ಜನ ಮೆಚ್ಚುವಂತೆ ಹೊಣೆ ನಿರ್ವಹಿಸುವೆ

7
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿಕೆ

ಜನ ಮೆಚ್ಚುವಂತೆ ಹೊಣೆ ನಿರ್ವಹಿಸುವೆ

Published:
Updated:

ಬೈಂದೂರು: ತಮ್ಮ ಮೇಲೆ ಪಕ್ಷದ ಮುಖಂಡರು, ಕಾರ್ಯಕರ್ತರು ಇಟ್ಟ ಪ್ರೀತಿ-ವಿಶ್ವಾಸ ಹಾಗೂ ಕ್ಷೇತ್ರದಾದ್ಯಂತ ಬೀಸಿದ ಬದಲಾವಣೆಯ ಗಾಳಿ ಬೈಂದೂರು ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ವಿಜಯ ಸಾಧಿಸಲು ಸಾಧ್ಯವಾಯಿತು. ಇವುಗಳಿಗೆ ಪ್ರತಿಯಾಗಿ ಜನ ಮೆಚ್ಚುವಂತೆ ಹೊಣೆ ನಿರ್ವಹಿಸುವೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಶಿರೂರು ಶ್ರೀ ವೆಂಕಟರಮಣ ಕಲ್ಯಾಣಮಂಟಪದಲ್ಲಿ ಶನಿವಾರ ಪಕ್ಷದ ಗ್ರಾಮ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕ್ಷೇತ್ರದ ಜನತೆ ನನ್ನ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳಲು ಎಲ್ಲ ವರ್ಗದ ಜನರ ಸೇವಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದ ಅವರು, ‘ಬೈಂದೂರು ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಬೇಕೆಂಬ ಯೋಚನೆಯಿದೆ. ಸಮಾಜಸೇವೆಗೆ ಮುಂದಾಗಿರುವ ನನ್ನೊಂದಿಗೆ ಎಲ್ಲರೂ ಕೈಜೋಡಿಸಬೇಕು. ಎಲ್ಲರೂ ಒಂದಾಗಿ ಸಾಗಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಜೀವನ ಪರ್ಯಂತ ಯಾರಿಗೂ ಯಾವುದೇ ಕಾರಣಕ್ಕೂ ವಿಸ್ವಾಸದ್ರೋಹ ಮಾಡಲಾರೆ. ರಾಜಕೀಯ ಕ್ಷೇತ್ರಕ್ಕೆ ಹೊಸಬನಾದರೂ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿದು ಸಾಕಷ್ಟು ಅನುಭವವಿದೆ. ಆ ನಿಟ್ಟಿನಲ್ಲಿ ಜನರೊಂದಿಗೆ ಸೇರಿ ದುಡಿಯುವೆ’ ಎಂದರು.

ಕ್ಷೇತ್ರದಲ್ಲಿ ಈವರೆಗೆ ನಡೆಸಲಾಗಿರುವ ಬಹುಪಾಲು ಕಾಮಗಾರಿಗಳು ಕಳಪೆಯಾಗಿವೆ. ಅಧಿಕಾರಿಗಳಿಗೆ ಇದನ್ನು ಈಗಾಗಲೇ ತಿಳಿಸಿದ್ದೇನೆ. ಇದು ಸರ್ಕಾರದ ದುಡ್ಡನ್ನು ಗುತ್ತಿಗೆದಾರರ ಮೂಲಕ ಕೊಳ್ಳೆ ಹೊಡೆಯುವ ಮಾಸ್ಟರ್ ಪ್ಲಾನ್ ಆಗಿದೆ. ಇನ್ನು ಮುಂದೆ ಕ್ಷೇತ್ರದಲ್ಲಿ ಇಂತಹ ಕಳಪೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಗ್ರಾಮ ಸಮಿತಿ ಅಧ್ಯಕ್ಷ ಶಂಕರ ಡಿ. ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಶಾಸಕರನ್ನು ಗೌರವಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಬಟ್ವಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮೌಲಾನ ದಸ್ತಗೀರ್ ಸಾಹೇಬ್, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಶೆಟ್ಟಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ ಸಚಿನ್ ಮೊಗೇರ ವಂದಿಸಿದರು. ತಳಸೀದಾಸ್ ಮೋಗೇರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry