ಅಂಕಣಗಳನ್ನು ಸಾಹಿತ್ಯ ವಲಯ ಗುರುತಿಸಲಿ

7
‘ಅಂಕಣ ಬರಹ’ ಸಂವಾದದಲ್ಲಿ ಕೃಷ್ಣಮೂರ್ತಿ ಹನೂರು ಅಭಿಪ್ರಾಯ

ಅಂಕಣಗಳನ್ನು ಸಾಹಿತ್ಯ ವಲಯ ಗುರುತಿಸಲಿ

Published:
Updated:

ಮೈಸೂರು: ಪತ್ರಿಕೆಗಳಲ್ಲಿ ಇಂದು ಏನಾದರೂ ಓದಿಸುವಂತಿದ್ದರೆ ಅದು ಅಂಕಣಗಳು ಮಾತ್ರ. ಅಂಕಣಗಳು ಮತ್ತು ಅಂಕಣಕಾರರನ್ನು ಸಾಹಿತ್ಯ ವಲಯವು ಗುರುತಿಸುವಂತಾಗಬೇಕು ಎಂದು ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಕಲಾ ಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಅಂಕಣ ಬರಹ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಕಣಗಳು ರಾಜಕಾರಣಿಗಳನ್ನು ತಿದ್ದುತ್ತವೊ ಇಲ್ಲವೊ ಗೊತ್ತಿಲ್ಲ. ಆದರೆ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ. ಅಂಕಣ ಬರಹವನ್ನು ಸಾಹಿತ್ಯ ಪ್ರಕಾರವೆಂದು ಪರಿಗಣಿಸಬೇಕು. ವಿವಿಧ ಸಾಹಿತ್ಯ ಅಕಾಡೆಮಿಗಳು ನೀಡುವ ಪ್ರಶಸ್ತಿಗೆ ಅಂಕಣ ಬರಹಗಾರರನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಅಂಕಣಗಳು ಒಂದು ವಿಷಯದ ಬಗ್ಗೆ ಆಳವಾದ ಮಾಹಿತಿ ಒದಗಿಸಿಕೊಡುತ್ತವೆ. ಸಾಹಿತ್ಯ ಕೃತಿಗಳು, ಕಥೆ ಮತ್ತು ಕಾದಂಬರಿಗಳು ಕೂಡಾ ಈ ಕೆಲಸ ಮಾಡುತ್ತವೆ. ಆದರೆ, ಸಾಹಿತ್ಯ ಕುರಿತ ಪುಸ್ತಕಗಳನ್ನು ಹೆಚ್ಚಿನ ಜನರು ಗಮನಿಸುವುದಿಲ್ಲ. ಪತ್ರಿಕೆಗಳು ಸುಲಭದಲ್ಲಿ ಜನರ ಕೈಗೆ ಸಿಗುತ್ತವೆ ಎಂದರು.

ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ಪತ್ರಿಕೆಗಳಲ್ಲಿ ಅಂಕಣ ಬರೆಯುವವರ ಕಷ್ಟ ಸಾವಿನ ಜತೆಗಿನ ಸೆಣಸಾಟಕ್ಕೆ ಸಮ ಎಂದು ಹೇಳಿದರು.

ಅಂಕಣಕಾರ ಒಂದೇ ವಿಷಯಕ್ಕೆ ಅಂಟಿಕೊಳ್ಳಬಾರದು. ಮುಂದಿನ ವಾರ ಯಾವ ವಿಷಯದ ಬಗ್ಗೆ ಬರೆಯುವನೋ ಎಂಬ ಕುತೂಹಲವನ್ನು ಓದುಗರಲ್ಲಿ ಮೂಡಿಸಬೇಕು. ಹಾಗಾದಲ್ಲಿ ಮಾತ್ರ ಯಶಸ್ವಿ ಅಂಕಣಕಾರನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಂಕಣಕಾರನ ಪೆನ್ನು ನಿಷ್ಠುರ, ನಿಷ್ಪಕ್ಷಪಾತವಾಗಿರಬೇಕು. ಯಾರ ಒತ್ತಡಕ್ಕೂ ಮಣಿಯದೆ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು. ಅಂಕಣಕಾರ ಯಾವುದೇ ಒಂದು ವಿಷಯವನ್ನು ಭಿನ್ನ ದೃಷ್ಟಿಕೋನ ಮತ್ತು ವಿವಿಧ ಆಯಾಮಗಳಿಂದ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಸಂತೋಷ ಕೌಲಗಿ ಮಾತನಾಡಿ, ಒಬ್ಬ ಅಂಕಣಕಾರ ಮುಂದಿನ ವಾರ ಏನು ಬರೆಯುತ್ತಾನೆ ಎಂಬ ಕುತೂಹಲ ಓದುಗರಿಗೆ ಇದ್ದರೆ ಮಾತ್ರ ಆ ಅಂಕಣ ಜನಪ್ರಿಯತೆ ಗಳಿಸುತ್ತದೆ. ಇಂದು ಹೆಚ್ಚಿನ ಅಂಕಣಕಾರರಲ್ಲಿ ಗಟ್ಟಿತನ ಕಾಣುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುಸುಮಾ ಆಯರಹಳ್ಳಿ ಮಾತನಾಡಿ, ‘ಆಯಾ ವಾರ ನಡೆಯುವ ವಿದ್ಯಮಾನಗಳು ನಮ್ಮಲ್ಲಿ ಒಂದು ರೀತಿಯ ಆಕ್ರೋಶ ಉಂಟುಮಾಡುತ್ತವೆ. ಅದನ್ನು ಅಂಕಣದ ಮೂಲಕ ಹೊರಹಾಕಬಹುದು’ ಎಂದರು.

ಬೆಂಕಿಯಂತೆ ಬರೆದು ಬಿಡುವುದು ಅಂಕಣಕಾರರ ಕೆಲಸವಲ್ಲ. ಭಾಷೆ ಬಳಕೆಯ ಮೇಲೆ ಹಿಡಿತವಿರುವುದು ಅಗತ್ಯ. ಯಾವುದೇ ವಿಷಯವನ್ನು ಸಮಾಧಾನ, ಸಮಚಿತ್ತದಿಂದ ಬರೆದು ಜನರ ಮುಂದಿಡಬೇಕು ಎಂದರು.

ಮೈಸೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ಅವರು ಸಂವಾದ ನಡೆಸಿಕೊಟ್ಟರು.

ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಸುಳ್ಯದ ಡಾ.ಸುಂದರ ಕೇನಾಜೆ ಅವರ ಅಂಕಣ ಬರಹಗಳ ಸಂಗ್ರಹ ‘ಭಾವದೊಳಗಿನ ಬಿಂಬ’ ಪುಸ್ತಕವನ್ನು ಕವಿ ಸುಬ್ರಾಯ ಚೊಕ್ಕಾಡಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಚೊಕ್ಕಾಡಿ, ‘ವರ್ತಮಾನವನ್ನು ಇಟ್ಟುಕೊಂಡು ಭೂತ ಮತ್ತು ಭವಿಷ್ಯವನ್ನು ಧ್ವನಿಸುವ ಕ್ರಿಯೆ ಅಂಕಣ ಬರಹದಲ್ಲಿ ನಡೆಯುತ್ತದೆ’ ಎಂದರು.

ಅಂಕಣ ಬರಹಗಾರರಿಗೆ ಶಿಸ್ತು ಮುಖ್ಯ. ಇಂದು ಇಷ್ಟೇ ಪದಗಳನ್ನು ಮಾತ್ರ ಬರೆಯಬೇಕು ಎಂಬ ಒತ್ತಡವನ್ನು ಅಂಕಣಕಾರರ ಮೇಲೆ ಹೇರಲಾಗುತ್ತಿದೆ. ಜಗತ್ತು ಕಿರಿದಾಗುತ್ತಾ ಸಾಗುತ್ತಿದ್ದು, ನಾಲ್ಕೈದು ವಾಕ್ಯಗಳಲ್ಲಿ ಅಂಕಣ ಕೊನೆಗೊಳಿಸಬೇಕು ಎಂಬ ಷರತ್ತು ವಿಧಿಸುವ ಕಾಲ ಬರಲಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮುಳ್ಳೂರು ರಾಜು, ಅರಿವು ಟ್ರಸ್ಟಿನ ಡಾ.ಮನೋಹರ್‌, ರೂಪ ಪ್ರಕಾಶನದ ಯು.ಎಸ್‌.ಮಹೇಶ್‌ ಪಾಲ್ಗೊಂಡಿದ್ದರು.

‘ನನಗಿರುವಷ್ಟು ಶತ್ರುಗಳು ಯಾರಿಗೂ ಇಲ್ಲ’

‘ನಾನು ತಪ್ಪುಗಳನ್ನು ನೇರವಾಗಿ ಹೇಳುವುದರಿಂದ ಕಲಾ ವಲಯದಲ್ಲಿ ನನಗಿರುವಷ್ಟು ಶತ್ರುಗಳು ಯಾರಿಗೂ ಇಲ್ಲ’ ಎಂದು ಕಲಾ ವಿಮರ್ಶಕಿ ರಮಾ ವಿ.ಬೆಣ್ಣೂರ ಹೇಳಿದರು.

ಹೀಗೆಯೇ ಬರೆಯಬೇಕು ಎಂಬ ಒತ್ತಡವನ್ನು ನನ್ನ ಮೇಲೆ ಯಾವ ಸಂಪಾದಕರೂ ಹಾಕಿಲ್ಲ. ಅನೇಕ ಕಲಾವಿದರು ವಿಮರ್ಶೆಯನ್ನು ಹೊಗಳಿಕೆ ಎಂಬ ಅರ್ಥದಲ್ಲಿ ನೋಡುವರು. ವಿಮರ್ಶೆಯನ್ನು ನಿರೀಕ್ಷಿಸುವುದು ಕೂಡಾ ಹೊಗಳಿಕೆಯೇ ಎಂದರು.

ವಿಮರ್ಶಕರು ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಅದರ ಜತೆಗೆ ಎಷ್ಟೇ ದೊಡ್ಡ ಕಲಾವಿದರೇ ಇರಲಿ ಅವರ ತಪ್ಪುಗಳನ್ನು ಧೈರ್ಯವಾಗಿ ಎತ್ತಿ ತೋರಿಸಬೇಕು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry