ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನಗಳ ಎಕ್ಸೈಸ್‌ ಸುಂಕ ಕಡಿತ ಮಾಡಿದ ಕೇಂದ್ರ ಸರ್ಕಾರ: ರಾಜ್ಯದಲ್ಲಿ ತೈಲ ₹3 ಅಗ್ಗ

Last Updated 4 ಅಕ್ಟೋಬರ್ 2018, 19:53 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಜನರ ಆಕ್ರೋಶಕ್ಕೆ ಮಣಿದು ಕೇಂದ್ರ ಸರ್ಕಾರ ತೈಲ ದರವನ್ನು ಇಳಿಸಿದ್ದರಿಂದಾಗಿ, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ₹3.05 ಇಳಿಕೆಯಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

ಕೇಂದ್ರ ಸರ್ಕಾರ ಪ್ರತಿ ಲೀಟರಿಗೆ ₹1.50 ಅಬಕಾರಿ ಸುಂಕ ಕಡಿಮೆ ಮಾಡಿದೆ. ಅಲ್ಲದೇ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ₹1ನ್ನು ಭರಿಸಲಿವೆ. ಹೀಗಾಗಿ ಪ್ರತಿ ಲೀಟರ್‌ ಬೆಲೆ ಒಟ್ಟಾರೆ ₹2.50 ಕಡಿಮೆಯಾಗಲಿದೆ. ದಾಖಲೆ ಮಟ್ಟಕ್ಕೆ ತಲುಪಿದ್ದ ಇಂಧನಗಳ ಬೆಲೆಗಳು ಇದರಿಂದ ಅಗ್ಗವಾಗಲಿದ್ದು, ಗ್ರಾಹಕರಿಗೆ ತುಸು ನೆಮ್ಮದಿ ದೊರೆಯಲಿದೆ.

ತೈಲ ದರ ದುಬಾರಿಯಾಗಿದ್ದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಇದೇ ಸೆಪ್ಟೆಂಬರ್‌ 18ರಿಂದ ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಲಾ ₹2 ಇಳಿಸಿದ್ದರು. ಕೇಂದ್ರ ₹1.50 ಸುಂಕ ಕಡಿಮೆ ಮಾಡಿರುವುದರಿಂದ ತೆರಿಗೆ ರೂಪದಲ್ಲಿ 55 ಪೈಸೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಇಳಿಕೆ ಮಾಡಿರುವ ₹2.50ರ ಜತೆಗೆ 55 ಪೈಸೆ ಸೇರುವುದರಿಂದಾಗಿ ಒಟ್ಟಾರೆ ₹3.05 ಕಡಿಮೆಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ನಾಲ್ಕು ವರ್ಷಗಳ ಗರಿಷ್ಠ ಮಟ್ಟವಾದ ಪ್ರತಿ ಬ್ಯಾರೆಲ್‌ಗೆ 86.10 ಡಾಲರ್‌ಗಳಿಗೆ ತಲುಪಿದೆ. ಅಮೆರಿಕದ ಬಡ್ಡಿದರವು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಈ ಕಾರಣಗಳಿಂದಾಗಿ ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಇಳಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹10,500 ಕೋಟಿ ನಷ್ಟ ಉಂಟಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಎರಡನೇ ಸಲ ಇಳಿಕೆ: ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಎಕ್ಸೈಸ್‌ ಸುಂಕ ಕಡಿತ ಮಾಡಿದೆ. 2017ರ ಅಕ್ಟೋಬರ್‌ನಲ್ಲಿ ಪ್ರತಿ ಲೀಟರ್‌ ಮೇಲೆ ₹ 2 ತಗ್ಗಿಸಿತ್ತು.

ಕೆಲ ರಾಜ್ಯಗಳಲ್ಲಿ ₹ 5ರಷ್ಟು ಅಗ್ಗ

ಗುಜರಾತ್‌, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು ಸಹಪ್ರತಿ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು ₹ 2.50ರಷ್ಟು ಕಡಿಮೆ ಮಾಡಿವೆ.ಇದರಿಂದ ಈ ರಾಜ್ಯಗಳಲ್ಲಿ ಇಂಧನಗಳ ದರ ಪ್ರತಿ ಲೀಟರಿಗೆ ₹ 5ರಷ್ಟು ಕಡಿಮೆಯಾದಂತಾಗಿದೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ ದರವನ್ನು ಮಾತ್ರವೇ ಲೀಟರಿಗೆ ₹ 2.50ರಷ್ಟು ತಗ್ಗಿಸಲಾಗಿದೆ.ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ರಾಜ್ಯಗಳುಸೆಪ್ಟೆಂಬರ್‌ನಲ್ಲಿಯೇ ಮಾರಾಟ ತೆರಿಗೆ ಇಳಿಕೆ ಮಾಡಿವೆ.

ಎರಡನೇ ಸಲ ಸುಂಕ ಇಳಿಕೆ

ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಎಕ್ಸೈಸ್‌ ಸುಂಕ ಕಡಿತ ಮಾಡಿದೆ.

ಈ ಹಿಂದೆ 2017ರ ಅಕ್ಟೋಬರ್‌ನಲ್ಲಿ ಪ್ರತಿ ಲೀಟರ್‌ ಮೇಲೆ ₹ 2 ರಷ್ಟು ತಗ್ಗಿಸಿತ್ತು.

2014ರ ನವೆಂಬರ್‌ನಿಂದ ₹ 2016ರ ಜನವರಿಯವರೆಗೆ ಒಟ್ಟು 9 ಬಾರಿ ಹೆಚ್ಚಿಸಿತ್ತು. ಇದರಿಂದ ಪೆಟ್ರೋಲ್‌ ₹ 11.77 ಮತ್ತು ಡೀಸೆಲ್‌ ಬೆಲೆ ₹ 13.47ರಷ್ಟು ಏರಿಕೆಯಾಗಿತ್ತು.

*ರಾಜ್ಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಮತ್ತೆ ಕಡಿತ ಮಾಡುವುದಿಲ್ಲ. ಬಸ್‌ ‍ಪ್ರಯಾಣ ದರ ಏರಿಕೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT