ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ನಿವಾರಿಸುವ ಸಂಸ್ಥೆ ಸ್ಥಾಪನೆಯಾಗಲಿ

ವಾರ್ಷಿಕೋತ್ಸವ, ಚೆಸ್‌ ಟೂರ್ನಿ ಉದ್ಘಾಟಿಸಿದ ಎಸ್‌ಪಿ ಜಿ.ರಾಧಿಕಾ ಅಭಿಮತ
Last Updated 11 ಜೂನ್ 2018, 7:07 IST
ಅಕ್ಷರ ಗಾತ್ರ

ಮಂಡ್ಯ: ‘ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ, ಮನರಂಜನೆಗೆ ವೇದಿಕೆ ಕಲ್ಪಿಸಿಕೊಟ್ಟು ಪ್ರತಿಭೆ ಹಾಗೂ ಸಮಸ್ಯೆಯಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಅದನ್ನು ನಿವಾರಿಸುವ ಸಂಘ ಸಂಸ್ಥೆಗಳು ಹೆಚ್ಚು ಸ್ಥಾಪನೆಯಾಗಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

ನಗರದ ಅಗ್ರಿ ಕ್ಲಬ್‌ನಲ್ಲಿ ಭಾವಜೀವಿಯ ತ್ಯಾಗಜೀವಿ ಟ್ರಸ್ಟ್‌ನ 11ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ನಡೆದ ರಾಜ್ಯಮಟ್ಟದ ಚೆಸ್ ಟೂರ್ನಿ ಹಾಗೂ ಇತರೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಹಲವು ಸಂಘ ಸಂಸ್ಥೆಗಳು ಸಮಾಜ ಸೇವೆ ಅಡಿಯಲ್ಲಿ ಸ್ಥಾಪನೆಯಾಗಿವೆ. ಅವುಗಳಲ್ಲಿ ಕೆಲವೇ ಸಂಸ್ಥೆಗಳು ಮಾತ್ರ ನಿಜವಾದ ಸಮಾಜ ಸೇವೆ ಮಾಡುತ್ತಾ ತಮ್ಮ ಘನತೆಯನ್ನು ಉಳಿಸಿಕೊಂಡು ಮುಂದೆ ಸಾಗುತ್ತಿವೆ. ಇಂಥ ಸಂಸ್ಥೆಗಳು ಸಮಾಜದಲ್ಲಿ ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೆ ನಿರಂತರ ಸೇವೆಯನ್ನು ಮಾಡುತ್ತಾ ಮುಂದೆ ಸಾಗುತ್ತಿವೆ. ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ, ಪ್ರತಿಭೆಗಳನ್ನು ಗುರುತಿಸಿ ನೆರವಾಗುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಂಘ ಸಂಸ್ಥೆಗಳು ಇನ್ನೂ ಹೆಚ್ಚಾಗಲಿ’ ಎಂದು ಆಶಿಸಿದರು.

‘ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ, ಬಡ ರೋಗಿಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ಅಂಗವಿಕಲ ಮಕ್ಕಳಿಗೆ ಸೈಕಲ್‌ ವಿತರಣೆ, ಶಾಲೆಗಳಿಗೆ ಡೆಸ್ಕ್ ವಿತರಣೆ, ಅನಾಥ ಮಕ್ಕಳಿಗೆ ಲೇಖನ ಸಾಮಗ್ರಿ, ರಕ್ತದಾನ ಶಿಬಿರ ಹಾಗೂ ಮನರಂಜನೆಗಾಗಿ ರಾಜ್ಯಮಟ್ಟದ ಚೆಸ್ ಟೂರ್ನಿ ಸೇರಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಭಾವಜೀವಿಯ ತ್ಯಾಗಜೀವಿ ಟ್ರಸ್ಟ್‌ ದೊಡ್ಡ ಮಟ್ಟದಲ್ಲಿ ಬೆಳೆದು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡಲಿ’ ಎಂದು ಹೇಳಿದರು.

ಕಂಚಶ್ರೀ ಪ್ರಶಸ್ತಿ ಸ್ವೀಕರಿಸಿದ ಜಾನಪದ ಗಾಯಕಿ ಕೆ.ಪಿ.ಸವಿತಾ, ‘ಅಪಘಾತಕ್ಕೆ ಒಳಗಾದ ಅಥವಾ ಕಷ್ಟದಲ್ಲಿರುವ ವ್ಯಕ್ತಿಯನ್ನು ಕಂಡರೆ ಅಲ್ಲಿನ ಚಿತ್ರ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರಿಸಿ ಪ್ರಚಾರ ಪಡೆಯುವ ಜನರು ಇಂದು ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಡಜನರು ಹಾಗೂ ಸಮಸ್ಯೆ ಇರುವ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಮಾಡುವಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಕಡಿಮೆಯಾಗಿವೆ. ಭಾವಜೀವಿಯ ತ್ಯಾಗಜೀವಿ ಟ್ರಸ್ಟ್‌ ಸಮಾಜದ ಕೆಳವರ್ಗದ ಹಾಗೂ ಸಮಸ್ಯೆ ಎದುರಿಸುವ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮದ ಹೆಸರಿನಲ್ಲಿ ಬ್ಯಾನರ್‌ ಹಾಕಿ ಫೋಟೊ ತೆಗೆಸಿಕೊಂಡು ಪ್ರಚಾರ ಪಡೆಯುವ ಟ್ರಸ್ಟ್‌ಗಳು ಹೆಚ್ಚಾಗಿದ್ದು, ನಿಜವಾದ ಸೇವೆ ಮಾಡುವ ಸಂಸ್ಥೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕು’ ಎಂದು ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷೆ ಅರುಣಾ, ಕಾರ್ಯದರ್ಶಿ ಕೆ.ಜಿ.ರಮೇಶ್, ಉಪಾಧ್ಯಕ್ಷ ದರ್ಶನ್, ನಿರ್ದೇಶಕ ಹೊಂಬೇಗೌಡ, ದಯಾನಂದ್, ಕೆ.ಸಿ.ಶಿವಕುಮಾರ್ ಉಪಸ್ಥಿತರಿದ್ದರು.

ಎಂ.ಎಸ್.ತೇಜ್‌ಕುಮಾರ್‌ಗೆ ಪ್ರಶಸ್ತಿ

ಮಂಡ್ಯ: ನಗರದ ಭಾವಜೀವಿಯ ತ್ಯಾಗಜೀವಿ ಟ್ರಸ್ಟ್‌ನ 11ನೇ ವಾರ್ಷಿಕೋತ್ಸವದ ಭಾನುವಾರ ನಡೆದ ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ಮೈಸೂರಿನ ಗ್ರಾಂಡ್‌ಮಾಸ್ಟರ್ ಎಂ.ಎಸ್.ತೇಜ್‌ಕುಮಾರ್ 2433 ಶ್ರೇಣಿಯೊಂದಿಗೆ 7 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿ ₹ 10 ಸಾವಿರ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಕೊಡಗಿನ ಎ.ಅಗಸ್ಟಿನ್ ಅವರು ದ್ವಿತೀಯ ಸ್ಥಾನದೊಂದಿಗೆ ₹ 7,500 ನಗದು ಹಾಗೂ ಟ್ರೋಫಿ, ಮಂಗಳೂರಿನ ಶರಣ್‌ರಾವ್ ಅವರು ತೃತೀಯ ಸ್ಥಾನ ಪಡೆದು ₹ 5 ಸಾವಿರ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು.

ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆರ್‌.ಪಿ.ಅನುರಾಗ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಎಸ್‌.ಯಶಸ್ವಿನಿ ಪ್ರಥಮ ಹಾಗೂ 11 ವರ್ಷದೊಳಗಿನ ಉತ್ತಮ ಚೆಸ್‌ ಆಟಗಾರನಾಗಿ ಬಿ.ನಿಮಿಷ್‌ರಾಜ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರೆಲ್ಲರಿಗೂ ತಲಾ ₹ 1,000 ಹಾಗೂ ಟ್ರೋಫಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT