ಸಿಂಡಿಕೇಟ್‌ ಗ್ರಾಹಕ ಸ್ನೇಹಿ ಬ್ಯಾಂಕ್‌

7
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎಸ್‌.ಮಲ್ಲಿಕಾರ್ಜುನ ರಾವ್

ಸಿಂಡಿಕೇಟ್‌ ಗ್ರಾಹಕ ಸ್ನೇಹಿ ಬ್ಯಾಂಕ್‌

Published:
Updated:

ಉಡುಪಿ: ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ಕೊಂಡೊಯ್ದ ದೇಶದ ಮೊದಲ ಬ್ಯಾಂಕ್ ಸಿಂಡಿಕೇಟ್ ಎಂದು ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎಸ್‌.ಮಲ್ಲಿಕಾರ್ಜುನ ರಾವ್ ಹೇಳಿದರು.

ಸಿಂಡಿಕೇಟ್ ಬ್ಯಾಂಕ್‌ ಆಫೀಸರ್ಸ್‌ ಅಸೋಸಿಯೇಷನ್ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸಭಾಂಗಣದಲ್ಲಿ ಎಸ್‌ಬಿಒಎ ಲೀಡರ್ಸ್ ಕನ್‌ಕ್ಲೇವ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ಪರಿಚಯಿಸಿದ ಹೆಗ್ಗಳಿಕೆ ಸಿಂಡಿಕೇಟ್ ಬ್ಯಾಂಕ್‌ಗೆ ಸಲ್ಲುತ್ತದೆ. ಜುಲೈ 2017ರಲ್ಲಿ ಆರ್‌ಬಿಐ ಸುತ್ತೋಲೆಯೊಂದನ್ನು ಹೊರಡಿಸಿ, ಹಿರಿಯ ಗ್ರಾಹಕರ ಮನೆಯ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಉಚಿತವಾಗಿ ಒದಗಿಸುವಂತೆ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ದಶಕಗಳ ಹಿಂದೆಯೇ ಗ್ರಾಹಕರಿಂದ ಪಿಗ್ಮಿ ಸಂಗ್ರಹಿಸುವ ಮೂಲಕ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಿದ ಶ್ರೇಯ ಸಿಂಡಿಕೇಟ್ ಬ್ಯಾಂಕ್‌ಗೆ ಸಲ್ಲುತ್ತದೆ ಎಂದರು.

ಅದೇ ರೀತಿ ದೇಶದಲ್ಲೇ ಮೊದಲ ಕೃಷಿ ಸಾಲ ಯೋಜನೆ ರೂಪಿಸಿ ಆರ್‌ಬಿಐಗೆ ದಶಕಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರಿಗೆ ಬ್ಯಾಂಕಿನಿಂದ ಕೃಷಿ ಸಾಲ ದೊರೆತರೆ, ಆದಾಯ ಸೃಷ್ಟಿಯ ಬಗ್ಗೆ ಸಮರ್ಥವಾಗಿ ವಾದ ಮಂಡಿಸಿತ್ತು. ನಂತರ ಸಿಂಡಿಕೇಟ್ ಬ್ಯಾಂಕ್‌ನ ಕೃಷಿ ಸಾಲ ಮಾದರಿಯನ್ನು ಇತರ ಎಲ್ಲ ಬ್ಯಾಂಕ್‌ಗಳೂ ಅಳವಡಿಸಿಕೊಳ್ಳಬೇಕು ಎಂದು ಆರ್‌ಬಿಐ ಸೂಚನೆ ನೀಡಿದ್ದು, ಸಂಸ್ಥೆಯ ಹೆಗ್ಗಳಿಕೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್‌ ಸದೃಢವಾಗಿದ್ದರೆ ಉದ್ಯೋಗಿಗಳ ಭವಿಷ್ಯವೂ ಸದೃಢವಾಗಿರುತ್ತದೆ ಎಂಬ ಸತ್ಯವನ್ನು ಅರಿಯಬೇಕು. ನಾಲ್ಕೈದು ವರ್ಷದಲ್ಲಿ 8 ಸಾವಿರ ಯುವ ಜನತೆಗೆ ಸಿಂಡಿಕೇಟ್ ಬ್ಯಾಂಕ್‌ ಉದ್ಯೋಗ ನೀಡಿದೆ. ನಾಯಕತ್ವ ಗುಣವನ್ನು ಬೆಳೆಸಲಾಗುತ್ತಿದೆ. ಮೂವತ್ತು ವರ್ಷದೊಳಗಿನ ಉದ್ಯೋಗಿಗಳ ಸಂಖ್ಯೆ ಹೆಚ್ಚಿದ್ದು, ಸಂಸ್ಥೆಯ ಭವಿಷ್ಯದ ಆಸ್ತಿಯನ್ನಾಗಿ ತಯಾರು ಮಾಡಲಾಗುತ್ತಿದೆ ಎಂದರು.

ಬ್ಯಾಂಕ್‌ನ ಪ್ರಕಾಶ್‌ ಕರಾಟ್ಯ, ದಿನಕರ್ ಎಸ್‌.ಪುಂಜ, ಪಿ.ಕೆ.ಭಟ್, ವಿಲಾಸ್ ನಾಯಕ್, ಶಶಿಧರ್ ಶೆಟ್ಟಿ, ಶಂಕರ್ ಕುಂದಾಪುರ ಉಪಸ್ಥಿತರಿದ್ದರು.

ಗ್ರಾಮೀಣ ಭಾಗಕ್ಕೆ ಆದ್ಯತೆ

ಸಿಂಡಿಕೇಟ್‌ ಬ್ಯಾಂಕ್ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಿಗೆ ಸೇವೆ ಒದಗಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ದೇಶದಾದ್ಯಂತ 4,200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಮೀಣ ಹಾಗೂ ಅರೆ ಪಟ್ಟಣಗಳ ಭಾಗದಲ್ಲಿವೆ. ಬ್ಯಾಂಕ್‌ಗೆ ಒಟ್ಟು 5.18 ಕೋಟಿ ಗ್ರಾಹಕರಿದ್ದು, ಅದರಲ್ಲಿ 3.9 ಕೋಟಿ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದ ಗ್ರಾಹಕರಿದ್ದಾರೆ ಎಂದು ಎಸ್‌.ಎಸ್‌.ಮಲ್ಲಿಕಾರ್ಜುನ ರಾವ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry