ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಸವಾಲೊಡ್ಡುವ ರಸ್ತೆ

ಡಾಂಬರೀಕರಣ ಇಲ್ಲದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು
Last Updated 11 ಜೂನ್ 2018, 6:33 IST
ಅಕ್ಷರ ಗಾತ್ರ

ಯಾದಗಿರಿ: ಗಿರಿನಗರದಲ್ಲಿ ಮಳೆ ‘ಧೋ’ ಎಂದು ಸುರಿದೊಡನೆ ನಿವಾಸಿಗಳಿಗೆ ಆತಂಕ ಶುರುವಾಗುತ್ತದೆ. ಜಿಟಿಜಿಟಿ ಹನಿಗೂ ಇಲ್ಲಿನ ರಸ್ತೆಗಳು ಸಂಚಾರಕ್ಕೆ ಸವಾಲೊಡ್ಡುತ್ತವೆ ಎಂಬುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಮಳೆ ಅನಿಶ್ಚಿತತೆ ಅನುಭವಿಸುವ ಇಲ್ಲಿನ ಜನರಿಗೆ ಮಳೆರಾಯನ ಮೇಲೆ ಅಸಮಾಧಾನ ಇಲ್ಲ. ಆದರೆ, ಮಳೆ ಬಂದು ಹೋದ ಮೇಲೆ ನಗರದಲ್ಲಿ ಉಂಟಾಗುವ ಅವ್ಯವಸ್ಥೆಯಿಂದಾಗಿ ಹಲವು ದಿನಗಳವರೆಗೆ ಸಂಕಷ್ಟ ಅನುಭವಿಸಬೇಕಲ್ಲ ಎಂಬುದು ಜನರ ಅಸಮಾಧಾನವಾಗಿದೆ.

ಮಳೆ ಇಲ್ಲದೆ ಎಷ್ಟೇ ಬಿಸಿಲು ಇದ್ದರೂ ನಗರದ ಜನರು ಧೂಳಿನ ಸಮಸ್ಯೆ ಮಾತ್ರ ಅನುಭವಿಸುತ್ತಾರೆ. ಆದರೆ, ಮಳೆಗಾಲ ಕಾಲಿಟ್ಟಿತೆಂದರೆ ನಗರದಲ್ಲಿ ಸೃಷ್ಟಿಯಾಗುವ ಸಮಸ್ಯೆಗಳು, ಅವಾಂತರಗಳು, ಸಂಕಷ್ಟಗಳಿಗೆ ಲೆಕ್ಕವಿಲ್ಲ. ಹಾಗಾಗಿ, ಮಳೆ ಧರೆಗಿಳಿಯಿತೆಂದರೆ ನಗರದ ಜನರ ಆತಂಕ ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ.

ನಗರದಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳು ನಿರ್ಮಾಣಗೊಂಡಿಲ್ಲ. ಹಾಗಾಗಿ, ಮಳೆಯ ನೀರು ರಸ್ತೆ ಪಕ್ಕಕ್ಕೆ ಹರಿಯುವುದಿಲ್ಲ. ಇದರಿಂದ ಸಂಪೂರ್ಣ ರಸ್ತೆಗಳು ಮಳೆ ನೀರಿನಲ್ಲಿ ಮುಳುಗುತ್ತವೆ. ರಸ್ತೆಗಳ ಪಕ್ಕದಲ್ಲಿ ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆ ರೂಪಿಸಿಲ್ಲ. ಬಹುತೇಕ ನಗರದಲ್ಲಿನ ಶೇ 90ರಷ್ಟು ಚರಂಡಿಗಳು ಹೂಳಿನಿಂದ ತುಂಬಿವೆ. ಇದರಿಂದಾಗಿ, ನಾನಾ ರೋಗಾಣುಗಳನ್ನು ಹೊಂದಿರುವ ಚರಂಡಿ ನೀರು ಮಳೆನೀರಿನಿಂದ ತುಂಬಿ ರಸ್ತೆಗಳ ಮೇಲೆ ಹರಿಯುತ್ತದೆ. ಇದರಿಂದಾಗಿ ರಸ್ತೆಗಳೆಲ್ಲ ದುರ್ನಾತ ಬೀರುತ್ತವೆ. ಪರಿಣಾಮವಾಗಿ ಅನಾರೋಗ್ಯಕಾರಿ ವಾತಾವರಣ ನಿರ್ಮಾಣವಾಗುತ್ತದೆ. ಈಗ ಸಹಜವಾಗಿ ಸಾಂಕ್ರಾಮಿಕ ರೋಗ ಸೃಷ್ಟಿಯಾಗುವ ಭೀತಿಯನ್ನು ನಗರವಾಸಿಗಳು ಎದುರಿಸುತ್ತಿದ್ದಾರೆ.

ನಗರದಲ್ಲಿನ 31 ವಾರ್ಡ್‌ಗಳಲ್ಲಿ ಶೇ 80ರಷ್ಟು ಡಾಂಬರೀಕರಣ ಇಲ್ಲದ ರಸ್ತೆಗಳೇ ಹೆಚ್ಚಿವೆ. ನಗರದ ಹೃದಯಭಾಗ ಸುಭಾಷ್‌ ವೃತ್ತ ಹಾಗೂ ಕೋಲಿವಾಡ ನಗರ, ಬಸವೇಶ್ವರ ನಗರ, ಹುಸೇನಿ ಆಲಮ್ ನಗರದ ಹನುಮಾನ ದೇವಸ್ಥಾನದಿಂದ ಮಹಾವೀರ್ ದೇವಸ್ಥಾನದವರೆಗೆ ಇರುವ ರಸ್ತೆಗಳಲ್ಲಿ ನೂರಾರು ಗುಂಡಿಗಳು ಸೃಷ್ಟಿಗೊಂಡಿವೆ. ಈ ರಸ್ತೆಗಳಲ್ಲಿ ರಾತ್ರಿ ಸಂಚಾರ ದುಸ್ತರವಾಗಿದೆ.

ರಸ್ತೆ, ಚರಂಡಿ, ಬೀದಿ ದೀಪ, ಉದ್ಯಾನದಂತಹ ಅಭಿವೃದ್ಧಿ ಕಾಮಗಾರಿಗಳನ್ನು ನಗರಸಭೆ ಕೈಗೆತ್ತಿಕೊಂಡು ಹಲವು ವರ್ಷಗಳೇ ಕಳೆದಿವೆ. ನಗರ ಸ್ವಚ್ಛತೆ ಮರೀಚಿಕೆಯಾಗಿದೆ. ಪೌರಾಯುಕ್ತರಿಗೆ, ಅಧ್ಯಕ್ಷರಿಗೆ ಅಥವಾ ಪರಿಸರ ಎಂಜಿನಿಯರ್ ಅವರಿಗೆ ಕರೆ ಮಾಡಿದರೆ ಮಾತ್ರ ಪೌರಕಾರ್ಮಿಕರು ಆಯಾ ವಾರ್ಡ್‌ಗಳಿಗೆ ಬಂದು ಕಾಟಾಚಾರಕ್ಕೆ ಸ್ವಚ್ಛತೆ ಕೆಲಸ ಮಾಡುತ್ತಾರೆ. ಇಲ್ಲ ಅಂದರೆ ಮೂರು ತಿಂಗಳಾದರೂ ವಾರ್ಡ್‌ಗಳ ಸ್ವಚ್ಛತೆ ಕಡೆಗೆ ಗಮನ ಹರಿಸುವುದಿಲ್ಲ. ಅಧಿಕಾರಿ ಸಂಚರಿಸುವ ರಸ್ತೆಗಳಲ್ಲಿ ಮಾತ್ರ ಒಂದಷ್ಟು ಸ್ವಚ್ಛತೆ ಕಾಪಾಡುವ ಕೆಲಸ ನಗರಸಭೆ ನಿರ್ವಹಿಸುತ್ತಿದೆ.

ಮಳೆಗಾಲದಲ್ಲಿ ರಸ್ತೆಗಳಲ್ಲಿನ ಗುಂಡಿಗಳು ಕೇವಲ ಸಂಕಷ್ಟ ಸೃಷ್ಟಿಸುತ್ತಿಲ್ಲ. ಅವು ಅಪಾಯಕಾರಿಗಳೂ ಆಗಿವೆ. ತಗ್ಗು ಗುಂಡಿಗಳಲ್ಲಿ ಬಿದ್ದು ಅನೇಕ ದ್ವಿಚಕ್ರ ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ. ಕೆಲವರು ಗುಂಡಿಗಳಿಗೆ ಬಲಿಯಾಗಿದ್ದಾರೆ. ಮೈಮರೆತಿರುವ ನಗರಸಭೆಯ ಕಿವಿಹಿಂಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ ಎನ್ನುತ್ತಾರೆ ನಗರ ನಿವಾಸಿಗಳು.

ಗಮನ ಹರಿಸದ ಜಿಲ್ಲಾಧಿಕಾರಿ: ನಗರಸಭೆ ನಿಷ್ಕ್ರಿಯವಾಗಿರುವ  ಬಗ್ಗೆ  ಮತ್ತು ಸರ್ಕಾರದ ಅನುದಾನ ಬಳಕೆ ಮಾಡದಿರುವ ಕುರಿತು ನಗರಾಭಿವೃದ್ಧಿ ಕೋಶದಿಂದ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರೂ, ಜಿಲ್ಲಾಧಿಕಾರಿ ಗಮನ ಹರಿಸಿಲ್ಲ. ನೂತನ ಜಿಲ್ಲಾಧಿಕಾರಿಯವರ ಬಗ್ಗೆ ಗಿರಿನಗರದ ಜನರು ಇಟ್ಟುಕೊಂಡಿದ್ದ ಅಭಿವೃದ್ಧಿ ನಿರೀಕ್ಷೆಗಳು ಹುಸಿಯಾಗಿವೆ ಎಂದು ನಗರದ ಹಿರಿಯ ನಾಗರಿಕರಾದ ರಮೇಶ್ ಬಾಬು, ಗೋಗಿ ಚಂದ್ರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನೂರು ಮೀಟರ್ ಉದ್ದ ಇರುವ ರಸ್ತೆಗಳಲ್ಲೂ ಹತ್ತಾರು ಗುಂಡಿಗಳು ತುಂಬಿವೆ. ಬೀದಿದೀಪಗಳಿಲ್ಲದ ಕಾರಣ ರಾತ್ರಿ ಸಂಚಾರ ಕಷ್ಟಕರವಾಗಿದೆ – ಮಲ್ಲಿನಾಥ ಆಯಾರಕರ್, ನಿವಾಸಿ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT