದೇ ಅಲ್ಲಿ.

ಕಾಲೇಜಿನಲ್ಲಿ ಕಲಿಯುವಾಗ ಸ್ನೇಹಿತೆಯ ಒತ್ತಾಯಕ್ಕೆ ಮಣಿದು ಅನುಪಮಾ ತನ್ನ ಕೆಲವು ಸೆಲ್ಫಿಗಳನ್ನು ‘ಪ್ರೇಮಂ’ ಮಲಯಾಳಂ ಸಿನಿಮಾ ಅವಕಾಶ ಬಯಸಿ ಕಳುಹಿಸಿಕೊಟ್ಟರು. ‘ಹುಚ್ಚು ಹುಚ್ಚು ಮುಖಭಾವಗಳಿರುವ ಸೆಲ್ಫಿಗಳನ್ನು ನೋಡಿ ಯಾರುತಾನೆ ಅವಕಾಶ ಕೊಡುತ್ತಾರೆ?’ ಎಂದುಕೊಂಡು ಸುಮ್ಮನಾಗಿದ್ದರು. ಆದರೆ, ಆ ಸೆಲ್ಫಿಗಳೇ ಅವಕಾಶ ಬಂದು ಮನೆ ಬಾಗಿಲು ಬಡಿಯುವಂತೆ ಮಾಡಿತೆನ್ನುವುದು ಆಮೇಲೆ ತಿಳಿಯಿತು. ಸಿನಿಮಾಗೆ ಅವರು ಆಯ್ಕೆಯಾದರು.

ನೋಡನೋಡುತ್ತಲೇ ಅವರನ್ನು ತೆಲುಗು ಚಿತ್ರರಂಗ ಎಳೆದುಕೊಂಡಿತು. ‘ಅ ಆ’ ಅವರೇ ಡಬ್ ಮಾಡಿ, ನಟಿಸಿದ ಮೊದಲ ತೆಲುಗು ಸಿನಿಮಾ. ‘ಪ್ರೇಮಂ’ ತೆಲುಗಿಗೂ ರೀಮೇಕ್ ಆದದ್ದೇ ಅದರಲ್ಲೂ ನಟಿಸುವ ಅವಕಾಶ ಹುಡುಕಿಕೊಂಡು ಬಂತು. ಒಮ್ಮೆ ಮಾಡಿದ ಪಾತ್ರವನ್ನೇ ಮತ್ತೊಮ್ಮೆ ನಿರ್ವಹಿಸಬೇಕಾದ ಸವಾಲನ್ನು ಸ್ವೀಕರಿಸಿದರು. ಅಷ್ಟೇ ಅಲ್ಲ, ತೆಲುಗು ಚಿತ್ರರಂಗ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು.

ಮೊದಲ ತೆಲುಗು ಸಿನಿಮಾ ತೆರೆಕಂಡ ದಿನ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಯಗಳ ಮಹಾಪೂರ. ಬಂದ ಪ್ರತಿಕ್ರಿಯೆಗಳನ್ನೆಲ್ಲ ಅವರು ಗಮನಿಸುತ್ತಾ ಹೋದಾಗ ಗೊತ್ತಾದದ್ದು-ತಮ್ಮ ಸೌಂದರ್ಯ ಮೆಚ್ಚಿಕೊಂಡ ಬಹುತೇಕರಿಗೆ ಇಷ್ಟವಾಗಿರುವುದು ಗುಂಗುರು ಕೂದಲು. ಒಂದು ಕಾಲದಲ್ಲಿ ಅಮ್ಮ ತಲೆಸ್ನಾನ ಮಾಡಿಸುವಾಗ, ಹೊಟ್ಟು ಬಂದಾಗ, ಶೀತವಾದಾಗ ಯಾವ ಗುಂಗುರು ಕೂದಲನ್ನು ಕತ್ತರಿಸಿಹಾಕಬೇಕು ಎಂದುಕೊಳ್ಳುತ್ತಿದ್ದರೋ ಅದಕ್ಕೆ ಅಷ್ಟೊಂದು ಅಭಿಮಾನಿಗಳಿರುವುದು ಕಂಡು ಅನುಪಮಾಗೆ ಪರಮಾಶ್ಚರ್ಯ.

ಮಗಳ ಸಿನಿಮಾ ಕನಸಿಗೆ ನೀರೆರೆದ ಅಪ್ಪ-ಅಮ್ಮ ಹೈದರಾಬಾದ್ ನಲ್ಲಿ ಅವಳ ಸಿನಿಮಾ ಪಯಣವನ್ನು ತುಸು ದೂರದಿಂದಲೇ ನೋಡಿದರು. ಗೊಂದಲಕ್ಕೀಡಾದಾಗ ತಿದ್ದಿದರು. ಚಿತ್ರಕಥೆಯನ್ನು ಓದಿ, ತನ್ನ ಪಾತ್ರದ ತೂಕ ಅಳೆಯುವುದರಲ್ಲಿ ನಿಸ್ಸೀಮಳೆನಿಸಿದ ಅನುಪಮಾಗೆ ಮೊದಲಿಗೆ ಸಂಭಾವನೆಯ ವಿಷಯ ಮಾತನಾಡಕೂಡದು ಎಂದು ಅಪ್ಪ ಕಿವಿಮಾತು ಹೇಳಿದ್ದರು. ಗ್ಲಾಮರ್ ಗೆ ತನ್ನದೇ ವ್ಯಾಖ್ಯಾನ ನೀಡುವ ಅನುಪಮಾ, ಹೆಚ್ಚಾಗಿ ಸ್ಲೀವ್ ಲೆಸ್ ಉಡುಗೆ ತೊಡಲು ಇಷ್ಟಪಡುವುದಿಲ್ಲ. ಗ್ಲಾಮರ್ ಇರುವುದು ಮುಖದಲ್ಲಿ ಎನ್ನುವುದು ಅವರ ಫ್ಯಾಷನ್ ಸ್ಟೇಟ್ ಮೆಂಟ್.

ಯಾವ ಗುಂಗುರು ಕೂದಲಿನ ಕುರಿತು ಹೇವರಿಕೆ ಇತ್ತೋ ಅದಕ್ಕೀಗ ಕೋಟ್ಯಂತರ ಅಭಿಮಾನಿಗಳಿರುವುದನ್ನು ಓದಿದಾಗಲೆಲ್ಲ ಈ ನಟಿ ತಾಯಿಯ ಕಡೆ ನೋಡುತ್ತಾರೆ. ಅವರು ಕಣ್ಣುಮಿಟುಕಿಸುತ್ತಾರೆ. ಕೂದಲಿನ ಆರೈಕೆಯಲ್ಲಿ ಅವರ ಪಾಲು ಎಂಥದೆನ್ನುವುದು ಇಬ್ಬರಿಗೂ ತಿಳಿದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.