ಜಯನಗರ: ಮತದಾನಕ್ಕೆ ವೃದ್ಧರ, ಮಹಿಳೆಯರ ಆಸಕ್ತಿ, ಯುವ ಜನರ ನಿರಾಸಕ್ತಿ

7

ಜಯನಗರ: ಮತದಾನಕ್ಕೆ ವೃದ್ಧರ, ಮಹಿಳೆಯರ ಆಸಕ್ತಿ, ಯುವ ಜನರ ನಿರಾಸಕ್ತಿ

Published:
Updated:

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದ್ದು 11 ಗಂಟೆವರೆಗೂ ಶೇ 22ರಷ್ಟು ಮತದಾನವಾಗಿದೆ.

ವೃದ್ಧರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಕಾಣಿಸುತ್ತಿದ್ದು, ಯುವ ಮತದಾರರ ಸಂಖ್ಯೆ ವಿರಳವಾಗಿದೆ.

95 ವರ್ಷದ ದೊರೆಸ್ವಾಮಿ ಅವರು ಮಂಡಿ ನೋವು, ಆಯಾಸವಿದ್ದರೂ ಮತ ಚಲಾಯಿಸಲೇ ಬೇಕು ಎಂಬ ಧ್ಯೇಯದಿಂದ ಮತದಾನ ಮಾಡಿದ್ದಾರೆ.
'ನನಗೆ ಕಷ್ಟ ಆದ್ರೂ ಕೂಡ ಬಂದು ಮತದಾನ ಮಾಡಿದ್ದೀನಿ‌. ಯುವ ಜನತೆ ಮತ ಚಲಾಯಿಸುವ ಬಗ್ಗೆ ಅಸಡ್ಡೆ ತೋರಬಾರದು' ಕಿವಿಮಾತು ಹೇಳಿದರು.

ಕ್ಲಾರೆನ್ಸ್ ಪಬ್ಲಿಕ್‌ ಸ್ಕೂಲ್ ನ ಬೂತ್ ನಂ.216 ನಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಹೀಗಾಗಿ 1 ತಾಸು ಮತದಾನ ತಡವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದೇ ಬೂತ್ ನಲ್ಲಿ ಮತ ಚಲಾಯಿಸಲು ಬಂದಿದ್ದ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಅವರ ಪತ್ನಿ ಅರ್ಧ ತಾಸು ಸರತಿ ಸಾಲಿನಲ್ಲಿ ನಿಂತು ಕಾದು, ಯಂತ್ರ ಸರಿಯಾಗದ ಕಾರಣ ಮಧ್ಯಾಹ್ನ ನಂತರ ಮತಚಲಾಯಿಸುವುದಾಗಿ ಹೇಳಿ ವಾಪಸ್ ಹೋದರು.

ಜೆ.ಪಿ.ನಗರದ ಎ.ವಿ.ಎಜುಕೇಶನ್ ಸೊಸೈಟಿ ಶಾಲೆಯ ಬೂತ್ ನಂಬರ್ 173 ರಲ್ಲಿ ನಟಿ ತಾರಾ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.

ಗುರಪ್ಪನಪಾಳ್ಯದ ಮತಗಟ್ಟೆ 88 ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿ ಇದ್ದು,  10X8 ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ಮತಗಟ್ಟೆ ಇದೆ.

ಮಕ್ಕಳು ಶಾಲೆಯಲ್ಲಿ ಅಕ್ಕಪಕ್ಕ ಕುಳಿತ ಹಾಗೆ ಮತಗಟ್ಟೆ ಅಧಿಕಾರಿಗಳು ಕುಳಿತಿದ್ದಾರೆ. ಹೀಗಾಗಿ ಬೂತ್ ಏಜೆಂಟ್ಸ್ ಮತಗಟ್ಟೆಯ ಹೊರಗೆ ಕುಳಿತಿದ್ದಾರೆ.

ಸುದರ್ಶನ ವಿದ್ಯಾಮಂದಿರ ಶಾಲೆ ಬೂತ್ ನಂ.51 ರಲ್ಲಿ ಭಾರತಿ ವಿಷ್ಣುವರ್ಧನ್ ಅವರು ಮತದಾನ ಮಾಡಿದರು.

'ಮತದಾನ ಮಾಡುವಾಗ ಖುಷಿಯಾಗುತ್ತೆ. ನಾವು ಮತಹಾಕಿದ ಅಭ್ಯರ್ಥಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಯಾರು ಕೆಲಸ ಮಾಡುತ್ತಿದ್ದಾರೆ ಅವರಿಗೆ ಮತಹಾಕಿ. ಸರಿಯಾದ ಅಭ್ಯರ್ಥಿಯನ್ನು ಗೆಲ್ಲಿಸಲಿಲ್ಲ ಅಂದರೆ ನಮಗೆ ತೊಂದರೆ.ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ' ಎಂದು ಭಾರತಿ ಹೇಳಿದರು.

ಜಯನಗರದ 173 ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

'ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಖಂಡಿತ ನಮಗೆ ಯಶಸ್ಸು ನೀಡುತ್ತಾರೆ. ಎಲ್ಲರೂ ಮತದಾನ ಮಾಡಬೇಕು ಎಂಬುದೇ ನಮ್ಮ ಮನವಿ' ಎಂದರು.

ಬೆಳಿಗ್ಗೆ 7.30ಕ್ಕೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.

ಜೆಡಿಎಸ್‌ನ ಬಾಳೇಗೌಡರ ಹೆಸರು ನಾಪತ್ತೆ
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಜೆಡಿಎಸ್‌ ಅಭ್ಯರ್ಥಿ ಬಾಳೇಗೌಡರ ಹೆಸರು ಮತದಾರರ ಪಟ್ಟಿಯಲ್ಲಿ ಕಾಣುತ್ತಿಲ್ಲ. ಜಯನಗರದ ಬೂತ್‌ ನಂಬರ್‌ 172ರ ಪಟ್ಟಿಯಲ್ಲಿ ಅವರ ಹೆಸರು ಇರಬೇಕಿತ್ತು.

‘ನನ್ನ ಕುಟುಂಬ ಸದಸ್ಯರ ಹೆಸರುಗಳು ಇವೆ. ನನ್ನದು ಇಲ್ಲ. ಯಾವ ಕಾರಣಕ್ಕೆ ಹೆಸರು ಕಿತ್ತಾಕಿದ್ದಾರೆ ಗೊತ್ತಿಲ್ಲ. ಚುನಾವಣಾ ಅಧಿಕಾರಿ, ಮೇಯರ್‌ ಇತ್ತ ಗಮನಹರಿಸಬೇಕು. ಅಭ್ಯರ್ಥಿಯಾಗಿದ್ದ ನನ್ನ ಹೆಸರೇ ಕಾಣುತ್ತಿಲ್ಲ. ಇನ್ನು ಸಾಮಾನ್ಯ ಜನರ ಕಥೆ ಏನು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry