ಪುರಸಭೆಗೆ ‘ಸ್ಮಶಾನ’ ವೈರಾಗ್ಯ

7
ಸೌಲಭ್ಯ ಕೊರತೆ l ಚಂದಾ ಎತ್ತಲು ಮುಂದಾದ ನ್ಯೂ ಸ್ಟಾರ್ ಗ್ರೂಪ್

ಪುರಸಭೆಗೆ ‘ಸ್ಮಶಾನ’ ವೈರಾಗ್ಯ

Published:
Updated:

ಸವದತ್ತಿ: ಇಲ್ಲಿನ ಸ್ಮಶಾನಗಳು ಅಂತ್ಯಕ್ರಿಯೆಗೆ ಯೋಗ್ಯವಿಲ್ಲದಂತಾಗಿದ್ದು, ಮೂಲ ಸೌಲಭ್ಯ ಒದಗಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸುತ್ತಿರುವ ಪುರಸಭೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಯಿಂದಾಗಿ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂಥದ್ದರಲ್ಲಿ ಯಾರಾದರೂ ನಿಧನರಾದರೆ ಅಂತ್ಯಕ್ರಿಯೆಯ ಚಿಂತೆ ಕಾಡುವಂತಾಗಿದೆ. ಸ್ಮಶಾನದಲ್ಲಿ ಸೌಕರ್ಯಗಳನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿರುವ ಪುರಸಭೆಯ ನಡೆಗೆ ಸಾರ್ವಜನಿಕರು ರೋಸಿಹೋಗಿದ್ದಾರೆ.

ಶನಿವಾರ ಮುಂಜಾನೆಯಿಂದ ಆಗಾಗ ಸುರಿಯುವ ಜಿಟಿಜಿಟಿ ಮಳೆಯಿಂದಾಗಿ, ದಹನ ಕಾರ್ಯಕ್ಕೆ ಅಡ್ಡಿಯಾಗುವಂತಾಗಿತ್ತು. ಮೃತರ ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಪರಸ್ಥಳದಿಂದ ಬಂದ ಆಪ್ತರ ಮಧ್ಯೆ, ‘ಪುರಸಭೆಗೆ ಏನಾಗಿದೆ ಧಾಡಿ. ನಾಳೆ ಅವರು ಸತ್ತರೆ ಅವರ ಕಳೇಬರವೂ ಇಲ್ಲಿಗೇ ಬರುವುದೆಂಬ ಸಾಮಾನ್ಯ ಜ್ಞಾನವಿಲ್ಲವೇ. ಬನ್ನಿ ನಮ್ಮೂರಿನ ಸ್ಮಶಾನ ನೋಡಿ’ ಎಂಬ ಮಾತುಗಳೂ ಕೇಳಿ ಬಂದವು.

‘ಇಲ್ಲಿನ ಕಲ್ಮಠ ಸ್ಮಶಾನದಲ್ಲಿ ದಹನಕ್ಕಾಗಿ ತಗಡಿನ ಶೆಡ್ ಹಾಕಲಾಗಿದೆ. ಆದರೆ ಎರಡು ವರ್ಷದ ಹಿಂದೆ ಅದನ್ನು ಸರಿಪಡಿಸುವಂತೆ ಪುರಸಭೆಗೆ ಸಾರ್ವಜನಿಕರು ಹಾಗೂ ನ್ಯೂ ಸ್ಟಾರ್‌ ಗ್ರೂಪ್‌ನ ಎಲ್ಲ ಸದಸ್ಯರು ಒತ್ತಾಯಿಸಿ ಪ್ರತಿಭಟನೆ  ಮಾಡಿದ್ದರು. ಅದಕ್ಕೆ ಕ್ಯಾರೇ ಎನ್ನದ ಇಲ್ಲಿನ ಅಧಿಕಾರಿಗಳು ಸ್ಮಶಾನ ಸುಧಾರಣೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಸಮಾಜದ ಹಿರಿಯರಾದ ಶ್ರೀಕಾಂತ ಜೋರಾಪುರ ಹೇಳಿದರು.

ಕುಡಿಯುವ ನೀರು, ರಸ್ತೆ, ನೆರಳು, ಬೆಳಕಿನ ವ್ಯವಸ್ಥೆ ಮಾಡುವಂತೆ ಅಗ್ರಹಿಸಲಾಗಿತ್ತು. ಅದನ್ನು ಮಾಡದೇ ಇದ್ದಾಗ ಗ್ರೂಪನ್‌ ಸದಸ್ಯರು ಸ್ವತಃ ಜೆ.ಸಿ.ಬಿ ತಂದು ಸುಧಾರಣೆಗೆ ಮುಂದಾದರು. ಆಗ ಪುರಸಭೆಯವರು ಬಂದು ಎಲ್ಲ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು.

‘ಅರ್ಧಂಬರ್ಧ ಸ್ವಚ್ಛತೆ ಮಾಡಿದರು. ಕುಡಿಯುವ ನೀರಿನ ವ್ಯವಸ್ಥೆಯಂತೂ ಮಾಡಲೇ ಇಲ್ಲ. ಲಕ್ಷಾಂತರ ರೂಪಾಯಿ ವೆಚ್ಚದ ಕಾಂಕ್ರೀಟ್‌ ರಸ್ತೆ ಕೆಲವೇ ತಿಂಗಳಲ್ಲಿ ಕಿತ್ತು ಹೋಗಿದೆ. ಎರಡು ವರ್ಷ ಕಳೆದರೂ ಸ್ಮಶಾನ ಪ್ರಗತಿಯಾಗಲೇ ಇಲ್ಲ’ ಎಂದು ನ್ಯೂ ಸ್ಟಾರ್‌ ಗ್ರೂಪ್‌ನ ಅಧ್ಯಕ್ಷ ಶಂಕರ ಇಜಂತಕರ ಬೇಸರಿಸಿದರು.

‘ಸೋಮವಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮಂಗವಾರ ಪುರಸಭೆ ಎದುರೇ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿ ಸ್ಮಶಾನ ಸುಧಾರಣೆ ಮಾಡಲಾಗುವದು’ ಎಂದರು.  ಈಗಲಾದರೂ ಪುರಸಭೆ, ಪ್ರತಿನಿಧಿಗಳು ಏನಾದರೂ ಕ್ರಮಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.

–ಸದಾಶಿವ ಮಿರಜಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry