ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ; ಜಲಾಶಯಕ್ಕೆ ಹರಿದು ಬರುತ್ತಿರುವ ನೀರು

Last Updated 11 ಜೂನ್ 2018, 7:22 IST
ಅಕ್ಷರ ಗಾತ್ರ

ಜಮಖಂಡಿ: ಮಹಾರಾಷ್ಟ್ರ ರಾಜ್ಯದ ಕೃಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರ ಪರಿಣಾಮವಾಗಿ ವಾಡಿಕೆಯಂತೆ ರಾಜಾಪುರ ಜಲಾಶಯದ ಗೇಟ್‌ಗಳನ್ನು ತೆರೆದಿರುವುದರಿಂದ ಹಿಪ್ಪರಗಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ ಎಂದು ತಹಶೀಲ್ದಾರ್‌ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.

ಹಿಪ್ಪರಗಿ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ನೀರಿನ ಸಂಗ್ರಹ ವೀಕ್ಷಿಸಿದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ. ಜಲಾಶಯ ಭರ್ತಿಯಾಗಿದ್ದು, ಅದರ ಕೆಳಭಾಗಕ್ಕೆ ಸಣ್ಣ ಪ್ರಮಾಣದ ನೀರು ಹರಿದು ಹೋಗಲು ಆರಂಭಿಸಿದೆ.

ಹಿಪ್ಪರಗಿ ಜಲಾಶಯಕ್ಕೆ ಅಂದಾಜು 3 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ನೀರಿನ ಮಟ್ಟ 516.45 ಮೀ ಇದೆ. ಮಳೆಗಾಲ ಇದೀಗ ಆರಂಭ ಆಗಿದ್ದರಿಂದ ಜಲಾಶಯದಲ್ಲಿ ನೀರು ಸಂಗ್ರಹ ಮಾಡಲಾಗುತ್ತಿಲ್ಲ. ಜಲಾಶಯದ ಡೆಡ್‌ ಸ್ಟೋರೇಜ್‌ನಲ್ಲಿ 0.8 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ ಎಂದು ಎಂಜಿನಿಯರ್‌ ವಿ.ಎಸ್‌. ನಾಯಿಕ ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕೃಷ್ಣಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಭಾನುವಾರ ಬೆಳಿಗ್ಗೆ ಸುರಿದ ಮಳೆಯ ವಿವರ ಇಂತಿದೆ. ಕೊಯ್ನಾ 41 ಮಿ.ಮೀ, ನವಜಾ 57 ಮಿ.ಮೀ, ಮಹಾಬಳೇಶ್ವರ 34 ಮಿ.ಮೀ, ವಾರಣಾ 45 ಮಿ.ಮೀ, ರಾಧಾನಗರಿ 51 ಮಿ.ಮೀ ದೂಧಗಂಗಾ 55 ಮಿ.ಮೀ ಮಳೆಯಾಗಿದೆ.

ತುಂಬಿದ ನದಿಯ ಒಡಲು

ಕೂಡಲಸಂಗಮ: ಕೂಡಲಸಂಗಮದಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ನದಿ ಒಡಲು ಕಳೆದ ಒಂದು ವಾರದಲ್ಲಿ ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಲಪ್ರಭಾ ನದಿ ಅಚ್ಚುಕಟ್ಟಿನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಮಲಪ್ರಭಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನಾರಾಯಣಪೂರ ಜಲಾಶಯಕ್ಕೆ ಹಿನ್ನಿರು ಸೇರುತ್ತಿದೆ.

ನೀರು ಬಂದಿರುವುದರಿಂದ  ಕೆಂಗಲ್ಲ, ಕಜಗಲ್ಲ, ವರಗೊಡದಿನ್ನಿ,ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ, ಬೆಳಗಲ್ಲ, ಬಿಸನಾಳಕೊಪ್ಪ,ಇದ್ದಲಗಿ, ಅಡವಿಹಾಳ, ಎಮ್ಮೆಟ್ಟಿ ಗ್ರಾಮಸ್ಥರು ಹಾಗೂ ರೈತರು ಸಂತಸಗೊಂಡಿದ್ದಾರೆ. ಸ್ಥಗಿತಗೊಂಡಿದ್ದ ಒಳನಾಡು ಮತ್ತು ಬಂದರು ಇಲಾಖೆ ಅಧಿಕಾರಿಗಳು ಕೂಡಲಸಂಗಮ- ಅಡವಿಹಾಳ, ಕೂಡಲಸಂಗಮ -ಕುಂಚಗನೂರ ದೋಣಿ ಸಂಚಾರ ಮತ್ತೆ ಆರಂಭಿಸಿದರು. ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು, ಭಕ್ತರು ನದಿ ತಟದಲ್ಲಿ ಸ್ನಾನ, ಭೋಜನ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT