ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ ಬಾಬು ನಾಗಪುರಕ್ಕೆ ಹೋದದ್ದು ಯಾಕೆ?

Last Updated 10 ಜೂನ್ 2018, 19:47 IST
ಅಕ್ಷರ ಗಾತ್ರ

ಪ್ರಣವ್‌ ಮುಖರ್ಜಿ ಯುವ ಸಂಸದನಾಗಿದ್ದ ದಿನಗಳು.ನವದೆಹಲಿಯ ತಮ್ಮ ಸಂಸದ ನಿವಾಸದ ವೆರಾಂಡದಲ್ಲಿ ಕುಳಿತು ರಸ್ತೆಯಲ್ಲಿ ಸಾಗುತ್ತಿದ್ದ ರಾಷ್ಟ್ರಪತಿ ಭವನದ ಸುಂದರ ಕಟ್ಟುಮಸ್ತು ಕುದುರೆಗಳನ್ನು ನೋಡುತ್ತ ನೋಡುತ್ತ ‘ಮುಂದಿನ ಜನ್ಮದಲ್ಲಿ ರಾಷ್ಟ್ರಪತಿ ಭವನದ ಕುದುರೆಯಾಗಿ ಹುಟ್ಟಲು ಆಸೆಯಾಗುತ್ತಿದೆ’ ಎನ್ನುತ್ತಾರೆ. ‘ಕುದುರೆ ಯಾಕೆ, ರಾಷ್ಟ್ರಪತಿಯೇ ಆಗುತ್ತೀ ಬಿಡು’ ಎಂದಿದ್ದರಂತೆ ಅವರ ಅಕ್ಕ ಅನ್ನಪೂರ್ಣ ಬ್ಯಾನರ್ಜಿ.

ರಾಷ್ಟ್ರಪತಿ ಆಗುವ ಕನಸು ಪ್ರಣವ್‌ಗೆ ಇತ್ತೋ ಇಲ್ಲವೋ ತಿಳಿಯದು. ಹಾಗೆಂದು ಅವರು ಎಲ್ಲಿಯೂ ಹೇಳಿಕೊಂಡ ದಾಖಲೆಗಳಿಲ್ಲ. ಹಾಗೆಯೇ ಪ್ರಧಾನಮಂತ್ರಿಯ ಆಸೆಯನ್ನೂ ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಐವತ್ತು ವರ್ಷಗಳ ಅವರ ರಾಜಕೀಯ ಬದುಕಿನಲ್ಲಿ ಪ್ರಧಾನಿ ಹುದ್ದೆ ಮೂರು ಬಾರಿ ಅವರ ಕೈ ತಪ್ಪಿದ್ದಂತೂ ಹೌದು.

2004ರಲ್ಲಿ ಪ್ರಧಾನಿ ಹುದ್ದೆ ಪ್ರಣವ್‌ಗೆ ಸಿಗಬೇಕಿತ್ತು. ಅವರ ಬದಲಿಗೆ ಸೋನಿಯಾ ಆರಿಸಿದ್ದು ರಾಜಕಾರಣಿಯೇ ಅಲ್ಲದ ಮನಮೋಹನ್‌ ಸಿಂಗ್ ಅವರನ್ನು. 2009ರಲ್ಲೂ ಪ್ರಣವ್‌ ಅವರನ್ನು ಕಾಂಗ್ರೆಸ್ ನಂಬಲಿಲ್ಲ. 2012ರಲ್ಲಿ ಮನಮೋಹನ್ ಅವರನ್ನು ರಾಷ್ಟ್ರಪತಿ ಮಾಡಿ, ಪ್ರಧಾನಿ ಪದವಿಯನ್ನು ಪ್ರಣವ್‌ ಕೈಗಿಡುವ ಮಾತುಗಳೂ ಹುಸಿಯಾದವು.

ರಾಜಕೀಯ ಚತುರಮತಿಯಾದ ಪ್ರಣವ್‌ 2004ರಿಂದ 2012ರ ನಡುವೆ 39 ಮಂತ್ರಿ ಸಮಿತಿಗಳ (ಗ್ರೂಪ್ ಆಫ್ ಮಿನಿಸ್ಟರ್ಸ್) ಪೈಕಿ 24ಕ್ಕೆ ಮುಖ್ಯಸ್ಥರಾಗಿದ್ದರು. 2012ರ ವೇಳೆಗೆ ರಾಷ್ಟ್ರಪತಿ ಹುದ್ದೆ ಏರಲು ಪ್ರಣವ್‌, ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. ಆದರೆ ನಿರಂತರ ನಂಬರ್ ಟೂ ಆಗಿಯೇ ಉಳಿದು ಹೋದ ಪ್ರಣವ್‌ ಅವರಲ್ಲಿನ ರಾಜಕಾರಣದ ಅಭೀಪ್ಸೆ ಆ ಹೊತ್ತಿಗೆ ಪೂರ್ಣವಾಗಿ ತೀರಿರಲಿಲ್ಲ ಎನ್ನಲಾಗಿದೆ.

‘ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ನಂತರ ಏನು ಮಾಡುವಿರಿ’ ಎಂಬ ಪ್ರಶ್ನೆಯೊಂದಕ್ಕೆ ‘ಜನಸಮೂಹಗಳಲ್ಲಿ ಕರಗಿ ಒಂದಾಗಿ ಹೋಗುವೆ’ ಎಂಬ ಉತ್ತರವನ್ನು ಪ್ರಣವ್‌ ನೀಡಿದ್ದು ಸಂದರ್ಶನವೊಂದರಲ್ಲಿ ದಾಖಲಾಗಿದೆ. ಆದರೆ ಅದು ಅಷ್ಟು ಸುಲಭ ಇರಲಾರದು. ವಿಶ್ರಾಂತ ಜೀವನ ನಡೆಸುತ್ತಿದ್ದ 82 ವರ್ಷ ವಯಸ್ಸಿನ ಪ್ರಣವ್‌ ಹಠಾತ್ತನೆ ವಿವಾದದ ಮಡುವಿಗೆ ಬಿದ್ದಿದ್ದಾರೆ.

ಬದುಕೆಲ್ಲ ತಾವು ಸೈದ್ಧಾಂತಿಕವಾಗಿ ವಿರೋಧಿಸುತ್ತ ಬಂದಿದ್ದಂತಹ, ನಾಗಪುರದಲ್ಲಿ ಆರ್.ಎಸ್.ಎಸ್.ನ ತೃತೀಯ ವರ್ಷದ ಶಿಕ್ಷಾ ವರ್ಗದ ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ಅಷ್ಟೇ ಅಲ್ಲದೆ ತಾವು ಪ್ರತಿಪಾದಿಸಿದ ಎಲ್ಲರ ಭಾರತ- ಸೆಕ್ಯುಲರ್ ಭಾರತ- ಸಹಿಷ್ಣು ಭಾರತ- ಸಂವಿಧಾನ ಮೂಲದ ರಾಷ್ಟ್ರೀಯತೆಯ ಭಾರತದಲ್ಲಿ ವಿಶ್ವಾಸ ಇಲ್ಲದವರ ವೇದಿಕೆಗೆ ಹೋದದ್ದೇಕೆ ಎಂಬ ಟೀಕೆಯನ್ನು ಪ್ರಣವ್‌ ಎದುರಿಸಬೇಕಾಯಿತು.

ಒಂದೆಡೆ ಆರ್.ಎಸ್.ಎಸ್. ವೇದಿಕೆಯಿಂದ ‘ಎಲ್ಲರ ಭಾರತ’ದ ಪಾಠ ಹೇಳಿ ಸೆಕ್ಯುಲರ್‌ವಾದಿಗಳನ್ನು ಮೆಚ್ಚಿಸಿದರೆ, ಇನ್ನೊಂದೆಡೆ ಆರ್.ಎಸ್.ಎಸ್. ಸ್ಥಾಪಕ ಡಾ.ಹೆಡಗೇವಾರ್ ಅವರನ್ನು ಭಾರತದ ಮಹಾನ್ ಪುತ್ರನೆಂದು ಹೊಗಳಿ ಆರ್.ಎಸ್.ಎಸ್.ಗೆ ಹತ್ತಿರವಾಗಿ ಎರಡು ಪಾಳೆಯಗಳ ನಡುವೆ ಸಮತೂಕ ಸಾಧಿಸುವ ಚತುರಮತಿಯನ್ನು ಮೆರೆದರು ಎನ್ನಲಾಗುತ್ತಿದೆ.

ಆರ್.ಎಸ್.ಎಸ್. ವೇದಿಕೆಗೆ ಹೋಗಿ ಪ್ರಣವ್‌ ತಮ್ಮ ಸೈದ್ಧಾಂತಿಕ ವಿರೋಧಿಗಳ ಜೊತೆಗೆ ಸಂವಾದದಲ್ಲಿ ತೊಡಗಿದ್ದನ್ನು ಮೆಚ್ಚಿದ ದೊಡ್ಡ ವರ್ಗವಿದೆ. ಚರ್ಚೆ ಮತ್ತು ಸಂವಾದ ಎಂಬುದು ಇಮ್ಮುಖ ಪ್ರಕ್ರಿಯೆಯೇ ವಿನಾ ಏಕಮುಖ ಅಲ್ಲ. ‘ಗಾಂಧೀಜಿ, ಜೆ.ಪಿ. ಮುಂತಾದವರು ತನ್ನ ಕುರಿತು ಹೇಳಿದ ಒಳ್ಳೆಯ ಮಾತುಗಳನ್ನು ತನ್ನ ಆಚಾರ ವಿಚಾರಗಳ ಸಮರ್ಥನೆಗೆ ಬಳಸಿಕೊಳ್ಳುತ್ತ ಬಂದಿದೆಯೇ ವಿನಾ ಈ ಮಹಾತ್ಮರ ವಿಚಾರ ಪ್ರಣಾಲಿಯ ಕಿಂಚಿತ್ತನ್ನಾದರೂ ಒಪ್ಪಿ ಅಳವಡಿಸಿಕೊಂಡಿದೆಯೇ, ತಿದ್ದಿಕೊಂಡಿದೆಯೇ’ ಎಂಬ ಪ್ರಶ್ನೆಗಳನ್ನು ಒಂದು ಬಣ ಎತ್ತಿದೆ.

ಹೋಗಲಿ, ತನ್ನ ಕುರಿತು ಸಹಾನುಭೂತಿ ಹೊಂದಿದ್ದ ಸರ್ದಾರ್ ಪಟೇಲರ ಮಾತುಗಳನ್ನಾದರೂ ಆರ್.ಎಸ್.ಎಸ್. ಕಿವಿ ಮೇಲೆ ಹಾಕಿಕೊಂಡಿತೇ ಎಂದು ಕೇಳುತ್ತಾರೆ ಸಮಾಜಮುಖಿ ಚಿಂತಕ ಅಪೂರ್ವಾನಂದ್. ಆರ್.ಎಸ್.ಎಸ್. ವೈಚಾರಿಕ ದೀಪಸ್ತಂಭ ಎಂದೇ ಬಣ್ಣಿಸಲಾಗುವ ಮಾಧವರಾವ್ ಸದಾಶಿವರಾವ್ ಗೋಳ್ವಲ್ಕರ್ ಅವರಿಗೆ ಬರೆದ ಪತ್ರವೊಂದರಲ್ಲಿ ಪಟೇಲರು ಹೀಗೆ ಹೇಳುತ್ತಾರೆ- ‘ಆರ್.ಎಸ್.ಎಸ್. ಕುರಿತ ನನ್ನ ದೃಷ್ಟಿಕೋನ ನಿಮಗೆ ಚೆನ್ನಾಗಿ ಗೊತ್ತು.

ನಿಮ್ಮ ಜನರೂ ಅವುಗಳನ್ನು ಒಪ್ಪುವರೆಂಬ ಆಸೆ ನನಗಿತ್ತು. ಆದರೆ ಆರ್.ಎಸ್.ಎಸ್. ಮಂದಿ ಮತ್ತು ಕಾರ್ಯಕ್ರಮಗಳ ಮೇಲೆ ನನ್ನ ಅಭಿಪ್ರಾಯಗಳು ಯಾವ ಪರಿಣಾಮವನ್ನೂ ಉಂಟು ಮಾಡಿಲ್ಲವೆಂದು ತೋರುತ್ತಿದೆ. ಹಿಂದೂಗಳನ್ನು ಸಂಘಟಿಸುವುದು ಮತ್ತು ಅವರಿಗೆ ನೆರವಾಗುವುದು ಬೇರೆ, ಆದರೆ ಅವರ ಯಾತನೆಗಳಿಗಾಗಿ ಅಮಾಯಕ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವುದು ಬೇರೆ...’

ಅಲ್ಪಸಂಖ್ಯಾತರನ್ನು ಸಾರಾಸಗಟು ಅಂಚಿಗೆ ನೂಕಿ ಬ್ರಾಹ್ಮಣ್ಯ ಆಧಿಪತ್ಯದ ಹಿಂದೂ ರಾಷ್ಟ್ರ ಸ್ಥಾಪಿಸುವ ಕಾರ್ಯಸೂಚಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಇಂದಿನಿಂದ ಐವತ್ತು ವರ್ಷಗಳ ನಂತರ ಚಿತ್ತಭಿತ್ತಿಗಳಲ್ಲಿ ಕೆತ್ತಿದಂತೆ ಉಳಿಯುವುದು ಚಿತ್ರಗಳೇ ವಿನಾ ವಿಚಾರಗಳಲ್ಲ. ಭಗವಾ ಧ್ವಜ ಏರಿಸುವ ಕ್ಷಣಗಳಲ್ಲಿ ಎದ್ದು ನಿಂತು ಗೌರವ ಸೂಚಿಸಿದ ಪ್ರಣವ್‌ ಮುಖರ್ಜಿ ಚಿತ್ರ ದಿನ ಬೆಳಗಾಗುವುದರ ಒಳಗೆ ಎದೆ ಮೇಲೆ ಕೈಯಿರಿಸಿ ಆರ್.ಎಸ್.ಎಸ್. ಪ್ರಣಾಮ ಸಲ್ಲಿಸುತ್ತಿರುವ ಚಿತ್ರವಾಗಿ ಮಾರ್ಪಟ್ಟಿತ್ತು.

ಪ್ರಣವ್‌ ನಾಗಪುರಕ್ಕೆ ಭೇಟಿ ನೀಡಿದ ಚಿತ್ರಗಳು ಮುಂಬರುವ ಐವತ್ತು ವರ್ಷಗಳ ನಂತರ ಯಾವ ರೂಪ ಪಡೆಯಲಿವೆ ಎಂಬುದು ಊಹೆಗೆ ಬಿಟ್ಟ ಸಂಗತಿ ಎಂಬುದು ಈ ಬಣದ ವಾದ. ಈ ಮಾತನ್ನು ಎಲ್ಲರಿಗಿಂತ ಮೊದಲು ಹೇಳಿ ತಮ್ಮ ತಂದೆಯನ್ನು ಎಚ್ಚರಿಸಲು ಪ್ರಯತ್ನಿಸಿದವರು ಅವರ ಮಗಳು ಶರ್ಮಿಷ್ಠಾ ಮುಖರ್ಜಿ. ಮಾತು ಮರೆತು ಹೋಗುತ್ತವೆ. ಚಿತ್ರಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಚಿತ್ರಗಳನ್ನು ಹೇಗೆಲ್ಲ ತಿದ್ದಿ ಮಾರ್ಪಡಿಸಲಾಗುತ್ತದೆ ಎಂದು ಅವರು ಆರ್.ಎಸ್.ಎಸ್.ಅನ್ನು ತಮ್ಮ ಟ್ವೀಟ್‌ನಲ್ಲಿ ದೂಷಿಸಿದ್ದರು.

ಪ್ರಣವ್‌ ಅವರ ಚಿತ್ರವನ್ನು ಆರ್.ಎಸ್.ಎಸ್. ಪ್ರಣಾಮ ಮಾಡುತ್ತಿರುವ ಚಿತ್ರವನ್ನಾಗಿ ಫೋಟೊಶಾಪ್ ಮಾಡಿ ತಿದ್ದಿರುವುದು ‘ಒಡಕು ಉಂಟು ಮಾಡುವ ಕೆಲ ರಾಜಕೀಯ ಶಕ್ತಿಗಳು’ ಎಂದು ಆರ್.ಎಸ್.ಎಸ್.ನ ಸಹ ಸರಕಾರ್ಯವಾಹ ಮನಮೋಹನ ವೈದ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇರಬಹುದು, ಇವೇ ವಿಭಜಕ ರಾಜಕೀಯ ಶಕ್ತಿಗಳು ನೆಹರೂ ಅವರನ್ನು ಸ್ವತಂತ್ರ ಭಾರತದ ಅತಿ ದೊಡ್ಡ ಖಳನಾಯಕ ಎಂದು ಬಿಂಬಿಸುತ್ತ ಬರುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಭಜಕ ಶಕ್ತಿಗಳಿಗೆ ಇನ್ನಷ್ಟು ಶಕ್ತಿ ಬಂದಿರುವುದು ಕೇವಲ ಕಾಕತಾಳೀಯ ಇರಬಹುದು. ಅವುಗಳ ವಿಕೃತಿ ಎಲ್ಲ ಎಲ್ಲೆಗಳನ್ನೂ ಮೀರಿ ಹಬ್ಬಿದೆ.

ನೆಹರೂ ಸಂತತಿಗೆ ಮೊಘಲ್ ಮುಸ್ಲಿಂ ಮೂಲವನ್ನು ಅಂಟಿಸಲಾಗಿದೆ. ಇವೇ ವಿಭಜಕ ಶಕ್ತಿಗಳು ನೆಹರೂ ಅವರನ್ನು ಹೆಣ್ಣುಬಾಕ ಚರಿತ್ರಹೀನ ಎಂದು ಅಂತರ್ಜಾಲದಲ್ಲಿ ಬಿಂಬಿಸುವ ಚಿತ್ರಗಳು- ಹಸಿ ಸುಳ್ಳುಗಳ ಖಜಾನೆಯನ್ನೇ ಸೃಷ್ಟಿಸಿವೆ. ಈ ಪೈಕಿ ಇತ್ತೀಚಿನ ಒಂದೆರಡು ಚಿತ್ರಗಳನ್ನು ನೋಡೋಣ. ಮೊದಲನೆಯ ಚಿತ್ರದಲ್ಲಿ ಯುವತಿಯೊಬ್ಬಳು ಹಿಂದಿನಿಂದ ನೆಹರೂ ಅವರ ಕೆನ್ನೆಗೆ ಮುತ್ತಿಡುತ್ತಿದ್ದಾಳೆ.

ಎರಡನೆಯ ಚಿತ್ರದಲ್ಲಿ ವಯಸ್ಸಾದ ಮತ್ತೊಬ್ಬ ಹೆಣ್ಣುಮಗಳು ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ನೆಹರೂ ಗಲ್ಲಕ್ಕೆ ಮುತ್ತಿಡುತ್ತಿದ್ದಾರೆ. ಯುವತಿ ಈಗಲೂ ಬದುಕಿದ್ದಾರೆ. ಅವರ ಹೆಸರು ನಯನತಾರಾ ಸೆಹಗಲ್. ವಯಸ್ಸು 91ವರ್ಷ. ದಿವಂಗತ ರಂಜೀತ್ ಸೀತಾರಾಂ ಪಂಡಿತ್ ಮತ್ತು ವಿಜಯಲಕ್ಷ್ಮೀ ಪಂಡಿತ್ ಅವರ ಮಗಳು. ಅಂದಹಾಗೆ ವಿಜಯಲಕ್ಷ್ಮೀ ಅವರು ಜವಾಹರಲಾಲ್ ನೆಹರೂ ಅವರ ತಂಗಿ.

ಜವಾಹರ್‌ಗಿಂತ ಹನ್ನೆರಡು ವರ್ಷ ಚಿಕ್ಕವರು. ಸ್ವಾತಂತ್ರ್ಯ ಬಂದ ನಂತರ 1955ರಲ್ಲಿ ಪ್ರಧಾನಿ ನೆಹರೂ ಬ್ರಿಟನ್‌ಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಹೈಕಮಿಷನರ್ ವಿಜಯಲಕ್ಷ್ಮೀ ಪಂಡಿತ್. ಸೋದರನಿಗೆ ಮುತ್ತಿಟ್ಟು ಬರಮಾಡಿಕೊಳ್ಳುತ್ತಾರೆ. ಮಗಳು ನಯನತಾರಾ ಕೂಡ ಮಾಮನಿಗೆ ಮುತ್ತಿಡುತ್ತಾರೆ. ಸ್ವಾತಂತ್ರ್ಯಯೋಧ ತಂದೆ ರಂಜೀತ್ ಸೀತಾರಾಂ ಪಂಡಿತ್ ನಾಲ್ಕನೆಯ ಸಲ ಬ್ರಿಟಿಷರ ಸೆರೆವಾಸದಿಂದ ಹೊರಬಂದವರು ಬದುಕಿ ಉಳಿಯುವುದಿಲ್ಲ. ತಂದೆಯಿಲ್ಲದ ನಯನತಾರಾ, ಮಾಮ ನೆಹರೂ ಮನೆಯಲ್ಲಿ ಇಂದಿರಾ ಗಾಂಧಿ ಜೊತೆಗೆ ಮತ್ತೊಬ್ಬ ಮಗಳಂತೆ ಬೆಳೆದವರು.

ಎರಡನೆಯ ಫೋಟೊ ನೆಹರೂ ಅಮೆರಿಕಗೆ ಭೇಟಿ ನೀಡಿದಾಗಿನದು. ಆಗಲೂ ಅಲ್ಲಿನ ಭಾರತೀಯ ರಾಜದೂತರಾಗಿದ್ದ ವಿಜಯಲಕ್ಷ್ಮೀ ವಿಮಾನ ನಿಲ್ದಾಣದಲ್ಲಿ ಅಣ್ಣನೂ ಆದ ಪ್ರಧಾನಿಯನ್ನು ಅಪ್ಪಿ ಮುತ್ತಿಟ್ಟು ಸ್ವಾಗತಿಸುತ್ತಾರೆ. ಇಂದಿರಾ ಗಾಂಧಿ ಸರ್ವಾಧಿಕಾರಿಯಂತೆ ನಡೆದುಕೊಂಡು ತುರ್ತುಪರಿಸ್ಥಿತಿ ಹೇರಿದ್ದನ್ನು ವಿಜಯಲಕ್ಷ್ಮೀ ಮತ್ತು ನಯನತಾರಾ ಇಬ್ಬರೂ ವಿರೋಧಿಸಿ ಆಕೆಯ ಹಗೆ ಕಟ್ಟಿಕೊಳ್ಳುತ್ತಾರೆ. ಇಂತಹ ತಾಯಿ ಮಗಳನ್ನು ನೆಹರೂ ಪ್ರೇಮಿಗಳನ್ನಾಗಿ ಮಾಡಲಾಗಿದೆ. ಅಂತರ್ಜಾಲದಲ್ಲಿ ಈ ಚಿತ್ರಗಳನ್ನು ಹುಚ್ಚೆದ್ದು ಹಂಚಿಕೊಳ್ಳಲಾಗಿದೆ.

ಮನಮೋಹನ ವೈದ್ಯ ಅವರು ಹೇಳುವ ಈ ‘ಕೆಲವು ರಾಜಕೀಯ ವಿಭಜಕ ಶಕ್ತಿಗಳ’ ಅಟಾಟೋಪಗಳಿಗೆ ಎಣೆಯೇ ಇಲ್ಲ. ಈ ಶಕ್ತಿಗಳು ಸಮಾಜಮುಖಿ ಪತ್ರಕರ್ತರನೇಕರಿಗೆ ಪ್ರಾಣಬೆದರಿಕೆ ಹಾಕುತ್ತವೆ. ಹಿಂದೂ-ಮುಸ್ಲಿಮ್ ಜಗಳ ಹಚ್ಚುವವರು ಮತ್ತು ಅದನ್ನೇ ಹಗಲಿರುಳು ತಿರುಚಿ ತೋರಿಸಿ ಟಿ.ಆರ್.ಪಿ. ಹಿಂದೆ ಓಡುವ ಟಿ.ವಿ. ಚಾನೆಲ್‌ಗಳನ್ನು ತಿವಿದು, ಬಡತನ, ನಿರುದ್ಯೋಗ, ಅನ್ಯಾಯ, ಅಸಮಾನತೆಗಳನ್ನೇ ಸುದ್ದಿ ಮಾಡಿ ಬಿಂಬಿಸುವ ರವೀಶ್ ಕುಮಾರ್ ಅವರಂತಹ ಪ್ರಾಮಾಣಿಕ ಪತ್ರಕರ್ತನನ್ನು ಅಟ್ಟಾಡಿಸಿಕೊಂಡು ಪಾಕಿಸ್ತಾನ ತಲುಪುವ ತನಕ ಗುಂಡಿಕ್ಕುವುದಾಗಿ ಬೆದರಿಸುವ ವಿಡಿಯೊ ಕಳಿಸಿ ಮೀಸೆ ತಿರುವುತ್ತವೆ. ಗೌರಿ ಲಂಕೇಶರಂತಹ ಪತ್ರಕರ್ತರನ್ನು ಗುಂಡಿಕ್ಕಿ ಕೊಲ್ಲುತ್ತವೆ.

ರಾಣಾ ಆಯೂಬ್ ಅವರಂತಹ ಪತ್ರಕರ್ತೆಯರ ಮುಖದ ಚಿತ್ರವನ್ನು ಅಶ್ಲೀಲ ಕಾಮಕೇಳಿಯ ವಿಡಿಯೊಗಳಿಗೆ ಅಂಟಿಸಿ ಹಂಚಿ ಅಂತರ್ಜಾಲದಲ್ಲಿ ವೈರಲ್ ಮಾಡುತ್ತವೆ. ನಾಳೆ ತಾಯಿ ಮಗುವನ್ನು ತಬ್ಬಿ ಮುತ್ತಿಟ್ಟರೂ ಪಾಪ ಎನ್ನಬಹುದು ಈ ವಿಭಜಕ ಶಕ್ತಿಗಳು. ಹೌದು, ಮನಮೋಹನ ವೈದ್ಯರು ಹೇಳುವುದು ಪರಮ ಸತ್ಯ.

ಬದುಕೆಲ್ಲ ಕಾಂಗ್ರೆಸ್ಸಿಗರಾಗಿದ್ದ ಪ್ರಣವ್‌ ಮುಖರ್ಜಿ ರಾಷ್ಟ್ರಪತಿಯಾಗುವ ಮುನ್ನ ಸಕ್ರಿಯ ಪಕ್ಷ ರಾಜಕಾರಣದಿಂದ ನಿವೃತ್ತಿ ಆಗಬೇಕಾಯಿತು. ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತಿಯ ನಂತರ ಸಕ್ರಿಯ ರಾಜಕಾರಣ ಪ್ರವೇಶಿಸಬಾರದು ಎಂಬ ಕಠಿಣ ನಿಯಮವೇನೂ ಇಲ್ಲ. ರೀತಿ ರಿವಾಜು ಔಪಚಾರಿಕತೆಗಳ ಕಾರಣ ಇದ್ದೀತು. ಈವರೆಗೆ ರಾಷ್ಟ್ರಪತಿಯಾಗಿ ನಿವೃತ್ತಿ ಹೊಂದಿದವರ‍್ಯಾರೂ ಪುನಃ ಸಕ್ರಿಯ ರಾಜಕಾರಣ ಪ್ರವೇಶ ಮಾಡಿಲ್ಲ.

ಬಿಜೆಪಿಯ ನಿಡುಗಾಲದ ಮಿತ್ರಪಕ್ಷ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆ ಪ್ರಣವ್‌ ನಾಗಪುರ ಭೇಟಿ ಕುರಿತು ಆಸಕ್ತಿಕರ ಸಂಪಾದಕೀಯ ಬರೆದಿದೆ. 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ಬಾರದೆ ಹೋದರೆ ಪ್ರಧಾನಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನಾಗಿ ಪ್ರಣವ್‌ ಮುಖರ್ಜಿ ಅವರನ್ನು ಹೂಡುವುದು ಆರ್.ಎಸ್.ಎಸ್. ಇರಾದೆ ಎಂದು ಹೇಳಿದೆ. ಆದರೆ ಸಂವಿಧಾನವೇ ಪರಮ ಎಂದು ಪರಿಗಣಿಸುವ ಮುಖರ್ಜಿ ಪುನಃ ಸಕ್ರಿಯ ರಾಜಕಾರಣಕ್ಕೆ ಮರಳಲಾರರು ಎನ್ನುತ್ತದೆ ರಾಜಕೀಯ ವಿಶ್ಲೇಷಣೆ.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಮಂತ್ರಿ ಮೋದಿ ನಡುವೆ ಸಾಕಷ್ಟು ಸಾಮರಸ್ಯವಿತ್ತು. ‘ಆ ಸರ್ಕಾರ ಕೂಡ ರಾಷ್ಟ್ರಪತಿಯಾಗಿ ಸಂವಿಧಾನದ ಪ್ರಕಾರ ನನ್ನ ಸರ್ಕಾರವೇ’ ಎನ್ನುವ ಪ್ರಣವ್‌ ಭಿನ್ನಾಭಿಪ್ರಾಯಗಳೂ ಇದ್ದವೆಂದು ಒಪ್ಪಿಕೊಳ್ಳುತ್ತಾರೆ. ಆದರೆ ಅವುಗಳು ಯಾವುವು ಎಂದು ಹೊರಗೆಡವುವುದಿಲ್ಲ. ಸಂವಿಧಾನವೇ ಪರಮ. ಅದರ ಪ್ರಕಾರ ನನ್ನದೇ ಆಗಿದ್ದ ಸರ್ಕಾರವೊಂದರ ಜೊತೆಗಿದ್ದ ಭಿನ್ನಾಭಿಪ್ರಾಯಗಳು ನನ್ನೊಂದಿಗೇ ಮಣ್ಣಾಗುತ್ತವೆ ಇಲ್ಲವೇ ಸುಟ್ಟು ಹೋಗುತ್ತವೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ತಂದೆ ಸಕ್ರಿಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಶರ್ಮಿಷ್ಠಾ ಭಾನುವಾರ ಸಾರಿ ಹೇಳಿದ್ದಾರೆ. 2019ರ ರಾಜಕಾರಣದಲ್ಲಿ ಪ್ರಣವ್‌ ಪಾತ್ರದ ಅಂತೆ ಕಂತೆಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ.

ಆದರೆ ಮೋಹನ್ ಭಾಗವತ್ ಅವರು ಪ್ರಣವ್‌ ಅಂತಹ ಪ್ರಣವ್‌ ಅವರನ್ನು ನಾಗಪುರಕ್ಕೆ ಕರೆದದ್ದೇಕೆ ಮತ್ತು ಖುದ್ದು ಪ್ರಣವ್‌ ಈ ಆಹ್ವಾನವನ್ನು ಒಪ್ಪಿದ್ದೇಕೆ ಎಂಬ ಪ್ರಶ್ನೆ ರಾಜಕೀಯ- ಸಾಮಾಜಿಕ ವಿಶ್ಲೇಷಕರನ್ನು ಬಹುಕಾಲ ಕಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT