7
ಪರಿಹಾರ ಕಾಣದ ಆಮದು ತೆರಿಗೆ ಬಿಕ್ಕಟ್ಟು: ಜಾಗತಿಕ ವಾಣಿಜ್ಯ ಸಂಘರ್ಷಕ್ಕೆ ನಾಂದಿ

ಜಿ–7 ಶೃಂಗಸಭೆ ಕಿತ್ತಾಟದಲ್ಲಿ ಕೊನೆ

Published:
Updated:

ಕ್ಯೂಬೆಕ್‌ ಸಿಟಿ (ಕೆನಡಾ) (ಎಎಫ್‌ಪಿ): ವಾಣಿಜ್ಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯೊಂದಿಗೆ ಕೆನಡಾದಲ್ಲಿ ಆರಂಭವಾಗಿದ್ದ ಜಿ–7 ರಾಷ್ಟ್ರಗಳ ಶೃಂಗಸಭೆ ಶನಿವಾರ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಕಿತ್ತಾಟದಲ್ಲಿ ಕೊನೆಗೊಂಡಿದೆ.

ಇದರೊಂದಿಗೆ, ಮೂರು ತಿಂಗಳಿಂದ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಹದಗೆಟ್ಟಿರುವ ವಾಣಿಜ್ಯ ಸಂಬಂಧ ಸುಧಾರಣೆಯಾಗುವ ನಿರೀಕ್ಷೆ ಹುಸಿಯಾಗಿದೆ. ಅದರ ಜತೆಗೆ ‘ಜಾಗತಿಕ ವಾಣಿಜ್ಯ ಸಂಘರ್ಷ’ದ ಭೀತಿ ಎದುರಾಗಿದೆ.

ಶನಿವಾರ ಜಿ–7 ಶೃಂಗಸಭೆಯ ಕೊನೆಯಲ್ಲಿ ಎಲ್ಲ ಏಳು ಮಿತ್ರರಾಷ್ಟ್ರಗಳ ನಾಯಕರ ಒಮ್ಮತದ ಹೇಳಿಕೆ ಬಹಿರಂಗಪಡಿಸಲಾಯಿತು. ಇದಾದ ಕೆಲವು ನಿಮಿಷಗಳಲ್ಲಿಯೇ ತಿರುಗಿಬಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸಿಂಗಪುರದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆಗಿನ ಪರಮಾಣು ಶೃಂಗಸಭೆಯಲ್ಲಿ ಭಾಗವಹಿಸಲು ಜಿ–7 ಶೃಂಗಸಭೆಯಿಂದ ಬೇಗ ತೆರಳಿದ್ದ ಟ್ರಂಪ್‌ ಮಾರ್ಗಮಧ್ಯೆ ವಿಮಾನದಲ್ಲಿಯೇ ಟ್ವೀಟ್‌ ಸಮರ ಸಾರಿದ್ದಾರೆ.

ಆತಿಥೇಯ ರಾಷ್ಟ್ರ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ವಿರುದ್ಧ ಟ್ರಂಪ್‌ ಸರಣಿ ಟ್ವೀಟ್‌ಗಳಲ್ಲಿ ಹರಿಹಾಯ್ದಿದ್ದಾರೆ.

‘ಸುದ್ದಿಗೋಷ್ಠಿಯಲ್ಲಿ ಟ್ರುಡೊ ನೀಡಿರುವ ಹೇಳಿಕೆ ಸುಳ್ಳು. ಅಮೆರಿಕದ ಕಾರು ಮತ್ತು ವಾಹನಗಳ ಮೇಲೆ ಕೆನಡಾ ಮತ್ತು ಯುರೋಪ್‌ ರಾಷ್ಟ್ರಗಳು ಭಾರಿ ತೆರಿಗೆ ವಿಧಿಸುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.

‘ಶೃಂಗಸಭೆಯ ಹೇಳಿಕೆಗೆ ಸಹಿ ಹಾಕದಂತೆ ಅಮೆರಿಕದ ನಿಯೋಗಕ್ಕೆ ತಿಳಿಸಿದ್ದೆ’ ಎಂದು ಟ್ರಂಪ್‌ ಹೇಳಿದ್ದಾರೆ.

‘ಕೆನಡಾ ಸೇರಿದಂತೆ ಯುರೋಪ್‌ ಒಕ್ಕೂಟದ ರಾಷ್ಟ್ರಗಳ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಅಮೆರಿಕ ಭಾರಿ ತೆರಿಗೆ ಹೇರುತ್ತಿದೆ. ಇದು ನಮಗೆ ಮಾಡುತ್ತಿರುವ ಅಪಮಾನ’ ಎಂದು ಟ್ರುಡೊ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ಈ ಬೆಳವಣಿಗೆಯ ನಂತರ ಜರ್ಮನಿ, ಫ್ರಾನ್ಸ್‌ ಸೇರಿದಂತೆ ಮಿತ್ರರಾಷ್ಟ್ರಗಳು ಅಮೆರಿಕದ ವರ್ತನೆ ವಿರುದ್ಧ ಹರಿಹಾಯ್ದಿವೆ.

‘ಟ್ರಂಪ್‌ ವರ್ತನೆ ಹೊಸದೇನಲ್ಲ. ಹವಾಮಾನ ವೈಪರೀತ್ಯ ಮತ್ತು ಇರಾನ್‌ ಪರಮಾಣು ಒಪ್ಪಂದದ ಸಮಯದಲ್ಲಿ ಅವರ ವರ್ತನೆ ಗೊತ್ತಾಗಿದೆ’ ಎಂದು ಜರ್ಮನಿ ಹೇಳಿದೆ.

**

ಟ್ರಂಪ್‌ ಬೆದರಿಕೆ

* ಮೂರು ತಿಂಗಳಿಂದ ಆಮದು ತೆರಿಗೆ ಸಂಬಂಧ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಹಗ್ಗಜಗ್ಗಾಟ

* ಕೆನಡಾ ಪ್ರಧಾನಿ ಟ್ರುಡೊ ವಿರುದ್ಧ ಬಹಿರಂಗವಾಗಿ ಹರಿಹಾಯ್ದ ಟ್ರಂಪ್‌

* ಅಮೆರಿಕ ಅಧ್ಯಕ್ಷರ ವಿಮಾನ ‘ಏರ್‌ ಫೋರ್ಸ್‌ ಒನ್‌’ನಿಂದಲೇ ಟ್ರಂಪ್‌ ಸರಣಿ ಟ್ವೀಟ್‌

* ಕಾರು ಆಮದು ಮೇಲೆ ನಿರ್ಬಂಧದ ಬೆದರಿಕೆ ಒಡ್ಡಿದ ಟ್ರಂಪ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry