20 ದಿನಗಳಲ್ಲಿ ಸಂಚಾರಕ್ಕೆ ಮುಕ್ತ

6
ಶಿರಾಡಿ ಘಾಟ್ ರಸ್ತೆ: 2ನೇ ಹಂತದ ಕಾಮಗಾರಿ ಬಹುತೇಕ ಪೂರ್ಣ

20 ದಿನಗಳಲ್ಲಿ ಸಂಚಾರಕ್ಕೆ ಮುಕ್ತ

Published:
Updated:

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದ್ದು, ಜುಲೈ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಈಗಾಗಲೇ ಕಾಂಕ್ರಿಟೀಕರಣ ಕೆಲಸ ಮುಗಿದಿದೆ. ಆದರೆ, 3 ಸೇತುವೆ ಕಾಮಗಾರಿ ನಡೆಯುತ್ತಿದೆ. ಒಟ್ಟು ₹ 74 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆಯವರೆಗೆ 12.38 ಕಿ.ಮೀ. ಉದ್ದ ಮತ್ತು 8.50 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ಕೆಲಸ ಪೂರ್ಣಗೊಂಡಿದೆ. ರಸ್ತೆಯಲ್ಲಿ ಹಾಕಿರುವ ಕಾಂಕ್ರೀಟ್ ಗಟ್ಟಿ ಆಗುವುದಕ್ಕೆ ಮಾತ್ರ ಬಾಕಿ ಇದೆ.

3 ಸೇತುವೆ–ರಸ್ತೆ ಸಂಪರ್ಕ ಬಾಕಿ: ಈ ಕಾಮಗಾರಿ ಸ್ಥಳದಲ್ಲಿ ಒಟ್ಟು 77 ಮೋರಿಗಳು ಇದ್ದು, ಅವುಗಳೆಲ್ಲವೂ ಪೂರ್ಣಗೊಂಡಿವೆ. 3 ಸೇತುವೆಗಳ ವಿಸ್ತರಣೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅವುಗಳೂ ಪೂರ್ಣಗೊಳ್ಳುವ ಹಂತದಲ್ಲಿವೆ. ಈ ಸೇತುವೆ ರಸ್ತೆಗೆ ಸಂಪರ್ಕ ಆಗುವ ಎರಡೂ ಕಡೆಗಳಲ್ಲಿ ಸುಮಾರು 600 ಮೀಟರ್ ಕಾಂಕ್ರೀಟ್ ಆಗಲು ಬಾಕಿ ಇದೆ. ಇದೀಗ ಆ ಕೆಲಸವೂ ನಡೆಯುತ್ತಿದೆ.

ಮಳೆಯಿಂದಾಗಿ ವಿಳಂಬ: 2ನೇ ಹಂತದ ಕಾಮಗಾರಿಗೆ ₹ 74 ಕೋಟಿ ಮಂಜೂರಾಗಿದೆ. ಜನವರಿ 20ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜೂನ್ 15ರ ಒಳಗಾಗಿ ಪೂರ್ಣಗೊಳ್ಳುವ ಎಲ್ಲ ಸಾಧ್ಯತೆ ವ್ಯಕ್ತವಾಗಿತ್ತು. ಆದರೆ, ಶಿರಾಡಿ ಘಾಟ್ ಪ್ರದೇಶದಲ್ಲಿ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ವೇಗಕ್ಕೆ ತಡೆ ಉಂಟಾಯಿತು.

ಎರಡು ದಿನ ಮಳೆ ಬಿಟ್ಟರೆ ಸೇತುವೆ ಸಂಪರ್ಕಿಸುವ ಕಾಂಕ್ರೀಟ್‌ ಕಾಮಗಾರಿಯೂ ಮುಗಿಯಲಿದೆ. ಜುಲೈ ಮೊದಲ ವಾರಕ್ಕೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಬಿಡುವು ಕೊಟ್ಟರೆ ಕೆಲಸ ಸುಲಭವಾಗುತ್ತದೆ. ಇಲ್ಲವಾದರೂ ಜುಲೈ ಮೊದಲ ವಾರದಲ್ಲಿ ರಸ್ತೆ ಬಿಟ್ಟು ಕೊಡಲು ಯಾವುದೇ ಸಮಸ್ಯೆ ಎದುರಾಗಲಾರದು ಎಂದು ಕಾಮಗಾರಿ ನಡೆಸುತ್ತಿರುವ ಓಷಿಯನ್ ಕನ್‍ಸ್ಟ್ರಕ್ಷನ್ ಇಂಡಿಯಾ ಕಂಪನಿಯ ನಿರ್ದೇಶಕ ಶರ್ಫುದ್ದೀನ್ ಹೇಳಿದರು.

ಚಾರ್ಮಾಡಿಯಲ್ಲಿ ನಿತ್ಯ ದಟ್ಟಣೆ

ಶಿರಾಡಿ ಘಾಟಿ ರಸ್ತೆ ಬಂದ್‌ ಆಗಿರುವುದರಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಇದೀಗ ಭಾರಿ ಮಳೆಯೂ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಮರಗಳು ಬಿದ್ದು ಸಂಚಾರದಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿದೆ. ಬೆಂಗಳೂರು–ಮಂಗಳೂರು ನಡುವೆ ಸಂಚರಿಸುವ ಘನ ವಾಹನಗಳು ಸಂಪಾಜೆ ಘಾಟಿ ಬಳಸಬೇಕೆಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿ ಚಾರ್ಮಾಡಿ ಘಾಟಿ ಬಳಸುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.

-ಸಿದ್ದಿಕ್ ನೀರಾಜೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry