ಮದ್ಯ ಮಾರಾಟ ತಡೆದ ಗ್ರಾಮಸ್ಥರು

7
ಅಬಕಾರಿ–ಪೊಲೀಸ್‌ ಅಧಿಕಾರಿಗಳ ನಿರ್ಲಕ್ಷ್ಯ: ಆಕ್ರೋಶ

ಮದ್ಯ ಮಾರಾಟ ತಡೆದ ಗ್ರಾಮಸ್ಥರು

Published:
Updated:

ಲಿಂಗಸುಗೂರು: ಇಲ್ಲಿನ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟವನ್ನು ಗ್ರಾಮಸ್ಥರು ಹೋರಾಟ ನಡೆಸಿ ತಡೆದಿದ್ದಾರೆ.

ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ಕಸಬಾಲಿಂಗಸುಗೂರು ಅಗ್ರ ಸ್ಥಾನದಲ್ಲಿತ್ತು. ಇಂತಹ ಅಕ್ರಮ ದಂಧೆಗಳಿಗೆ ರಾಜಕೀಯ ಬೆಂಬಲ ಇದ್ದುದರಿಂದ ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ದಾಳಿ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಬಿಡುಗಡೆ ಮಾಡುತ್ತಾ ಬಂದಿದ್ದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ದಿನಗಳ ಹಿಂದೆ ಗ್ರಾಮದ ಹರಿಜನ ಮತ್ತು ನಾಯಕ ಸಮುದಾಯದ ಇಬ್ಬರು ಯುವಕರು ಮದ್ಯ ಸೇವನೆಯಿಂದ ಮೃತಪಟ್ಟಿರುವ ಜೊತೆಗೆ ಬಹುತೇಕ ಯುವಕರು ಅನಾರೋಗ್ಯದಿಂದ ಬಳಲುತ್ತಿರುವುದು ಗ್ರಾಮಸ್ಥರನ್ನು ಎಚ್ಚರಗೊಳಿಸಿತು.

ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದವರ ಮನೆಗೆ ತೆರಳಿದ ಗ್ರಾಮಸ್ಥರು, ಮದ್ಯ ತಯಾರಿಸದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 2ನೇ ಹಂತವಾಗಿ ಅಕ್ರಮ ಮದ್ಯ ಮಾರಾಟ ಮಾಡುವವರ ಮನವೊಲಿಸಲು ಮುಂದಾಗಿದ್ದು, ಒಟ್ಟಾರೆ ಗ್ರಾಮಸ್ಥರ ಸ್ವಯಂ ಘೋಷಿತ ಮದ್ಯಪಾನ ನಿಷೇಧ ಕಾರ್ಯಕ್ರಮ ಇತರೆ ಗ್ರಾಮಸ್ಥರ ಪಾಲಿಗೆ ಮಾರ್ಗದರ್ಶನವಾಗಿದೆ.

ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ಭಾನುವಾರ ಸಭೆ ನಡೆಸಿದ ಗ್ರಾಮಸ್ಥರು ನಡೆಸಿದ ಹೋರಾಟ ಒಂದು ಹಂತಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ ಹಿರಿಯರ ಸಭೆ ಕರೆದು ಮದ್ಯ ಮುಕ್ತ ಗ್ರಾಮ ಎಂದು ಘೋಷಿಸಲು ಹೋರಾಟ ರೂಪಿಸಲಾಗುವುದು. ಪೊಲೀಸ್, ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ಕರೆಯಲು ತೀರ್ಮಾನಿಸಿದ್ದೇವೆ ಎಂದು ಕುಪ್ಪಣ್ಣ ವಿವರಿಸಿದರು.

ಬಸಪ್ಪ ರಾಮಸ್ವಾಮಿ, ದುರುಗಪ್ಪ ಮೇಲ್ಗೇರಿ, ರಾಮಣ್ಣ ಸಂತೆಕೆಲ್ಲೂರು, ಕುಪ್ಪಣ್ಣಯತಗಲ್‌, ಈರಪ್ಪ ರಾಮಸ್ವಾಮಿ, ಅಂಬಣ್ಣ ರಾಮಸ್ವಾಮಿ, ಹುಚ್ಚಪ್ಪ ಯತಗಲ್‌, ಗದ್ದೆಮ್ಮ, ದೇವಮ್ಮ, ಮಲ್ಲಮ್ಮ, ಹನುಮಮ್ಮ, ಹುಲಿಗೆಮ್ಮ, ದುರುಗಮ್ಮ, ಮುತ್ತಮ್ಮ, ಮಾನಮ್ಮ, ಅಕ್ಕಮ್ಮ, ತಾಯಪ್ಪ, ಬಸವರಾಜ, ಪವಾಡೆಪ್ಪ, ಹನುಮಂತ, ಸಂತೋಷಮ್ಮ ಭಾಗವಹಿಸಿದ್ದರು.

ಅಕ್ರಮ ಮದ್ಯ ಮಾರಾಟದಿಂದ ಗ್ರಾಮಸ್ಥರು ಬೇಸತ್ತು ಸ್ವಯಂ ಪ್ರೇರಣೆಯಿಂದ ಸಾರಾಯಿ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದಾರೆ

ಬಸಪ್ಪ ರಾಮಸ್ವಾಮಿ, ‌ಮುಖಂಡ, ಕಸಬಾಲಿಂಗಸುಗೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry