ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳರ ಶಂಕೆ: ಅಸ್ಸಾಂನಲ್ಲಿ ಇಬ್ಬರ ಹತ್ಯೆ

ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾ
Last Updated 10 ಜೂನ್ 2018, 19:37 IST
ಅಕ್ಷರ ಗಾತ್ರ

ಗುವಾಹಟಿ: ಮಕ್ಕಳ ಕಳ್ಳರು ಎನ್ನುವ ಅನುಮಾನದ ಮೇಲೆ ಇಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿಯನ್ನು ಬಂಧಿಸಲಾಗಿದೆ.

ಮುಂಬೈನ ಸೌಂಡ್‌ ಎಂಜಿನಿಯರ್‌ ನಿಲೋತ್ಪಲ್‌ ದಾಸ್‌ (29), ಅವರ ಸ್ನೇಹಿತ ಹಾಗೂ ಉದ್ಯಮಿ ಅಭಿಜಿತ್‌ ನಾಥ್‌ (30) ಎಂಬುವವರನ್ನು ಶುಕ್ರವಾರ ರಾತ್ರಿ ಅಸ್ಸಾಂನ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಪಂಜುರಿಯಲ್ಲಿ ಹತ್ಯೆ ಮಾಡಲಾಗಿತ್ತು.

ಈ ಇಬ್ಬರೂ ಪ್ರವಾಸಿ ತಾಣದಿಂದ ಹಿಂತಿರುಗುತ್ತಿದ್ದಾಗ ಕಾರು ತಡೆದ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದರು. ತಾವು ಅಸ್ಸಾಂನವರೇ ಆಗಿದ್ದು, ಹೊರಗಿನವರಲ್ಲ ಎಂದು ಬೇಡಿಕೊಂಡರೂ ಗ್ರಾಮಸ್ಥರು ಕಿವಿಗೊಡದೆ ಹಲ್ಲೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಿಸರ್ಗದಲ್ಲಿನ ಶಬ್ದದ ವೈವಿಧ್ಯವನ್ನು ದಾಖಲಿಸಿಕೊಳ್ಳಲು ಕಂಗಥಿಲಾಂಗ್ಸೊ ಪ್ರವಾಸಿ ತಾಣಕ್ಕೆ ಇಬ್ಬರೂ ತೆರಳಿದ್ದರು. ಗ್ರಾಮಸ್ಥರು ಹಲ್ಲೆ ನಡೆಸಿದ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂತ್ರಸ್ತರಿಬ್ಬರೂ ತಾವು ಅಮಾಯಕರು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ದೃಶ್ಯವಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿರುವ ವದಂತಿಯಿಂದ ಆತಂಕ ಸೃಷ್ಟಿಯಾಗಿ ಈ ರೀತಿಯ ಅಹಿತಕರ ಘಟನೆಗಳು ನಡೆಯುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವವರಲ್ಲಿ ಒಬ್ಬ, ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಕಳ್ಳರು ಅಸ್ಸಾಂ ಪ್ರವೇಶಿಸಿದ್ದಾರೆ ಎನ್ನುವ ವದಂತಿ ಹರಡಿದ್ದ’ ಎಂದು ಪೊಲೀಸ್‌ ಮಹಾನಿರ್ದೇಶಕ ಕುಲಧರ್‌ ಸೈಕಿಯಾ ತಿಳಿಸಿದ್ದಾರೆ.

ಈ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದಕ್ಕಾಗಿಯೇ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹರ್ಮೀತ್‌ ಸಿಂಗ್‌ ಅವರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT