ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಕಿರುಕುಳ: ಕರೆ ಮಾಡಿ ತಲಾಖ್‌ ನೀಡಿದ ಪತಿರಾಯ

Last Updated 5 ಅಕ್ಟೋಬರ್ 2018, 2:53 IST
ಅಕ್ಷರ ಗಾತ್ರ

ಲಖನೌ: ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಮನಸ್ತಾಪ ಹೊಂದಿದ್ದ ವ್ಯಕ್ತಿಯೊಬ್ಬ ಮೊಬೈಲ್‌ ಮೂಲಕವೇ ತಲಾಖ್‌ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಳಿಯ ಹಾಗೂ ಅವರ ಸಂಬಂಧಿಕರಿಂದ ನನ್ನ ಮಗಳು ಕಿರುಕುಳ ಅನುಭವಿಸಿದ್ದಳು. ವರದಕ್ಷಿಣೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ ಸೌದಿ ಅರೇಬಿಯಾದಲ್ಲಿ ಇರುವ ಅಳಿಯ ವಿಚ್ಛೇದನ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ತಾಯಿ ರೇಶ್ಮಾ ಹೇಳಿದ್ದಾರೆ.

‘ನನ್ನ ಮಗಳಿಗೆ ಆಕೆಯ ಅತ್ತೆ ಹಾಗೂ ಸಂಬಂಧಿಕರು ಕಿರುಕುಳ ನೀಡುತ್ತಿದ್ದ ಕಾರಣ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಬಳಿಕ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದ ಅವರು ತಲಾಖ್‌ ನೀಡುವುದಾಗಿ ಬೆದರಿಕೆ ಒಡ್ಡಿದ್ದರು. ಹಣ ಹೊಂದಿಸಲು ಸಾಧ್ಯವಾಗದ ಕಾರಣ ನನ್ನ ಅಳಿಯಫೋನ್‌ ಕರೆ ಮೂಲಕವೇ ತಲಾಖ್‌ ನೀಡಿದ್ದು, ಈ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿಯಿಂದ ತಲಾಖ್‌ ಪಡೆದಿರುವ ನೂರಿ, ‘ನಾನು ಎಂಟು ತಿಂಗಳ ಹಿಂದೆ ಮದುವೆಯಾಗಿದ್ದೆ. ಬೈಕ್‌ ಹಾಗೂ ₹ 50 ಸಾವಿರ ತರುವಂತೆ ಒತ್ತಾಯಿಸುತ್ತಿದ್ದ ನನ್ನ ಅತ್ತೆ ಕಿರುಕುಳ ನೀಡುತ್ತಿದ್ದರು’ ಎಂದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಪೊಲೀಸರು, ‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆ ಹಾಗೂ ಸಂಬಂಧಿಸಿದ ಐಪಿಸಿ ಸೆಕ್ಷೆನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಕೆಲವು ದಿನಗಳ ಹಿಂದಷ್ಟೇ ಅಂಕಿತ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT