ನಾಟಕೋತ್ಸವಕ್ಕೆ ಎನ್‌ಎಸ್‌ಡಿ ಸಜ್ಜು

7

ನಾಟಕೋತ್ಸವಕ್ಕೆ ಎನ್‌ಎಸ್‌ಡಿ ಸಜ್ಜು

Published:
Updated:

ಹೊಸ ರಂಗಪ್ರಯೋಗಗಳಿಗೆ ಹೆಸರಾಗಿರುವ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರಿನಲ್ಲಿ ಇದೇ 11 ರಿಂದ 15ರವರೆಗೆ ಐದು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ. ಮಲ್ಲತ್ತಹಳ್ಳಿಯ ಕಲಾಗ್ರಾಮದ ನಾಟಕ ಶಾಲೆಯ ಸ್ಟುಡಿಯೊ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳಿಗೆ ಉಚಿತ ಪ್ರವೇಶವಿದೆ.

ದಕ್ಷಿಣ ಭಾರತಕ್ಕಾಗಿ ಬೆಂಗಳೂರಿನಲ್ಲಿ ನಾಲ್ಕು ವರ್ಷದ ಹಿಂದೆ ಆರಂಭವಾದ ನಾಟಕಶಾಲೆ ವಿಭಿನ್ನ ರಂಗ ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ಇಲ್ಲಿ ನಡೆಯುವ ಪ್ರಯೋಗಗಳನ್ನು ರಾಜ್ಯವಲ್ಲದೆ ಹೊರ ರಾಜ್ಯದ ನಾಟಕಪ್ರಿಯರು ಕಣ್ತುಂಬಿಕೊಂಡಿದ್ದಾರೆ. ಎನ್‌ಎಸ್‌ಡಿಯಲ್ಲಿ ಕೇವಲ ರಾಜ್ಯದ ಕಲಾವಿದರಲ್ಲದೆ ಬೇರೆ ಬೇರೆ ರಾಜ್ಯ ವಿದ್ಯಾರ್ಥಿಗಳಿರುವುದು ಇಲ್ಲಿನ ಬಹುತ್ವಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಗುಳ್ಳಕಾಯಜ್ಜಿ

ಶಾಂತಿ ಮತ್ತು ವಿಶ್ವಭ್ರಾತೃತ್ವದ ಸಂದೇಶ ಸಾರುವ ‘ಗುಳ್ಳಕಾಯಜ್ಜಿ’ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ವಿಶಿಷ್ಟ ನಾಟಕಗಳಲ್ಲೊಂದು. ಈ ನಾಟಕವನ್ನು ಅನುಭವಿ ನಿರ್ದೇಶಕ ಮಾಲತೇಶ ಬಡಿಗೇರ ನಿರ್ದೇಶಿಸಿದ್ದಾರೆ. ಎನ್‌ಎಸ್‌ಡಿ ವಿದ್ಯಾರ್ಥಿಗಳೇ ಅಭಿನಯಿಸುತ್ತಿರುವುದು ಇದರ ಮತ್ತೊಂದು ಹೆಮ್ಮೆ. ಮೊದಲ ತೀರ್ಥಂಕರ ವೃಷಭದೇವನ ಮಕ್ಕಳಾದ ಭರತ ಮತ್ತು ಬಾಹುಬಲಿ ನಡುವಿನ ಸಂಬಂಧ, ಬಾಹುಬಲಿಯ ತ್ಯಾಗವನ್ನು ಮನೋಜ್ಞವಾಗಿ ಚಿತ್ರಿಸಿದೆ.

ರೆಸಿಸ್ಟೆಡ್

ಇದು ಬರ್ಟೋಲ್ಟ್ ಬ್ರೆಕ್ಟ್ ನ ‘ದಿ ರೆಸಿಸ್ಟೆಡಲ್ ರೈಸ್ ಆಫ್ ಆರ್ತುರೋ ಉಯಿ’ ಮೂಲ ನಾಟಕ ಆಧಾರಿತವಾಗಿದೆ. ಬ್ರೆಕ್ಟ್ ಈ ನಾಟಕ ರಚಿಸಿದ್ದು 1941ರಲ್ಲಿ. ಮೇಲ್ನೋಟಕ್ಕೆ ಇದರಲ್ಲಿ ಷಿಕಾಗೊದ ಭೂಗತ ಜಗತ್ತು ಆಕಾಲದ ರಾಜಕಾರಣ ಮತ್ತು ಉದ್ಯಮಿಗಳನ್ನು ಚಿತ್ರಿಸಿದಂತೆ ಕಂಡರೂ, ಅದರ ಅಂತರಾಳದಲ್ಲಿ ಹಿಟ್ಲರ್‌ನ ಅಧಿಕಾರ ಗ್ರಹಣ ಫ್ಯಾಸಿಸ್ಟ್ ಜರ್ಮಿನಿಯ ದ್ವೇಷದ ರಾಷ್ಟ್ರೀಯತೆ ಕಲ್ಪನೆಯ ಪ್ರಚಾರವನ್ನು ವ್ಯವಸ್ಥಿತವಾಗಿ ಯಹೂದಿಗಳ ವಿರುದ್ಧ ತನ್ನ ಬಲಗೈ ಬಂಟ ಹಾಗೂ ಪ್ರಚಾರ ಸಚಿವ ಪಾಲ್ ಚೋಸಫ್ ಗೋಬೆಲ್ಟ್ ಮೂಲಕ ಬಳಸಿದ ರೀತಿಯನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವಿದೆ. ಭಯ ಮತ್ತು ದ್ವೇಷವನ್ನು ಬಿತ್ತುವ ಹಾಗೂ ಅಸತ್ಯವನ್ನು ಯಾವುದೇ ಎಗ್ಗಿಲ್ಲದೆ ಬಿಂಬಿಸುವ ಮಾಧ್ಯಮವನ್ನು ಬ್ರೆಕ್ಟ್ ಹದವಾಗಿ ಲೇವಡಿ ಮಾಡುತ್ತಾನೆ.

ತೊಂಬತ್ತರ ದಶಕದ ಮುಂಬೈನಲ್ಲಿ ಭೂಗತ ಲೋಕದ ದೊರೆಗಳು ರಾಜಕೀಯ ತೀರ್ಮಾನಗಳನ್ನು ನಿರ್ದೇಶಿಸುವಷ್ಟು ಶಕ್ತರಾಗಿದ್ದನ್ನು ಒನಾರ್ಥೋ ಉರುಮ್ ಮೂಲಕ ಕಟ್ಟಿ ಮಾಡಲು ಪ್ರಯತ್ನಿಸುತ್ತದೆ.

ಸಣ್ಣ ಕಥೆಗಳ ಕಥಾರಂಗ

ಕಿ.ನಾರಾಯಣನ್‌ ಅವರ ಕುರ್ಚಿ ಹೆಸರಿನ  ಕಥೆ ಪ್ರದರ್ಶಿತವಾಗುತ್ತಿದೆ. ಕುರ್ಚಿ ಇಲ್ಲದ ಒಂದು ಮನೆ ಉಂಟಾ? ಹೀಗೆ ಈ ಕಥೆ ಆರಂಭವಾಗುತ್ತದೆ. ಜಿಪುಣ ಮಾವ ಮತ್ತು ಅಳಿಯ ಮನೆಗೆ ಕುರ್ಚಿ ಬರುತ್ತದೆಂದು ಖುಷಿಯಾಗಿದ್ದರು. ಮುತ್ತಪ್ಪನ ಮಾವನ ಜಿಪುಣತನ ಹೇಗಿದೆ ಎಂಬುದಕ್ಕೆ ನಾಟಕ ನೋಡಬೇಕು.

ಧರ್ಮಕೊಂಡದ ಕಥೆ

ಕನ್ನಡದ ಸಣ್ಣ ಕಥೆಗಳಲ್ಲೇ ಅಪರೂಪವಾದ ಮತ್ತು ವಿಶಿಷ್ಟವಾದ ಅಶ್ವತ್ಥ ಅವರ ‘ಧರ್ಮಕೊಂಡದ ಕಥೆ’ ಸಣ್ಣ ಕಥೆಗಳ ಕಥಾರಂಗ ಮತ್ತೊಂದು ಪ್ರಯೋಗ. ಅಮಾಯಕಳಾದ ದೇವಮ್ಮನ ಸುತ್ತ ರಚನೆಯಾದ ಕಥೆ ಇದು. ನೀರು ತರಲು ಹೋದ ಆಕೆ ಅಪಹರಣವಾಗಿ ಇಸ್ಲಾಂ ಧರ್ಮಕ್ಕೆ ಒತ್ತಾಯವಾಗಿ ಮತಾಂತರವಾಗುತ್ತಾಳೆ. ನಂತರ ಇಸ್ಲಾಂ ಧರ್ಮದಂತೆ ಮರುಮದುವೆ ಮಾಡುತ್ತಾರೆ. ಮತ್ತೆ ಮನೆ ಸೇರುವ ದೇವಮ್ಮ ಕುಟುಂಬ ಅವಳನ್ನು ಜಾತಿ ಭ್ರಷ್ಟತೆ, ಧರ್ಮಭ್ರಷ್ಟತೆಯಿಂದ ಬ್ರಾಹ್ಮಣ್ಯ ಹಾಳಾದುದರ ಬಗ್ಗೆ ಚಿಂತಿತರಾಗುತ್ತಾರೆ. ದೇವಮ್ಮ ಧಾರ್ಮಿಕ ವಿಧಿವಿಧಾನಗಳಿಂದ ಹೇಗೆ ಪಾರಾಗುತ್ತಾಳೆ ನಾಟಕದ ಕುತೂಹಲಕರ ಅಂಶ.

‘ಸೆಕೆಂಡ್‌ ಹ್ಯಾಂಡ್‌’

ಸಣ್ಣ ಕಥೆಗಳಲ್ಲಿ ಇದು ಮತ್ತೊಂದು. ಮಲೆಯಾಳಂ ಲೇಖಕ ವೈಕಂ ಮೊಹಮ್ಮದ್‌ ಬಷೀರ್‌ ರಚಿಸಿರುವ ಕಥೆಯ ರಂಗರೂಪದ ಇದಾಗಿದೆ. ಪತ್ನಿ ಶಾರದಾಳ ವರ್ತನೆಯಿಂದ ಗೊಂದಲದಲ್ಲಿ ಸಿಲುಕುವ ಗೋಪಿನಾಥ ಏನು ಮಾಡಬೇಕು ಎಂಬುದನ್ನೇ ತಿಳಿಯದಾಗುತ್ತಾನೆ. ಪತ್ನಿಗೆ ಪ್ರೀತಿಯನ್ನೇ ಧಾರೆ ಎರೆದರೂ ಆಕೆಯಿಂದ ಯಾವುದೇ ಪ್ರತಿಫಲ ದೊರೆಯುವುದಿಲ್ಲ. 

*

ಐವತ್ತು ಕಥೆಗಳನ್ನು ಓದಿ, ಅವುಗಳಲ್ಲಿ ಒಂಬತ್ತನ್ನು ಆಯ್ದುಕೊಂಡು ಅಂತಿಮವಾಗಿ ಮೂರನ್ನು ಪ್ರದರ್ಶನಕ್ಕೆ ಬಳಸಿಕೊಂಡಿದ್ದೇನೆ. ಮೂಲ ನಾಟಕಗಳಿಗೆ ಬದಲಾಗಿ ಸಣ್ಣಕಥೆಗಳನ್ನು ನಾಟಕವಾಗಿಸುವುದು ವಿಶಿಷ್ಟ ಅನುಭವ. ನಾಟಕದ ಸಾಧ್ಯತೆಗಳ ಅನ್ವೇಷಣೆ ಇಲ್ಲಿ ನಡೆಯುತ್ತದೆ. ಕೊನೆಗೆ ರಂಗದಲ್ಲಿ ಪ್ರದರ್ಶನವಾಗುತ್ತದೆ. ಈ ಬಾರಿ ತಮಿಳು, ಮಲೆಯಾಳಂ ಮತ್ತು ಕನ್ನಡ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.

-ಪ್ರೊ.ದೇವೇಂದ್ರ ರಾಜ್‌ ಆಂಕರ್‌, ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry