ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಯಶವಂತಪುರವನ್ನು ಸಿಂಗಪುರ ಮಾಡಲಿ’

Last Updated 10 ಜೂನ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್‌.ಟಿ.ಸೋಮಶೇಖರ್‌, ಸಿದ್ದರಾಮಯ್ಯನವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಲೇ ಯಶವಂತಪುರ ಕ್ಷೇತ್ರಕ್ಕೆ ಸಿಂಹಪಾಲು ಅನುದಾನ ದೊರೆತಿದೆ ಎಂಬ ಮಾತುಗಳಿವೆ. ಹೆಚ್ಚು ಸುದ್ದಿಯಲ್ಲಿದ್ದ ಶಾಸಕರ ಪೈಕಿ ಸೋಮಶೇಖರ್‌ ಸಹ ಒಬ್ಬರು.

‘2013ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳಲ್ಲಿ ಶೇ 50ರಷ್ಟು ಪೂರ್ತಿ ಮಾಡಿದ್ದೇನೆ’ ಎಂದು ಹೇಳುವ ಇವರು, ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎನ್ನುವುದನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

*ಜನ ಯಾವ ಕಾರಣಕ್ಕೆ ನಿಮ್ಮನ್ನು ಗೆಲ್ಲಿಸಿದ್ದಾರೆ?

2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 1,076 ಮತಗಳಿಂದ ಸೋತಿದ್ದೆ. ಅಲ್ಲಿಂದ 2013ರ ಚುನಾವಣೆವರೆಗೂ ಜನರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದೆ. ಇದರ ಪರಿಣಾಮ 2013ರ ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸಿದರು. ಈ ಬಾರಿಯ ಗೆಲುವಿಗೂ ಜನರೊಂದಿಗಿನ ಒಡನಾಟವೇ ಮುಖ್ಯ ಕಾರಣ. ಜನ ಕರೆದ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿದ್ದೇನೆ. ಸದಾ ಕ್ಷೇತ್ರದಲ್ಲಿಯೇ ಇರುತ್ತಿದ್ದೆ. ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ.

*ಕ್ಷೇತ್ರದಲ್ಲಿರುವ ಸಮಸ್ಯೆಗಳೇನು?

ಕುಡಿಯುವ ನೀರು, ಒಳಚರಂಡಿ, ಕಸದ ಘಟಕ, ವಸತಿ ಇವುಗಳೇ ಪ್ರಮುಖ ಸಮಸ್ಯೆಗಳು. ಇವುಗಳ ನಿವಾರಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಇಲ್ಲಿನ ಸಾಕಷ್ಟು ಮಂದಿ ನೀರಿಗಾಗಿ ಕೊಳವೆ ಬಾವಿ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಅಂತರ್ಜಲದ ಪ್ರಮಾಣ ಕುಗ್ಗಿದೆ. ಕ್ಷೇತ್ರದಲ್ಲಿರುವ 23 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕಾಮಗಾರಿ ಶೇ 60ರಷ್ಟು ಪೂರ್ಣಗೊಂಡಿದೆ. ಒಳಚರಂಡಿ ಕಾಮಗಾರಿಗೆ ಎರಡು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಲಾಗಿದೆ.

*ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ?

ನಮ್ಮ ಕ್ಷೇತ್ರದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ 4 ಸಾವಿರ ಆಶ್ರಯ ನಿವೇಶನಗಳನ್ನು ನೀಡಬೇಕೆಂದಿದ್ದೇನೆ. ಮಂಚನಬೆಲೆಯಿಂದ ಏತ ನೀರಾವರಿ ಮೂಲಕ 32 ಹಳ್ಳಿಗೆ ನೀರಾವರಿ ಸೌಲಭ್ಯ ನೀಡುವ ಯೋಜನೆ ಅಂತಿಮ ಹಂತದಲ್ಲಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ನೀಡುತ್ತೇವೆ. ಮಾಗಡಿ ರಸ್ತೆಯನ್ನು ಚತುಷ್ಪಥವನ್ನಾಗಿ ಮಾಡುವ ಕಾಮಗಾರಿಯ ಟೆಂಡರ್‌ ಆಗಿದ್ದು ಎರಡು ತಿಂಗಳಲ್ಲಿ ಕೆಲಸ ಶುರುವಾಗಲಿದೆ.

*ನಿಮ್ಮ ಕ್ಷೇತ್ರದ ಐದು ಕಸ ಸಂಸ್ಕರಣಾ ಘಟಕಗಳ ಸ್ಥಳಾಂತರದ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?

ಈ ಹಿಂದೆ ಐದೂ ಘಟಕಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದೆ. ಆದರೆ, ಈಗ ಅದರ ಬಗ್ಗೆ ನಾನೇನೂ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ, ಜೆಡಿಎಸ್‌ ಪರ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿದ್ದ ಕುಮಾರಸ್ವಾಮಿ, ‘ಯಶವಂತಪುರ ಕಸವಂತಪುರ’ ಎಂದಿದ್ದರು. ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ, ಆದ್ಯತೆ ಮೇರೆಗೆ ಕಸದ ಘಟಕಗಳನ್ನು ಸ್ಥಳಾಂತರಿಸುತ್ತೇನೆ’ ಎಂದು ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ ಅದೇನು ಸಿಂಗಪುರ ಮಾಡುತ್ತಾರೊ ನೋಡುತ್ತೇವೆ.

*ದಿನನಿತ್ಯ ಎಷ್ಟು ಜನರನ್ನು ಭೇಟಿ ಮಾಡುತ್ತೀರಿ. ಅವರು ನಿಮ್ಮ ಮುಂದಿಟ್ಟಿರುವ ಅಹವಾಲುಗಳೇನು?

ಎಲ್ಲಾ ದಿನಗಳಲ್ಲೂ ಕ್ಷೇತ್ರದಲ್ಲಿಯೇ ಲಭ್ಯವಿರುತ್ತೇನೆ. ಜನರ ಅಹವಾಲುಗಳನ್ನು ಆಲಿಸುತ್ತೇನೆ. ಕುಡಿಯುವ ನೀರು ಹಾಗೂ ವಸತಿ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಜನ ಬರುತ್ತಾರೆ. ಸದ್ಯ ಅವುಗಳ ಬಗ್ಗೆಯೇ ಗಮನ ಹರಿಸಿದ್ದೇನೆ.

*ಬೆಂಗಳೂರಿನಲ್ಲಿ ಅಧಿವೇಶನ ನಡೆಯುವಾಗ ನಗರದ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ಹಿಂದಿನ ವಿಧಾನಸಭೆಯಲ್ಲಿ ನಿಮ್ಮ ಹಾಜರಾತಿ ಎಷ್ಟಿತ್ತು?

ಬೆಳಗಾವಿ ಅಧಿವೇಶನದ ಸಮಯದಲ್ಲಿ ಆರೋಗ್ಯ ಸರಿಯಿಲ್ಲದೆ 2 ದಿನ ಹಾಗೂ ಬೆಂಗಳೂರಿನಲ್ಲಿ ನಡೆದ ಅಧಿವೇಶನದ ವೇಳೆ ದೆಹಲಿಗೆ ಹೋಗಿದ್ದರಿಂದ 2 ದಿನ ಗೈರಾಗಿದ್ದೆ. ಅದನ್ನು ಹೊರತುಪಡಿಸಿ ಅಧಿವೇಶನದ ಎಲ್ಲಾ ದಿನಗಳಲ್ಲೂ ಹಾಜರಾಗಿದ್ದೇನೆ.

*ಬ್ರ್ಯಾಂಡ್‌ ಬೆಂಗಳೂರಿಗೆ ನೀವು ಏನು ಮಾಡುತ್ತೀರಿ?

ಇದಕ್ಕಾಗಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಇದರ ಬಗ್ಗೆ ಈಗಾಗಲೇ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರ ಜೊತೆ ಚರ್ಚಿಸಿದ್ದೇನೆ.

*ಚುನಾವಣೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ?

₹ 10.50 ಲಕ್ಷ ಖರ್ಚು ಮಾಡಿದ್ದೇನೆ. ಎಲ್ಲವನ್ನೂ ಚೆಕ್‌ನಲ್ಲಿಯೇ ನೀಡಿದ್ದೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇನೆ. ನನ್ನದು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂದೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT