ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್, ಬೇಕರಿ, ರೆಸ್ಟೊರೆಂಟ್ ಬಂದ್ ಇಂದು

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌; ನಗರಕ್ಕೆ ಬರುವವರಿಗೆ ತಟ್ಟಲಿದೆ ಬಂದ್‌ ಬಿಸಿ
Last Updated 11 ಜೂನ್ 2018, 4:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋಟೆಲ್‌ನ ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ, ಹುಬ್ಬಳ್ಳಿಯ ಹೋಟೆಲ್‌ಗಳ ಮಾಲೀಕರು ಹಾಗೂ ಕಾರ್ಮಿಕರು ಭಾನುವಾರ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಿದ್ದು, ಸೋಮವಾರ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಹೋಟೆಲ್‌ಗಳನ್ನು ಮುಚ್ಚಿ ಬಂದ್ ಆಚರಿಸಲಿದ್ದಾರೆ.

ಬಂದ್‌ ಕರೆ ಕೇವಲ ಅವಳಿನಗರಕ್ಕಷ್ಟೇ ಸೀಮಿತವಾಗದೇ ಕುಂದಗೋಳ ಮತ್ತು ಕಲಘಟಗಿಯಲ್ಲೂ ನಡೆಯಲಿದೆ. ಹೋಟೆಲ್ ಮಾಲೀಕರ ಸಂಘ ನೀಡಿರುವ ಬಂದ್‌ಗೆ ಬಾರ್ ಆ್ಯಂಡ್ ರೆಸ್ಟೊರೆಂಟ್ ಅಸೋಸಿಯೇಷನ್ ಹಾಗೂ ಬೇಕರಿ ಆ್ಯಂಡ್ ಸ್ವೀಟ್ ಡೀಲರ್ಸ್‌ಗಳ ಸಂಘ ಕೂಡ ಬೆಂಬಲ ನೀಡಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಕೂಡ ಬಂದ್‌ಗೆ ಬೆಂಬಲ ಸೂಚಿಸಿದೆ.

‘ಹಲ್ಲೆ ಖಂಡಿಸಿ, ಕುಂದಗೋಳ ಹಾಗೂ ಕಲಘಟಗಿಯಲ್ಲೂ ಬಂದ್ ನಡೆಯಲಿದೆ. ಇದರ ಜತೆಗೆ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಟೀ ಮಾರಾಟ ಮಾಡುವ ಡಬ್ಬಿ ಅಂಗಡಿಗಳ ಮಾಲೀಕರು ಕೂಡ ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಮರಾಠಾ ಗಲ್ಲಿಯಲ್ಲಿರುವ ಸಂಘದ ಕಚೇರಿಯಿಂದ ದುರ್ಗದ ಬೈಲ್, ದಾಜಿಬಾನ ‍ಪೇಟೆ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು’ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಉಚ್ಚಿಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿನ್ನೆಲೆ: ಚನ್ನಮ್ಮನ ವೃತ್ತದ ಬಳಿ ಇರುವ ಬ್ರಹ್ಮಶ್ರೀ ಹೋಟೆಲ್‌ಗೆ ಜೂನ್‌ 6ರಂದು ರಾತ್ರಿ ಬಂದಿದ್ದ ಯುವಕರ ಗುಂಪು, ಆಹಾರ ಸರಿ ಇಲ್ಲ ಎಂದು ಜಗಳ ತೆಗೆದು, ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಘಟನೆ ಸಂಬಂಧ, ಉಪನಗರ ಠಾಣೆ ಪೊಲೀಸರು ಜೂನ್ 7ರಂದು ಪಡದಯ್ಯನ ಹಕ್ಕಲಿನ ಮಂಜುನಾಥ ಬಾಗಲಕೋಟಿ ಹಾಗೂ ನಾಗರಾಜ ಧೋತ್ರೆ ಎಂಬುವರನ್ನು ಬಂಧಿಸಿದ್ದರು. ಈ ಪೈಕಿ ಮಂಜುನಾಥ ಬಾಗಲಕೋಟಿ, ಹೋಟೆಲ್‌ ಮಾಲೀಕ ನಾರಾಯಣ ಶೆಟ್ಟಿ ಹಾಗೂ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರತಿ ದೂರು ದಾಖಲಿಸಿದ್ದ.

ಬಂದ್‌ಗೆ ಬೆಂಬಲ

ಹುಬ್ಬಳ್ಳಿ, ಧಾರವಾಡ, ಕುಂದಗೋಳ ಹಾಗೂ ಕಲಘಟಗಿ ಹೋಟೆಲ್ ಮಾಲೀಕರ ಸಂಘ

ಹುಬ್ಬಳ್ಳಿ–ಧಾರವಾಡ ಬಾರ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್

ಹುಬ್ಬಳ್ಳಿ–ಧಾರವಾಡ ಬೇಕರಿ ಆ್ಯಂಡ್ ಸ್ವೀಟ್ ಡೀಲರ್ಸ್ ಅಸೋಸಿಯೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT