ಮೆತ್ತಗಾದ ಅತೃಪ್ತರ ಆಕ್ರೋಶ

7
ಮುಂದುವರಿದ ಭಿನ್ನಮತ ಶಮನ ಯತ್ನ * ಇದು ಇಲ್ಲಿಗೇ ನಿಲ್ಲುವುದಿಲ್ಲ– ಪಾಟೀಲ

ಮೆತ್ತಗಾದ ಅತೃಪ್ತರ ಆಕ್ರೋಶ

Published:
Updated:

ಬೆಂಗಳೂರು:‌ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಕಾಂಗ್ರೆಸ್‌ ಶಾಸಕರ ಆಕ್ರೋಶ ಭಾನುವಾರ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ. ಪಕ್ಷದ ಹೈಕಮಾಂಡ್‌ ನಿಷ್ಠುರ ನಿಲುವು ತೋರಿದ ಪರಿಣಾಮ, ಈ ನಾಯಕರು ತಮ್ಮ ಸಿಟ್ಟು ಒಡಲಲ್ಲಿ ಇಟ್ಟುಕೊಂಡು ಮೌನಕ್ಕೆ ಶರಣಾಗಿದ್ದಾರೆ.

ಭಿನ್ನಮತೀಯ ಶಾಸಕರ ಬಣದ ಮುಂಚೂಣಿಯಲ್ಲಿರುವ ಎಂ.ಬಿ. ಪಾಟೀಲರಿಗೆ, ತಾಳ್ಮೆಯಿಂದ ಇರುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಸೂಚಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಭಿನ್ನಮತೀಯ ಚಟುವಟಿಕೆ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ‘ಮೌನ’ ಮುರಿದಿರುವ ಸಿದ್ದರಾಮಯ್ಯ, ‘ಶಾಸಕರ ಅಸಮಾಧಾನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದೇನೆ. ಈಗಿನ ಸಚಿವರಿಗೆ ಎರಡು ವರ್ಷ ಅವಧಿ ನೀಡಿದ್ದೇವೆ. ಮುಂದಿನ ಅವಧಿಯಲ್ಲಿ ಉಳಿದವರಿಗೆ ಅವಕಾಶ ನೀಡಿ ಸಮಾಧಾನಪಡಿಸುತ್ತೇವೆ’ ಎಂದಿದ್ದಾರೆ.

‘ಭಿನ್ನಮತೀಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲರೂ ಸಮಾಧಾನಗೊಂಡಿದ್ದಾರೆ. ಯಾವುದೇ ಅತೃಪ್ತಿ ಇಲ್ಲ. ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಸದ್ಯ ಇನ್ನೊಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗುವುದಿಲ್ಲ’ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

‘ಬಂಡಾಯ ಶಮನಕ್ಕೆ ಮುಂದಾಗುವಂತೆ ರಾಹುಲ್ ಜೊತೆ ಮಾತನಾಡುತ್ತೇವೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶಾಸಕರ ಸಂಪರ್ಕದಲ್ಲಿದ್ದು, ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ’ ಎಂದು ಖರ್ಗೆ ಹೇಳಿದ್ದಾರೆ.

ಅತೃಪ್ತರ ಮೌನ: ‘ಸಚಿವ ಸ್ಥಾನ ಈ ಹಿಂದೆ ಕೈ ತಪ್ಪಿದಾಗ ಸುಮ್ಮನಿದ್ದೆ. ಆದರೆ, ಈ ಬಾರಿ ಹಾಗಾಗಲ್ಲ’ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ ಸೇರಿ ಬಹುತೇಕ ಅತೃಪ್ತ ಶಾಸಕರು ಮೌನವಾಗಿದ್ದಾರೆ. ಎಚ್.ಕೆ. ಪಾಟೀಲ ಮಂಗಳವಾರ ತಮ್ಮ ನಿಲುವು ತಿಳಿಸುವುದಾಗಿ ಹೇಳಿದ್ದಾರೆ.

‘ನನಗೆ ಶಾಸಕ ಸ್ಥಾನದಲ್ಲೇ ತೃಪ್ತಿ ಇದೆ. ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ. ಎಲ್ಲರದ್ದೂ ಒಂದೇ ಬಣ. ಅದು ಕಾಂಗ್ರೆಸ್ ಬಣ’ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

‘ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೇನೆ. ನಾನು ಯಾವುದೇ ಸ್ಥಾನ ಕೇಳಿಲ್ಲ’ ಎಂದೂ ಅವರು

ಪುನರುಚ್ಚರಿಸಿದ್ದಾರೆ.

ನಾಯಕರ ಜೊತೆ ಚರ್ಚೆ: ಅತೃಪ್ತರ ಆಕ್ರೋಶ ತಣಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪಕ್ಷದ ಕೆಲವು ನಾಯಕರ ಜೊತೆ ಭಾನುವಾರವೂ ಚರ್ಚೆ ನಡೆಸಿದರು.

‘ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಾಸಕರಿಗೆ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನೀವೂ ತಿಳುವಳಿಕೆ ಹೇಳಿ, ಮೈತ್ರಿ ಸರ್ಕಾರ ಉಳಿಸಿ’ ಎಂದು ಪಕ್ಷದ ಸಂಸದರಲ್ಲಿ ಪರಮೇಶ್ವರ ಕೋರಿದ್ದಾರೆ.

ಶೆಟ್ಟಿಗೆ ಸಚಿವ ಸ್ಥಾನ ನೀಡಿ: ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಪರಮೇಶ್ವರ ನಿವಾಸದ ಮುಂದೆ ಬೆಂಬಲಿಗರು ಭಾನುವಾರ ಪ್ರತಿಭಟನೆ ನಡೆಸಿದರು. ಉಡುಪಿ ಜಿಲ್ಲೆಗೆ ಅನ್ಯಾಯ ಆಗಿದೆ. ಪಕ್ಷದ ಪುನಶ್ಚೇತನಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

‘ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಈ ವಿಷಯವನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ’ ಎಂದು ಬೆಂಬಲಿಗರಿಗೆ ಪರಮೇಶ್ವರ ಭರವಸೆ ನೀಡಿದರು.

‘ಅಸಮಾಧಾನಗೊಂಡಿರುವ ಎಂ.ಬಿ. ಪಾಟೀಲರ ಜೊತೆ ಡಿ.ಕೆ. ಶಿವಕುಮಾರ್‌, ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಮಾತುಕತೆ ನಡೆಸಿದ್ದಾರೆ. ನಾನೂ ಮಾತನಾಡುತ್ತೇನೆ. ಏನೂ ಸಮಸ್ಯೆ ಇಲ್ಲ’ ಎಂದು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಪಕ್ಷದಲ್ಲಿ ಯಾವುದೇ ಅತೃಪ್ತಿ ಇಲ್ಲ. ಎಂ.ಬಿ. ಪಾಟೀಲ ತಮ್ಮ ನೋವು ಹೇಳಿಕೊಂಡಿರುವುದನ್ನೇ ಭಿನ್ನಮತ ಎಂದು ಹೇಳಲಾಗದು. ಅವರು ದಡ್ಡರಲ್ಲ. ಅವರಿಗೂ ಜವಾಬ್ದಾರಿಗಳಿವೆ’ ಎಂದರು.

‘ಹೈಕಮಾಂಡ್ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಿದೆ. ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಬೇರೆ ನಾಯಕರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದರು.

ಎಂ.ಬಿ. ಪಾಟೀಲರ ನಿವಾಸಕ್ಕೆ ಭಾನುವಾರ ಬೆಳಿಗ್ಗೆ ತೆರಳಿದ ಸಂಸದ ಪ್ರಕಾಶ್ ಹುಕ್ಕೇರಿ, ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ ಕೆಲಹೊತ್ತು ಚರ್ಚೆ ನಡೆಸಿದರು.

‘ಇದು ಇಲ್ಲಿಗೇ ನಿಲ್ಲುವುದಿಲ್ಲ’

ಈ ಮಧ್ಯೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಎಂ.ಬಿ. ಪಾಟೀಲ, ‘ನಾನು ಕೈ ಕಟ್ಟಿ ಕೂರುವುದಿಲ್ಲ. ನನಗೂ ರಾಜಕಾರಣ ಮಾಡುವುದು ಗೊತ್ತು. ನನ್ನನ್ನು ನಂಬಿದವರಿಗೆ ನಾನು ಕಣ್ಮುಚ್ಚಿ ನಿಯತ್ತು ತೋರಿಸಿದ್ದೇನೆ. ಇದು ಇಲ್ಲಿಗೇ ನಿಲ್ಲುವುದಿಲ್ಲ’ ಎಂದು ಹೇಳುವ ಮೂಲಕ ಪಕ್ಷದ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದಾರೆ.

‘ಈ ಎಂ.ಬಿ. ಪಾಟೀಲ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರಿಗೆ ನಿಷ್ಠೆಯಿಂದ ನಡೆದುಕೊಂಡ. ಅವರನ್ನು ಎತ್ತಿಹಿಡಿದು ಮೆರೆದ. ಆದರೆ, ಕೊನೆಗೂ ರಾಜಕಾರಣದ ಕಹಿ ಅನುಭವಿಸುವಂತಾದ’ ಎಂದು ಪಕ್ಷದ ನಾಯಕನ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾರಣ ಮಾಡಬೇಕೆಂದು ಬಂದವನು ನಾನಲ್ಲ. ಅಪ್ಪನ ಸಾವು ನನ್ನನ್ನು ರಾಜಕಾರಣಕ್ಕೆ ಅನಿವಾರ್ಯ ಪ್ರವೇಶ ಮಾಡಿಸಿತು. ಪಕ್ಷಕ್ಕಾಗಲೀ, ಯಾರಿಗೇ ಆಗಲಿ ನಾನು ಎಂದೂ ಮೋಸ ಮಾಡಿಲ್ಲ. ಮಾಡುವುದೂ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.

* ಬಾಕಿ ಉಳಿದಿರುವ ಆರು ಸಚಿವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡುವಂತೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸುತ್ತೇನೆ

- ಮಲ್ಲಿಕಾರ್ಜುನ ಖರ್ಗೆ,ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

ಸಂಪುಟ ರಚನೆಯಾದ ದಿನದಿಂದ ಇವತ್ತಿನವರೆಗೆ ಸಿದ್ದರಾಮಯ್ಯ ನನಗೆ ದೂರವಾಣಿ ಕರೆ ಮಾಡಿಲ್ಲ. ನಾನೂ ಮಾತನಾಡಲು ಹೋಗಿಲ್ಲ

- ಎಂ.ಬಿ. ಪಾಟೀಲ , ಅತೃಪ್ತ ಶಾಸಕರ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry