ಕಾವೇರಿ ಸ್ವಚ್ಛತೆಗೆ ಟೊಂಕ ಕಟ್ಟಿದರು

7
ಮುಂದುವರೆದ ನದಿ ಸ್ವಚ್ಛತಾ ಕಾರ್ಯ: ನಾಲ್ಕೂವರೆ ಗಂಟೆ ಶ್ರಮದಾನ

ಕಾವೇರಿ ಸ್ವಚ್ಛತೆಗೆ ಟೊಂಕ ಕಟ್ಟಿದರು

Published:
Updated:
ಕಾವೇರಿ ಸ್ವಚ್ಛತೆಗೆ ಟೊಂಕ ಕಟ್ಟಿದರು

ಶ್ರೀರಂಗಪಟ್ಟಣ: ಪಟ್ಟಣದ ಸುತ್ತಲೂ ಹರಿಯುವ ಕಾವೇರಿ ನದಿ ಕಳೆ ಗಿಡಗಳಿಂದ ಆವೃತವಾಗಿದ್ದರಿಂದ ಕಳವಳಗೊಂಡ ಸ್ಥಳೀಯ ಸಂಘ, ಸಂಸ್ಥೆಗಳ ಸದಸ್ಯರು ನದಿಯ ಸ್ವಚ್ಛತೆಗೆ ಮುಂದಾಗಿದ್ದು, ಭಾನುವಾರ 50 ಟ್ರ್ಯಾಕ್ಟರ್‌ಗೂ ಹೆಚ್ಚು ಕಳೆ ಗಿಡವನ್ನು ನದಿಯಿಂದ ಹೊರ ತೆಗೆದರು.

ಇಲ್ಲಿನ ಪೂರ್ವ ಕಾವೇರಿ ಸೇತುವೆ ಮತ್ತು ವೆಲ್ಲೆಸ್ಲಿ ಸೇತುವೆ ನಡುವೆ ನದಿಯ ತುಂಬ ಬೆಳೆದಿದ್ದ ಕತ್ತೆಕಿವಿ ಗಿಡ, ಅಂಟುಳ್ಳ ಹಂಬು, ಜೊಂಡು ಇತರ ಕಳೆ ಸಸ್ಯಗಳನ್ನು ನದಿಯಿಂದ ಮೇಲೆ ತೆಗೆದರು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ನದಿ ಸ್ವಚ್ಛತೆ ಕಾರ್ಯ ಮಧ್ಯಾಹ್ನ 12.30ರ ವರೆಗೆ ನಿರಂತರವಾಗಿ ನಡೆಯಿತು. ಅಭಿನವ ಭಾರತ್‌ ತಂಡ, ಗಂಜಾಂನ ಬಿಜಿಎಸ್‌ ಬಾಯ್‌್ಸ ಹುಡುಗರು ನದಿಗೆ ಇಳಿದು ಕಳೆ ಗಿಡಗಳನ್ನು ಹೊರ ತೆಗೆದರು.

ಜೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌.ಲಕ್ಷ್ಮೀಶ್‌, ಡಾ.ಕೆ.ವೈ. ಶ್ರೀನಿವಾಸ್‌, ಸಾಹಿತಿ ಕುಂತಿಬೆಟ್ಟ ಚಂದ್ರಶೇಖರಯ್ಯ, ಕಡತನಾಳು ಜಯಶಂಕರ್‌, ಪುರಸಭೆ ಸದಸ್ಯ ಎಸ್‌. ಪ್ರಕಾಶ್‌ ಇತರ ಪ್ರಮುಖರು ನದಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಚಾಮರಾಜನಗರ ಜಿಲ್ಲೆಯ ಪಣ್ಣೇದಹುಂಡಿ ಗ್ರಾಮದ ಯುವಕರು ಕೂಡ ಕಾವೇರಿ ನದಿಗೆ ಇಳಿದು ಅರ್ಧ ದಿನ ಶ್ರಮದಾನ ಮಾಡಿದರು.

ಉಪಾಹಾರವನ್ನೂ ಮರೆತು ಶ್ರಮದಾನ ನಡೆಸಿದ ಸ್ವಯಂ ಸೇವಕರ ತಂಡ ಹಸಿರು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಯಿತು. ಕಳೆ ಗಿಡಗಳನ್ನು ತೆಗೆಯಲು 10 ಹರಿಗೋಲು (ತೆಪ್ಪ) ಗಳನ್ನು ಬಳಸಲಾಯಿತು. 15 ಮಂದಿ ನುರಿತ ಈಜುಗಾರರನ್ನು ನಿಯೋಜಿಸಲಾಗಿತ್ತು. ಎರಡು ಟ್ರ್ಯಾಕ್ಟರ್‌ ಮತ್ತು ಎರಡು ಜೆಸಿಬಿ ಯಂತ್ರಗಳ ಸಹಾಯದಿಂದ ಕಳೆಯನ್ನು ನದಿಯಿಂದ ಮೇಲೆತ್ತುವ ಕೆಲಸವೂ ನಡೆಯಿತು. ಸುಮಾರು 300 ಮೀಟರ್‌ ಉದ್ದ ಹಾಗೂ 200 ಮೀಟರ್‌ ಅಗಲದಷ್ಟು ನದಿಯನ್ನು ಸ್ವಚ್ಛಗೊಳಿಸಲಾಯಿತು.

‘ಪ್ರತಿ ಭಾನುವಾರ ನದಿ ಸ್ವಚ್ಛತೆ ಕಾರ್ಯ ನಡೆಯಲಿದೆ’ ಎಂದು ಲಕ್ಷ್ಮೀಶ್‌ ತಿಳಿಸಿದರು.

‘ನದಿಗೆ ಕಲುಷಿತ ನೀರು ಸೇರುತ್ತಿರುವುದರಿಂದ ಕಳೆ ಗಿಡಗಳು ಬೆಳೆಯುತ್ತಿವೆ. ತ್ಯಾಜ್ಯ ಸೇರುವುದನ್ನು ತಡೆಗಟ್ಟಬೇಕು. ಇಲ್ಲಿದ್ದರೆ ಎಷ್ಟೇ ಸ್ವಚ್ಛಗೊಳಿಸಿದರೂ ನದಿ ಹಸನಾಗುವುದಿಲ್ಲ. ಕಾವೇರಿ ನದಿಯ ಪಾವಿತ್ರ್ಯ ಉಳಿಸಲು ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಡಾ.ಭಾನುಪ್ರಕಾಶ್‌ಶರ್ಮಾ ಒತ್ತಾಯಿಸಿದರು.

‘ಕಾವೇರಿ ನದಿಯಲ್ಲಿ ವಿಪರೀತ ಕಳೆ ಗಿಡ ಬೆಳೆದಿರುವುದರಿಂದ ಮೀನು ಹಿಡಿಯಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ನೀರು ಕಲುಷಿತಗೊಂಡಿದ್ದು ಸ್ನಾನಕ್ಕೂ ಯೋಗ್ಯವಾಗಿಲ್ಲ, ನದಿಗೆ ವಿವಿಧ ಮೂಲಗಳಿಂದ ಸೇರುವ ಮಲಿನವನ್ನು ತಡೆಯಬೇಕು. ತ್ಯಾಜ್ಯ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಪಾಂಡವಪುರದ ಡಾ.ಕೆ.ವೈ. ಶ್ರೀನಿವಾಸ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry