ಕಥೆ ಹೇಳುವುದು ಸುಲಭ

7

ಕಥೆ ಹೇಳುವುದು ಸುಲಭ

Published:
Updated:

‘ಮಕ್ಕಳಿಗೆ ಕಥೆ ಹೇಳುವುದು ಕಷ್ಟ. ಅವರು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಸಾವಿನ ನಂತರ ಏನಾಗುತ್ತದೆ, ಯಾಕೆ ಹೀಗೆ ಆಗುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಾರೆ. ನನ್ನ ಮಕ್ಕಳು ಅವರ ಅಜ್ಜಿಯ ಕಥೆಯನ್ನೇ ಇಷ್ಟಪಡುತ್ತಾರೆ’ ಎಂದು ಲೇಖಕ ವಿವೇಕ ಶಾನಭಾಗ ಹೇಳಿದ್ದಾರೆ (ಪ್ರ.ವಾ., ಜೂನ್ 8).

ಆದರೆ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಲಾಗದು. ಏಕೆಂದರೆ ಮಕ್ಕಳಿಗೆ ಕಥೆ ಹೇಳುವ ತಂತ್ರ, ವಸ್ತುವಿನ ಆಯ್ಕೆಯಲ್ಲಿ ಸರಿಯಾದ ವಿವೇಚನೆಯನ್ನು ಮಕ್ಕಳ ಕಥೆಗಾರನು ಅರಿತರೆ ಕಥೆ ಹೇಳುವುದು ಕಷ್ಟವಲ್ಲ. ಇದಕ್ಕೆ ನವ್ಯೋತ್ತರ ಕನ್ನಡ ಮಕ್ಕಳ ಸಾಹಿತ್ಯದ ಹಿರಿಯ ಕಥೆಗಾರ ನಾ. ಡಿಸೋಜ ಅವರ ಕಥೆಗಳು ಅತ್ಯುತ್ತಮ ಉದಾಹರಣೆಗಳಾಗಿವೆ.

ಅಜ್ಜಿಯ ಕಥೆಗಳಲ್ಲಿನ ಕಾಲ್ಪನಿಕ ಸಂಗತಿಗಳು ವಾಸ್ತವಿಕ ಘಟನೆಗಳಿಗೆ ಹತ್ತಿರವಾಗಿರುತ್ತವೆ. ಜೊತೆಗೆ ಅವು ಮಕ್ಕಳ ಭಾವಪ್ರಪಂಚಕ್ಕೆ ಪರಿಚಯವಾದವುಗಳೇ ಆಗಿರುತ್ತವೆ. ಪ್ರತಿಯೊಂದು ಕಥೆಯಲ್ಲೂ ಒಬ್ಬ ಸಾಹಸಿ ನಾಯಕ ಇದ್ದೇ ಇರುತ್ತಾನೆ. ಜೊತೆಗೆ ಆ ನಾಯಕತ್ವವನ್ನು ನಿರ್ವಹಿಸುವವನು ಕಿರಿಯನೇ ಆಗಿರುತ್ತಾನೆ.

ಕಥೆಯು ಮುಂದುವರೆದಂತೆ ಮುಂದೇನಾಯ್ತು, ಎಂಬ ರೋಚಕತೆ, ಕುತೂಹಲವನ್ನು ಅಜ್ಜಿಕಥೆ ಒಳಗೊಂಡಿರುತ್ತದೆ. ಅದಕ್ಕೇ ಇಂದು ಅರ್ಧಕ್ಕೆ ನಿಲ್ಲಿಸಿದ ಕಥೆಯನ್ನು, ಮಕ್ಕಳಿಂದಲೇ ಪುನಃ ಕೇಳಿ ತಿಳಿದುಕೊಂಡು; ‘ಎಲ್ಲಿಗೆ ನಿಲ್ಲಿಸಿದ್ದೆ ಹೇಳಿ’ ಎಂದು ಮತ್ತೆ ಮುಂದುವರೆಸುವ ಮೌಖಿಕ ಪರಂಪರೆಯ ಕಥನ ಕಲೆ ನಾ. ಡಿಸೋಜ ಅವರ ಕಥೆಗಳಲ್ಲಿದೆ.

ಪ್ರಶ್ನೆಗಳು ಮೂಡಿ, ಅವಕ್ಕೆ ಹಿರಿಯರಿಂದ ಉತ್ತರ ಕಂಡುಕೊಳ್ಳುವಂತೆ ಸ್ಫೂರ್ತಿ ಕೊಡುವುದೇ ಮಕ್ಕಳ ಸಾಹಿತ್ಯದ ಪ್ರಧಾನ ಗುಣವಾಗಿದೆ. ಆದರೆ ಹಿರಿಯರ ಸಾಹಿತ್ಯ ಹಾಗಲ್ಲ. ಅನ್ನಿಸಿದ ಅರ್ಥಕ್ಕೆ ಸ್ವತಃ ಅವನೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಆದ್ದರಿಂದ ಮಕ್ಕಳಿಗೆ ಕಥೆ ಹೇಳುವುದು ಕಷ್ಟವಲ್ಲ; ಸುಲಭ. ಅದಕ್ಕೆ ಹಿರಿಯರು ಮಕ್ಕಳಿಗೆ ಮಕ್ಕಳಾಗಬೇಕು. ಮೊಮ್ಮಕ್ಕಳಿಗೆ ತಾವು ಮೊಮ್ಮಕ್ಕಳಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry