ಸಿಂಗಪುರಕ್ಕೆ ಬಂದ ಕಿಮ್‌– ಟ್ರಂಪ್‌: ಐತಿಹಾಸಿಕ ಚರ್ಚೆಗೆ ವೇದಿಕೆ

7

ಸಿಂಗಪುರಕ್ಕೆ ಬಂದ ಕಿಮ್‌– ಟ್ರಂಪ್‌: ಐತಿಹಾಸಿಕ ಚರ್ಚೆಗೆ ವೇದಿಕೆ

Published:
Updated:

ಸಿಂಗಪುರ/ಲಾ ಮಲ್ಬೈ (ಎಎಫ್‌ಪಿ/ಎಪಿ): ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ ದಶಕಗಳ ಶೀತಲ ಸಮರ ಅಂತ್ಯಗೊಳಿಸುವ ನಿಟ್ಟಿನಲ್ಲಿ, ಉಭಯ ದೇಶಗಳ ಅಧ್ಯಕ್ಷರ ಮಹತ್ವದ ಮಾತುಕತೆಗೆ ವೇದಿಕೆ ಸಜ್ಜಾಗಿದೆ.

ಇದೇ 12ರಂದು ನಡೆಯುವ ಮಾತುಕತೆಗಾಗಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಸಿಂಗಪುರಕ್ಕೆ ಬಂದಿದ್ದಾರೆ. ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ಉಭಯ ದೇಶಗಳ ನಾಯಕರ ಈ ಮಾತುಕತೆ ಜಗತ್ತಿನ ಗಮನ ಸೆಳೆದಿದೆ.

ಅಣ್ವಸ್ತ್ರ ನಿಶ್ಶಸ್ತ್ರೀಕರಣವು ಮಾತುಕತೆಯ ಮುಖ್ಯ ಕಾರ್ಯಸೂಚಿಯಾಗಲಿದೆ. ಉತ್ತರ ಕೊರಿಯಾ ಸಂಪೂರ್ಣವಾಗಿ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಮುಂದಾಗಬೇಕು ಎನ್ನುವುದು ಅಮೆರಿಕದ ಒತ್ತಾಯವಾಗಿದೆ. ಉತ್ತರ ಕೊರಿಯಾ ಸಹ ನಿಶ್ಶಸ್ತ್ರೀಕರಣಕ್ಕೆ ಬದ್ಧ ಎಂದು ಹೇಳಿಕೆ ನೀಡಿದ್ದರೂ ಅನುಷ್ಠಾನದ ಬಗ್ಗೆ ಅನುಮಾನಗಳು ಮೂಡಿವೆ. ಹೀಗಾಗಿ, ಅಮೆರಿಕ ಈ ವಿಷಯದಲ್ಲಿ ಕಠಿಣ ನಿಲುವು ಹೊಂದಿದೆ.

ಕೆನಡಾದಲ್ಲಿ ನಡೆದ ಜಿ–7 ರಾಷ್ಟ್ರಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್‌ ಅವರು ಸಿಂಗಪುರಕ್ಕೆ ನೇರವಾಗಿ ಬಂದರು. ಇದಕ್ಕೂ ಮೊದಲು ಉನ್‌ ಅವರು ಬೀಜಿಂಗ್‌ ಮೂಲಕ ಸಿಂಗಪುರಕ್ಕೆ ಆಗಮಿಸಿದರು.

ಶೃಂಗಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್‌, ‘ಕಿಮ್‌ ಜಾಂಗ್‌ ಉನ್‌ ಅವರ ಜತೆ ಒಪ್ಪಂದ ಸಾಧ್ಯವಾಗದಿರುವ ಲಕ್ಷಣಗಳು ಗೋಚರಿಸಿದರೆ ನಾನು ಸಮಯ ವ್ಯರ್ಥ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

‘ತನ್ನ ಜನರಿಗೆ ಏನಾದರೂ ಶ್ರೇಷ್ಠವಾದದ್ದನ್ನು ಮಾಡಬೇಕು ಎನ್ನುವ ಬಯಕೆ ಉನ್‌ ಅವರಿಗೆ ಇದೆ. ಹೀಗಾಗಿ, ಅವರಿಗೆ ಇದೊಂದು ಉತ್ತಮ ಅವಕಾಶ ಲಭಿಸಿದೆ. ಇದು ಒಂದು ಬಾರಿ ಮಾತ್ರ ದೊರೆತಿರುವ ಅವಕಾಶ’ ಎಂದು ಸಿಂಗಪುರಕ್ಕೆ ತೆರಳುವ ಮುನ್ನ, ಕೆನಡಾದ ಲಾ ಮಲ್ಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದ್ದಾರೆ.

‘ನಾನು ಶಾಂತಿ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಜಗತ್ತಿನ ಲಕ್ಷಾಂತರ ಮಂದಿಯ ಹೃದಯದಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುವ ಜವಾಬ್ದಾರಿಯೂ ಇದೆ. ನಿಶ್ಶಸ್ತ್ರೀಕರಣಗೊಳಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಆಶಾವಾದಿಗಳಾಗಿದ್ದೇವೆ. ಆದರೆ, ಕೆಲವು ಬಾರಿ ಸಂಧಾನಗಳು ಯಶಸ್ವಿಯಾಗದೇ ಇರಬಹುದು’ ಎಂದು ಹೇಳಿದ್ದಾರೆ.

**

ಪೋಪ್‌ ಪ್ರಾರ್ಥನೆ

ಸಿಂಗಪುರ (ಎಪಿ): ಉತ್ತರ ಕೊರಿಯಾ ಮತ್ತು ಅಮೆರಿಕದ ನಡುವಣ ಮಾತುಕತೆ ಯಶಸ್ವಿಯಾಗಲಿ ಎಂದು ಪೋಪ್‌ ಫ್ರಾನ್ಸಿಸ್‌ ಪ್ರಾರ್ಥಿಸಿದ್ದಾರೆ.

ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಮಾತುಕತೆ ಸಕಾರಾತ್ಮಕ ಮಾರ್ಗದಲ್ಲಿ ಸಾಗಲಿ ಎಂದು ಅವರು ಆಶಿಸಿದ್ದಾರೆ.

**

ಐತಿಹಾಸಿಕ ಶೃಂಗಸಭೆಯನ್ನು ಇಡೀ ಜಗತ್ತು ಕಾತರದಿಂದ ನೋಡುತ್ತಿದೆ. ಈ ಶೃಂಗಸಭೆಗೆ <br/>ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

ಕಿಮ್‌ ಜಾಂಗ್‌ ಉನ್‌, ಉತ್ತರ ಕೊರಿಯಾ ಅಧ್ಯಕ್ಷ

**

ಶಾಂತಿಗಾಗಿ ನಡೆಯುವ ಈ ಮಾತುಕತೆ ಯಶಸ್ವಿಯಾಗುತ್ತದೆಯೋ ಇಲ್ಲವೋ ಎನ್ನುವುದು ಕಿಮ್‌ ಭೇಟಿಯಾದ ಕೆಲವೇ ನಿಮಿಷಗಳಲ್ಲಿ ಗೊತ್ತಾಗಲಿದೆ.

–ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry