ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸುರಂಗ ಮಾರ್ಗಕ್ಕೆ ಬೇಕಿದೆ ‘ಬೆಳಕು’

7

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸುರಂಗ ಮಾರ್ಗಕ್ಕೆ ಬೇಕಿದೆ ‘ಬೆಳಕು’

Published:
Updated:
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸುರಂಗ ಮಾರ್ಗಕ್ಕೆ ಬೇಕಿದೆ ‘ಬೆಳಕು’

ಹೊಸಪೇಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಮೇಲಿನ ಸುರಂಗ ಮಾರ್ಗದ ಬಹುತೇಕ ವಿದ್ಯುದ್ದೀಪಗಳು ಕೆಟ್ಟು ಹೋಗಿದ್ದು, ಬೆಳಕಿನ ಸಮಸ್ಯೆ ಎದುರಾಗಿದೆ.

ಹೊಸಪೇಟೆ–ಚಿತ್ರದುರ್ಗ ನಡುವೆ ಸಂಪರ್ಕ ಕಲ್ಪಿಸುವ ಇಲ್ಲಿನ ಕಣಿವೆ ವೀರಭದ್ರೇಶ್ವರ ದೇಗುಲದ ಬಳಿ ಅತ್ಯಾಧುನಿಕ ರೀತಿಯಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ, ಸುರಂಗದೊಳಗಿನ ಬಹುತೇಕ ವಿದ್ಯುದ್ದೀಪಗಳು ಹಾಳಾಗಿವೆ. ಕೆಲವೇ ಕೆಲವು ದೀಪಗಳು ಬೆಳಗುತ್ತವೆ. ಇದರಿಂದ ವಾಹನ ಚಾಲಕರಿಗೆ ಮಾರ್ಗ ಸರಿಯಾಗಿ ಕಾಣುತ್ತಿಲ್ಲ. ಇದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.

ವಿಜಯಪುರ, ಪುಣೆ, ಮುಂಬೈ, ಮಂಗಳೂರು ಬಂದರು, ಬೆಂಗಳೂರು, ದಾವಣಗೆರೆ ಸೇರಿ ಇತರ ಊರುಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ನಿತ್ಯ ನಾಲ್ಕರಿಂದ ಐದು ಸಾವಿರ ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಸರಕು ಸಾಗಣೆ ಲಾರಿಗಳು, ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಹೀಗಿರುವಾಗ ಸಣ್ಣ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ. ಕೂಡಲೇ ಸುರಂಗ ಮಾರ್ಗದೊಳಗಿನ ವಿದ್ಯುದ್ದೀಪಗಳನ್ನು ದುರಸ್ತಿಗೊಳಿಸಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಸಾರ್ವಜನಿಕರು.

‘ಹಗಲಲ್ಲೇ ಸುರಂಗ ಮಾರ್ಗದಲ್ಲಿ ಸ್ಪಷ್ಟವಾಗಿ ಏನೂ ಕಾಣಿಸುವುದಿಲ್ಲ. ಹೀಗಾಗಿ ಅನೇಕರು ವಾಹನದ ದೀಪಗಳನ್ನು ಬೆಳಗಿಸಿಕೊಂಡು ಸಂಚರಿಸುತ್ತಾರೆ. ಇನ್ನು ರಾತ್ರಿ ವೇಳೆಯಲ್ಲಂತೂ ವಿದ್ಯುದ್ದೀಪಗಳು ಬೇಕೇ ಬೇಕು’ ಎನ್ನುತ್ತಾರೆ ಹಂಪಾಪಟ್ಟಣದ ಅಂಬಲಿ ವೀರೇಂದ್ರ. ಇವರು ನಿತ್ಯ ತಮ್ಮ ಗ್ರಾಮದಿಂದ ಕೊಪ್ಪಳದ ಮುನಿರಾಬಾದ್‌ಗೆ ಇದೇ ಮಾರ್ಗದಿಂದ ಸಂಚರಿಸುತ್ತಾರೆ.

‘ಸುರಂಗ ಮಾರ್ಗ ನಿರ್ಮಿಸಿದ ಆರಂಭದಲ್ಲಿ ಸುರಂಗದ ಆರಂಭದಿಂದ ಕೊನೆಯವರೆಗೆ ಸಾಲಾಗಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿತ್ತು. ವಾಹನಗಳು ಒಳಗೆ ಹೋದ ಕೂಡಲೇ ಮಾರ್ಗ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ, ದಿನ ಕಳೆದಂತೆ ವಿದ್ಯುದ್ದೀಪಗಳು ಕಡಿಮೆಯಾದವು. ಹಾಳಾದ ವಿದ್ಯುತ್‌ ದೀಪಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಎಲ್ಲೋ ಕೆಲವು ಕಡೆ ದೀಪಗಳು ಉರಿಯುತ್ತವೆ. ಇದರಿಂದ ಚಾಲಕರಿಗೆ ಸರಿಯಾಗಿ ಮಾರ್ಗ ಕಾಣುಸುತ್ತಿಲ್ಲ’ ಎಂದರು.

‘ಸುರಂಗ ಮಾರ್ಗದಲ್ಲಿ ಯಾವುದೋ ವಾಹನ ಕೆಟ್ಟು ನಿಂತು, ಹಿಂಬದಿ ಅದರ ದೀಪ ಉರಿಸದಿದ್ದರೆ ಅದಕ್ಕೆ ಗುದ್ದುವುದು ಖಚಿತ ಎಂಬಂಥಹ ಸ್ಥಿತಿ ಇದೆ. ಓವರ್‌ ಟೇಕ್‌ ಮಾಡುವಾಗಲೂ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಅಪಘಾತ ಸಂಭವಿಸುವುದು ನೂರಕ್ಕೆ ನೂರರಷ್ಟು ಖಚಿತ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈ ಕಡೆ ಗಮನಹರಿಸಿ ಕೆಟ್ಟು ಹೋಗಿರುವ ವಿದ್ಯುದ್ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸುರಂಗ ಮಾರ್ಗದ ಸುತ್ತಲೂ ಬೆಟ್ಟಗುಡ್ಡಗಳು ಇರುವುದರಿಂದ ಮಳೆ ಬಿದ್ದಾಗ ನೀರು ಹರಿದು ಬರುತ್ತಿದೆ. ಈ ನೀರು ಮುಖ್ಯರಸ್ತೆಯ ಮೇಲೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಪಘಾತಗಳಿಗೆ ಕಾರಣವಾಗಬಹುದು’ ಎಂದು ರಾಜೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry