ಬುಧವಾರ, ಜುಲೈ 6, 2022
21 °C

ಮನೆಯೊಳಗೆ ಮಾಲಿನ್ಯ ತಪ್ಪಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರಗಿನ ಮಲಿನಗಾಳಿಯಷ್ಟೇ ಮಾನವನ ದೇಹಕ್ಕೆ ವಿಷಕಾರಿಯೆಂದು ನಂಬಿದ್ದರೆ ಅದು ತಪ್ಪು ಕಲ್ಪನೆ. ಮನೆಯೊಳಗಿನ ಸುಗಂಧದ್ರವ್ಯ, ಕ್ಯಾಂಡಲ್‌ಗಳು ಹಾಗೂ ರಗ್ಗು, ಕಾರ್ಪೆಟ್‌ಗಳು ಕೂಡ ಮನೆಯೊಳಗೆ ಮಾಲಿನ್ಯವನ್ನು ಹೆಚ್ಚು ಮಾಡುತ್ತದೆ.

ಮನೆಯೊಳಗೆ ಮಾಲಿನ್ಯವು ಹೊರಗಿನ ವಾಯುಮಾಲಿನ್ಯಕ್ಕಿಂತ ಐದು ಪಟ್ಟು ಹೆಚ್ಚು ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಗೋಡೆಗೆ ಹಚ್ಚಿರುವ ಪೇಂಟ್‌ಗಳು, ಸಾಕುಪ್ರಾಣಿಗಳು, ಔಷಧಿಗಳು, ಅಡುಗೆ ಗ್ಯಾಸ್‌ ಸೇರಿದಂತೆ ಮನೆಯೊಳಗಿನ ಅನೇಕ ವಸ್ತುಗಳು ವಾತಾವರಣವನ್ನು ಕಲುಷಿತ ಮಾಡುತ್ತದೆ. ಈ ಮಾಲಿನ್ಯ ಸಹ ಮಾನವನ ಆರೋಗ್ಯಕ್ಕೆ ಮಾರಕ. ಇದು ಮನುಷ್ಯನ ಅಂಗಗಳಿಗೆ ಹಾಗೂ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಲ್ಲೂ ಶ್ವಾಸಕೋಶದ ಮೇಲೆ ಬೇಗ ಪರಿಣಾಮ ಬೀರುವುದರಿಂದ ಉಸಿರಾಟದ ತೊಂದರೆಗಳು ಕಾಣಿಸಿಕೊಂಡು, ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಮನೆಯೊಳಗಿನ ಮಾಲಿನ್ಯವನ್ನು ಕಡಿಮೆ ಮಾಡಲು ಕೆಲ ಸಲಹೆಗಳು: ‌

ಧೂಪ ಅಥವಾ ಕ್ಯಾಂಡಲ್‌ಗಳನ್ನು ಬಳಸದಿರಿ: ಮನೆಯೊಳಗೆ ಅತಿ ಹೆಚ್ಚು ಸುವಾಸನೆ ಬೀರುವ ಕ್ಯಾಂಡಲ್‌ ಹಾಗೂ ಅಗರಬತ್ತಿಗಳನ್ನು ಬಳಸುವುದನ್ನು ತಪ್ಪಿಸಿ. ಇದರಲ್ಲಿ ಬಳಸಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕರ. ಸುಗಂಧದ್ರವ್ಯಗಳಲ್ಲಿ ಕೆಲ ಆರೋಗ್ಯಕ್ಕೆ ಹಾನಿಯಾಗುವಂತಹ ರಾಸಾಯನಿಕಗಳಿಂದ ಚರ್ಮ ರೋಗದಂತಹ ರೋಗಗಳು ಕಾಣಿಸಿಕೊಳ್ಳಬಹುದು. ಉಸಿರಾಟದ ಸಮಸ್ಯೆಯನ್ನು ತರಬಹುದು.

ಹಸಿರಿಗೆ ಪ್ರಾಶಸ್ತ್ಯ: ಗಿಡಗಳನ್ನು ನೆಚ್ಚಿನ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಗಿಡ ಮನೆಯೊಳಗೆ ಇದ್ದರೆ ಯಥೇಚ್ಛ ಆಮ್ಲಜನಕವನ್ನು ಒದಗಿಸುತ್ತದೆ. ಇವು ಮನೆಯೊಳಗೆ ಇದ್ದರೆ ತಾಜಾ ಗಾಳಿ ಜೊತೆಗೆ ಮನೆಯ ಅಲಂಕಾರವನ್ನೂ ಹೆಚ್ಚು ಮಾಡುತ್ತದೆ.

 ಕಾರ್ಪೆಟ್‌ ಬಳಸದಿರಿ: ಮನೆಯ ಸೌಂದರ್ಯಕ್ಕಾಗಿ ಬಳಸುವ ಕಾರ್ಪೆಟ್‌ಗಳು ಹಾಗೂ ರಗ್ಗುಗಳು ಮನೆಯೊಳಗಿನ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ. ಕಾರ್ಪೆಟ್‌ಗಳಲ್ಲಿ ಸಣ್ಣ ದೂಳಿನ ಕಣಗಳು, ಚೆಲ್ಲಿದ ಆಹಾರ, ಸಾಕು ಪ್ರಾಣಿಗಳ ಕೂದಲುಗಳು, ರೂಮ್‌ಫ್ರೆಶರ್‌ನ ರಾಸಾಯನಿಕ ವಸ್ತುಗಳನ್ನು ಬೇಗ ಹೀರಿಕೊಂಡು ಬಿಡುತ್ತದೆ. ಈ ಕಾರ್ಪೆಟ್‌ ಅಥವಾ ರಗ್ಗುಗಳಲ್ಲಿ ಮಕ್ಕಳು ಆಟವಾಡುವಾಗ ಅದರಲ್ಲಿನ ಕೊಳೆಗಳು ಮಕ್ಕಳ ದೇಹ ಸೇರಬಹುದು.

ಮನೆಯೊಳಗೆ ಧೂಮಪಾನ ಹಾನಿಕಾರಕ: ಧೂಮಪಾನ ಸೇದುವವರ ಮೇಲೆ ಅಷ್ಟೇ ಅಲ್ಲ, ಪಕ್ಕದ ವ್ಯಕ್ತಿಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯೊಳಗೆ ಧೂಮಪಾನ ಮಾಡಲೇಬಾರದು. ಇನ್ನು ಕಲೆವೊಮ್ಮೆ ಮನೆಯೊಳಗೆ ಸಿಗರೇಟ್‌ ಹೊಗೆ ನಿಂತು ಆ ಗಾಳಿಯನ್ನೇ ಮನೆ ಸದಸ್ಯರು ಸೇವಿಸುವಂತಾಗುತ್ತದೆ. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ

ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರಲಿ: ಮನೆಯೊಳಗೆ ಉತ್ತಮ ಗಾಳಿ, ಬೆಳಕಿದ್ದರೆ ಮನೆಯೊಳಗೆ ವಾಯು ಮಾಲಿನ್ಯ ಕಡಿಮೆಯಾಗುವುದು. ಮನೆಯೊಳಗೆ ಗಾಳಿಯಾಡುತ್ತಿದ್ದರೆ, ಕೆಟ್ಟ ವಾಸನೆ ತೊಲಗುತ್ತದೆ.

 ಪ್ಲಾಸ್ಟಿಕ್‌ ನಿಷೇಧಿಸಿ: ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ತುಂಬ ಸಮಯದವರೆಗೆ ಆಹಾರ ಇಟ್ಟರೆ ರಾಸಾಯನಿಕ ಕ್ರಿಯೆ ನಡೆದು, ಅವುಗಳ ಸೇವನೆಯಿಂದ ಆಹಾರ ಕೆಡಬಹುದು. ಕಾಳು, ಅಕ್ಕಿ ತುಂಬಿಸಿಡಲು ಗುಣಮಟ್ಟದ ಪ್ಲಾಸ್ಟಿಕ್‌ ಡಬ್ಬಗಳನ್ನು ಬಳಸಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.