ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಭ ಅರಿತು ನಿರ್ಧಾರ ಕೈಗೊಳ್ಳಿ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ವಹಿವಾಟುದಾರರ ಆಸಕ್ತಿಯು ವಲಯದಿಂದ ವಲಯಕ್ಕೆ, ಕಂಪನಿಯಿಂದ ಕಂಪನಿಗೆ ಜಿಗಿಯುತ್ತಾ ಸದಾ ಚಟುವಟಿಕೆ ಭರಿತವಾಗಿರುತ್ತದೆ. ಸಾಮಾನ್ಯವಾಗಿ ಆರ್‌ಬಿಐ ಬ್ಯಾಂಕ್ ಬಡ್ಡಿ ದರವನ್ನು ಹೆಚ್ಚಿಸಿದಾಗ ಅದು ಕಂಪನಿಗಳ ಹಿತಕ್ಕೆ ಧಕ್ಕೆಯಾಗುತ್ತದೆಂಬ ಭಾವನೆಯಿಂದ ಷೇರುಗಳ ಬೆಲೆಗಳು ಕುಸಿತ ಕಾಣುತ್ತವೆ.

ಬುಧವಾರ ಆರ್‌ಬಿಐ ರೆಪೊ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಿಸಿದ್ದರಿಂದ  ಬ್ಯಾಂಕ್ ಬಡ್ಡಿ ದರವು ಹೆಚ್ಚುವುದು. ಆದರೆ, ಆ ಸಮಯಕ್ಕಾಗಲೇ ಹೆಚ್ಚಿನ ಕುಸಿತಕ್ಕೊಳಗಾಗಿದ್ದ ಪೇಟೆಯು ವಿಭಿನ್ನ ಕಾರಣಗಳ ನೆಪದಿಂದ ಚುರುಕಾದ ಏರಿಕೆಗೊಳಗಾಯಿತು. ಬ್ಯಾಂಕಿಂಗ್ ವಲಯದ ಕಂಪನಿಗಳು ಸಾಲಗಳ ಮೇಲಿನ ಬಡ್ಡಿ ದರವನ್ನು ತಕ್ಷಣದಿಂದ ಹೆಚ್ಚಿಸಿವೆ.

ಷೇರುಪೇಟೆಯ ಚಟುವಟಿಕೆಯು ರಭಸದಿಂದ ನಡೆಯುತ್ತಿದೆ ಎಂಬುದಕ್ಕೆ ಮಂಗಳವಾರದ ಆರಂಭಿಕ ಒಂದು ಗಂಟೆಯ ಚಟುವಟಿಕೆಯು ಉತ್ತಮ ನಿದರ್ಶನವಾಗಿತ್ತು. ದಿನದ ಆರಂಭದಲ್ಲಿ ಪಿಸಿ ಜ್ಯುವೆಲ್ಲರ್ ಷೇರಿನ ಬೆಲೆಯು ₹125 ರ ಸಮೀಪ ಆರಂಭವಾಗಿ ₹114 ರವರೆಗೂ ಕುಸಿದು ನಂತರ ಕೆಲವೇ ಕ್ಷಣಗಳಲ್ಲಿ ₹135 ರವರೆಗೂ ಜಿಗಿತ ಕಂಡಿತು.

ಮಂಗಳವಾರ ಸತತವಾಗಿ ಇಳಿಕೆ ಕಂಡುಕೊಂಡಿದ್ದ ವಕ್ರಾಂಗಿ ಷೇರಿನ ಬೆಲೆ ₹37.65 ರ ಗರಿಷ್ಠ ಆವರಣ ಮಿತಿಯಲ್ಲಿ ಆರಂಭವಾಗಿ ಸುಮಾರು ಎರಡು ಕೋಟಿ ಷೇರು ವಹಿವಾಟಾದಾಗ ಅವರಣ ಮಿತಿಯಿಂದ ಹೊರಬಂದು ₹35.90 ರವರೆಗೂ ಕುಸಿದು ಮತ್ತೆ ಗರಿಷ್ಠ ಅವರಣ ಮಿತಿಗೆ ತಲುಪಿತು. ದಿನದ ಕನಿಷ್ಠ ಅವರಣ ಮಿತಿಯಲ್ಲಿ ಅಂತ್ಯವನ್ನು ಕಂಡುಕೊಂಡಿತು. ನಂತರದ ಎರಡು ದಿನ ಕನಿಷ್ಠ ಅವರಣ ಮಿತಿಯಲ್ಲಿದ್ದು  ಗುರುವಾರ ಕೆಳ ಆವರಣ ಮಿತಿಯಿಂದ ಪುಟಿದೆದ್ದು ಗರಿಷ್ಠ ಅವರಣ ಮಿತಿಯಲ್ಲಿ ಕೊನೆಗೊಂಡು ಶುಕ್ರವಾರವೂ ಗರಿಷ್ಠ ಆವರಣ ಮಿತಿಯಲ್ಲಿ ಅಂತ್ಯಕಂಡಿತು.

ಮಂಗಳವಾರ ಬಯೊಕಾನ್‌ ಷೇರಿನ ಬೆಲೆ ಆರಂಭದಲ್ಲಿ ₹695 ರಲ್ಲಿದ್ದು  ನಂತರ ಅಲ್ಲಿಂದ  ಒಂದೇ ಗಂಟೆಯ ಅವಧಿಯಲ್ಲಿ ₹655ರವರೆಗೂ ಕುಸಿಯಿತು. ನಂತರ  ₹576 ರವರೆಗೂ ಜಾರಿ ₹607 ರ ಸಮೀಪ ಕೊನೆಗೊಂಡಿತು. ಈ ಕನಿಷ್ಠ - ಗರಿಷ್ಠ ಅಲೆಗಳೆರಡೂ ಒಂದು ತಿಂಗಳಲ್ಲಿ ಈ  ಷೇರು ಪ್ರದರ್ಶಿಸಿದ ಕನಿಷ್ಠ- ಗರಿಷ್ಠ ಗಳಾಗಿದ್ದು, ಎರಡನ್ನೂ ಒಂದೇ ದಿನ ಪ್ರದರ್ಶಿತವಾಗಿದ್ದು ಪೇಟೆಯು ಎಷ್ಟು ಹರಿತ - ತ್ವರಿತ ಎಂಬುದನ್ನು ಬಿಂಬಿಸುತ್ತದೆ.

ಇತ್ತೀಚಿಗೆ ಹೆಚ್ಚುವರಿ ಕಣ್ಗಾವಲು ಪ್ರಕ್ರಿಯೆಗೆ ಒಳಪಟ್ಟ 110 ಕಂಪನಿಗಳ ಷೇರುಗಳ ಬೆಲೆಗಳು ಮೊದಲೆರಡು ದಿನ ಕೆಳ ಆವರಣ ಮಿತಿಯಲ್ಲಿದ್ದು, ಬುಧವಾರ ಸಹ ಆರಂಭಿಕ ಕ್ಷಣಗಳಲ್ಲಿ ನೀರಸಮಯವಾಗಿತ್ತು. ಆದರೆ, ಸ್ವಲ್ಪ ಸಮಯದ ನಂತರ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಹೆಚ್ಚಿನ ಮಾರಾಟದ ಒತ್ತಡದಿಂದ ಭಾರಿ ಕುಸಿತಕ್ಕೊಳಗಾಗಿದ್ದ ದಿಲೀಪ್ ಬಿಲ್ಡ್‌ಕಾನ್‌,  ಗೋವಾ ಕಾರ್ಬನ್,  ಗ್ರಾಫೈಟ್ ಇಂಡಿಯಾ,  ಎಚ್‌ಇಜಿ,  ರೇನ್ ಇಂಡಸ್ಟ್ರೀಸ್,  ನ್ಯಾಷನಲ್ ಪೆರಾಕ್ಸಿಡ್ ನಂತಹ ಕಂಪನಿಗಳು ಹೆಚ್ಚಿನ ಗಾತ್ರದೊಂದಿಗೆ ಉತ್ತಮ ವ್ಯಾಲ್ಯೂ ಪಿಕ್ ಚಟುವಟಿಕೆ ಕಾರಣ ಪುಟಿದೆದ್ದವು.

ಬುಧವಾರದಿಂದ ಹೆಚ್ಚುವರಿ ಕಣ್ಗಾವಲು ಪ್ರಕ್ರಿಯೆಗೊಳಪಟ್ಟ ಕಂಪನಿ ಗೋದಾವರಿ ಪವರ್ ಆ್ಯಂಡ್ ಇಸ್ಪಾಟ್ ಕಂಪನಿ ಷೇರಿನ ಬೆಲೆ ಆರಂಭದಲ್ಲಿ ಕೆಳ ಆವರಣ ಮಿತಿಯಲ್ಲಿದ್ದು,  ದಿನದ ಚಟುವಟಿಕೆ ಚುರುಕಾದ ಬೆಳವಣಿಗೆಯಲ್ಲಿ ಅದು ದಿನದ ಗರಿಷ್ಠ ಆವರಣ ಮಿತಿಯಲ್ಲಿ ಮಾರಾಟ ಮಾಡದವರಿಲ್ಲದ ಸ್ಥಿತಿಗೆ ಬದಲಾಗಿತ್ತು.

ಬಾಂಬೆ ಡೈಯಿಂಗ್ ಷೇರಿನ ಬೆಲೆಯೂ ಸಹ ದಿನದ ಆರಂಭದಲ್ಲಿ ₹209 ರ ಕೆಳ ಅವರಣ ಮಿತಿಯಲ್ಲಿದ್ದು ನಂತರ ಷೇರಿನ ಬೆಲೆ ₹220 ರವರೆಗೂ ಏರಿಕೆ ಕಂಡು ಕುಸಿತ ಕಂಡಿತು.

ಇಂತಹ ಬದಲಾದ ವಾತಾವರಣದಲ್ಲಿ ಡಿ ಮಾರ್ಟ್, ಎಡೆಲ್ವಿಸ್, ಕ್ಯಾನ್‌ಫಿನ್ ಹೋಮ್ಸ್, ಗುಜರಾತ್ ಅಲ್ಕಲೈಸ್, ಓರಿಯಂಟ್ ಕಾರ್ಬನ್,  ಹಿಂದುಸ್ಥಾನ್ ಜಿಂಕ್, ಫಿಲಿಪ್ಸ್ ಕಾರ್ಬನ್, ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್,  ಸ್ಟೆರಲೈಟ್‌ ಟೆಕ್ನಾಲಜೀಸ್,  ರಾಮ್ಕೊ ಸಿಸ್ಟಮ್ಸ್‌,  ಸುದರ್ಶನ್ ಕೆಮಿಕಲ್ಸ್,  ದೀಪಕ್ ಫರ್ಟಿಲೈಜರ್ಸ್,  ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾ,  ಟಾಟಾ ಸ್ಟೀಲ್‌, ವೇದಾಂತ  ಮುಂತಾದ ಕಂಪನಿಗಳು ತಮ್ಮ ಕುಸಿತದಿಂದ ಪುಟಿದೆದ್ದು ಏರಿಕೆಯಿಂದ ಗಮನ ಸೆಳೆಯುವಂತಿತ್ತು.

ಕೆಲವು ಅಗ್ರಮಾನ್ಯ ಕಂಪನಿಗಳು, ಸಾಧನೆ ಆಧಾರಿತ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಂಡಾಗ ಎರಡನೇ ಚಿಂತನೆಯಿಲ್ಲದೆ  ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಅದು ಸುರಕ್ಷಿತ ಎಂಬುದನ್ನು ಅವಂತಿ ಫೀಡ್ಸ್ ಕಂಪನಿ ಷೇರಿನ ಏರಿಳಿತಗಳು ದೃಢಬಡಿಸುತ್ತವೆ. ಅವಂತಿ ಫೀಡ್ಸ್  ₹311 ರಷ್ಟು ಏರಿಳಿತ ಪ್ರದರ್ಶಿಸಿದೆ.

ಬುಧವಾರ ₹269 ರಷ್ಟು ಏರಿಕೆ ಪಡೆದುಕೊಂಡಿದೆ.  ಮೇ 30 ರಂದು ₹1,750 ರ ಸಮೀಪದಿಂದ ಸರಾಗವಾಗಿ ಜಾರಿಕೊಂಡು ಮಂಗಳವಾರ ₹1,232 ರ ವಾರ್ಷಿಕ ಕನಿಷ್ಠಕ್ಕೆ ಕುಸಿತ ಕಂಡು ನಂತರ ಅಲ್ಲಿಂದ ಚೇತರಿಕೆ ಕಂಡು ಬುಧವಾರ ಮಿಂಚಿನ ವೇಗದಲ್ಲಿ ಏರಿಕೆ ಕಂಡು ₹1,624 ನ್ನು ತಲುಪಿತು.

ಮಂಗಳವಾರ ಅವಂತಿ ಫೀಡ್ಸ್ ಕಂಪನಿ ಷೇರಿನ ಬೆಲೆಯು ₹1,480 ರಲ್ಲಿ ಆರಂಭವಾಗಿ ₹1,380 ಕ್ಕೆ ಕುಸಿದು ನಂತರ ₹1,410 ರವರೆಗೂ ಚೇತರಿಕೆ ಕಂಡು ತಕ್ಷಣದಿಂದಲೇ ₹1,352 ರವರೆಗೂ ಕುಸಿಯಿತು. ಅವಂತಿ ಫೀಡ್ಸ್ ಗುರುವಾರ ಸಹ ₹1,679 ರಿಂದ ₹1,921 ರವರೆಗೂ ಎರಿಕೆ ಕಂಡು ₹1,821 ರ ಸಮೀಪ ಕೊನೆಗೊಂಡಿತು.

ಷೇರುಪೇಟೆಯ ವಿಶೇಷತೆಯೆಂದರೆ ಇದುವರೆಗೂ ಸತತವಾಗಿ ಏರಿಕೆ ಕಂಡ ಅಂತರ ರಾಷ್ಟ್ರೀಯ ಕಚ್ಚಾ ತೈಲ ಬೆಲೆಯ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಕಂಪನಿಗಳು ಭಾರಿ ಕುಸಿತ ಕಂಡವು. ನಂತರದ ದಿನಗಳಲ್ಲಿ ಮೌಲ್ಯಾಧಾರಿತ ಖರೀದಿಯ ಕಾರಣ ಚೇತರಿಕೆ ಕಂಡವು.

ವಿವಿಧ ಕಾರಣಗಳಿಂದ ನಿರಂತರವಾಗಿ ಇಳಿಕೆಗೊಳಪಟ್ಟಿದ್ದ ಟಾಟಾ ಮೋಟರ್ ಷೇರಿನ ಬೆಲೆ  ₹282 ರ ಸಮಿಪಕ್ಕೆ ತಲುಪಿ ನಂತರ ವಾಲ್ಯೂ ಪಿಕ್ ಚಟುವಟಿಕೆಯ ಕಾರಣ ಉತ್ತಮ ಚೇತರಿಕೆ ಕಂಡಿದೆ.

ದೇಶದಲ್ಲಿನ ಬೆಳವಣಿಗೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಪೇಟೆಗಿದೆ.  ಉದಾಹರಣೆಗೆ ಕಳೆದ ಏಪ್ರಿಲ್‌ನಲ್ಲಿ ಮ್ಯೂಚುವಲ್ ಫಂಡ್‌ಗಳ ‘ಸಿಪ್‌’ ಸಂಗ್ರಹಣೆ ಹೆಚ್ಚಾಗಿದೆ ಎಂದು ಪ್ರಕಟವಾದರೆ ಮತ್ತೊಂದೆಡೆ ಮೇ ತಿಂಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ನಿರ್ವಹಣೆಯಲ್ಲಿರುವ ಸಂಪತ್ತು ಹನ್ನೊಂದು ತಿಂಗಳ ಕನಿಷ್ಠಮಟ್ಟಕ್ಕೆ ಕುಸಿದಿದೆ ಎಂಬ ವಿಚಾರ ಹೊರ ಬಿದ್ದಿದೆ.

ಪೇಟೆಯಲ್ಲಿ ಏರಿಕೆ ಕಂಡರೆ ಮೊದಲಿನ ಅಂಶದ ಪ್ರಭಾವ, ಕುಸಿತಕಂಡರೆ ಎರಡನೇ ಅಂಶದ ಪ್ರಭಾವ ಎಂದು ವಿಶ್ಲೇಷಿಸಬಹುದಾಗಿದೆ. ಒಟ್ಟಿನಲ್ಲಿ ಹೂಡಿಕೆದಾರರು ಸಂದರ್ಭವನ್ನರಿತು ವ್ಯಾಲ್ಯೂ ಪಿಕ್ ಚಟುವಟಿಕೆ ಅಳವಡಿಸಿಕೊಂಡರೆ ಸ್ವಲ್ಪ ಮಟ್ಟಿನ ಸುರಕ್ಷತೆ ಸಾಧ್ಯ.

ವಾರದ ವಹಿವಾಟು

216 ಅಂಶ: ಸಂವೇದಿ ಸೂಚ್ಯಂಕ ಏರಿಕೆ

169 ಅಂಶ: ಮಧ್ಯಮ ಶ್ರೇಣಿ ಸೂಚ್ಯಂಕ ಏರಿಕೆ

91 ಅಂಶ: ಕೆಳಮಧ್ಯಮ ಶ್ರೇಣಿ ಸೂಚ್ಯಂಕ ಇಳಿಕೆ

₹ 1,367 ಕೋಟಿ: ‌ವಿದೇಶಿ ವಿತ್ತೀಯ ಸಂಸ್ಥೆಗಳ ಖರೀದಿ

₹ 2,131 ಕೋಟಿ: ಸ್ವದೇಶಿ ವಿತ್ತೀಯ ಸಂಸ್ಥೆಗಳ  ಖರೀದಿ

₹ 148 ಲಕ್ಷ ಕೋಟಿ: ಪೇಟೆಯ ಬಂಡವಾಳ ಮೌಲ್ಯ

ಹೊಸ ಷೇರು: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಾಗುತ್ತಿರುವ ಡಾಲರ್ ಇಂಡಸ್ಟ್ರೀಸ್ ಲಿ. ಕಂಪನಿ  ಈ ತಿಂಗಳ 7 ರಿಂದ ಬಿ ಗುಂಪಿನಲ್ಲಿ ಮತ್ತು ಓಟಿಸಿ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟಿಂಗ್ ಆಗದೇ ಇರುವ  ಜಿಮ್ ಲ್ಯಾಬೊರೇಟರೀಸ್ ಲಿ ಕಂಪನಿ ಈ ತಿಂಗಳ 8 ರಿಂದ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ. ಟಿಸಿಎಸ್ ಲಿಮಿಟೆಡ್‌ ವಿತರಿಸಿದ ಹೊಸ ಬೋನಸ್ ಷೇರುಗಳು ಸಹ ವಹಿವಾಟಿಗೆ ಬಿಡುಗಡೆಯಾಗಿವೆ.

ಮುಖಬೆಲೆ ಸೀಳಿಕೆ: ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 18 ನಿಗದಿತ ದಿನ.

(ಮೊ: 9886313380, ಸಂಜೆ 4.30 ರನಂತರ)

**‌

ವಾರದ ಮುನ್ನೋಟ

ಅಗ್ರಮಾನ್ಯ ಕಂಪನಿ ಷೇರುಗಳಲ್ಲದೆ ಮಧ್ಯಮಶ್ರೇಣಿ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳು ಕುಸಿತಕ್ಕೊಳಗಾಗಿರುವ ಈಗಿನ ಸಮಯದಲ್ಲಿ, ಮ್ಯೂಚುವಲ್ ಫಂಡ್‌ಗಳು ಹೊಸ ಹೊಸ ಹೆಸರಿನ ಯೋಜನೆಗಳನ್ನು ಜಾರಿ ತಂದು ಹಣ ಸಂಗ್ರಹಿಸಿ ಪೇಟೆಯನ್ನು ಬೆಂಬಲಿಸುವ ಪ್ರಕ್ರಿಯೆಯಲ್ಲಿವೆ.

ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಮುಖ ಕಂಪನಿಗಳು ತಮ್ಮ ಸಂಪನ್ಮೂಲ ಕ್ರೋಡೀಕರಣ ಕಾರ್ಯದಲ್ಲಿ ತೊಡಗಿರುವುದು, ಅನೇಕ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿರುವುದು, ಕಾರ್ಪೊರೇಟ್ ಫಲಗಳ ವಿತರಣೆಗಾಗಿ ನಿಗದಿತ ದಿನ ಗೊತ್ತುಪಡಿಸಿರುವುದು ಮುಂತಾದ ಸಂಗತಿಗಳು ಮುಂದಿನ ದಿನಗಳಲ್ಲಿ ಪೇಟೆಯ ಮೇಲೆ ಪ್ರಭಾವ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT