ಜಾತಿವಾರು ಪುರಸ್ಕಾರ ನಿಜವಾದ ಅಭಿನಂದನೆಯಲ್ಲ

7
ರೈತರ, ಕಾರ್ಮಿಕರ, ಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಅಭಿನಂದನಾ ಸಮಾರಂಭದಲ್ಲಿ ಪ್ರೊ.ಎ.ಬಿ.ರಾಮಚಂದ್ರಪ್ಪ

ಜಾತಿವಾರು ಪುರಸ್ಕಾರ ನಿಜವಾದ ಅಭಿನಂದನೆಯಲ್ಲ

Published:
Updated:

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು ಸಹಜ. ಆದರೆ, ಜಾತಿವಾರು ಸಂಘಟನೆಗಳು ತಮ್ಮ ಸಮುದಾಯದ ಮಕ್ಕಳನ್ನಷ್ಟೇ ಗುರುತಿಸಿ ಪುರಸ್ಕರಿಸುವುದು ಹೆಚ್ಚಾಗಿ ಕಾಣಿಸುತ್ತಿದೆ. ಈ ಪುರಸ್ಕಾರ ನಿಜವಾದ ಅಭಿನಂದನೆಯಾಗದು ಎಂದು ಉಪನ್ಯಾಸಕ ಪ್ರೊ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ, ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟವು ಭಾನುವಾರ ರೋಟರಿ ಬಾಲಭವನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ರೈತರ, ಕಾರ್ಮಿಕರ, ಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ಯತೀತವಾಗಿದ್ದರೆ ಅದುವೇ ನಿಜವಾದ ಪುರಸ್ಕಾರ. ಕಾರ್ಮಿಕರು, ರೈತರು, ಗುತ್ತಿಗೆ ಕಾರ್ಮಿಕರ ಮಕ್ಕಳು ಎಂದಾಗ ಅದು ಒಂದು ಜಾತಿ ಸಮುದಾಯಕ್ಕೆ ಸೇರಿದ ಮಕ್ಕಳಲ್ಲ, ದುಡಿಯುವ ವರ್ಗದ ಮಕ್ಕಳು ಆಗಿರುತ್ತಾರೆ. ಇದೇ ಮಕ್ಕಳು ಮುಂದೆ ನಾಡನ್ನು ಕಟ್ಟುವವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬಡತನ, ಸಂಕಟಗಳೇ ನಮ್ಮ ಅಕ್ಷರಗಳನ್ನು ಕಸಿದುಕೊಂಡಿರುತ್ತವೆ. ಹಾಗಾಗಿ ನಮ್ಮ ಹೆತ್ತವರು ಅಕ್ಷರಲೋಕದಿಂದ ದೂರ ಉಳಿದಿದ್ದರು. ಹೆಚ್ಚು ಅಂಕ ಗಳಿಸಿದವರು ಮಾತ್ರ ಬುದ್ಧಿವಂತರು ಅಥವಾ ಹೆಚ್ಚು ಅಂಕ ಗಳಿಸುವುದೇ ಬುದ್ಧಿವಂತಿಕೆಯ ಮಾನದಂಡ ಎಂದು ತಿಳಿಯಬಾರದು. ಹಸಿವು, ಅವಮಾನ, ಕಷ್ಟಗಳ ನಡುವೆ ಓದಿ ಮುಂದೆ ಬರುವವರೇ ಸಮಾಜ ಕಟ್ಟುವವರು ಆಗಿರುತ್ತಾರೆ. ಅವರಿಗೆ ಬದುಕೇ ಪಠ್ಯವಾಗಿರುತ್ತದೆ. ಜತೆಗೆ ಓದು ಸೇರಿಕೊಂಡಿರುತ್ತದೆ. ಇವತ್ತು ಅತ್ಯುತ್ತಮ ಸ್ಥಾನದಲ್ಲಿ ಇರುವವರೆಲ್ಲ ಬೆವರಿನ ಮೂಲದಿಂದ ಬಂದವರೇ ಆಗಿದ್ದಾರೆ ಎಂದು ಹೇಳಿದರು.

ಈ ದೇಶ ಎಲ್ಲರಿಗೂ ಅಕ್ಷರ ಕಲಿಸಿದ ದೇಶವಲ್ಲ. ಪೂರ್ವಕಾಲದಲ್ಲಿ ಇದ್ದ ಗುರುಕುಲ ಪದ್ಧತಿ, ಐಗಳಮಠ, ಬ್ರಹ್ಮಮಠಗಳೆಲ್ಲ ಉನ್ನತ ಜಾತಿಯವರಿಗಷ್ಟೇ ಮಾತ್ರ ವಿದ್ಯೆ ನೀಡಿದವು. ಸಾವಿರಾರು ವರ್ಷಗಳಲ್ಲಿ ಬೇರೆ ಬೇರೆ ರಾಜರು ಆಳ್ವಿಕೆ ಮಾಡಿದರು. ಆದರೆ ಶಿವಾಜಿ, ಸಾಹೂ ಮಹಾರಾಜ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂಥ ಕೆಲವರನ್ನು ಬಿಟ್ಟರೆ ಎಲ್ಲರಿಗೂ ವಿದ್ಯೆ ನೀಡುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಎಲ್ಲರಿಗೂ ವಿದ್ಯೆ ನೀಡಬೇಕು ಎಂದು ಬ್ರಿಟಿಷರು ನಿರ್ಧರಿಸಿದಾಗಲೂ ಆಗಿನ ಕಾಂಗ್ರೆಸ್‌ನ ಹಲವರು ವಿರೋಧಿಸಿದ್ದರು ಎಂದು ನೆನಪಿಸಿದರು.

ಅಕ್ಷರದಿಂದ, ವಿದ್ಯೆಯಿಂದ ದೂರವಿಟ್ಟರಷ್ಟೇ ಬೌದ್ಧಿಕವಾಗಿ ಶೂದ್ರಾತಿಶೂದ್ರರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳಲು ಸಾಧ್ಯ ಎಂಬ ಕಾರಣಕ್ಕೆ ಅಕ್ಷರ ವಂಚಿಸಲಾಯಿತು. ನಾವು ಅಕ್ಷರಗಳನ್ನೇ ಬಿಡುಗಡೆಯ ದಾರಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರಿ ಗುತ್ತಿಗೆ ನೌಕರರ ಮಹಾಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆರ್‌.ಎಲ್‌. ಕಾನೂನು ಕಾಲೇಜು ಉಪನ್ಯಾಸಕ ಪ್ರೊ. ವಿದ್ಯಾಧರ ವೇದವರ್ಮ, ಆರೋಗ್ಯ ಇಲಾಖೆಯ ಮೋಹನ್‌ ಮೇಲಿನಮನಿ, ಜಿಲ್ಲಾ ಮುಖಂಡ ಎನ್‌.ಸಿ. ಹಾಲಸ್ವಾಮಿ, ಹರಿಹರ ಎಪಿಎಂಸಿಯ ಕೆ.ಬಿ. ಸಿದ್ದೇಶ್‌, ಕೃಷಿ ಇಲಾಖೆಯ ಅನಿಲ್‌ ಕುಮಾರ್‌, ವಾಣಿಜ್ಯ ಇಲಾಖೆಯ ರೋಷನ್‌ ಉಪಸ್ಥಿತರಿದ್ದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸತೀಶ್‌ ಅರವಿಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್‌ ವಂದಿಸಿದರು. ಕರ್ನಾಟಕ ಜನಶಕ್ತಿ ಸಂಘಟನೆಯ ಉಷಾ ಎಚ್‌. ಕೈಲಾಸದ್‌ ಕಾರ್ಯಕ್ರಮ ನಿರೂಪಿಸಿದರು.

ಹೆತ್ತವರು ಹೆಚ್ಚು ಕಲಿಯದೇ ಇದ್ದರೂ, ಮಕ್ಕಳು ಕಲಿಯುತ್ತಿರುವುದನ್ನು ಕಂಡಾಗ ಅವರ ಕಣ್ಣಲ್ಲಿ ಬೆಳಕು ಮೂಡತ್ತದೆ. ಕನಸು ಅರಳುತ್ತದೆ. ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಆ ಬೆಳಕನ್ನು ಆರಿಸಬಾರದು.

ಪ್ರೊ. ಎ.ಬಿ. ರಾಮಚಂದ್ರಪ್ಪ, ಉಪನ್ಯಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry