ಬುಧವಾರ, ಜುಲೈ 6, 2022
22 °C

ಪುಸ್ತಕಗಳ ಪಟ್ಟಣ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಒಂದು ಕಟ್ಟಡದಲ್ಲಿ ಪುಸ್ತಕಗಳನ್ನೆಲ್ಲಾ ಕ್ರಮಬದ್ಧವಾಗಿ ಜೋಡಿಸಿ ಇಟ್ಟಿದ್ದರೆ ಅದನ್ನು ಗ್ರಂಥಾಲಯ ಎನ್ನುತ್ತಾರೆ. ಊರೆಲ್ಲಾ ಪುಸ್ತಕಗಳೇ ಇದ್ದರೆ ಅಂತಹ ಊರನ್ನು, ‘ಪುಸ್ತಕಗಳ ಊರು’ ಎಂದು ಕರೆಯಬಹುದು. ಅಂತಹ ಅಪರೂಪದ ಪುಟ್ಟ ಪಟ್ಟಣ ಬ್ರಿಟನ್‌ನ ವೇಲ್ಸ್‌ ದೇಶದಲ್ಲಿದೆ. ಇದರ ಹೆಸರು ಹೇ ಆನ್ ವೇ. ಈ ವಿಶೇಷ ಪಟ್ಟಣದ ಬಗ್ಗೆ ತಿಳಿಯೋಣ.

ಊರಿನೊಳಗೆ ಕಾಲಿಟ್ಟ ಕೂಡಲೇ ಸಾವಿರಾರು ಪುಸ್ತಕಗಳು ಕಣ್ಣಿಗೆ ಬೀಳುತ್ತವೆ. ಎಲ್ಲ ಬೀದಿಗಳಲ್ಲಿ, ದಾರಿಗಳಲ್ಲಿ, ವೃತ್ತಗಳಲ್ಲಿ ಎಲ್ಲಿ ನೋಡಿದರೂ ಪುಸ್ತಕ ಮಾರಾಟ ಮಳಿಗೆಗಳೇ ಇವೆ. ಪ್ರತಿ ಅಂಗಡಿಯಲ್ಲೂ ಸಾವಿರಾರು ಹಳೆಯ ಪುಸ್ತಕಗಳನ್ನು ಜೋಡಿಸಿ ಇಡಲಾಗಿರುತ್ತದೆ.

ಪುಸ್ತಕಗಳನ್ನು ಓದಲು ಮಳಿಗೆಗಳ ಮುಂದೆ ಮೇಜು, ಕುರ್ಚಿಗಳನ್ನೂ ಹಾಕಲಾಗಿರುತ್ತದೆ. ಊರಿನ ತುಂಬಾ ಕಾಣಿಸುವ ಪುಸ್ತಕ ಅಂಗಡಿಗಳನ್ನು ನೋಡಿದರೆ ದೊಡ್ಡ ಗ್ರಂಥಾಲಯದಲ್ಲಿ ಕುಳಿತಿರುವ ಭಾವನೆ ಮೂಡುತ್ತದೆ.

ಇನ್ನೂ ವಿಶೇಷವೆಂದರೆ, ಮನೆಗಳ ಗೋಡೆಗಳಲ್ಲಿ, ಕಿಟಕಿಗಳಲ್ಲಿ ವಿವಿಧ ಆಕಾರಗಳಲ್ಲಿ ಆಕರ್ಷಣೀಯವಾಗಿ ಪುಸ್ತಕಗಳನ್ನು ಜೋಡಿಸಿ ಇಡಲಾಗಿರುತ್ತದೆ. ಇಲ್ಲಿಗೆ ಬರುವ ಸಂದರ್ಶಕರು ತಮ್ಮಿಷ್ಟದ ಪುಸ್ತಕವನ್ನು ಓದಿ, ಅಲ್ಲಿರುವ ‘ಪೇ ಹಿಯರ್’ ಎಂದು ಬರೆದಿರುವ ಡಬ್ಬಿಗಳಲ್ಲಿ ಹಣ ಹಾಕಿ ಹೋಗುತ್ತಾರೆ. ಇಂತಹ ಮಳಿಗೆಗಳನ್ನು ‘ಹಾನೆಸ್ಟಿ ಬುಕ್‌ ಷಾಪ್ಸ್‌’ ಎಂದು ಕರೆಯುತ್ತಾರೆ.

ಪುಸ್ತಕ ಪಟ್ಟಣ ಹೇಗಾಯಿತು?

1961ರಲ್ಲಿ ಪುಟ್ಟ ಪುಸ್ತಕ ಅಂಗಡಿಯೊಂದು ಈ ಗ್ರಾಮದಲ್ಲಿ ಆರಂಭವಾಯಿತು. ಇದರ ಯಶಸ್ಸು ಕಂಡ ಸುತ್ತಮುತ್ತಲಿನ ನಿವಾಸಿಗಳು ಕಂಡ ಕಂಡಲ್ಲಿ ಪುಸ್ತಕ ಮಳಿಗೆಗಳನ್ನು ತೆರೆದರು. ಕಡಿಮೆ ಅವಧಿಯಲ್ಲೇ  ಪುಸ್ತಕ ಪ್ರಿಯರ ಗಮನ ಸೆಳೆದು ‘ಟೌನ್ ಆಫ್ ಬುಕ್ಸ್‌’ ಎಂದು ಖ್ಯಾತಿ ಗಳಿಸಿತು. ಈ ಮೂಲಕ ವಿಶ್ವದ ಮೊದಲ ‘ಬುಕ್ ಟೌನ್’ ಎಂದು ಕರೆಯುವ ಗ್ರಾಮವಾಗಿ ಅವತರಿಸಿದೆ.

ಇಂತಹ ಪುಸ್ತಕ ಗ್ರಾಮ ನಮ್ಮ ದೇಶದಲ್ಲೂ ಇದೆ. ಮಹಾರಾಷ್ಟ್ರದಲ್ಲಿರುವ ಭಿಲಾರ್ ಗ್ರಾಮವನ್ನು, ವಿಲೇಜ್ ಆಫ್‌ ಬುಕ್ಸ್ ಎಂದು ಕರೆಯುತ್ತಾರೆ. ಪುಸ್ತಕಗಳ ಮೌಲ್ಯ ತಿಳಿಸಲು ‘ಹೇ ಆನ್‌ ವೇ’ ಪಟ್ಟಣವನ್ನೇ ಆದರ್ಶವಾಗಿಟ್ಟುಕೊಂಡು ಈ ಗ್ರಾಮವನ್ನು ಪುಸ್ತಕ ಗ್ರಾಮವಾಗಿ ಮಾರ್ಪಡಿಸಲಾಗಿದೆ.

ಪ್ರತಿ ವರ್ಷ ಇಲ್ಲಿ ನಡೆಯುವ ‘ಫೆಸ್ಟಿವಲ್ ಆಫ್ ಲಿಟರೇಚರ್ ಆ್ಯಂಡ್ ಆರ್ಟ್ಸ್‌’ ಉತ್ಸವದಲ್ಲಿ,  ಹಲವು ದೇಶಗಳಿಂದ 80,000ಕ್ಕೂ ಹೆಚ್ಚು ಬರಹಗಾರರು, ಪ್ರಕಾಶಕರು, ಪುಸ್ತಕಪ್ರಿಯರು ಭಾಗವಹಿಸುತ್ತಾರೆ. 1987ರಲ್ಲಿ ಆರಂಭವಾದ ಈ ನುಡಿಜಾತ್ರೆಯನ್ನು ವಿಶ್ವದ ಪ್ರಮುಖ ಅಕ್ಷರ ಉತ್ಸವಗಳಲ್ಲಿ ಒಂದಾಗಿ ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.